ನೆಲದ ಒಡೆಯ ಈಗ ಕೂಲಿಕಾರ

Update: 2020-06-19 17:38 GMT

ಈ ಕಾರ್ಪೊರೇಟ್ ಕಂಪೆನಿಗಳ ಆರ್ಥಿಕ ಕೇಂದ್ರೀಕೃತ ಹೆಜ್ಜೆಯಾಗಿ ಇವರುಗಳೇ ನಿರ್ಧರಿಸುವ, ಪರಿಷ್ಕೃತಗೊಳಿಸುವ ದರಗಳಿಗೆ ವಿವಿಧ ಕ್ಷೇತ್ರಗಳ ಜನರು ಬಲಿಯಾಗಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಬೀದಿಬದಿ ವ್ಯಾಪಾರವು ಮಾಯವಾಗಿ ಮಾಯಾಜಾಲದ ಮಾಲ್‌ಗಳಲ್ಲಿ ಒಂದು ಸಣ್ಣ ಸೊಪ್ಪಿನಿಂದ ಹಿಡಿದು ಎಲ್ಲವನ್ನು ಖರೀದಿಸುವಂತೆ ಮಾಡಿ, ಆಹಾರ ಸಂಸ್ಕೃತಿಯನ್ನು ಕಾರ್ಪೊರೇಟ್ ಬಂಡವಾಳಶಾಹಿಗಳು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಳ್ಳುತ್ತಾರೆ. ಜೀತ ಪದ್ಧತಿಯೂ ಕಾಲಕ್ರಮೇಣ ಕಂಪೆನಿಗಳಿಗೆ ವರ್ಗಾವಣೆಯಾಗಲಿದೆ.


ಮೈಸೂರು ವೀಳ್ಯದೆಲೆ ಎಂದರೆ ಪ್ರಸಿದ್ಧ. ಈ ವೀಳ್ಯದೆಲೆಯನ್ನು ಮೈಸೂರಿನ ಹೃದಯಭಾಗದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಹೆಚ್ಚು ಬೆಳೆಯುತ್ತಾರೆ. ದಲಿತ ಸಮುದಾಯಕ್ಕೆ ಸೇರಿದವರು ಈ ವೀಳ್ಯದೆಲೆ ಬೆಳೆಯುವ ವ್ಯವಸಾಯ ಮಾಡುತ್ತಾ ಬಂದಿದ್ದು, ಇದಕ್ಕೆ ‘ವೀಳ್ಯದೆಲೆ ತೋಟ’ ಎಂಬ ಹೆಸರಿನಿಂದ ಕರೆಯುವ ವಾಡಿಕೆ ಶತಮಾನಗಳಿಂದಲೂ ಇದೆ. ಕೆಲವು ವರ್ಷಗಳ ಹಿಂದೆ ಈ ತೋಟದ ಒಂದು ಮೂಲೆಯ ಭೂಮಿಯಲ್ಲಿ ನಿರ್ಮಾಣವಾಗಿರುವ ಪೆಟ್ರೋಲ್ ಬಂಕ್‌ಗೆ ನಾನು ಮತ್ತು ನನ್ನ ಸ್ನೇಹಿತ ಪೆಟ್ರೋಲ್ ಹಾಕಿಸಲು ಭೇಟಿ ನೀಡಿದೆವು. ಸಂದರ್ಭದಲ್ಲಿ ನನ್ನ ಸ್ನೇಹಿತನ ಜೊತೆಗೆ ಮಾತನಾಡುತ್ತಾ ‘‘ಈ ಜಾಗವೆಲ್ಲ ವೀಳ್ಯದೆಲೆ ತೋಟವಾಗಿತ್ತು, ಆದರೆ ಈಗ ಮಾಯವಾಗಿ ವಿವಿಧ ವಾಣಿಜ್ಯ ವ್ಯಾಪಾರ ಶುರುವಾಗಿದೆ’’ ಎಂದೆ. ಆಗ ಅಲ್ಲೇ ಪೆಟ್ರೋಲ್ ಹಾಕುವ ವ್ಯಕ್ತಿ ನನ್ನತ್ತ ದೃಷ್ಟಿ ಹಾಯಿಸಿ ಬೇಸರದ ಮುಖ ಮಾಡಿಕೊಂಡು ಕಣ್ಣಂಚಿನಲ್ಲಿ ಕಣ್ಣೀರು ತುಂಬಿಕೊಂಡು ನೆಲವನ್ನು ನೋಡುತ್ತಾ ಮೆಲುದನಿಯಲ್ಲಿ ‘‘ನನ್ನ ಜಾಗದಲ್ಲೇ ನಾನು ಪೆಟ್ರೋಲ್ ಹಾಕುತ್ತಾ ಇದ್ದೀನಿ’’ ಎಂದರು.

