ನಮ್ಮ ನಡುವೆಯೂ ಸದಾ ಒಬ್ಬ ಜಾರ್ಜ್ ಫ್ಲಾಯ್ಡ್ ಇರುತ್ತಾನೆ

Update: 2020-06-17 05:59 GMT

ಸಾಮಾಜಿಕ ಪ್ರಾಬಲ್ಯ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ವರ್ಣ ವ್ಯವಸ್ಥೆ ಹೇಗೆ ಮಾನ್ಯತೆ ನೀಡಿರುವುದೋ ಹಾಗೆಯೇ ಭಾರತದ ಜಾತಿ ವ್ಯವಸ್ಥೆಯೂ ನೀಡಿದೆ. ವರ್ಣ ವ್ಯವಸ್ಥೆಯಲ್ಲಿ ತೊಗಲಿನ ಬಣ್ಣ ಶ್ರೇಷ್ಠತೆಯ ಮಾನದಂಡವಾದರೆ ಭಾರತದಲ್ಲಿ ಮನುಷ್ಯನ ಹುಟ್ಟು ಮಾನದಂಡವಾಗುತ್ತದೆ. ಹಾಗಾಗಿ ಭಾರತದಲ್ಲಿ ನಾವು ಕಾಣುತ್ತಲೇ ಇರುವ ಜಾರ್ಜ್ ಫ್ಲಾಯ್ಡ್ಗಳು ಒಂದೇ ವರ್ಣದವರಾಗಿರಬೇಕಿಲ್ಲ. ಒಂದು ವೇಳೆ ಗೌರವರ್ಣದವರಾಗಿದ್ದರೂ ಅವರ ಹುಟ್ಟು ಎಲ್ಲವನ್ನೂ ನಿರ್ಧರಿಸಿಬಿಡುತ್ತದೆ. ತೊಡುವ ಉಡುಪು, ತಿನ್ನುವ ಆಹಾರ, ಮಾಡುವ ಕಸುಬು ಮತ್ತು ಚರ್ಮದ ಮೇಲಿನ ಕೂದಲು ನ್ಯಾಯ ನಿರ್ಣಯದ ಮಾನದಂಡಗಳಾಗಿಬಿಡುತ್ತವೆ. ಸಾವು ಬದುಕನ್ನು ನಿರ್ಧರಿಸುವ ಮಾಪಕಗಳಾಗಿಬಿಡುತ್ತವೆ.


ಜನಾಂಗೀಯ ದ್ವೇಷ, ವರ್ಣ ದ್ವೇಷ, ಜಾತಿ ದ್ವೇಷ ಮತ್ತು ಮತಧರ್ಮ ದ್ವೇಷ ಈ ನಾಲ್ಕೂ ವಿದ್ಯಮಾನಗಳ ನಡುವೆ ಇರುವ ಸಮಾನ ಎಳೆ ಕ್ರೌರ್ಯ. ಈ ನಾಲ್ಕೂ ಪ್ರವೃತ್ತಿಗಳನ್ನು ಪೋಷಿಸುವ ಸಮಾನ ಎಳೆ ಶ್ರೇಷ್ಠತೆಯ ಅಹಮಿಕೆ. ಈ ನಾಲ್ಕನ್ನೂ ಸಮರ್ಥಿಸಲು ಬಳಸುವ ಸಮಾನ ನೆಲೆ ಅಸ್ಮಿತೆಯ ರಾಜಕಾರಣ. 20ನೆಯ ಶತಮಾನದ ಜರ್ಮನಿ ಮತ್ತು ಇಟಲಿಯಿಂದ 21ನೆಯ ಶತಮಾನದ ಭಾರತದವರೆಗೆ ಕಳೆದ ಒಂದು ಶತಮಾನದಲ್ಲಿ ಇತಿಹಾಸ ಕಂಡಿರುವ ವಾಸ್ತವ ಇದು. ಮತಧರ್ಮಗಳ ಶ್ರೇಷ್ಠತೆ, ಪಾರಮ್ಯ, ಪ್ರಾಬಲ್ಯ ಮತ್ತು ಆಧಿಪತ್ಯದ ನಡುವೆಯೇ ಈ ವಿದ್ಯಮಾನಗಳನ್ನು ಗಮನಿಸುತ್ತಲೇ ಬಂದಿದ್ದೇವೆ. ಕಾರಣಗಳನ್ನು, ಸಂಬಂಧಗಳನ್ನು, ಸೂಕ್ಷ್ಮಎಳೆಗಳನ್ನು ಶೋಧಿಸುತ್ತಲೇ ಬಂದಿದ್ದೇವೆ.

