ಆಧುನಿಕ ನಾಟಕಕಾರನ ಬೌದ್ಧಿಕ ನಿರ್ಮಿತಿ ಕನ್ನಡದ ಕಾರ್ನಾಡ್‌ರ ಕಥೆ

Update: 2020-06-20 17:37 GMT

ಕಾರ್ನಾಡ್‌ರೇ ಹೇಳುವಂತೆ ಸಾಹಿತ್ಯದ ಸಂವೇದನೆ ಹಾಗೂ ಇತರ ಬೌದ್ಧಿಕ ಸೂಕ್ಷ್ಮತೆಗಳ ಜೊತೆ, ರಾಮಾನುಜನ್‌ರಿಂದ ಅವರು ಬರವಣಿಗೆಯ ಕುಶಲಗಾರಿಕೆಯನ್ನು ಕಲಿತರಂತೆ. ರಾಮಾನುಜನ್ ಪ್ರಕಾರ ಬರವಣಿಗೆ ಎಂದರೆ ಸದಾ ತಿದ್ದುತ್ತ ಮರು ಬರವಣಿಗೆ ಮಾಡುತ್ತಲೇ ಇರುವುದು. ಅಂತೆಯೇ ಕಾರ್ನಾಡ್‌ರು ತಮ್ಮ ನಾಟಕಗಳನ್ನು ಸದಾ ತಿದ್ದುತ್ತಿದ್ದರು. ‘ಯಯಾತಿ’ಯನ್ನಂತೂ, ಅದು ಪ್ರಕಟಗೊಂಡ ಮೂವತ್ತು ವರ್ಷಗಳ ನಂತರವೂ ಅವರು ತಿದ್ದಿದ್ದಾರೆ. ರಾಮಾನುಜನ್ ಮೂಲಕ ಅವರು ಕಂಡುಕೊಂಡ ಸತ್ಯವೇನೆಂದರೆ ನಾಟಕದ ಮೊದಲ ಪ್ರತಿಯು ಮುಂದೆ ಮಾರ್ಪಾಡು ಮಾಡಬೇಕಾದ, ಸಾಕಷ್ಟು ಕೆಲಸ ಇರುವ ಒಂದು ಪ್ರಾರಂಭವಷ್ಟೇ.


ಗಿರೀಶ್ ಕಾರ್ನಾಡ್‌ರು (1938-2019) ನಮ್ಮನ್ನು ಅಗಲಿ ಒಂದು ಕಳೆದಿದೆ. ಮೇ 19 ಅವರ ಜನ್ಮದಿನ. ಜೂನ್ 10 ಅವರ ಪುಣ್ಯ ಜಯಂತಿ. ಜನನ-ಮರಣಗಳ ಈ ದಿನಾಂಕಗಳ ಮಧ್ಯೆ ಕಾರ್ನಾಡ್‌ರು ತಮ್ಮ ಕೃತಿಗಳ ಮೂಲಕ ಈ ಜಗತ್ತನ್ನು ಹೇಗೆ ಗ್ರಹಿಸಿದರು, ತಮ್ಮ ಬದುಕುನ್ನು ಒಂದು ಕಲಾಕೃತಿಯಂತೆ ಹೇಗೆ ರೂಪಿಸಿಕೊಂಡರು ಅನ್ನುವುದನ್ನು ಅವಲೋಕಿಸೋಣ.