ಒಂದು ಕ್ಷಣ ನಾನು ಬೆರಗಾಗಿ ಮಾತಿಗೆಳೆದಾಗ ಅವರು ‘‘ಸ್ವಾಮಿ ಈ ಭೂಮಿಯಲ್ಲಿ ನಮ್ಮಹಿರಿಯ ತಲೆಮಾರುಗಳು ವ್ಯವಸಾಯ ಮಾಡಿಕೊಂಡು ಬಂದಿದ್ದು ಭೂ-ಖರೀದಿದಾರರು ನಮ್ಮ ತೊಂದರೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಅರ್ಧಂಬರ್ಧ ಬೆಲೆಗೆ ಭೂಮಿಯನ್ನು ಕೊಂಡರು. ಬಂದ ದುಡ್ಡಲ್ಲಿ ಮಕ್ಕಳ ಮದುವೆ ಮಾಡಿ ಅಷ್ಟು-ಇಷ್ಟು ದುಡ್ಡನ್ನು ಅವರಿಗೆ ಕೊಟ್ಟು ಈಗ ದುಡ್ಡೆಲ್ಲ ಖಾಲಿಯಾಗಿದೆ. ಭೂಮಿ ಇದ್ದಾಗಲಾದರೂ ಹೇಗೋ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದೆವು. ಆದರೆ ಈಗ ನನ್ನದೇ ಭೂಮಿಯಲ್ಲಿ ಮತ್ತೊಬ್ಬರ ಕೈಯಡಿ ಕೂಲಿಯಾಳಾಗಿದ್ದೀನಿ’’ ಎಂದು ದುಃಖಭರಿತವಾಗಿ ಹೇಳಿದರು. ಇದು ಒಂದು ದೃಶ್ಯ. ಇದೇ ವೀಳ್ಯದೆಲೆ ತೋಟದ ಮತ್ತೊಂದು ಮಗ್ಗುಲಲ್ಲಿ ಹಲವು ವರ್ಷಗಳಿಂದ ವೀಳ್ಯದೆಲೆ ವ್ಯವಸಾಯ ಮಾಡಿಕೊಂಡು ಬಂದಿದ್ದ ಕೃಷಿಕನ ತೋಟದ ಸುತ್ತ ಇರುವ ಭೂಮಿಯನ್ನು ರಿಯಲ್ ಎಸ್ಟೇಟ್ ಭೂ-ಖರೀದಿದಾರರು ಖರೀದಿಸಿದ್ದಾರೆ. ಆದರೆ ಮಧ್ಯದಲ್ಲಿ ಇದ್ದ ಇವರ ಭೂಮಿಯನ್ನು ಎಷ್ಟೇ ಒತ್ತಾಯ ಮಾಡಿದರೂ ಸಹ ಆ ಕೃಷಿಕನು ಮಾರುವುದಿಲ್ಲ. ಇದನ್ನು ಹೇಗಾದರೂ ಕಬಳಿಸಬೇಕು ಎಂದು ತೀರ್ಮಾನಿಸಿದ ರಿಯಲ್ ಎಸ್ಟೇಟ್‌ದಾರ, ಈ ಕೃಷಿಕರ ಭೂಮಿಯ ಸುತ್ತಾ ಬೇಲಿಯನ್ನು ಹಾಕಿ ಅವನ ಭೂಮಿಗೆ ದಾರಿಯೇ ಇಲ್ಲದಂತೆ ಮಾಡಿದ. ಕೊನೆಗೆ ವಿಧಿ ಇಲ್ಲದೆ  ಕೃಷಿಕನು ತನ್ನ ಭೂಮಿಯನ್ನು ಆ ರಿಯಲ್ ಎಸ್ಟೇಟ್ ಭೂ-ಖರೀದಿದಾರನಿಗೆ ಅವರು ನಿಗದಿ ಮಾಡಿದ ಕಾನೂನುಸಮ್ಮತವಲ್ಲದ ಬೆಲೆಗೆ ಒಪ್ಪಿಸುತ್ತಾನೆ. ಇಂತಹ ಸಾವಿರಾರು ಉದಾಹರಣೆಗಳು ನಮ್ಮ ಮುಂದಿವೆ.