ನಾಗರಿಕತೆಯ ಅತ್ಯುನ್ನತ ಹಂತ ತಲುಪಿದ್ದೇವೆ ಎನ್ನುವ ಭ್ರಮೆಯಲ್ಲಿ ಬದುಕುತ್ತಿರುವ ಮಾನವ ಸಮಾಜದಲ್ಲಿ ದಿನಕ್ಕೊಬ್ಬ ಜಾರ್ಜ್ ಫ್ಲಾಯ್ಡ್ ‘‘ನನಗೆ ಉಸಿರಾಡಲಾಗುತ್ತಿಲ್ಲ ’’ ಎಂದು ಅರಚುತ್ತಿದ್ದರೂ ನಾವು ಬಾಳುತ್ತಿರುವ ಸಾಮಾಜಿಕ ವ್ಯವಸ್ಥೆ ಶೋಷಿತರ, ದುರ್ಬಲ ವರ್ಗಗಳ ಕುತ್ತಿಗೆಯ ಮೇಲೆ ಮಂಡಿಯೂರುತ್ತಲೇ ಇದೆ. ಮಂಡಿಯೂರಿ ಕ್ಷಮೆ ಕೋರುವ ಮೂಲಕ ಪಾಪಪ್ರಜ್ಞೆಯನ್ನು ಕಳೆದುಕೊಂಡ ಮಿನಪೊಲಿಸ್ ನಗರದ ಪೊಲೀಸ್ ಸಿಬ್ಬಂದಿ ಇದೇ ಸಮಾಜದ ಸಂವೇದನಾಶೀಲ ಆಯಾಮವನ್ನು ಪ್ರತಿನಿಧಿಸುತ್ತಾರೆ. ಫ್ಲಾಯ್ಡಾ ನಮಗೆ ಈಗ ಶೋಷಿತರ ಸಂಕೇತದಂತೆ ಕಾಣುತ್ತಿದ್ದಾನೆ. ಕೆಲವು ದಿನಗಳ ಬಳಿಕ ರೂಪಕವಾಗಿಬಿಡುತ್ತಾನೆ. ಏಕೆಂದರೆ ಆಧುನಿಕ ಮಾನವ ಸಮಾಜದ ಕ್ಷಿಪ್ರಗತಿಯ ನಡಿಗೆ ಎಲ್ಲವನ್ನೂ ಬೇಗನೇ ಹಿಂದಿಕ್ಕಿ ಮುನ್ನಡೆ ಸಾಧಿಸಿಬಿಡುತ್ತದೆ .

ಅಪರಾಧಕ್ಕೆ ಶಿಕ್ಷೆ ನೀಡುವುದಕ್ಕೂ ಅಪರಾಧಿಗೆ ಶಿಕ್ಷೆ ನೀಡುವುದಕ್ಕೂ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸಲಾರದಷ್ಟು ಕ್ರೌರ್ಯ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಮಡುಗಟ್ಟಿದೆ. ಜಾರ್ಜ್ ಫ್ಲಾಯ್ಡಾ ಒಂದು ಸಣ್ಣ ಅಪರಾಧ ಎಸಗಿದ್ದ. ಅವನ ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸುವುದು ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ಕರ್ತವ್ಯ. ಏಕೆಂದರೆ ಅಪರಾಧಕ್ಕೆ ತಕ್ಕ ಶಿಕ್ಷೆ ನೀಡದಿದ್ದರೆ ಸಮಾಜ ಅನಾಗರಿಕತೆಯತ್ತ ಹೊರಳಿಬಿಡುತ್ತದೆ ಎನ್ನುವ ಆತಂಕ ನಮ್ಮನ್ನು ಸದಾ ಕಾಡುತ್ತಿರುತ್ತದೆ. ನಾಗರಿಕರು ಎಂದು ಬೆನ್ನು ತಟ್ಟಿಕೊಳ್ಳಲು ನಾವು ಬಯಸುವ ಮಾನದಂಡವೆಂದರೆ ಅಪರಾಧ ಮುಕ್ತ ಸಮಾಜ. ಆದರೆ ಅಮೆರಿಕದ ಪೊಲೀಸರು ಫ್ಲಾಯ್ಡ್ ಗೆ ನೀಡಿದ ಶಿಕ್ಷೆ ಮರಣದಂಡನೆ, ವಿಚಾರಣೆ ಇಲ್ಲದೆಯೇ! ಇಂತಹ ಸನ್ನಿವೇಶದಲ್ಲಿ ಅಪರಾಧವನ್ನು ನಿರ್ಧರಿಸಲು ನಾವು ಬಳಸುವ ಮಾನದಂಡ ಯಾವುದು?

ಮೊದಲ ಸಾಲಿನಲ್ಲಿ ಉಲ್ಲೇಖಿಸಿರುವ ದ್ವೇಷಗಳ ಹೂರಣ ಇಲ್ಲಿ ಸಕ್ರಿಯವಾಗಿಬಿಡುತ್ತದೆ. ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ವಿಶ್ವದಾದ್ಯಂತ ಸರ್ವಾಧಿಕಾರವನ್ನು ಕೊನೆಗೊಳಿಸಿ ಪ್ರಜಾತಂತ್ರವನ್ನು ಸ್ಥಾಪಿಸಲು ಲಕ್ಷಾಂತರ ಜೀವಗಳು ಬಲಿಯಾಗಿವೆ. ಇಂದಿಗೂ ಬಲಿಯಾಗುತ್ತಲೇ ಇವೆ. ದುರಂತ ಎಂದರೆ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲೇ ಅಸಂಖ್ಯಾತ ಜೀವಗಳು ‘‘ನನಗೆ ಉಸಿರಾಡಲಾಗುತ್ತಿಲ್ಲ’’ ಎಂದು ಕೂಗಿ ಹೇಳುತ್ತಿವೆ. ಈ ದನಿಗಳಿಗೆ ಸ್ಪಂದಿಸುವ ಸಂವೇದನೆಯನ್ನು ಹೊಸಕಿ ಹಾಕುವ ನಿಟ್ಟಿನಲ್ಲಿ ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ವ್ಯವಸ್ಥೆಯ ಬಲಪಂಥೀಯ ರಾಜಕೀಯ ಸಂಸ್ಕೃತಿ ಹೊಸ ಸೂತ್ರಗಳನ್ನು ಹೆಣೆಯುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಈ ರಾಜಕೀಯ ಆಧಿಪತ್ಯವೇ ಶೋಷಿತರ ಉಸಿರನ್ನೂ ನಿಯಂತ್ರಿಸುತ್ತದೆ.

