ವಾಯುಸೀಮೆ ಪ್ರವೇಶಿಸಿದ ಚೀನಾ ಯುದ್ಧ ವಿಮಾನವನ್ನು ಹೊರಗಟ್ಟಿದ ತೈವಾನ್
Update: 2020-06-16 22:51 IST
ತೈಪೆ (ತೈವಾನ್), ಜೂ. 16: ಮಂಗಳವಾರ ತೈವಾನ್‌ನ ವಾಯು ರಕ್ಷಣಾ ಗುರುತು ವಲಯವನ್ನು ಪ್ರವೇಶಿಸಿದ ಚೀನಾದ ಯುದ್ಧ ವಿಮಾನವೊಂದನ್ನು ತೈವಾನ್ ವಾಯುಪಡೆಯ ಯುದ್ಧ ವಿಮಾನಗಳು ಹೊರಗಟ್ಟಿವೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಇದು ಒಂದು ವಾರದ ಅವಧಿಯಲ್ಲಿ ನಡೆದ ಮೂರನೇ ಅತಿಕ್ರಮಣವಾಗಿದೆ.
ತೈವಾನ್ ದ್ವೀಪದ ನೈರುತ್ಯ ಭಾಗದ ವಾಯು ಪ್ರದೇಶಕ್ಕೆ ಪ್ರವೇಶಿಸಿದ ಚೀನಾದ ಜೆ-10 ಯುದ್ಧವಿಮಾನಕ್ಕೆ ಅಲ್ಲಿಂದ ಹೋಗುವಂತೆ ಮೊದಲು ರೇಡಿಯೊ ಮೂಲಕ ಎಚ್ಚರಿಕೆ ನೀಡಲಾಯಿತು. ಬಳಿಕ ಅಲ್ಲಿಗೆ ಧಾವಿಸಿದ ತೈವಾನ್ ಯುದ್ಧ ವಿಮಾನಗಳು ಚೀನೀ ವಿಮಾನವನ್ನು ಹೊರಗಟ್ಟಿದವು ಎಂದು ಸಚಿವಾಲಯ ತಿಳಿಸಿದೆ.
ಕಳೆದ ವಾರದ ಮಂಗಳವಾರವೂ ಚೀನಾದ ಹಲವಾರು ಎಸ್‌ಯು-30 ಯುದ್ಧ ವಿಮಾನಗಳು ತೈವಾನ್‌ನ ಅದೇ ವಾಯುಪ್ರದೇಶವನ್ನು ದಾಟಿದ್ದವು. ಆ ವಿಮಾನಗಳಿಗೂ ಅಲ್ಲಿಂದ ಹೋಗುವಂತೆ ಎಚ್ಚರಿಕೆ ನೀಡಲಾಗಿತ್ತು.