ಕರ್ನಾಟಕದ ಒಳಗೆ ಅಕ್ರಮ ಭೂ-ಮಾಫಿಯ ರಾಜಾರೋಷವಾಗಿ ನಡೆಯುತ್ತಿದೆ. ಇದು ರಾಜಕಾರಣಿಗಳ, ಅಧಿಕಾರಿಗಳ ಸಹಮತವಿಲ್ಲದೆ ನಡೆಯಲು ಸಾಧ್ಯವಿಲ್ಲ. ಈ ರೀತಿ ಅನ್ಯಮಾರ್ಗದಿಂದ ಭೂ-ಕಬಳಿಸುತ್ತಿದ್ದ ಭೂ-ಗಳ್ಳರಿಗೆ ಈ ಸರಕಾರವೇ ಭೂ-ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಳ್ಳರ ಕೈಗೆ ಕಾನೂನು ಒಪ್ಪಿಸಿ, ಅನ್ನ ನೀಡುವ ರೈತನ ಭೂಮಿ ಕಸಿದು ದಿನದ ಗಂಜಿಗಾಗಿ ಕೂಲಿಗೆ ಹೋಗುವ ಸ್ಥಿತಿ ತಂದಿಟ್ಟಿದೆ. ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಭೂ-ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ತಂದು ಕಾಯ್ದೆಯ ಹೃದಯ ಮತ್ತು ಆತ್ಮವೆಂದೇ ಕರೆಯಲಾಗುವ ಕಲಂ 79ಎ, ಬಿಸಿ ಮತ್ತು 80 ಅನ್ನು ರದ್ದುಗೊಳಿಸಿ ಉಳ್ಳವರಿಗೆ ಮಾತ್ರ ಭೂ-ಒಡೆತನದ ಖಾತ್ರಿ ಎಂಬಂತೆ ಮಾಡಲು ಹೊರಟಿದೆ. 1961ರಲ್ಲಿ ಜಾರಿಗೆ ಬಂದ ಭೂಕಾಯ್ದೆಯು, ಯಾರು ಆರ್ಥಿಕವಾಗಿ ಸಬಲರಾಗಿರುತ್ತಾರೋ ಅಂತಹವರು ಕೃಷಿ ಭೂಮಿಯನ್ನು ಖರೀದಿಸುವುದರಿಂದ ನಿರ್ಬಂಧ ವಿಧಿಸಿತ್ತು. ಅಲ್ಲದೆ ಉಳುವವನೇ ಭೂಮಿಗೆ ಒಡೆಯ ಎಂಬ ಪರಿಕಲ್ಪನೆಯು ಸಹ ಈಡೇರಿದಂತಾಗಿ ಎಲ್ಲರೂ ಭೂಮಿ ಹೊಂದುವಂತಾಗಿತ್ತು. ಮುಂದುವರಿದು, ಕೈಗಾರಿಕೋದ್ಯಮಿಗಳು ಕೃಷಿ ಭೂಮಿಯನ್ನು ಖರೀದಿಸುವುದರಿಂದ ನಿರ್ಬಂಧವನ್ನು ಸಹ ಹೇರಲು ಸದರಿ ಕಾಯ್ದೆಯು ಸಹಾಯವಾಗಿದೆ.

