ಫ್ಯಾಕ್ಟ್ ಚೆಕ್: ಲಡಾಖ್‍ ನಲ್ಲಿ ‘ಚೀನಿ ಸೈನಿಕನ ಸೆರೆ’ ಎಂದು ವೈರಲ್ ಆಗುತ್ತಿರುವ ವಿಡಿಯೋ ಹಳೆಯದ್ದು

Update: 2020-06-19 08:15 GMT

ಹೊಸದಿಲ್ಲಿ: “ಲಡಾಖ್‍ ನಲ್ಲಿ ಸೆರೆ ಹಿಡಿಯಲಾದ ಚೀನೀ ವಾಹನ ಮತ್ತು ಚೀನಿ ಸೈನಿಕ'' ಎಂಬ ತಲೆಬರಹದೊಂದಿಗೆ ವಿಡಿಯೋವೊಂದು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತೀಯ ಮತ್ತು ಚೀನಿ ಸೈನಿಕರ ನಡುವೆ ಲಡಾಖ್‍ ನ ಗಲ್ವಾನ್ ಕಣಿವೆಯಲ್ಲಿ ಸೋಮವಾರ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಘಟನೆಯ ನಂತರ ಈ ವಿಡಿಯೋ ಹರಿದಾಡಲಾರಂಭಿಸಿತ್ತು.

ವಾಸ್ತವವೇನು ?

ಪೂರ್ವ ಲಡಾಖ್ ನ ಪಂಗೊಂಗ್ ತ್ಸೊ ಸರೋವರ ಹಾಗೂ ಸಿಕ್ಕಿಂನ ನಾಕು ಲ ಎಂಬಲ್ಲಿ ಎರಡೂ ಕಡೆಗಳ ಸೇನಾ ಪಡೆಗಳ ನಡುವೆ ನಡೆದ ಸಂಘರ್ಷದ ನಂತರ ಇದೇ ವೀಡಿಯೋ ಮೇ 31ರಂದು ವೈರಲ್ ಆಗಿತ್ತು.

ಇದೀಗ ಸೋಮವಾರದ ಸಂಘರ್ಷದ ನಂತರ ಮತ್ತೆ ಅದೇ ವೀಡಿಯೋ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಭಾರತೀಯ ಮತ್ತು ಚೀನೀ ಸೈನಿಕರು ಕಲ್ಲು ತೂರಾಟದಲ್ಲಿ ತೊಡಗಿರುವುದು ಕಾಣಿಸುತ್ತದೆ. ಭಾರತೀಯ ಸೈನಿಕರು ಚೀನೀ ವಾಹನವೊಂದರ ಮೇಲೆ ದಾಳಿ ನಡೆಸಿ ಒಬ್ಬ ಚೀನಾದ ಸೈನಿಕನನ್ನು ಗಾಯಗೊಳಿಸಿರುವುದು ಹಾಗೂ ಆತನ ತಲೆಯಲ್ಲಿ ರಕ್ತ ಒಸರುತ್ತಿರುವಂತೆಯೇ ಆತ ರಸ್ತೆಯಲ್ಲಿ ಬಿದ್ದಿರುವುದು ಕಾಣಿಸುತ್ತದೆ ಹಾಗೂ ಆತನನ್ನು ಭಾರತೀಯ ಸೈನಿಕರು ಸುತ್ತುವರಿದಿರುವುದು ಕಾಣಿಸುತ್ತದೆ.

ಈ ವೀಡಿಯೋವನ್ನು ಪತ್ರಕರ್ತ ಶಿವ್ ಆರೂರ್ ಜೂನ್ 17ರಂದು ಟ್ವೀಟ್ ಮಾಡಿ “ಪಂಗೊಂಗ್‍ನಲ್ಲಿ  ಮೇ ಕೊನೆಯ ಭಾಗದಲ್ಲಿನ ಘಟನೆ'' ಎಂದು ಬರೆದಿದ್ದಾರೆ. ಆದುದರಿಂದ ಮೇ ತಿಂಗಳಿನ ವೀಡಿಯೋವೊಂದನ್ನು ಇತ್ತೀಚಿಗಿನ ವೀಡಿಯೋ ಎಂದು ಹೇಳಿಕೊಂಡು ಶೇರ್ ಮಾಡಲಾಗುತ್ತಿದೆ ಎಂಬುದು ಸ್ಪಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News