×
Ad

'ಯಾರೂ ನಮ್ಮ ಗಡಿಯೊಳಕ್ಕೆ ಪ್ರವೇಶಿಸಿಲ್ಲ' ಎಂಬ ಪ್ರಧಾನಿ ಹೇಳಿಕೆಗೆ ಆಕ್ರೋಶ: #ModiSurrendersToChina ಟ್ರೆಂಡಿಂಗ್

Update: 2020-06-20 16:14 IST

ಹೊಸದಿಲ್ಲಿ: ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ 20 ಯೋಧರು ಹುತಾತ್ಮರಾದ ನಂತರ ನಿನ್ನೆ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು. ಈ ಸಂದರ್ಭ ಅವರು, “ಯಾರೂ ನಮ್ಮ ಗಡಿಯೊಳಕ್ಕೆ ಪ್ರವೇಶಿಸಿಲ್ಲ ಮತ್ತು ಯಾರೂ ನಮ್ಮ ಪೋಸ್ಟ್ ಅನ್ನು ವಶಪಡಿಸಿಕೊಂಡಿಲ್ಲ” ಎಂದು ಹೇಳಿಕೆ ನೀಡಿದ್ದರು. ಪ್ರಧಾನಿಯ ಈ ಹೇಳಿಕೆಯ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹಾಗಿದ್ದರೆ 20 ಯೋಧರು ಹುತಾತ್ಮರಾಗಲು ಕಾರಣವೇನು ಎಂದು ಪ್ರಶ್ನಿಸಿದ್ದು, ಇದೀಗ ಟ್ವಿಟರಿಗರೂ ಈ ಹೇಳಿಕೆ ವಿರುದ್ಧ ಆಕ್ರೋಶಗೊಂಡಿದ್ದಾರೆ. ಇಂದು ಬೆಳಗ್ಗಿನಿಂದ ಟ್ವಿಟರ್ ನಲ್ಲಿ #ModiSurrendersToChina ಹ್ಯಾಶ್ ಟ್ಯಾಗ್  ಟ್ರೆಂಡಿಂಗ್ ಆಗುತ್ತಿದೆ.

ಪ್ರಧಾನಿಯ ಹೇಳಿಕೆಗೆ ಆಕ್ಷೇಪ ಸೂಚಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ನಮ್ಮ ಸೈನಿಕರನ್ನೇಕೆ ಕೊಲ್ಲಲಾಯಿತು?, ಚೀನಾದ ಆಕ್ರಮಣಕ್ಕೆ ಪ್ರಧಾನಿ ಭಾರತದ ಭೂಭಾಗವನ್ನು ಒಪ್ಪಿಸಿದ್ದಾರೆ. ಆ ಭೂಭಾಗ ಚೀನೀಯರದ್ದಾಗಿದ್ದರೆ 1. ನಮ್ಮ ಸೈನಿಕರ ಹತ್ಯೆಯೇಕೆ ನಡೆಯಿತು?., 2. ಅವರು ಎಲ್ಲಿ ಕೊಲ್ಲಲ್ಪಟ್ಟರು?'' ಎಂದು ಪ್ರಶ್ನಿಸಿದ್ದರು.

“ನಾವು ನಮ್ಮ ಗಲ್ವಾನ್ ಕಣಿವೆಯನ್ನು ಬಿಟ್ಟುಕೊಟ್ಟಿದ್ದೇವೆಯೇ ಅಥವಾ ಪಿಎಲ್‌ಎಯನ್ನು ಅಲ್ಲಿಂದ ಉಚ್ಚಾಟಿಸಿದ್ದೇವೆಯೇ ಎಂದು ದೇಶವು ತಿಳಿದುಕೊಳ್ಳಲು ಬಯಸಿದೆ” ಎಂದು ಶಿವಸೇನೆಯ ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

ಈ ನಡುವೆ ಟ್ವಿಟರ್ ನಲ್ಲಿ  #ModiSurrendersToChina ಹ್ಯಾಶ್ ಟ್ಯಾಗ್  ಟ್ರೆಂಡಿಂಗ್ ಆಗುತ್ತಿದೆ.

“ಇದು ಗಲ್ವಾನ್ ಕಣಿವೆ, ದುರದೃಷ್ಟವಶಾತ್ ನಿನ್ನೆ ಮೋದಿ ಈ ಸುಂದರ ಕಣಿವೆಯನ್ನು ಚೀನಾಗೆ ಒಪ್ಪಿಸಿದ್ದಾರೆ”, “ಬಿಜೆಪಿ ಈಗ ಬೀಜಿಂಗ್ ಜಿನ್ ಪಿಂಗ್ ಪಾರ್ಟಿ”, “ಇನ್ನು ಮುಂದೆ ಚೀನಿಯರು ಪ್ರಧಾನಿ ಮೋದಿಯ ಹೇಳಿಕೆಯನ್ನು ಬಳಸಬಹುದು”, “ಇನ್ನು ಬಿಜೆಪಿ ಚೀನಾದಲ್ಲು ಸರಕಾರ ಸ್ಥಾಪಿಸಬಹುದು”.. ಹೀಗೆ ಸಾವಿರಾರು ಟ್ವೀಟ್ ಗಳನ್ನು ಟ್ವಿಟರಿಗರು ಮಾಡಿದ್ದಾರೆ.

ಈವರೆಗೆ 1,26,000 ಬಾರಿ ಈ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News