ಅದೇ ರೀತಿ ಕೃಷಿ ಜಮೀನನ್ನು ಹೊಂದಲು ಗರಿಷ್ಠ ಮಿತಿಯನ್ನು ಸದರಿ ಕಾಯ್ದೆಯಲ್ಲಿ ಅಳವಡಿಸಿರುವುದರಿಂದ ಒಬ್ಬ ವ್ಯಕ್ತಿಯೇ ಹೆಚ್ಚು ಜಮೀನು ಹೊಂದುವ ಆಸ್ಪದವಿರಲಿಲ್ಲ. ಆದರೆ ಇಂದು ತರಾತುರಿಯಲ್ಲಿ ಸರಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ‘ಆರ್ಥಿಕವಾಗಿ ಸಬಲರಾಗಿದ್ದವರು ಕೃಷಿ ಭೂಮಿಯನ್ನು ಖರೀದಿಸಿ ಆಧುನಿಕ ರೀತಿಯಲ್ಲಿ ಕೃಷಿ ಮಾಡುವುದರಿಂದ ರಾಜ್ಯದಲ್ಲಿ ಆರ್ತಿಕ ಪರಿಸ್ಥಿತಿಯು ಕೂಡ ವೃದ್ಧಿಯಾಗುತ್ತದೆ. ಮುಂದುವರಿದು, ಕರ್ನಾಟಕ ಭೂ-ಸುಧಾರಣಾ ಕಾಯ್ದೆ, 1961 ರಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಗರಿಷ್ಠ ಮಿತಿ ನಿಗದಿಪಡಿಸಿರುವುದರಿಂದ ಒಬ್ಬ ವ್ಯಕ್ತಿಯೇ ಹೆಚ್ಚು ಜಮೀನು ಖರೀದಿಸಲು ಸಾಧ್ಯವಿರುವುದಿಲ್ಲ. ಅದೇ ರೀತಿ ಸದರಿ ಕಾಯ್ದೆಯು ಜಾರಿಗೆ ಬಂದ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಸ್ತಿತ್ವದಲ್ಲಿ ಇರುವುದಿಲ್ಲ. ಆದರೆ, ಪ್ರಸ್ತುತ ನಗರ ಯೋಜನಾ ಪ್ರಾಧಿಕಾರದ ಮಾರ್ಗಸೂಚಿ ಇದ್ದು, ಅದರನ್ವಯ ಯಾವ ಉದ್ದೇಶಕ್ಕೆ ಕೃಷಿ ಭೂಮಿಯನ್ನು ಖರೀದಿಸಲಾಗಿರುತ್ತದೆಯೋ ಅದೇ ಉದ್ದೇಶಕ್ಕೆ ಅಂದರೆ ಕೃಷಿ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕಾಗಿರುತ್ತದೆ. ಆದುದರಿಂದ, ಈ ತಿದ್ದುಪಡಿಯಿಂದ ಯಾವುದೇ ದುರುಪಯೋಗವು ಉಂಟಾಗುವ ಸಾಧ್ಯತೆ ಇರುವುದಿಲ್ಲ. ಅಷ್ಟೆ ಅಲ್ಲದೆ, ಬಹುತೇಕ ರಾಜ್ಯಗಳಲ್ಲಿ ಇರುವ ಭೂ ಸುಧಾರಣಾ ಕಾಯ್ದೆಗಳಲ್ಲಿ ಕಲಂ 79ಎ ಮತ್ತು ಬಿ ಅಂತಹ ಷರತ್ತುಗಳು ಇರುವುದಿಲ್ಲ. ಆದುದರಿಂದ ಆ ರಾಜ್ಯಗಳಲ್ಲಿ ಭೂಮಿಯನ್ನು ಖರೀದಿಸಲು ಹಾಗೂ ಕೃಷಿ ಚಟುವಟಿಕೆ ಕೈಗೊಳ್ಳಲು ಯಾವುದೇ ನಿರ್ಬಂಧವಿರುವುದಿಲ್ಲ. ಆದ ಕಾರಣ ಕರ್ನಾಟಕ ಭೂ-ಸುಧಾರಣಾ ಕಾಯ್ದೆ 1961ರ ಕಲಂ 79ಎ ಮತ್ತು 79ಬಿ ತೆಗೆಯುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿ ಸರಕಾರ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದೆ.