ಬಿ. ವಿ. ಕಾರಂತರೊಂದಿಗೆ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ‘ವಂಶವೃಕ’್ಷ ಸಿನೆಮಾಕ್ಕೆ 1972ರಲ್ಲಿ ರಾಜ್ಯ ಪ್ರಶಸ್ತಿ ಬಂದಾಗ, ಅವರ ತಾಯಿ ಗಿರೀಶರ ತಂದೆ ರಘುನಾಥ ಕಾರ್ನಾಡ್‌ರ ಮುಂದೆ ‘ಗಿರೀಶನನ್ನು ಹೊತ್ತು ಎರಡು ತಿಂಗಳದ ಗರ್ಭಿಣಿ ಇದ್ದಾಗ, ನಾವು ಈ ಮಗು ಬೇಡ, ಈಗಾಗಲೇ ಎರಡು ಮಕ್ಕಳಿವೆ, ಗರ್ಭಪಾತ ಮಾಡಿಸೋಣ ಎಂದುಕೊಂಡ್ಡಿದ್ದೆವು. ಈಗ ನೋಡಿ ಅವನು ಎಂತಹ ಸಾಧನೆ ಮಾಡಿದ್ದಾನೆ’ ಎಂದಿದ್ದರಂತೆ. ಕಾರ್ನಾಡ್ ದಂಪತಿ ಪುಣೆಯ ಆಸ್ಪತ್ರೆಯೊಂದಕ್ಕೆ ಗರ್ಭಪಾತ ಮಾಡಿಸಲಿಕ್ಕೆ ಹೋಗಿದ್ದುಂಟು. ಆದರೆ ಆ ದಿವಸ ಇವರು ಸಂಪರ್ಕಿಸಲು ಹೋದ ಮಧುಮಾಲತಿ ಗುಣೆ ಎಂಬ ವೈದ್ಯೆ ಯಾವುದೋ ಕಾರಣದಿಂದ ಆಸ್ಪತ್ರೆಗೆ ಬಂದಿರಲಿಲ್ಲವಂತೆ. ಹೋಗಲಿ ಬಿಡು ಎಂದು ಮನೆಗೆ ಮರಳಿದ ಕಾರ್ನಾಡ್ ದಂಪತಿ ಹಾಗೇ ಬಿಟ್ಟರಂತೆ. ಹೀಗೆ ಹುಟ್ಟಿದ ಗಿರೀಶರು ಇಂದು ನಮ್ಮಿಂದಿಗಿಲ್ಲ! ಅಂದು ಒಂದು ವೇಳೆ ಆ ವೈದ್ಯೆ ಏನಾದರೂ ಇದ್ದು ಗರ್ಭಪಾತ ಮಾಡಿದ್ದರೆ, ಆಧುನಿಕ ಭಾರತದ ಪ್ರತಿಭಾವಂತ ನಾಟಕಕಾರ, ನಟ, ನಿರ್ದೇಶಕ, ಬಹುಮುಖ ಪ್ರತಿಭೆ ಗಿರೀಶ್ ಕಾರ್ನಾಡ್‌ರಾಗಿ ಮೂಡಿ ಬರುತ್ತಿರಲಿಲ್ಲ. ಕನ್ನಡಕ್ಕೆ ಜ್ಞಾನಪೀಠ ಒಂದು ಕಡಿಮೆಯಾಗಿರುತ್ತಿತ್ತು.

