ಆರೋಗ್ಯ ಪಾಲಕರು ಅಪಾಯದಲ್ಲಿ

Update: 2020-06-16 19:30 GMT

ನವೆಂಬರ್ ಮಧ್ಯದ ವೇಳೆಗೆ ಕೋವಿಡ್‌_-19 ಗರಿಷ್ಠ ಮಟ್ಟವನ್ನು ಮುಟ್ಟಲಿದೆ ಎಂದು ಕೇಂದ್ರ ಸರಕಾರದ ಸಂಸ್ಥೆಯೊಂದು ರಚಿಸಿದ್ದ ಅಧ್ಯಯನ ತಂಡ ವರದಿ ನೀಡಿದೆ. ದೇಶದಲ್ಲಿ ಈಗಾಗಲೇ ಪ್ರತಿದಿನ ಹನ್ನೊಂದು ಸಾವಿರಕ್ಕೂ ಅಧಿಕ ಕೊರೋನ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ವೈರಾಣು ಇನ್ನೂ ವ್ಯಾಪಕವಾಗಿ ಹಬ್ಬುವ ಸೂಚನೆಗಳು ಕಂಡು ಬರುತ್ತಿವೆ. ಕೇಂದ್ರ ಸರಕಾರದ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೊರೋನ ಕುರಿತು ಅಧ್ಯಯನಕ್ಕೆ ಸಮಿತಿಯೊಂದನ್ನು ರಚನೆ ಮಾಡಿತ್ತು. ಅದು ನೀಡಿರುವ ವರದಿಯ ಪ್ರಕಾರ ನವೆಂಬರ್ ಮಧ್ಯ ಭಾಗದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ. ಆಗ ಐಸಿಯು ಹಾಗೂ ಐಸೋಲೇಶನ್ ಬೆಡ್‌ಗಳು ಮತ್ತು ವೆಂಟಿಲೇಟರ್‌ಗಳ ತೀವ್ರ ಕೊರತೆ ಉಂಟಾಗಲಿದೆ.

ಕೊರೋನ ತೀವ್ರವಾಗಿ ಹಬ್ಬುತ್ತಿರುವಾಗ ಅತ್ಯಂತ ಆತಂಕಪಡಬೇಕಾದ ಸಂಗತಿಯೆಂದರೆ ಈ ವೈರಾಣು ವಿರುದ್ಧ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರು, ದಾದಿಯರು, ಇತರ ವೈದ್ಯಕೀಯ ಸಿಬ್ಬಂದಿ, ಸುರಕ್ಷತಾ ಸಿಬ್ಬಂದಿ ಸೇರಿದಂತೆ ನಾವು ‘ವಾರಿಯರ್ಸ್’ ಎಂದು ಯಾರನ್ನು ಕರೆಯುತ್ತೇವೋ ಅವರು ಈಗ ಕೊರೋನಕ್ಕೆ ಬಲಿಯಾಗುತ್ತಿರುವ ಆತಂಕಕಾರಿ ವರದಿಗಳು ಬರುತ್ತಿವೆ. ಕಳೆದ ಎಂಬತ್ತಕ್ಕೂ ಅಧಿಕ ದಿನಗಳಿಂದ ತಮ್ಮ ಮನೆಗೂ ಹೋಗದೆ ಹಗಲೂ ರಾತ್ರಿ ಸೇವೆ ಸಲ್ಲಿಸುತ್ತಿರುವ ಇವರ ಪರಿಸ್ಥಿತಿ ಚಿಂತಾಜನಕವಾಗಿದೆ. ಇವರೆಲ್ಲ ಆಸ್ಪತ್ರೆಗಳಲ್ಲಿ, ಇಲ್ಲವೇ ವಾಹನಗಳಲ್ಲಿ ವಿಶ್ರಾಂತಿ ಮಾಡಿ ಕೋವಿಡ್ ರೋಗಿಗಳನ್ನು ಬದುಕಿಸಲು ಹೆಣಗಾಡುತ್ತಿದ್ದಾರೆ. ಕಡು ಬಿಸಿಲು ಪ್ರದೇಶದಲ್ಲೂ ಬೆವರಿಳಿಯುವ ದಪ್ಪನೆಯ ಪಿಪಿಇ ರಕ್ಷಾ ಕವಚವನ್ನು ಧರಿಸಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಮ್ಮ ದೇಶದ ಗಡಿ ರಕ್ಷಣೆ ಮಾಡುವ ಯೋಧರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ.ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೋಗಿ ಇವರೇ ಇದರಿಂದ ಸಾವಿಗೀಡಾಗುತ್ತಿದ್ದಾರೆ.