ಈ ತಿದ್ದುಪಡಿಯಲ್ಲಿ ಖರೀದಿಸಿದ ಕೃಷಿ ಭೂಮಿಯನ್ನು ಕೃಷಿ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಹೇಳಿದೆ. ಹಾಗಾದರೆ, ಕೃಷಿ ಭೂಮಿಯಿಂದ ವಸತಿ ಅಥವಾ ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸುವ ಕಾನೂನು ಏಕೆ ಚಾಲ್ತಿಯಲ್ಲಿಟ್ಟಿದ್ದೀರಾ? ಹಾಗೆಯೇ ಈಗಾಗಲೇ ಯಾವ ಕೃಷಿ ಭೂಮಿಯೂ ಬೇರೆ ಬಳಕೆ ಉದ್ದೇಶಕ್ಕೆ ಸರಕಾರದಿಂದ ಪರಿವರ್ತನೆ ಮಾಡಿಲ್ಲವೆಂದು ಶ್ವೇತಪತ್ರವನ್ನು ಹೊರಡಿಸುವಿರಾ? ಇಲ್ಲಿ, ಒಂದು ಬಾಗಿಲಿನಿಂದ ಕಠಿಣ ಕಾನೂನು ಎಂದು ತೋರಿಸಿ ಮತ್ತೊಂದು ಬಾಗಿಲಿನಿಂದ ಅದನ್ನು ದುರ್ಬಲವನ್ನಾಗಿ ಮಾಡಲಾಗಿದೆ. ಈ ಭೂಮಿಯು ರೈತರಿಗೆ ಸುಖಾ-ಸುಮ್ಮನೆ ಬಂದದ್ದಲ್ಲ, ಇದಕ್ಕೆ ತನ್ನದೇ ಆದ ಐತಿಹಾಸಿಕ ಚಾರಿತ್ರವುಳ್ಳ ಹೋರಾಟಗಳು ನಡೆದಿವೆ. ಬ್ರಿಟಿಷ್ ವಸಾಹತುಶಾಹಿಯ ಆಡಳಿತದಲ್ಲಿ ಬ್ರಿಟಿಷ್ ಸರಕಾರಕ್ಕೆ ಋಣಿಯಾಗಿದ್ದ ಜಮೀನ್ದಾರರ ಕೈಯಲ್ಲಿ ಸಾವಿರಾರು ಎಕರೆ ಭೂಮಿಯಿತ್ತು.

