ಮಧುಮೇಹ ಚರ್ಮದ ಸೋಂಕುಗಳಿಗೂ ಕಾರಣವಾಗುತ್ತದೆ

Update: 2020-06-20 16:19 GMT

ಮಧುಮೇಹದಿಂದ ಬಳಲುತ್ತಿರುವವರಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತವೆ, ಆದರೆ ಅವುಗಳಿಗೆ ಅವರು ಗಮನವನ್ನೇ ನೀಡುವುದಿಲ್ಲ. ಅಂಕಿಅಂಶಗಳಂತೆ ಸುಮಾರು ಶೇ.30ರಷ್ಟು ಮಧುಮೇಹಿಗಳು ಚರ್ಮ ಸಂಬಂಧಿ ರೋಗಗಳನ್ನು ಹೊಂದಿರುತ್ತಾರೆ. ಚರ್ಮರೋಗ ತಜ್ಞರನ್ನು ಭೇಟಿಯಾಗುವ ಪ್ರತಿ ಐವರಲ್ಲಿ ಓರ್ವ ವ್ಯಕ್ತಿಯ ಚರ್ಮರೋಗಕ್ಕೆ ಮಧುಮೇಹ ಕಾರಣವಾಗಿರುತ್ತದೆ.

ಮಧುಮೇಹದಲ್ಲಿ ಚರ್ಮರೋಗವನ್ನು ತಡೆಯುವುದು ಹೇಗೆ?

ನಿಮಗೆ ಯಾವುದೇ ಚರ್ಮರೋಗವಿಲ್ಲದಿದ್ದರೆ,ಆದರೆ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಮಧುಮೇಹಿಯಾಗಿದ್ದರೆ ನಿಮ್ಮ ಚರ್ಮವನ್ನು ನಿಯಮಿತವಾಗಿ ಗಮನಿಸುತ್ತಿರಿ.

 ಉದಾಹರಣೆಗೆ ಸ್ನಾನದ ಸಂದರ್ಭದಲ್ಲಿ ಚರ್ಮದ ಮೇಲೆ ಯಾವುದೇ ಕಲೆ,ಕೆಂಪು ಗುರುತುಗಳು,ದದ್ದುಗಳು ಇತ್ಯಾದಿ ಕಾಣಿಸಿಕೊಂಡಿವೆಯೇ ಎನ್ನುವುದನ್ನು ಪರಿಶೀಲಿಸಿ. ಇದು ರೋಗವನ್ನು ಆರಂಭದಲ್ಲಿಯೇ ಗುರುತಿಸಲು ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಇನ್ನಷ್ಟು ಉತ್ತಮವಾಗಿ ನಿಯಂತ್ರಿಸಲು ನೆರವಾಗುತ್ತದೆ. ಆಹಾರದಲ್ಲಿ ಸಕ್ಕರೆಯ ಅಂಶದ ಬಗ್ಗೆ ಕಾಳಜಿ ವಹಿಸುವ,ದೇಹತೂಕವನ್ನು ತಗ್ಗಿಸುವ ಮತ್ತು ಕಾರ್ಬೊಹೈಡ್ರೇಟ್‌ಗಳ ಸೀಮಿತ ಸೇವನೆಯ ಮೂಲಕ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಬಹುದು ಮತ್ತು ಚರ್ಮರೋಗಗಳು ಹಾಗೂ ಮಧುಮೇಹ ಸಂಬಂಧಿತ ಇತರ ರೋಗಗಳನ್ನು ತಡೆಯಬಹುದು. ಧೂಮ್ರಪಾನವನ್ನು ವರ್ಜಿಸುವ ಮತ್ತು ವೈದ್ಯರು ಮಧುಮೇಹಿಗಳಿಗೆ ಶಿಫಾರಸು ಮಾಡುವ ಪೋಷಕಾಂಶಗಳಿಂದ ಕೂಡಿದ ಆಹಾರಕ್ರಮವನ್ನು ರೂಢಿಸಿಕೊಳ್ಳುವ ಮೂಲಕ ಆರೋಗ್ಯಕರ ಬದುಕನ್ನು ಸಾಗಿಸಬಹುದು.

ಮಧುಮೇಹಿಗಳಲ್ಲಿ ಯಾವ ವಿಧದ ಚರ್ಮರೋಗಗಳು ಕಾಣಿಸಿಕೊಳ್ಳುತ್ತವೆ?

 ಆ್ಯಕಾಂಥೋಸಿಸ್ ನಿಗ್ರಿಕನ್ಸ್: ಈ ವಿಧದ ಚರ್ಮರೋಗದಲ್ಲಿ ಕುತ್ತಿಗೆ ಮತ್ತು ಕಂಕುಳುಗಳಂತಹ ಜಾಗಗಳಲ್ಲಿ ಚರ್ಮದ ಬಣ್ಣದಲ್ಲಿ ಬದಲಾವಣೆಯುಂಟಾಗುತ್ತದೆ ಮತ್ತು ಚರ್ಮವು ವೆಲ್ವೆಟ್ ಅಥವಾ ಮಕ್ಮಲ್ ಬಟ್ಟೆಯಂತೆ ಕಾಣುತ್ತದೆ. ಹೆಚ್ಚಿನ ಇನ್ಸುಲಿನ್ ಮಟ್ಟ (ಹೈಪರ್‌ಗ್ಲೈಸೆಮಿಯಾ) ಈ ರೋಗಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಯು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ನಿಯಮಿತ ವ್ಯಾಯಾಮದಿಂದ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಡಯಬಿಟಿಕ್ ಡರ್ಮಾಪತಿ: ಇದು ಮಧುಮೇಹಿಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡುಬರುವ ಚರ್ಮರೋಗವಾಗಿದೆ. ಈ ರೋಗವುಂಟಾದಾಗ ಮಂಡಿಗಳ ಕೆಳಗೆ ದುಂಡನೆಯ,ಲಘುವಾದ ಸಣ್ಣ ಕೆಂಪು ಕಲೆಗಳು ಕಂಡು ಬರುತ್ತವೆ. ಶೇ.55ರಷ್ಟು ಮಧುಮೇಹಿಗಳನ್ನು,ವಿಶೇಷವಾಗಿ ಪುರುಷರನ್ನು ಈ ಚರ್ಮ ರೋಗವು ಕಾಡುತ್ತದೆ. ಕೆಲವು ಪ್ರಕರಣಗಳಲ್ಲಿ ನಿರ್ದಿಷ್ಟ ಔಷಧಿಗಳು ಈ ರೋಗಕ್ಕೆ ಕಾರಣವಾಗುತ್ತವೆ.