ಅಮೆರಿಕದ ಕಪ್ಪು ಜನರು, ಭಾರತದ ದಲಿತರು, ಮ್ಯಾನ್ಮಾರ್‌ನ ರೊಹಿಂಗ್ಯಾಗಳು, ಶ್ರೀಲಂಕಾದ ತಮಿಳರು, ಪಾಕಿಸ್ತಾನದ ಅಲ್ಪಸಂಖ್ಯಾತರು, ಭಾರತದ ಅಲ್ಪಸಂಖ್ಯಾತರು ಹೀಗೆ ಭೂಖಂಡದ ಪ್ರತಿಯೊಂದು ಭೌಗೋಳಿಕ ಬೇಲಿಗಳ ಒಳಗೆ ‘‘ನಮ್ಮವರಲ್ಲದವರು’’ ಅಥವಾ ‘‘ಅನ್ಯರು’’ ಸೃಷ್ಟಿಯಾಗುತ್ತಲೇ ಇದ್ದಾರೆ. ಜಾರ್ಜ್ ಫ್ಲಾಯ್ಡಾ ನ ಆಕ್ರಂದನ ಇಂದು ಇಡೀ ಜಗತ್ತಿನ ಸಂವೇದನಾಶೀಲ ಮನಸ್ಸುಗಳನ್ನು ಕದಡಿಬಿಟ್ಟಿದೆ. ಈ ದನಿ ಒಂಟಿ ದನಿಯಲ್ಲ ಎನ್ನುವುದನ್ನೂ ಅಮೆರಿಕದ ಜನತೆ ನಿರೂಪಿಸಿದ್ದಾರೆ. hang until death ಕೊನೆಯುಸಿರು ಇರುವ ತನಕ ನೇಣುಹಾಕುವುದು, ಆಧುನಿಕ ಜಗತ್ತು ರೂಪಿಸಿರುವ ಶಿಕ್ಷೆಯ ಒಂದು ನಿಯಮ. ಮಿನಪೊಲಿಸ್ ನಗರದ ಒಬ್ಬ ಅಧಿಕಾರಿ ಇದನ್ನು ಅಕ್ಷರಶಃ ಪಾಲಿಸಿದ್ದಾನೆ. ನಮ್ಮ ನೆತ್ತರು ಕುದಿಯುತ್ತದೆ.

ಇದೇ ರೀತಿಯ ಜಾರ್ಜ್ ಫ್ಲಾಯ್ಡ್ ಗಳು ನಮ್ಮ ನಡುವೆ ಕಂಡುಬಂದಿಲ್ಲವೇ? ಖಂಡಿತವಾಗಿಯೂ ಪ್ರತಿದಿನವೂ ಕಾಣುತ್ತಲೇ ಇದ್ದಾರೆ. ಮಂಡಿಯೂರಿ ಉಸಿರುಗಟ್ಟಿಸುವ ಕ್ರೂರಿಗಳೂ ನಮ್ಮ ನಡುವೆಯೇ ಇದ್ದಾರೆ. ಸಮವಸ್ತ್ರ, ಆಧಿಪತ್ಯ ರಾಜಕಾರಣ ನೀಡುವ ಪರವಾನಿಗೆ. ಕ್ರೌರ್ಯಕ್ಕೆ ಯಾವುದೇ ಸಮವಸ್ತ್ರ ಇರುವುದಿಲ್ಲ ಅಲ್ಲವೇ? ನಕಲಿ ನೋಟು ಪಾವತಿ ಮಾಡಿದ ವ್ಯಕ್ತಿ ಬಿಳಿಯನಾಗಿದ್ದಲ್ಲಿ ಅಮೆರಿಕದಲ್ಲಿ ಕಾನೂನು ಪಾಲನೆ ಹೀಗೆಯೇ ನಡೆಯುತ್ತಿತ್ತೇ ಎಂಬ ಪ್ರಶ್ನೆಯನ್ನು ಹಾಕಿಕೊಂಡಾಗ ನಿರುತ್ತರರಾಗುತ್ತೇವೆ. ಹಾಗೆಯೇ ಭಾರತವನ್ನು ಪ್ರವೇಶಿಸಿ ಉನ ಗ್ರಾಮದತ್ತ ಒಮ್ಮೆ ಕಣ್ಣುಹಾಯಿಸೋಣ. ಜೀವನವಿಡೀ ಅನುಸರಿಸಿಕೊಂಡುಬಂದ ತಮ್ಮ ಕಸುಬನ್ನು ಪಾಲಿಸಿದ್ದಕ್ಕೆ ದಲಿತರ ಚರ್ಮ ಸುಲಿದಾಗ ನಮ್ಮಲ್ಲಿ ಇಂತಹುದೇ ಪ್ರಶ್ನೆ ಮೂಡಬೇಕಿತ್ತಲ್ಲವೇ?

