ಪ್ರಧಾನಿಗೆ ಪತ್ರ ಬರೆದ 9 ಗ್ರಾಮಗಳ ಸರಪಂಚರು: ಕಾರಣವೇನು ಗೊತ್ತಾ ?

Update: 2020-06-16 18:19 GMT

ರಾಯ್‌ಪುರ, ಜೂ.16: ಛತ್ತೀಸ್‌ಗಢದಲ್ಲಿ ನಡೆಸಲು ಉದ್ದೇಶಿಸಿರುವ ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಹಸ್‌ದಿಯೊ ಅರಂದ್ ಪ್ರದೇಶದ ಹಲವು ಚುನಾಯಿತ ಗ್ರಾಮಪಂಚಾಯತ್ ಅಧ್ಯಕ್ಷರು ಪ್ರಧಾನಿ ಮೋದಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಹಸ್‌ದಿಯೊ ಅರಂದ್ ಪ್ರದೇಶ ಉತ್ತರ ಛತ್ತೀಸ್‌ ಗಢದ ಸರ್ಗುಜ, ಸೂರಜ್‌ಪುರ ಮತ್ತು ಕೋಬ್ರಾ ಜಿಲ್ಲೆಗಳನ್ನು ಹೊಂದಿದೆ. ಜೂನ್ 18ರಂದು ಗಣಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಕಲ್ಲಿದ್ದಲು ಸಚಿವಾಲಯದ ಹೇಳಿಕೆ ತಿಳಿಸಿದೆ.

ಪ್ರಧಾನಿ ಮೋದಿ ಒಂದೆಡೆ ಆತ್ಮನಿರ್ಭರ ಅಥವಾ ಸ್ವಾವಲಂಬನೆ ಎಂಬ ಮಂತ್ರ ಜಪಿಸುತ್ತಿದ್ದರೆ, ಇನ್ನೊಂದೆಡೆ ಆದಿವಾಸಿಗಳು ಹಾಗೂ ಅರಣ್ಯವಾಸಿ ಸಮುದಾಯದ ಬದುಕು, ಸಂಸ್ಕೃತಿ ಮತ್ತು ಜೀವನಶೈಲಿಯ ಮೇಲೆ ಗಣಿ ಹರಾಜು ಪ್ರಕ್ರಿಯೆಯ ಮೂಲಕ ದಾಳಿ ನಡೆಸಲು ಸುಲಭ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಗಣಿಗಾರಿಕೆ ವಿರೋಧಿಸಿ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಅದನ್ನು ಪರಿಗಣಿಸದೆ ಕೇಂದ್ರ ಸರಕಾರ ಕೈಗೊಂಡಿರುವ ನಿರ್ಧಾರ ದುರದೃಷ್ಟಕರ. ಅಲ್ಲದೆ ಕೊರೋನ ಸೋಂಕಿನ ಭೀತಿಯ ಮಧ್ಯೆ, ಸ್ಥಳೀಯರಿಗೆ ನೆಲೆ ಕಳೆದುಕೊಳ್ಳುವ ಸಂಕಷ್ಟವೂ ಎದುರಾಗಿದೆ ಎಂದು ‘ದಿ ವೈರ್’ನ ಜೊತೆ ಮಾತನಾಡಿದ ಘಾಟ್‌ಬರ್ರ ಗ್ರಾಮದ ಅಧ್ಯಕ್ಷ ಜೈನಂದನ್ ಸಿಂಗ್ ಪೋರ್ತೆ ಆತಂಕ ವ್ಯಕ್ತಪಡಿಸಿದ್ದಾರೆ.

ನಮ್ಮ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ನಾಶಗೊಳಿಸುವ ಯಾವುದೇ ರೀತಿಯ ಗಣಿಗಾರಿಕೆ ನಮಗೆ ಬೇಡ. ಈ ಪ್ರದೇಶದಲ್ಲಿರುವ ಪ್ರಾಕೃತಿಕ ಸಂಪನ್ಮೂಲದ ಕಾರಣ ನಾವು ಈಗಾಗಲೇ ಆತ್ಮನಿರ್ಭರರಾಗಿದ್ದೇವೆ. ಗಣಿಗಾರಿಕೆ ಈ ಪ್ರಾಕೃತಿಕ ಸಂಪನ್ಮೂಲವನ್ನು ನಾಶಗೊಳಿಸಲಿದೆ. ಆದ್ದರಿಂದ ಹಲವು ಗ್ರಾಮಗಳು ಗಣಿ ಹರಾಜನ್ನು ವಿರೋಧಿಸಿ ನಿರ್ಣಯ ಕೈಗೊಂಡಿದೆ ಎಂದವರು ಹೇಳಿದ್ದಾರೆ.

ಸ್ಥಳೀಯರು ನೀರು, ಅರಣ್ಯ ಮತ್ತು ಭೂಮಿಯ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದಾರೆ. ಗಣಿಗಾರಿಕೆ ಇದನ್ನೆಲ್ಲಾ ಮುಗಿಸಿಬಿಡಲಿದೆ ಎಂದು ಕೋರ್ಬಾ ಜಿಲ್ಲೆಯ ಮದನ್‌ಪುರ ಗ್ರಾಮದ ಅಧ್ಯಕ್ಷ ದೇವ್‌ಸೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News