ರುಬಿಯೊಸಿಸ್ ಫೇಸಿಯಿ: ಮುಖ ಕೆಂಪುಬಣ್ಣಕ್ಕೆ ತಿರುಗುವುದು ಕೂಡ ಮಧುಮೇಹದ ಸಂಕೇತ ಎನ್ನುವುದು ನಿಮಗೆ ಗೊತ್ತೇ? ಆದಾಗ್ಯೂ ಜನರು ಈ ಬಗ್ಗೆ ಗಮನ ಹರಿಸುವುದಿಲ್ಲ. ಇಂತಹ ಸ್ಥಿತಿಯಲ್ಲಿ ವ್ಯಕ್ತಿಗೆ ಅಧಿಕ ರಕ್ತದೊತ್ತಡವೂ ಇದ್ದರೆ ಇನ್ನಷ್ಟು ಹದಗೆಡುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸೂಕ್ತವಾಗಿ ನಿರ್ವಹಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಈ ಸಮಸ್ಯೆಯು ಬೆಟ್ಟು ಮಾಡುತ್ತದೆ. ಕಪ್ಪು ಚರ್ಮ ಹೊಂದಿರುವವರಲ್ಲಿ ಈ ರೋಗ ಕಾಣಿಸಿಕೊಳ್ಳುವುದು ಕಡಿಮೆ.

ಸ್ಕಿನ್ ವಾರ್ಟ್: ಹಲವು ಜನರ ಕುತ್ತಿಗೆ ಮತ್ತು ಬೆನ್ನಿನಲ್ಲಿ ಪುಟ್ಟ ನರೂಲಿಗಳು ಅಥವಾ ಗಂಟುಗಳನ್ನು ನೀವು ನೋಡಿರಬಹುದು. ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿರುವವರಲ್ಲಿ ಈ ನರೂಲಿಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಪ್ರಿಡಯಾಬಿಟಸ್ ಇರುವವರಲ್ಲಿಯೂ ಇವು ಉಂಟಾಗುತ್ತವೆ.

ಕ್ಸೆರೋಸಿಸ್: ಚರ್ಮದ ಹೊರಪದರ ಒಣಗಿದ್ದು ಹಪ್ಪಳೆಗಳು ಏಳುವಂತಹ ಸ್ಥಿತಿಯನ್ನು ಕ್ಸೆರೋಸಿಸ್ ಎಂದು ಕರೆಯಲಾಗುತ್ತದೆ. ಹೀಗೆ ಚರ್ಮವು ಒಣಗುವುದು ಮಧುಮೇಹಿಗಳಲ್ಲಿ ಕಂಡು ಬರುವ ಇನ್ನೊಂದು ಸಮಸ್ಯೆಯಾಗಿದೆ. ವಾತಾವರಣ/ಹವಾಮಾನವನ್ನು ಅವಲಂಬಿಸಿ ಶೇ.44ರಷ್ಟು ಮಧುಮೇಹಿಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ಇಂತಹ ಯಾವುದೇ ಸೋಂಕು ಉಂಟಾಗಿದ್ದರೆ ಏನು ಮಾಡಬೇಕು?

ನಿಮ್ಮಲ್ಲಿ ಮೇಲ್ಕಾಣಿಸಿದ ಯಾವುದೇ ಚರ್ಮ ಸಂಬಂಧಿತ ಸಮಸ್ಯೆ ಕಂಡು ಬಂದರೆ ವೈದ್ಯರಲ್ಲಿ ತೆರಳಿ ಮಧುಮೇಹ ತಪಾಸಣೆ ಮಾಡಿಸಿಕೊಳ್ಳಬೇಕು. ನಿಮ್ಮ ತೂಕ ಸರಾಸರಿಗಿಂತ ಹೆಚ್ಚಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಈಗಾಗಲೇ ಮಧುಮೇಹ ರೋಗಿ ಇದ್ದರೆ ನಿಮಗೂ ಈ ಕಾಯಿಲೆ ಬರುವ ಹೆಚ್ಚಿನ ಸಾಧ್ಯತೆಯಿರುತ್ತದೆ. ನರೂಲಿಯಂತಹ ಚರ್ಮರೋಗಗಳ ಕೆಲವು ಲಕ್ಷಣಗಳು ಸಮಸ್ಯೆಯನ್ನು ಗುರುತಿಸುವುದನ್ನು ಸುಲಭವಾಗಿಸುತ್ತವೆ ಮತ್ತು ಚಿಕಿತ್ಸೆಯನ್ನು ಬೇಗನೆ ಆರಂಭಿಸಬಹುದು. ಮಧುಮೇಹಿಗಳಲ್ಲಿ ಅಧಿಕ ರಕ್ತದೊತ್ತಡ ಮತ್ತು ಇತರ ಮಧುಮೇಹ ಸಂಬಂಧಿತ ಸಮಸ್ಯೆಗಳೂ ಕಂಡು ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News