ಸ್ವಾತಂತ್ರಾ ನಂತರ ನಮ್ಮ ದೇಶದ ಇತಿಹಾಸದಲ್ಲಿ ಭೂ-ಸುಧಾರಣಾ ಕಾಯ್ದೆ, ಇಂದಿರಾ ಗಾಂಧಿಯವರ 20 ಅಂಶಗಳಲ್ಲಿ ಒಂದಾದ ಉಳುವವನೇ ಭೂಮಿಯ ಒಡೆಯ, ಕಮ್ಯೂನಿಸ್ಟರ ತೆಲಂಗಾಣ ಹೋರಾಟ, ಭೂ-ಹಂಚಿಕೆಯ ಕಾನೂನುಗಳು, ವಿನೋಭಾ ಭಾವೆ ಅವರು ಮಾಡಿದ ಭೂಮಿಯನ್ನು ಇದ್ದವರಿಂದ ದಾನವಾಗಿ ತೆಗೆದುಕೊಂಡು ಇಲ್ಲದವರಿಗೆ ಹಂಚಿಕೆ ಮಾಡುವುದು, ಲೋಹಿಯಾ ಹೋರಾಟ, ನಮ್ಮ ರಾಜ್ಯದ ಕಾಗೋಡು ಸತ್ಯಾಗ್ರಹದಲ್ಲಿ ಸಮಾಜವಾದಿಗಳ ಹೋರಾಟ, ದೇವರಾಜ ಅರಸು ಅವರ ದಿಟ್ಟ ಹೆಜ್ಜೆ ಇವುಗಳಿಂದ ರೈತರಿಗೆ ಇಂದು ತುಂಡು ಭೂಮಿ ಸಿಕ್ಕಿದೆ. ಹಿರಿಯ ಸಮಾಜವಾದಿ ಹೋರಾಟಗಾರರಾದ ಶಾಂತವೇರಿ ಗೋಪಾಲಗೌಡರು 14-04-1954 ರಂದು ವಿಧಾನಸಭೆಯಲ್ಲಿ ಭೂಮಿಯನ್ನು ಉದ್ದೇಶಿಸಿ ಮಾತನಾಡುತ್ತಾ ‘‘ಭೂಮಿ ಕೊಳ್ಳತಕ್ಕ, ಮಾರತಕ್ಕ ಆಸ್ತಿಯಾಗಬಾರದು’’ ಎಂದು ಹೇಳಿದ್ದಾರೆ. ಮುಂದುವರಿಸುತ್ತಾ, ‘‘ನನ್ನ ಅಭಿಪ್ರಾಯದಲ್ಲಿ ಭೂಮಿ ಒಂದು ಆಸ್ತಿಯ ಪಟ್ಟಿಯಲ್ಲಿ ಸೇರಿರುವುದು ತಪ್ಪು. ನಮ್ಮ ಸಂಸ್ಥಾನದಲ್ಲಿ ಯಾರಿಗೇ ಆಗಲಿ, ಅವರ ಕುಟುಂಬಕ್ಕೆ ಅನುಸಾರವಾಗಿ ಎಷ್ಟು ಭೂಮಿಯನ್ನು ಅವರ ಸ್ವಂತ ಶ್ರಮದಿಂದ ಉಳುಮೆ ಮಾಡಬಹುದೋ ಅಷ್ಟು ಭೂಮಿಗಿಂತ ಹೆಚ್ಚಿಗೆ ಭೂಮಿ ಯಾರೂ ಇಟ್ಟುಕೊಳ್ಳತಕ್ಕದ್ದಲ್ಲ. ಅವೆೆಲ್ಲಾ ಸರಕಾರಕ್ಕೆ ಸೇರಬೇಕು. ಭೂಮಿ ಸಮಾಜದ ಸೊತ್ತು ಆಗಿರಬೇಕು. ಭೂಮಿಯ ಒಡೆಯನು ಆ ಭೂಮಿಯಿಂದ ಬರತಕ್ಕ ಉತ್ಪನ್ನವನ್ನು ಮಾತ್ರ ಪಡೆದು ಅದನ್ನು ಅನುಭವಿಸತಕ್ಕ ಒಂದು ವ್ಯವಸ್ಥೆ ಏರ್ಪಡಬೇಕು’’ ಎಂದು ಅಭಿಪ್ರಾಯಿಸಿದ್ದಾರೆ. ಆದರೆ, ಈ ಸಮಾಜವಾದಿ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿ ಮಾನ್ಯ ಕಾನೂನು ಸಚಿವರು ಮಾತನಾಡುತ್ತಾ, ‘‘ಕರ್ನಾಟಕ ಭೂ-ಸುಧಾರಣಾ ಕಾಯ್ದೆಯನ್ನು ಪ್ರಸ್ತುತ ಪರಿಸ್ಥಿತಿಗನುಗುಣವಾಗಿ ಸರಳೀಕರಿಸುವ ಅಗತ್ಯವಿದ್ದು, ಕಲಂ 79 ಮತ್ತು 79ಬಿ ನ್ನು ತೆಗೆದುಹಾಕಿದ್ದಲ್ಲಿ ಜನಸಾಮಾನ್ಯರಿಗೆ ಕಿರುಕುಳ ತಪ್ಪುತ್ತದೆ. ಜೊತೆಗೆ ಕಲಂ 63 ರಡಿಯಲ್ಲಿ ಇರುವ ಭೂಮಿಯ ಗರಿಷ್ಠ ಮಿತಿಯನ್ನು ಹೆಚ್ಚಿಸುವ ಅಗತ್ಯವಿದ್ದು, ಕುಟುಂಬವಿಲ್ಲದ ವ್ಯಕ್ತಿಗೆ ಅಥವಾ ಒಂದು ಕುಟುಂಬಕ್ಕೆ ಗರಿಷ್ಠ ಮಿತಿಯನ್ನು 10 ಯೂನಿಟ್‌ನಿಂದ 20 ಯೂನಿಟ್‌ಗೆ ಹೆಚ್ಚಿಸಬಹುದಾಗಿರುತ್ತದೆ ಹಾಗೂ 5 ಕ್ಕಿಂತ ಹೆಚ್ಚಿನ ಜನರನ್ನೊಳಗೊಂಡ ಕುಟುಂಬದಲ್ಲಿ ಭೂಮಿಯ ಗರಿಷ್ಠ ಮಿತಿಯನ್ನು 20 ಯೂನಿಟ್‌ನಿಂದ 40 ಯೂನಿಟ್‌ಗೆ ಹೆಚ್ಚಿಸಬಹುದಾಗಿರುತ್ತದೆ’’ ಎಂದು ತಿಳಿಸಿದ್ದಾರೆ. ಈ ರೀತಿ ಏಕ-ವ್ಯಕ್ತಿತ್ವಕ್ಕೆ ಭೂ-ಒಡೆತನ ಪಾಲಾಗುವುದನ್ನು ಗಮನಿಸಿದ್ದ ಗೋಪಾಲಗೌಡರು ‘‘ಹಿಡುವಳಿಯಲ್ಲಿರತಕ್ಕ ಭೂಮಿ ಎಷ್ಟು, ಭೂಮಿ ಇಲ್ಲದೇ ಇರತಕ್ಕವರ ಸಂಖ್ಯೆ ಎಷ್ಟು ಎಂಬ ಅಂಕಿ ಅಂಶಗಳನ್ನೆಲ್ಲಾ ಸಂಗ್ರಹಿಸಿ ಆನಂತರದಲ್ಲಿ ಒಂದು ಕಾನೂನನ್ನು ತರುವುದರಿಂದ ಭೂಮಿ ಸಮಾನವಾಗಿ ಹಂಚಿಕೆಯಾಗಿ ಅದರಿಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಆಗ ದೇಶದಲ್ಲಿ ಒಂದು ನೂತನ ಚೈತನ್ಯ ಉಂಟಾಗುತ್ತದೆ’’ ಎಂದು ಹೇಳಿದ್ದಾರೆ. ಆದರೆ, ಇದೀಗ ನಡೆದಿರುವ ತಿದ್ದುಪಡಿಯಿಂದ ಕಾರ್ಪೊರೇಟ್ ಕುಳಗಳಿಗೆ ತಮ್ಮ ವಸಾಹತನ್ನು ರೈತರ ಭೂಮಿಯ ಮೇಲೆ ಸ್ಥಾಪಿಸಲು ಸಾಧ್ಯವಾದಂತಾಗಿದೆ.