ಗಿರೀಶ್ ಕಾರ್ನಾಡ್ (1938-2019) ಹುಟ್ಟಿದ್ದು ಮಹಾರಾಷ್ಟ್ರದ ಮಾಥೇರಾನ್ ಎಂಬಲ್ಲಿ. ಅವರ ತಾಯಿ ಕೃಷ್ಣಾಬಾಯಿ. ಡಾಕ್ಟರ್ ರಘುನಾಥ ಕಾರ್ನಾಡ್‌ರ ಎರಡನೆಯ ಹೆಂಡತಿ. ಎಳೆ ವಯಸಿನಲ್ಲೇ ವಿಧವೆಯಾದ ಕೃಷ್ನಾಬಾಯಿ ಒಂದು ಗಂಡು ಮಗುವಿನ ತಾಯಿಯಾಗಿದ್ದರು. ಮೂವತ್ತರ ದಶಕದ ಭಾರತವದು. ವಿಧವೆ ಮತ್ತೊಂದು ಮದುವೆಯಾಗುವುದು ಬಲು ಕಷ್ಟಕರದ ಸಂಗತಿ. ಬಾಂಬೆ ಪ್ರೆಸಿಡೆನ್ಸಿಯ ವೈದ್ಯಕೀಯ ಸೇವೆಯಲ್ಲಿದ್ದ ಡಾಕ್ಟರ್ ರಘುನಾಥ, ಅಲ್ಲಿಯೇ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ವಿಧವೆ ಕೃಷ್ಣಾಬಾಯಿಯನ್ನು ಆರ್ಯಸಮಾಜದ ಆಶಯದಂತೆ ಮದುವೆಯಾದರು. ಈ ದಂಪತಿ ನಾಲ್ಕು ಮಕ್ಕಳಲ್ಲಿ ಗಿರೀಶ್ ಮೂರನೆಯವರು. ಬ್ರಿಟಿಷ್ ಕಾಲದಲ್ಲಿಯೇ ಸಾಕಷ್ಟು ಸಾಮಾಜಿಕವಾಗಿ ಮುಂದುವರಿದಿದ್ದ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಜನಿಸಿದ ಗಿರೀಶರು, ಬಹುಭಾಷೆ, ಬಹುಸಂಸ್ಕೃತಿಯ ಸಂಸ್ಕಾರವನ್ನು ಸಹಜವಾಗಿಯೇ ರೂಢಿಸಿಕೊಂಡಿದ್ದರು. ಉತ್ತರ ಕರ್ನಾಟಕ ಆಗಿನ್ನೂ ಬಾಂಬೆ ಪ್ರೆಸಿಡೆನ್ಸಿಯಲ್ಲಿತ್ತು. ಆಗ ಕಾರ್ನಾಡ್‌ರ ತಂದೆಗೆ ಶಿರಸಿಗೆ ವರ್ಗವಾಯಿತು. ಸುಮಾರು ಹದಿನಾಲ್ಕು ವಯಸ್ಸಿನವರೆಗೆ ಗಿರೀಶರು ಶಿರಸಿಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು. ಮುಂದಿನ ಬಹುದೊಡ್ಡ ನಾಟಕ ಪ್ರತಿಭೆಯಾಗಿ ಬೆಳೆಯಲು ಗಿರೀಶರಿಗೆ ಶಿರಸಿಯ ಸಾಂಸ್ಕೃತಿಕ ವಾತಾವರಣ ಹಲವು ಬೀಜಗಳನ್ನು ಬಿತ್ತಿತ್ತು.

ಕಾರ್ನಾಡ್‌ರೆ ಸ್ವತಃ ಹಲವಾರು ಸಂದರ್ಶನಗಳಲ್ಲಿ ಹೇಳಿರುವಂತೆ, ಶಿರಸಿಯಲ್ಲಿ ಬರುತ್ತಿದ್ದ ಕಂಪೆನಿ ನಾಟಕಗಳು ಇವರ ಮೇಲೆ ಬಹಳ ಪ್ರಭಾವ ಬೀರಿದ ನಾಟಕ ಪ್ರಕಾರಗಳಾಗಿದ್ದವು. ಮುಖ್ಯವಾಗಿ ಅಲ್ಲಿ ಕಾರ್ನಾಡ್‌ರು ಯಕ್ಷಗಾನದ ಆಟಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದರಂತೆ. ಈಗಿನ ಮಾಧ್ಯಮಗಳ ಹಾವಳಿ ಇಲ್ಲದ ಆ ಕಾಲದಲ್ಲಿ, ಶಿರಸಿಯ ಹವ್ಯಕ ಹುಡುಗರ ಜೊತೆ ಕಥೆ ಹೇಳುವುದು ಮತ್ತು ಕಥೆ ಕೇಳುವುದು ಒಂದು ಗೀಳಾಗಿತ್ತೆಂದು ಕಾರ್ನಾಡ್‌ರು ಸ್ಮರಿಸುತ್ತಿದ್ದರು. ಅವರ ‘ನಾಗಮಂಡಲ’ (1989) ನಾಟಕದ ಪೂರ್ವಾರ್ಧ ನಾಟಕಕಾರನಿಗೆ ಕಥೆ ಎಂಬುದು ಹೇಗೆ ಸಾವು-ಉಳಿವಿನ ಪ್ರಶ್ನೆಯೆಂದು ಸಾರಿಹೇಳುತ್ತದೆ. ಬಹುಶಃ ಶಿರಸಿಯ ಈ ನಾಟಕ-ಕಥೆ-ಯಕ್ಷಗಾನ ಸಂಸ್ಕೃತಿ ಅವರ ನಾಟಕ ರಚನೆಯ ದರ್ಶನದಲ್ಲಿ ಇಣುಕಿ ಹಾಕಿದೆ. ಕಾರ್ನಾಡ್‌ರ ತಂದೆಯವರ ನಿವೃತ್ತಿಯ ನಂತರ ಅವರ ಕುಟುಂಬ ಧಾರವಾಡದಲ್ಲಿ ನೆಲೆಸಿತು. ಧಾರವಾಡದ ಸಾರಸ್ವತಪುರದಲ್ಲಿ ಬೆಳೆಯುತ್ತಿದ್ದ ಬಾಲಕ ಕಾರ್ನಾಡ್‌ರಿಗೆ ಹೊಸ ಪ್ರಪಂಚವೊಂದು ತೆರೆದಿತ್ತು.

