×
Ad

ಅಧ್ಯಕ್ಷೀಯ ಚುನಾವಣೆಯಲ್ಲಿ ಸಹಾಯ ಮಾಡಲು ಟ್ರಂಪ್ ಚೀನಾ ಅಧ್ಯಕ್ಷರನ್ನು ಕೇಳಿಕೊಂಡಿದ್ದರು

Update: 2020-06-18 21:30 IST

ವಾಶಿಂಗ್ಟನ್, ಜೂ. 18: 2020ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮರುಆಯ್ಕೆಯಾಗಲು ಸಹಾಯ ಮಾಡಬೇಕು ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ರಲ್ಲಿ ಕೇಳಿಕೊಂಡಿದ್ದರು ಎಂದು ಅಮೆರಿಕ ಅಧ್ಯಕ್ಷರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ತನ್ನ ಹೊಸ ಸ್ಫೋಟಕ ಪುಸ್ತಕದಲ್ಲಿ ಹೇಳಿದ್ದಾರೆ.

ಪುಸ್ತಕದ ಕೆಲವು ಅಂಶಗಳನ್ನು ‘ವಾಶಿಂಗ್ಟನ್ ಪೋಸ್ಟ್’, ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ವಾಲ್‌ಸ್ಟ್ರೀಟ್ ಜರ್ನಲ್’ ಪತ್ರಿಕೆಗಳು ಬುಧವಾರ ಪ್ರಕಟಿಸಿವೆ.

‘‘ಕಳೆದ ವರ್ಷದ ಜೂನ್‌ನಲ್ಲಿ ನಡೆದ ಶೃಂಗ ಸಮ್ಮೇಳನವೊಂದರಲ್ಲಿ ಟ್ರಂಪ್, ಜಿನ್‌ ಪಿಂಗ್‌ರನ್ನು ಭೇಟಿಯಾದರು. ಅವರಿಬ್ಬರ ನಡುವೆ ಮಾತುಕತೆ ನಡೆಯುತ್ತಿದ್ದಾಗ, ಟ್ರಂಪ್ ಆಶ್ಚರ್ಯಕರ ರೀತಿಯಲ್ಲಿ ಮಾತುಕತೆಯನ್ನು ಅಧ್ಯಕ್ಷೀಯ ಚುನಾವಣೆಯತ್ತ ತಿರುಗಿಸಿದರು. ಚೀನಾದ ಆರ್ಥಿಕ ಸಾಮರ್ಥ್ಯವನ್ನು ಪ್ರಸ್ತಾಪಿಸುತ್ತಾ, ಚುನಾವಣಾ ಪ್ರಚಾರಗಳ ಮೇಲೆ ಪ್ರಭಾವ ಬೀರಲು ಚೀನಾಗೆ ಸಾಧ್ಯವಿದೆ ಎಂದು ಹೇಳಿದರು ಹಾಗೂ ನಾನು ಗೆಲ್ಲುವಂತೆ ನೋಡಿಕೊಳ್ಳಿ ಎಂದು ಜಿನ್‌ಪಿಂಗ್‌ರನ್ನು ಕೇಳಿಕೊಂಡರು’’ ಎಂದು ಮುಂಬರು ತನ್ನ ಪುಸ್ತಕದಲ್ಲಿ ಬೋಲ್ಟನ್ ಹೇಳಿಕೊಂಡಿದ್ದಾರೆ.

ಜಿನ್‌ಪಿಂಗ್ ಜೊತೆಗಿನ ಮಾತುಕತೆಯ ವೇಳೆ ಟ್ರಂಪ್, ಅಮೆರಿಕದ ರೈತರ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು ಹಾಗೂ ಆ ರೈತರು ಬೆಳೆಯುವ ಸೋಯಬೀನ್ ಮತ್ತು ಗೋದಿಯನ್ನು ಚೀನಾ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರೆ, ಅದು ಅಮೆರಿಕದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಟ್ರಂಪ್ ಚೀನಾ ಅಧ್ಯಕ್ಷರಿಗೆ ಹೇಳಿದ್ದರು ಎಂದು ‘ದ ರೂಮ್ ವೇರ್ ಇಟ್ ಹ್ಯಾಪನ್ಡ್: ಅ ವೈಟ್‌ಹೌಸ್ ಮೆಮಾಯಿರ್’ ಎಂಬ ತನ್ನ ಪುಸ್ತಕದಲ್ಲಿ ಬೋಲ್ಟನ್ ಹೇಳಿದ್ದಾರೆ. ಪುಸ್ತಕವು ಜೂನ್ 23ರಂದು ಬಿಡುಗಡೆಯಾಗಲು ನಿಗದಿಯಾಗಿದೆ.

ಉಯಿಘರ್‌ಗಳ ಸಾಮೂಹಿಕ ಬಂಧನಕ್ಕೆ ಬೆಂಬಲ ನೀಡುವೆನೆಂದ ಟ್ರಂಪ್

ನನ್ನ ಬೇಡಿಕೆಗಳಿಗೆ ಚೀನಾ ಒಪ್ಪಿದರೆ, ಉಯಿಘರ್ ಮುಸ್ಲಿಮರು ಸೇರಿದಂತೆ ಚೀನಾದ ಅಲ್ಪಸಂಖ್ಯಾತರ ಸಾಮೂಹಿಕ ಬಂಧನಕ್ಕೆ ನಾನು ಬೆಂಬಲ ನೀಡುವುದಾಗಿ ಟ್ರಂಪ್ ಚೀನಾ ಅಧ್ಯಕ್ಷರಿಗೆ ಭರವಸೆ ನೀಡಿದ್ದರು ಎಂದು ಜಾನ್ ಬೋಲ್ಟನ್ ತನ್ನ ಪುಸ್ತಕದಲ್ಲಿ ಹೇಳಿದ್ದಾರೆ.

ಪುಸ್ತಕದ ಪ್ರಕಟನೆ ತಡೆಯುವಂತೆ ಕೋರಿ ತುರ್ತು ಮನವಿ

ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್‌ರ ಪುಸ್ತಕ ಬಿಡುಗಡೆಗೊಳ್ಳದಂತೆ ತಡೆಯಲು ಶ್ವೇತಭವನ ನಿರಂತರವಾಗಿ ಶ್ರಮಿಸುತ್ತಿದೆ. ಪುಸ್ತಕದ ಬಿಡುಗಡೆಯನ್ನು ತಡೆಯಬೇಕೆಂದು ಕೋರಿ ಅಮೆರಿಕದ ಕಾನೂನು ಇಲಾಖೆಯು ಬುಧವಾರ ನ್ಯಾಯಾಲಯವೊಂದರಲ್ಲಿ ತುರ್ತು ಮನವಿಯನ್ನು ಮಾಡಿತು. ಇದು ಪುಸ್ತಕದ ಪ್ರಕಟನೆಯನ್ನು ತಡೆಯುವುದಕ್ಕಾಗಿ ಎರಡು ದಿನಗಳ ಅವಧಿಯಲ್ಲಿ ಅದು ನ್ಯಾಯಾಲಯಕ್ಕೆ ಸಲ್ಲಿಸಿದ ಎರಡನೇ ಮನವಿಯಾಗಿದೆ.

ಬೋಲ್ಟನ್‌ರ ಪುಸ್ತಕದಲ್ಲಿ ರಹಸ್ಯ ಮಾಹಿತಿಗಳು ಇರುವ ಸಾಧ್ಯತೆಗಳಿವೆ, ಹಾಗಾಗಿ ಪುಸ್ತಕವನ್ನು ತಡೆಯಬೇಕು ಎಂದು ಅದು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News