ಮೂಡಲಿಲ್ಲ. ಏಕೆ ಹೀಗೆ? ಈ ಪ್ರಶ್ನೆಗೆ ಇತಿಹಾಸದ ಉತ್ಖನನ ಅತ್ಯವಶ್ಯವಾದರೂ ಸಮಕಾಲೀನ ಸಂದರ್ಭದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳಲ್ಲೇ ಉತ್ತರ ಕಂಡುಕೊಳ್ಳಬಹುದು. ನಾವು ಮನುಷ್ಯ ವೇದನೆಗೆ ಸ್ಪಂದಿಸುವುದನ್ನು ಕ್ರಮೇಣ ಮರೆತುಹೋಗುತ್ತಿದ್ದೇವೆ. ಸಾವು, ನೋವು, ವೇದನೆ, ಬೇಗುದಿ, ಸಂಕಷ್ಟ ಮತ್ತು ರೋದನ ಇವೆಲ್ಲವೂ ಅಸ್ಮಿತೆಗಳ ಚೌಕಟ್ಟಿನಲ್ಲಿ ಸಿಲುಕಿ ಸಾಪೇಕ್ಷತೆಯನ್ನು ಪಡೆದುಕೊಂಡುಬಿಟ್ಟಿವೆ. ಯಾವುದು ಅಪರಾಧ ಎಂದು ನಿರ್ಧರಿಸುವುದು ಇದೇ ಅಸ್ಮಿತೆಗಳ ಅಂಗಳದಲ್ಲಿ ಆಧಿಪತ್ಯ ಸಾಧಿಸುವ ಪ್ರಬಲ ವರ್ಗಗಳು. ಅಪರಾಧಿ ಯಾರು ಎಂದು ನಿಷ್ಕರ್ಷೆ ಮಾಡುವುದು ಈ ವರ್ಗ ಲಕ್ಷಣಗಳನ್ನು ಸಂರಕ್ಷಿಸುವ ಸಾಂಸ್ಕೃತಿಕ ಆರಕ್ಷಕ ಪಡೆಗಳು.

ಹಾಗಾಗಿಯೇ ತನ್ನ ದಿನನಿತ್ಯದ ಆಹಾರವನ್ನು ಸೇವಿಸುವ ಅಖ್ಲಾಕ್ ಕೊಲೆಗೀಡಾಗುತ್ತಾನೆ, ತನ್ನ ಕುಲ ಕಸುಬು ಪಾಲಿಸುವ ಪೆಹ್ಲುಖಾನ್ ಹತ್ಯೆಗೀಡಾಗುತ್ತಾನೆ, ತಮ್ಮ ಧರ್ಮದ ಕರೆಗೆ ಓಗೊಡುವ ಗ್ರಾಹಂ ಸ್ಟೈನ್ಸ್ ಸಜೀವ ದಹನದ ಶಿಕ್ಷೆಗೊಳಗಾಗುತ್ತಾರೆ. ಗೃಹಸ್ಥಾಶ್ರಮ ಪ್ರವೇಶಿಸುವ ಒಬ್ಬ ದಲಿತ ಕುದುರೆಯ ಮೇಲೆ ಕುಳಿತರೆ ಕೊಲೆಗೀಡಾಗುತ್ತಾನೆ. ಮತ್ತೋರ್ವ ಯುವತಿ ಅಥವಾ ಯುವಕ ತಾನು ಪ್ರೀತಿಸಿದವರನ್ನು ಮದುವೆಯಾದರೆ ಹತ್ಯೆಗೊಳಗಾಗುತ್ತಾರೆ. ತುಂಡು ಭೂಮಿಯನ್ನು ಖರೀದಿಸುವ ದಲಿತ ಹತ್ಯೆಯಾಗುತ್ತಾನೆ. ಪ್ರಭುತ್ವದ ವಿರುದ್ಧ ದನಿ ಎತ್ತಿದವರು ಹತ್ಯೆಗೀಡಾಗುತ್ತಾರೆ. ಅವರು ತೊಟ್ಟ ಬಟ್ಟೆಯಿಂದ ವ್ಯಕ್ತಿಯನ್ನು ಗುರುತಿಸಲಾಗುತ್ತದೆ. ಇತ್ತೀಚೆಗೆ ವೈದ್ಯರೊಬ್ಬರನ್ನು ‘‘ ಮುಸ್ಲಿಂ ಎಂದು ಭಾವಿಸಿ ’’ ಥಳಿಸಿದ ಭಾರತದ ಪೊಲೀಸರು ಮಂಡಿಯೂರಿ ಕ್ಷಮೆ ಕೋರಲಿಲ್ಲ. ಆದರೆ ಅಮೆರಿಕಕ್ಕೆ ಹತ್ತಿರವಾಗಿಬಿಟ್ಟರು.