ಏಕೆಂದರೆ, ಇತ್ತೀಚೆಗೆ ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದು ರೈತರು ಬೆಳೆದ ಬೆಳೆಯನ್ನು ಯಾರಿಗಾದರೂ ಮಾರಬಹುದು ಎಂದು ಕಾರ್ಪೊರೇಟ್ ಕಂಪೆನಿಗಳು ನೇರ ಖರೀದಿಗೆ ದಾರಿ ಮಾಡಿಕೊಟ್ಟರು. ಈಗ ರೈತರ ಭೂಮಿಯನ್ನು ಯಾರು ಬೇಕಾದರೂ ಖರೀದಿಸಬಹುದು ಎಂದು ಸುಗ್ರೀವಾಜ್ಞೆ ತರುತ್ತಿದ್ದಾರೆ. ಜೊತೆಗೆ ವಿದ್ಯುತ್ ಖಾಸಗೀಕರಣ ಮಾಡಿ ಸರಕಾರಿ ಸ್ವಾಮ್ಯದ ವಿದ್ಯುತ್‌ಅನ್ನು ಕಂಪೆನಿ ವಶಕ್ಕೆ ಒಪ್ಪಿಸಿ ಭೂಮಿಯ ಫಲವತ್ತತೆಯನ್ನು ಕಂಪೆನಿಗಳಿಗೆ ಮಾರಾಟ ಮಾಡಲು ಹೊರಟಿದೆ. ಅಂದರೆ, ಒಟ್ಟಿಗೆ ರೈತನ ಬೆಳೆ, ನೆಲ, ಬದುಕು ಇವುಗಳನ್ನು ಬಂಡವಾಳಶಾಹಿಗೆ ಒಪ್ಪಿಸುವ ತಂತ್ರ. ಈ ತಿದ್ದುಪಡಿಯ ಕಾಯ್ದೆಗಳಿಂದ ರೈತ ತನ್ನ ನೆಲದಲ್ಲೇ ತಾನು ಕೂಲಿಯಾಳಾಗುವುದರಲ್ಲಿ ಯಾವ ಸಂಶಯವು ಇಲ್ಲ. ಕೊರೋನ ವೈರಸ್ ಜನರ ಪ್ರಾಣವನ್ನು ಕಿತ್ತುಕೊಂಡರೆ ನಮ್ಮನ್ನಾಳುವ ಸರಕಾರ ಈ ಜನವಿರೋಧಿ ಕಾಯ್ದೆಗಳಿಂದ ಬದುಕಿ ಉಳಿದ ಜನರ ಜೀವನವನ್ನೇ ಬಲಿತೆಗೆದುಕೊಳ್ಳುತ್ತಿದೆ. ಇದು ಹೀಗೇ ಮುಂದೂವರಿದರೆ, ಬ್ರಿಟಿಷ್ ವಸಾಹತುಸಾಹಿಯ ಕಾಲದಲ್ಲಿ ಈಸ್ಟ್ ಇಂಡಿಯಾ ಕಂಪೆನಿಗಳು ಹೇಗೆ ಹಲವು ಕಾನೂನು ಜಾರಿಗೆ ತಂದು ನಮ್ಮದೇ ದೇಶದ ನೆಲದಲ್ಲಿ ನಮ್ಮನ್ನು ಕೂಲಿ ಆಳುಗಳನ್ನಾಗಿ ಮಾಡಿದ್ದರೋ ಹಾಗೆಯೇ ರೈತರ ಬದುಕನ್ನು ಸಹ ಮಾಡುತ್ತಾರೆ. ಇನ್ನು ಆಹಾರ ಸಂಸ್ಕತಿ ಮತ್ತು ಭದ್ರತೆ ವಿಚಾರಕ್ಕೆ ಬಂದಾಗ ನಮ್ಮ ದೇಶದಲ್ಲಿ ಆರ್ಥಿಕತೆಯು ಒಂದಷ್ಟು ಜನರ ಕೈವಶದೊಳಗೆ ಕೇಂದ್ರೀಕೃತವಾಗಿದೆ. ಅಂಕಿಅಂಶಗಳನ್ನು ಗಮನಿಸಿದರೆ ಶೇ. 73 ಜನರ ಆಸ್ತಿ ಕೇವಲ ಶೇ.1 ಜನರಲ್ಲಿ ಶೇಖರಣೆಗೊಂಡಿದೆ.

