×
Ad

ಭಯೋತ್ಪಾದನೆಗೆ ಹಣ ಪೂರೈಕೆ: ಹಫೀಝ್ ಸಯೀದ್‌ನ ಆಪ್ತರಿಗೆ ಜೈಲು ವಾಸ

Update: 2020-06-19 22:53 IST

ಲಾಹೋರ್ (ಪಾಕಿಸ್ತಾನ), ಜೂ. 19: ನಿಷೇಧಿತ ಜಮಾಅತುದಅವಾ ಸಂಘಟನೆಯ ಉನ್ನತ ನಾಯಕರು ಹಾಗೂ 2008ರ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಝ್ ಸಯೀದ್‌ನ ನಿಕಟವರ್ತಿಗಳಾದ ನಾಲ್ವರಿಗೆ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಪಾಕಿಸ್ತಾನದ ಭಂಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಗುರುವಾರ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿದೆ.

ಹಫೀಝ್ ಅಬ್ದುಲ್ ರಹ್ಮಾನ್ ಮಕ್ಕಿ, ಮಲಿಕ್ ಝಫರ್ ಇಕ್ಬಾಲ್, ಯಹ್ಯಾ ಅಝೀಝ್ ಮತ್ತು ಅಬ್ದುಲ್ ಸಲಾಮ್ ಶಿಕ್ಷೆಗೊಳಗಾದವರು.

ಇಕ್ಬಾಲ್ ಮತ್ತು ಅಝೀಝ್‌ಗೆ ತಲಾ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾದರೆ, ಮಕ್ಕಿ ಮತ್ತು ಸಲಾಮ್‌ಗೆ ತಲಾ ಒಂದು ವರ್ಷದ ಶಿಕ್ಷೆ ನೀಡಲಾಗಿದೆ.

ಮಕ್ಕಿಯು ಲಷ್ಕರೆ ತಯ್ಯಬ ಸ್ಥಾಪಕ ಹಾಗೂ ಜಮಾಅತುದಅವಾ ಮುಖ್ಯಸ್ಥ ಹಫೀಝ್ ಸಯೀದ್‌ನ ಬಾವನಾಗಿದ್ದಾನೆ.

ನ್ಯಾಯಾಲಯವು ನಾಲ್ವರು ದೋಷಿಗಳಿಗೆ ತಲಾ 50,000 ರೂಪಾಯಿ ದಂಡವನ್ನೂ ವಿಧಿಸಿದೆ. ದಂಡ ತೆರಲು ತಪ್ಪಿದರೆ ಅವರು ಹೆಚ್ಚುವರಿ 6 ತಿಂಗಳನ್ನು ಜೈಲಲ್ಲಿ ಕಳೆಯಬೇಕಾಗಿದೆ.

ಈ ನಾಲ್ವರನ್ನು 1997ರ ಭಯೋತ್ಪಾದನೆ ನಿಗ್ರಹ ಕಾಯ್ದೆಯನ್ವಯ ಶಿಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News