ಇಲ್ಲಿ ಅಪರಾಧ ಯಾವುದು, ಅಪರಾಧಿ ಯಾರು? ಕಾನೂನು ಪಾಲಕರು ಯಾರು? ಕಾನೂನು ರಕ್ಷಕರು ಯಾರು? ಕಾನೂನು ರೂಪಿಸುವವರು ಜಾರಿಗೊಳಿಸುವವರಾರು? ಜಾರ್ಜ್ ಫ್ಲಾಯ್ಡಾ ಘಟನೆಯಲ್ಲಿ ಇದಕ್ಕೆ ಉತ್ತರ ದೊರೆಯಬಹುದೇ? ಅಥವಾ ಉನ ಘಟನೆಯಲ್ಲಿ, ದಾದ್ರಿ ಘಟನೆಯಲ್ಲಿ ಉತ್ತರ ಶೋಧಿಸಲು ಸಾಧ್ಯವೇ? ಉತ್ತರ ನಮ್ಮಿಳಗೇ ಇದೆ. ಆತ್ಮಶೋಧನೆಯಾಗಬೇಕಿದೆ. ನಮ್ಮ ದೇಶದಲ್ಲಿ ಒಂದು ಸಂವಿಧಾನ ಇದೆಯೇ ಎಂದು ಪ್ರಶ್ನಿಸುವಷ್ಟು ಮಟ್ಟಿಗೆ ಸಂವಿಧಾನ ವಿರೋಧಿ ಕೃತ್ಯಗಳು ಯಾವುದೇ ಶಿಕ್ಷೆಗೊಳಗಾಗದೆ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೂ ಜಾರ್ಜ್ ಫ್ಲಾಯ್ಡಾ ಗಾಗಿ ಕುದಿಯುವ ನಮ್ಮ ನೆತ್ತರು ರೋಹಿತ್ ವೇಮುಲಾನಿಗಾಗಿ ಕುದಿಯುವುದಿಲ್ಲ.

ಏಕೆಂದರೆ ಜಾರ್ಜ್ ಫ್ಲಾಯ್ಡ್ ದೂರದಲ್ಲಿರುವ, ನಮ್ಮಾಡನಿಲ್ಲದ ನಮ್ಮವನಂತೆ ಕಾಣುತ್ತಾನೆ. ಖೈರ್ಲಾಂಜಿ, ಕಂಬಾಲಪಲ್ಲಿ, ಉನ ಗ್ರಾಮದ ದಲಿತರು ನಮ್ಮಾಡನೆಯೇ ಇದ್ದರೂ ಅನ್ಯರಂತೆ ಕಾಣುತ್ತಾರೆ. ಸಾಂಸ್ಕೃತಿಕ ರಾಜಕಾರಣ ಮತ್ತು ಸಾಮಾಜಿಕ ಪ್ರಾಬಲ್ಯ ಹೇಗೆ ಅಸ್ಮಿತೆಗಳ ಚೌಕಟ್ಟಿನಲ್ಲಿ ನ್ಯಾಯ ನಿಷ್ಕರ್ಷೆಯನ್ನು ನಿಯಂತ್ರಿಸುತ್ತದೆ ಎನ್ನಲು ಇಷ್ಟು ಉದಾಹರಣೆ ಸಾಕು. ನವ ಉದಾರವಾದ ಮತ್ತು ಬಂಡವಾಳ ವ್ಯವಸ್ಥೆ ಈ ಅಸ್ಮಿತೆಗಳ ಚೌಕಟ್ಟುಗಳನ್ನು ಬಲಪಡಿಸುತ್ತದೆ, ಬೇಲಿಗಳನ್ನು ಎತ್ತರಿಸುತ್ತದೆ, ಗೋಡೆಗಳನ್ನು ಭದ್ರಪಡಿಸುತ್ತದೆ. ಈ ಭದ್ರ ಕೋಟೆಗಳ ಒಳಗೇ ದ್ವೇಷ ರಾಜಕಾರಣವನ್ನು ಪೋಷಿಸುವ ಒಂದು ರಾಜಕೀಯ ವ್ಯವಸ್ಥೆ ರೂಪುಗೊಳ್ಳುತ್ತದೆ. ಈ ರಾಜಕೀಯ ವ್ಯವಸ್ಥೆ ಬಲಪಂಥೀಯವಾಗಿರುವುದು ಕಾಕತಾಳೀಯವೇನಲ್ಲ , ಚಾರಿತ್ರಿಕ ಸತ್ಯ.