ನಾವು ಇನ್ನೂ ನಾಚಿಕೆ ಪಡಬೇಕಾದ ಸಂಗತಿಯೆಂದರೆ ನಮಗಾಗಿ ಅವಿಶ್ರಾಂತವಾಗಿ ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿಯ ಮೇಲೆ ಅನೇಕ ಕಡೆ ಹಲ್ಲೆಗಳು ನಡೆಯುತ್ತಿರುವುದು. ಜನರಲ್ಲಿ ತಿಳುವಳಿಕೆ ಮೂಡಿಸಲು, ಮಾಹಿತಿ ಸಂಗ್ರಹಿಸಲು ಮನೆ ಮನೆಗೆ ಹೋಗುತ್ತಿರುವ ಆಶಾ ಕಾರ್ಯಕರ್ತೆಯರ ಮೇಲೆ ಅಲ್ಲಲ್ಲಿ ಅವಿವೇಕಿ ಜನ ಹಲ್ಲೆ ಮಾಡುತ್ತಿದ್ದಾರೆ. ಚೆನ್ನೈನಲ್ಲಿ ಕೊರೋನದಿಂದ ಸಾವಿಗೀಡಾದ ವೈದ್ಯರೊಬ್ಬರ ಅಂತ್ಯಕ್ರಿಯೆಗೂ ಕೆಲವರು ಅಡ್ಡಿಯುಂಟು ಮಾಡಿದರು.ಮಧ್ಯಪ್ರದೇಶದ ಇಂದೋರ್‌ನಲ್ಲಿ ಎಪ್ರಿಲ್‌ನಲ್ಲಿ ಮಹಿಳಾ ವೈದ್ಯರ ಮೇಲೆ ಹುಂಬ ಜನರು ಕಲ್ಲುತೂರಾಟ ಮಾಡಿದರು, ಅವಾಚ್ಯ ಶಬ್ದಗಳಿಂದ ಬೈದರೆಂದು ವರದಿಗಳು ಬಂದಿವೆ. ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರು, ನರ್ಸ್‌ಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಬಾಡಿಗೆಗೆ ಇರುವ ಮನೆಗಳಲ್ಲಿ ಮನೆಯ ಮಾಲಕರು ಮನೆಯನ್ನು ಖಾಲಿ ಮಾಡಲು ಒತ್ತಾಯ ಮಾಡುತ್ತಿರುವುದು ಆತಂಕದ ಸಂಗತಿಯಾಗಿದೆ. ಕೆಲವೆಡೆ ಇವರು ಬಹಿಷ್ಕಾರಕ್ಕೂ ಗುರಿಯಾಗಿದ್ದಾರೆ.ಅನೇಕ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಕೂಡ ಇಲ್ಲ. ಇಂತಹ ಸ್ಥಳಗಳಲ್ಲಿ ಕೆಲಸ ಮಾಡಲು ವೈದ್ಯಕೀಯ ಸಿಬ್ಬಂದಿ ಮೇಲೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ಈ ಸಿಬ್ಬಂದಿ ತುಂಬಾ ಕಷ್ಟದ ಸನ್ನಿವೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.

ದೇಶದ ರಾಜಧಾನಿ ದಿಲ್ಲಿ ಸೇರಿದಂತೆ ದೇಶದ ಅನೇಕ ಸರಕಾರಿ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ವೈದ್ಯರು, ದಾದಿಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ಸಂಬಳವನ್ನೂ ನೀಡಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಆತಂಕವನ್ನು ವ್ಯಕ್ತಪಡಿಸಿದೆ. ಈ ವೈದ್ಯಕೀಯ ಸಿಬ್ಬಂದಿಗೆ ತಕ್ಷಣ ಸಂಬಳ ಪಾವತಿ ಮಾಡುವಂತೆ ತಿಳಿಸಿದೆ.

ಕೊರೋನ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಯನ್ನು ಯೋಧರಿಗೆ ಹೋಲಿಸಿ ‘ವಾರಿಯರ್ಸ್’ ಎಂದು ಕರೆಯುತ್ತಿದ್ದೇವೆ. ಅವರ ಮೇಲೆ ಹೂವಿನ ಮಳೆ ಸುರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಇವರ ಸೇವೆಯನ್ನು ಶ್ಲಾಘಿಸಿದ್ದಾರೆ. ಆದರೆ ಸಂಬಳವಿಲ್ಲದೆ ಅವರು ಹಾಗೂ ಮನೆಯವರು ಕಷ್ಟ, ತಾಪತ್ರಯ ಅನುಭವಿಸುತ್ತಿದ್ದಾರೆ. ಅವರ ರಕ್ಷಣೆಗೆ ಸರಕಾರ ಕ್ರಮ ಕೈಗೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಸಂಬಳ ಮಾತ್ರ ಪಾವತಿಯಾಗಿಲ್ಲ. ಬರೀ ಒಣ ಮಾತಿನಿಂದ ಹೊಟ್ಟೆ ತುಂಬುವುದಿಲ್ಲ.

ಕೋವಿಡ್‌_-19 ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರು, ಇತರ ವೈದ್ಯಕೀಯ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಪೊಲೀಸರು, ನಮ್ಮ ನಗರಗಳನ್ನು ನಿತ್ಯವೂ ಸ್ವಚ್ಛವಾಗಿಡುತ್ತಿರುವ ಪೌರ ಕಾರ್ಮಿಕರು ಇವರೆಲ್ಲರ ರಕ್ಷಣೆಯ ಹೊಣೆ ಸರಕಾರ ಮತ್ತು ಸಮಾಜದ್ದಾಗಿದೆ. ಈ ಹೊಣೆಗಾರಿಕೆಯಿಂದ ವಿಮುಖರಾದರೆ ಅದು ದ್ರೋಹದ ಪರಮಾವಧಿಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News