ಕೋವಿಡ್-19 ಲಸಿಕೆಗೆ 1 ವರ್ಷ ಕಾಯಬೇಕು: ವಿಜ್ಞಾನಿಗಳ ಹೇಳಿಕೆ

Update: 2020-06-16 18:31 GMT

ಹೊಸದಿಲ್ಲಿ, ಜೂ.16: ಲಸಿಕೆ ವಿನ್ಯಾಸ ಇನ್ನೂ ಪ್ರಾಯೋಗಿಕ , ಪ್ರಯೋಗ ಮತ್ತು ದೋಷ ಕಂಡುಹುಡುಕುವ ಹಂತದಲ್ಲಿದ್ದು ಕೋವಿಡ್ 19ರ ವಿರುದ್ಧದ ಲಸಿಕೆಗೆ ಇನ್ನೂ 1 ವರ್ಷ ಕಾಯಬೇಕಾಗಬಹುದು. ಸೋಂಕನ್ನು ಎದುರಿಸಲು ಚಿಕಿತ್ಸಾಶಾಸ್ತ್ರದಲ್ಲಿನ ಉಪಕ್ರಮಗಳು ಪ್ರಪಂಚದಾದ್ಯಂತ ವಿಶ್ವಸನೀಯ ರೀತಿಯಲ್ಲಿ ಮುಂದುವರಿದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪರೀಕ್ಷಾ ಅನುಮೋದನೆ ಹಾಗೂ ಲಸಿಕೆ ಉತ್ಪಾದನೆ ಹೆಚ್ಚಳ ಏಕಕಾಲದಲ್ಲೇ ನಡೆದರೆ ಕೆಲವು ತಿಂಗಳು ಮೊದಲೇ ಲಸಿಕೆ ಕಂಡುಹಿಡಿಯಬಹುದಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೋವಿಡ್ 19ರ ವಿರುದ್ಧ 10 ಲಸಿಕೆಗಳು ಚಿಕಿತ್ಸಕ ಮೌಲ್ಯಾಂಕನ ಹಂತದಲ್ಲಿದ್ದರೆ 126 ಲಸಿಕೆಗಳು ಪೂರ್ವಭಾವಿ ಹಂತದಲ್ಲಿದೆ.

ಸಾರ್ಸ್-ಸಿಒವಿ-2 (ಕೋವಿಡ್ 19) ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸಲು ವಿಶ್ವದಾದ್ಯಂತ ಎರಡು ವಿಭಿನ್ನ ಸ್ಥೂಲ ಕಾರ್ಯನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿಯ ವಿಜ್ಞಾನಿ ಸತ್ಯಜಿತ್ ರಥ್ ಹೇಳಿದ್ದಾರೆ. ಒಂದನೆಯದ್ದು ಸುಮಾರು 2 ಶತಮಾನ ಹಳೆಯ ಕಾರ್ಯನೀತಿ, ಇನ್ನೊಂದು ಸುಮಾರು 2 ದಶಕ ಹಳೆಯ ಕಾರ್ಯನೀತಿ. ಎರಡು ವಿಧಾನದಲ್ಲೂ ಬಳಕೆಗೆ ಯೋಗ್ಯವಾದ ಲಸಿಕೆ ಸಿದ್ಧಗೊಳ್ಳುವ ಖಾತರಿ ಇಲ್ಲ . ಲಸಿಕೆಯ ವಿನ್ಯಾಸ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಆದ್ದರಿಂದಲೇ , ಯಾವುದೇ ಕಾರ್ಯನೀತಿಯ ಫಲಿತಾಂಶವನ್ನು ಲಸಿಕೆ ಎಂದು ಪರಿಗಣಿಸದೆ ಪರೀಕ್ಷಾರ್ಥಿ ಎಂದೇ ಪರಿಗಣಿಸಲಾಗುತ್ತದೆ ಎಂದವರು ಹೇಳಿದ್ದಾರೆ.

  ಆದರೆ ಪರೀಕ್ಷಾರ್ಥಿ ಮತ್ತು ಲಸಿಕೆ ಪದಗಳ ನಡುವಿನ ವ್ಯತ್ಯಾಸದ ಬಗ್ಗೆ ಗೊಂದಲವಿದೆ ಎಂದು ಅಮೆರಿಕದ ಮೇರಿಲ್ಯಾಂಡ್ ವಿವಿಯ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ವೈರಾಲಜಿಯ ನಿರ್ದೇಶಕ ರಾಬರ್ಟ್ ಗ್ಯಾಲ್ಲೊ ಅಭಿಪ್ರಾಯಪಟ್ಟಿದ್ದಾರೆ. ಈ ತಿಂಗಳ ಆರಂಭದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಯಾಲಿಫೋರ್ನಿಯಾ ವಿವಿಯ ವಿಜ್ಞಾನಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಲಸಿಕೆ ಕಂಡು ಹಿಡಿದರೆ ಮಾತ್ರ ಕೊರೋನ ಸೋಂಕಿನಿಂದ ಚೇತರಿಸಿಕೊಂಡು ಜನಜೀವನ ಸಹಜತೆಗೆ ಮರಳಬಹುದು. ಆದರೆ ಇದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂಬ ಪ್ರಶ್ನೆಗೆ, ಒಂದು ವರ್ಷ ಅಥವಾ ಅದಕ್ಕೂ ಹೆಚ್ಚು ಎಂದು ವಿಜ್ಞಾನಿಗಳು ಉತ್ತರಿಸಿದ್ದರು. ಭಾರತದಲ್ಲಿ ಕನಿಷ್ಟ 6 ಸಂಸ್ಥೆಗಳು ಕೋವಿಡ್-19ರ ಲಸಿಕೆ ಕಂಡುಹಿಡಿಯಲು ಕಾರ್ಯನಿರತವಾಗಿದ್ದು, ಕೊರೋನ ವೈರಸ್ ವಿರುದ್ಧ ಹೋರಾಡಲು ಬಡ ಮತ್ತು ಕಡಿಮೆ ವರಮಾನದ ದೇಶಗಳಿಗೆ 1 ಬಿಲಿಯನ್ ಲಸಿಕೆ ಸರಬರಾಜು ಮಾಡಲು ಝೆನೆಕಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಕಳೆದ ವಾರ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ. ಅಸ್ತ್ರ ಝೆನೆಕಾ ಸಂಸ್ಥೆಯ ಉತ್ಪನ್ನಗಳನ್ನು ಭಾರತ ಮತ್ತು ಇತರ ಜಿಎವಿಐ (ಗ್ಲೋಬಲ್ ಅಲಯನ್ಸ್ ಫಾರ್ ವ್ಯಾಸಿನ್ ಆ್ಯಂಡ್ ಇಮ್ಯುನೈಸೇಷನ್) ರಾಷ್ಟ್ರಗಳ ಬಳಕೆಗೆ ಉತ್ಪಾದಿಸುವ ಬಗ್ಗೆ ನಾವು ಆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News