ಸಾಮಾಜಿಕ ಪ್ರಾಬಲ್ಯ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ವರ್ಣ ವ್ಯವಸ್ಥೆ ಹೇಗೆ ಮಾನ್ಯತೆ ನೀಡಿರುವುದೋ ಹಾಗೆಯೇ ಭಾರತದ ಜಾತಿ ವ್ಯವಸ್ಥೆಯೂ ನೀಡಿದೆ. ವರ್ಣ ವ್ಯವಸ್ಥೆಯಲ್ಲಿ ತೊಗಲಿನ ಬಣ್ಣ ಶ್ರೇಷ್ಠತೆಯ ಮಾನದಂಡವಾದರೆ ಭಾರತದಲ್ಲಿ ಮನುಷ್ಯನ ಹುಟ್ಟು ಮಾನದಂಡವಾಗುತ್ತದೆ. ಹಾಗಾಗಿ ಭಾರತದಲ್ಲಿ ನಾವು ಕಾಣುತ್ತಲೇ ಇರುವ ಜಾರ್ಜ್ ಫ್ಲಾಯ್ಡ್ಗಳು ಒಂದೇ ವರ್ಣದವರಾಗಿರಬೇಕಿಲ್ಲ. ಒಂದು ವೇಳೆ ಗೌರವರ್ಣದವರಾಗಿದ್ದರೂ ಅವರ ಹುಟ್ಟು ಎಲ್ಲವನ್ನೂ ನಿರ್ಧರಿಸಿಬಿಡುತ್ತದೆ. ತೊಡುವ ಉಡುಪು, ತಿನ್ನುವ ಆಹಾರ, ಮಾಡುವ ಕಸುಬು ಮತ್ತು ಚರ್ಮದ ಮೇಲಿನ ಕೂದಲು ನ್ಯಾಯ ನಿರ್ಣಯದ ಮಾನದಂಡಗಳಾಗಿಬಿಡುತ್ತವೆ. ಸಾವು ಬದುಕನ್ನು ನಿರ್ಧರಿಸುವ ಮಾಪಕಗಳಾಗಿಬಿಡುತ್ತವೆ.

ಬದುಕುವುದು ಮಾನವನ ಸಹಜ ನೈಸರ್ಗಿಕ ಹಕ್ಕು. ಮಾನವನ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಯಾವ ಸಮಾಜಕ್ಕೂ ಇರುವುದಿಲ್ಲ. ಇದು ಮಾನವ ಹಕ್ಕುಗಳ ಪರಿಕಲ್ಪನೆಯಲ್ಲಿ ಮೂಡಿರುವ ಒಂದು ಸಾರ್ವತ್ರಿಕ ಸಂಹಿತೆ. ಅಪರಾಧ ಸಾಬೀತಾಗುವವರೆಗೂ ಆರೋಪಿ ನಿರಪರಾಧಿಯಾಗಿಯೇ ಇರುತ್ತಾನೆ ಎಂದು ಅಂತರ್‌ರಾಷ್ಟ್ರೀಯವಾಗಿ ಸ್ವೀಕೃತವಾದ ಸಂಹಿತೆಯೇ ಇದೆ. ಆದರೆ ನಾವು ನೇರವಾಗಿ ಅಪರಾಧಿಯನ್ನೇ ಗುರುತಿಸಿಬಿಡುತ್ತೇವೆ. ಹಾಗಾಗಿ ಎಂತಹ ಅಮಾನುಷ ಶಿಕ್ಷೆಯಾದರೂ ಸ್ವೀಕೃತ ಎನಿಸಿಬಿಡುತ್ತದೆ. ಜಾರ್ಜ್ ಫ್ಲಾಯ್ಡಾ ಸಾವಿನಲ್ಲಿ ಇದನ್ನು ಗುರುತಿಸಬಹುದು. ಜಾರ್ಜ್ ಫ್ಲಾಯ್ಡ್ ಸಾವಿಗಾಗಿ ನಾವು ಪರಿತಪಿಸುತ್ತೇವೆ. ನೆತ್ತರು ಕುದಿಯುತ್ತದೆ. ಆದರೆ ನಮ್ಮ ನಡುವಿನ ಅಸಂಖ್ಯಾತ ಜೀವಗಳು ಹೀಗೆಯೇ ‘‘ನನಗೆ ಉಸಿರಾಡಲಾಗುತ್ತಿಲ್ಲ’’ ಎಂದು ಕೂಗುತ್ತಿದ್ದಾಗ ನಮ್ಮ ಸಮಾಜ ವಿಜೃಂಭಿಸಿದೆಯಲ್ಲವೇ?