ಮಹಾತ್ಮ ಗಾಂಧೀಜಿ ಹೀಗೆ ಹೇಳುತ್ತಾರೆ ‘‘ಅಹಿಂಸಾ ಸ್ವಾತಂತ್ರ್ಯಕ್ಕೆ ಇದೇ ಕೀಲಕ (ಆರ್ಥಿಕ ಸಮಾನತೆ). ಆರ್ಥಿಕ ಸಮಾನತೆಗಾಗಿ ಕೃಷಿ ಎಂದರೆ ಬಂಡವಾಳ-ದುಡಿತಗಳ ನಿತ್ಯಕದನಕ್ಕೆ ಸ್ವಸ್ತಿ ಹೇಳುವುದು. ಇತ್ತ ಹಣವಂತರನ್ನು ಆ ಗುಡ್ಡದಿಂದ ನೆಲಕ್ಕೆ ಇಳಿಸುವುದು; ಅತ್ತ ಕಡೆ-ಅರೆಹೊಟ್ಟೆಯಿಂದ ನರಳುತ್ತಾ ಅಗಾಧಕೂಪದಲ್ಲಿ ಬಿದ್ದಿರುವ ಕೋಟ್ಯಂತರ ಬಡಬಗ್ಗರನ್ನು ಮೇಲೆಕ್ಕೆ ಎಳೆಯುವುದು. ತಿಂದು ತೇಗುವ ಹಣವಂತನಿಗೂ ಹಸಿದು ಕಂಗಾಲಾದ ಬಡವನಿಗೂ ಅಗಾಧ ಅಂತರವಿರುವ ತನಕ ಅಹಿಂಸಾಪೂರ್ಣ ಆಡಳಿತ ಸಾಧ್ಯವಿಲ್ಲ’’ ಈ ಕಾರ್ಪೊರೇಟ್ ಕಂಪೆನಿಗಳ ಆರ್ಥಿಕ ಕೇಂದ್ರೀಕೃತ ಹೆಜ್ಜೆಯಾಗಿ ಇವರುಗಳೇ ನಿರ್ಧರಿಸುವ, ಪರಿಷ್ಕೃತಗೊಳಿಸುವ ದರಗಳಿಗೆ ವಿವಿಧ ಕ್ಷೇತ್ರಗಳ ಜನರು ಬಲಿಯಾಗಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಬೀದಿಬದಿ ವ್ಯಾಪಾರವು ಮಾಯವಾಗಿ ಮಾಯಾಜಾಲದ ಮಾಲ್‌ಗಳಲ್ಲಿ ಒಂದು ಸಣ್ಣ ಸೊಪ್ಪಿನಿಂದ ಹಿಡಿದು ಎಲ್ಲವನ್ನು ಖರೀದಿಸುವಂತೆ ಮಾಡಿ, ಆಹಾರ ಸಂಸ್ಕೃತಿಯನ್ನು ಕಾರ್ಪೊರೇಟ್ ಬಂಡವಾಳಶಾಹಿಗಳು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಳ್ಳುತ್ತಾರೆ. ಜೀತ ಪದ್ಧತಿಯೂ ಕಾಲಕ್ರಮೇಣ ಕಂಪೆನಿಗಳಿಗೆ ವರ್ಗಾವಣೆಯಾಗಲಿದೆ.

Writer - ಪುನೀತ್ ಎನ್.

contributor

Editor - ಪುನೀತ್ ಎನ್.

contributor

Similar News