ಈ ಸಮಾಜೋ ಸಾಂಸ್ಕೃತಿಕ ಆಧಿಪತ್ಯದ ವಿಕೃತ ನ್ಯಾಯ ವ್ಯವಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸುವುದು ಬಂಡವಾಳ ವ್ಯವಸ್ಥೆ ರೂಪಿಸುವ ರೀತಿ ರಿವಾಜುಗಳು, ಕಾನೂನುಗಳು ಮತ್ತು ನಾಗರಿಕ ಸಂಹಿತೆಗಳು. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮತಧರ್ಮ, ಸಂಸ್ಕೃತಿ, ಜನಾಂಗೀಯ ಮೂಲ ಮತ್ತು ಜಾತಿ ನೆಲೆಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಂಡವಾಳ ವ್ಯವಸ್ಥೆ ತನ್ನ ಶೋಷಣೆಯ ಕ್ರೌರ್ಯವನ್ನು ಮರೆಮಾಚಲು ಸಾಂಸ್ಕೃತಿಕ ಕ್ರೌರ್ಯವನ್ನು ಹುಟ್ಟುಹಾಕುತ್ತದೆ. ಬಂಡವಾಳದ ಶೋಷಣೆಗೆ ಬಲಿಯಾಗುವ ಅಸಂಖ್ಯಾತ ದುರ್ಬಲ ಜನಸಮುದಾಯಗಳ ಅಸ್ಮಿತೆಗಳನ್ನೇ ನಿರಾಕರಿಸಿ ಒಂದು ಪ್ರಬಲ ಸಮಾಜೋ ಸಾಂಸ್ಕೃತಿಕ ನೆಲೆಯನ್ನು ಸೃಷ್ಟಿಸುತ್ತದೆ. ಈ ನೆಲೆಯಲ್ಲಿ ಸಮಾಜದ ಪ್ರಬಲ ವರ್ಗಗಳು ತಮ್ಮ ಆಧಿಪತ್ಯ ಸಾಧಿಸುತ್ತವೆ. ಅಮೆರಿಕದಲ್ಲಿ ಬಿಳಿಯರು, ಭಾರತದಲ್ಲಿ ಪ್ರಬಲ ಮೇಲ್ಜಾತಿ ಮತ್ತು ವರ್ಗಗಳು, ಈ ಪ್ರಕ್ರಿಯೆಯಲ್ಲಿ ಶೋಷಿತ ವರ್ಗಗಳನ್ನು ಪ್ರತಿನಿಧಿಸುವ ಪ್ರಬಲ ವರ್ಗಗಳನ್ನೂ ತನ್ನೊಳಗೇ ಆವಾಹನೆ ಮಾಡಿಕೊಳ್ಳುವ ಮೂಲಕ ಶೋಷಿತ ವರ್ಗಗಳ ವಿಘಟನೆಗೂ ಮುಂದಾಗುತ್ತದೆ.

ಭೂಮಿಯನ್ನೂ ಒಳಗೊಂಡಂತೆ ಸಕಲ ನೈಸರ್ಗಿಕ ಸಂಪನ್ಮೂಲಗಳ ಒಡೆತನ ಸಾಧಿಸುವ ಮೂಲಕ ಮಾನವ ಸಮಾಜದ ನಿತ್ಯ ಬದುಕನ್ನೂ ನಿಯಂತ್ರಿಸುವ ಬಂಡವಾಳ ವ್ಯವಸ್ಥೆಗೆ ಜಾರ್ಜ್ ಫ್ಲಾಯ್ಡಾ ಅಸ್ತಿತ್ವವೇ ಇಲ್ಲದ ಜೀವಿಯಂತೆ ಕಾಣುತ್ತಾನೆ. ಇಂತಹ ಜಾರ್ಜ್ ಫ್ಲಾಯ್ಡ್ ಗಳ ಮಹಾಪೂರವನ್ನೇ ಕೊರೋನ ಸಂದರ್ಭದ ವಲಸೆ ಕಾರ್ಮಿಕರಲ್ಲಿ ನಾವು ಕಾಣಬಹುದು. ಕಾಶ್ಮೀರದ ಕಣಿವೆಗಳಿಂದ ಕನ್ಯಾಕುಮಾರಿಯ ಕಡಲ ತೀರದವರೆಗೆ ಕೇಳಿಬರುತ್ತಲೇ ಇರುವ ‘‘ನಮಗೆ ಉಸಿರಾಡಲಾಗುತ್ತಿಲ್ಲ’’ ಎನ್ನುವ ಆರ್ತನಾದದಲ್ಲಿ ಕಾಣಬಹುದು. ಈ ವ್ಯವಸ್ಥೆಯೇ ಜೀವ ವಿರೋಧಿ ಯುದ್ಧಪರಂಪರೆಯನ್ನೂ ಸೃಷ್ಟಿಸುತ್ತದೆ. ಸರ್ವನಾಶಕ ಅಣುಬಾಂಬುಗಳನ್ನೂ ಸೃಷ್ಟಿಸುತ್ತದೆ. ಶಾಂತಿ ಮಂತ್ರವನ್ನೂ ಜಪಿಸುತ್ತದೆ.

ಶಾಂತಿಗೂ ಚಿರಶಾಂತಿಗೂ ಇರುವ ವ್ಯತ್ಯಾಸವನ್ನು ನಾವಿಂದು ಗುರುತಿಸಬೇಕಿದೆ. ಶಾಂತಿ ಸ್ಥಾಪನೆಗಾಗಿ ಲಕ್ಷಾಂತರ ಜೀವಗಳು ಚಿರಶಾಂತಿಗೆ ಜಾರಿರುವ ಸುದೀರ್ಘ ಇತಿಹಾಸವನ್ನು ಕಳೆದ ಒಂದು ಶತಮಾನದಲ್ಲಿ ಕಂಡಿದ್ದೇವೆ. ಭಾರತದಲ್ಲಿ ಈ ಶತಮಾನದ ಆರಂಭದಲ್ಲೂ ಇಂತಹುದೇ ಚಿರಶಾಂತಿಧಾಮವನ್ನು ಸೃಷ್ಟಿಸಿದ ಭೀಕರ ಘಟನೆಗೆ ಸಾಕ್ಷಿಯಾಗಿದ್ದೇವೆ. ಇಂದಿಗೂ ಈ ವಿದ್ಯಮಾನವನ್ನು ಜಗತ್ತಿನ ಉದ್ದಗಲಕ್ಕೂ ಕಾಣುತ್ತಲೇ ಇದ್ದೇವೆ. ಭಾರತವೂ ಹೊರತೇನಲ್ಲ. ಈಗ ಜಾರ್ಜ್ ಫ್ಲಾಯ್ಡಾ ಚಿರಶಾಂತಿಗೆ ಜಾರಿದ್ದಾನೆ. ಭಾರತದಲ್ಲಿ ದಿನಕ್ಕೊಬ್ಬ ಜಾರ್ಜ್ ಫ್ಲಾಯ್ಡ್ ಈ ಮಾರ್ಗದಲ್ಲಿರುತ್ತಾನೆ. ನೆತ್ತರು ತಾನಾಗಿಯೇ ಕುದಿಯುವುದಿಲ್ಲ. ಮನಸ್ಸು ಕದಡಿದಾಗ ಮಾತ್ರ ಕುದಿಯುತ್ತದೆ. ಹೃದಯ ಮಿಡಿದಾಗ ಕುದಿಯುತ್ತದೆ. ಮಿಡಿವ ಹೃದಯಗಳನ್ನು ಬಂಧಿಸುವ ಬೇಲಿಗಳನ್ನು ಕಿತ್ತೊಗೆದಾಗ ಮಾತ್ರ ಫ್ಲಾಯ್ಡಾ ನಮಗೆ ಕಾಣಲು ಸಾಧ್ಯ.

ಈ ಮಿಡಿತ ಮತ್ತು ತುಡಿತಕ್ಕೆ ಅಸ್ಮಿತೆಗಳು ಅಡ್ಡಗೋಡೆಗಳಾಗಿ ನಿಂತಾಗ ನಾವು ನಮ್ಮಿಳಗಿನ ಮೌಲ್ಯಗಳನ್ನು ಮಂಡಿಯೂರಿ ಕೊಂದುಬಿಡುತ್ತೇವೆ. ಮಂಡಿಯೂರಿ ಕತ್ತು ಹಿಸುಕುವ ಪೊಲೀಸ್ ಒಬ್ಬ ನಮ್ಮಿಳಗಿದ್ದಂತೆಯೇ ಮಂಡಿಯೂರಿ ಕ್ಷಮೆ ಯಾಚಿಸುವ ಪೊಲೀಸನೂ ಇರುತ್ತಾನೆ. ಇವರಿಬ್ಬರಲ್ಲಿ ನಮ್ಮ ಆಯ್ಕೆ ಯಾರು? ಜಾರ್ಜ್ ಫ್ಲಾಯ್ಡಾಗೆ ಮಿಡಿಯಲು ಈ ಆಯ್ಕೆ ಮುಖ್ಯವಾಗುತ್ತದೆ. ಶೋಷಿತ ಸಮುದಾಯದ ಸಂಕೇತವಾಗಿರುವ ಫ್ಲಾಯ್ಡಾ ಕ್ರಮೇಣ ಶೋಷಣೆಯ ರೂಪಕವಾಗುವುದೆಂದರೆ ಹೀಗೆ.

 ಅಮೆರಿಕ ಹೊತ್ತಿ ಉರಿಯುತ್ತಿದೆ. ಅಧ್ಯಕ್ಷ ಟ್ರಂಪ್ ಜನರ ಆಕ್ರೋಶಕ್ಕೆ ಹೆದರಿ ಅವಿತುಕೊಳ್ಳುತ್ತಾರೆ. ಅಂದರೆ ಮಾನವ ಸಮಾಜದ ಆತ್ಮಸ್ಥೈರ್ಯ ಸತ್ತಿಲ್ಲ. ಲಕ್ಷಾಂತರ ಜಾರ್ಜ್ ಫ್ಲಾಯ್ಡ್ಗಳು ಈ ಜನದನಿಗೆ ದನಿಯಾಗಿ ಸದಾ ಜೀವಂತವಾಗಿರುತ್ತಾರೆ. ತಮ್ಮ ನಿಯಂತ್ರಣದಲ್ಲಿರುವ ಜೀವನಾಶಕ ಶಸ್ತ್ರಾಸ್ತ್ರಗಳು ಜೀವಗಳನ್ನು ಕೊಲ್ಲಬಹುದೇ ಹೊರತು, ಮಾನವ ಸಮಾಜದ ಜೀವಂತಿಕೆಯನ್ನು ಕೊಲ್ಲಲಾಗುವುದಿಲ್ಲ ಎನ್ನುವ ವಾಸ್ತವವನ್ನು ಆಳುವ ವರ್ಗಗಳು ಅರ್ಥ ಮಾಡಿಕೊಳ್ಳಬೇಕಿದೆ. ಜಾರ್ಜ್ ಫ್ಲಾಯ್ಡಾ ಈ ಸಂದೇಶವನ್ನು ಬಿಟ್ಟು ಹೋಗಿದ್ದಾನೆ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News