ಶಿರಸಿಯಲ್ಲಿ ಗಿಟ್ಟಿಸಿಕೊಂಡ ಕೊಂಕಣಿ, ಹವ್ಯಕ, ನಾವಡ ಉಪಭಾಷೆಗಳ ಜೊತೆಗೆ ಧಾರವಾಡದ ಉತ್ತರ ಕರ್ನಾಟಕದ ಕನ್ನಡ ಭಾಷಾ ಜಗತ್ತು ಅವರನ್ನು ಸ್ವಾಗತಿಸಿತ್ತು. ಕನ್ನಡ ಏಕೀಕರಣ ಉತ್ತುಂಗಕ್ಕೆ ಏರಿದ್ದ ಧಾರವಾಡ ಅದು. ಆಧುನಿಕಥೆ ಯಿಂದ ನವಕರ್ನಾಟಕ ನಿರ್ಮಾಣ ಮಾಡುವುದಷ್ಟೇ ಅಲ್ಲದೆ, ಉತ್ತರ ಕರ್ನಾಟಕದ ಬೌದ್ಧಿಕ ಪ್ರಜ್ಞೆ ನಿರ್ಮಾಣವಾಗುತ್ತಿದ್ದ ಕಾಲವದು. ಬಾಸೆಲ್ ಮಿಶನ್ ಶಾಲೆ ಒಳಗೊಂಡಂತೆ, ಅಲ್ಲಿಯ ಕರ್ನಾಟಕ ಕಾಲೇಜು ಆ ಭಾಗದಲ್ಲಿಯೇ ಆಧುನಿಕ ಶಿಕ್ಷಣ ಕೊಡುವ ಸಂಸ್ಥೆಗಳಾಗಿ ಹೊರಹೊಮ್ಮಿದ್ದವು. ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಮಾಡಲು ಕಾರ್ನಾಡ್‌ರು ಸೇರಿದಾಗ, ಧಾರವಾಡದ ಶೈಕ್ಷಣಿಕ ವಾತಾವರಣ ಅವರಿಗೆ ಹೇಳಿ ಮಾಡಿಸಿದಂತಿತ್ತು. ವಿವಿಧ ಹಿನ್ನೆಲೆ, ದೇಶ ವಿದೇಶಗಳಿಂದ ಬಂದ ಅಧ್ಯಾಪಕರು, ವಿದ್ಯಾರ್ಥಿಗಳು ಅಲ್ಲಿ ಉತ್ತಮವಾದ ಜಗದ್ವಲಯವನ್ನು ಸೃಷ್ಟಿ ಮಾಡುವುದರಲ್ಲಿ ತೊಡಗಿಕೊಂಡಿದ್ದರು. ಕರ್ನಾಟಕ ಕಾಲೇಜಿನಲ್ಲಿ ಡಾ. ವಿ. ಕೃ. ಗೋಕಾಕ, ಪ್ರೊ. ಸ.ಸ ಮಾಳವಾಡ, ಪ್ರೊ. ವಿ. ಎಂ.ಇನಾಂದಾರ ಮುಂತಾದವರು ಇವರಿಗೆ ಗುರುಗಳಾಗಿದ್ದರು. ವಿಟ್ಗೆನ್‌ಸ್ಟೈನ್‌ರ ನೇರ ವಿದ್ಯಾರ್ಥಿಯಾಗಿದ್ದ ಪ್ರೊಫೆಸರ್ ಕೆ. ಜೆ.ಶಾ, ಕಾರ್ನಾಡ್‌ರ ಮೇಲೆ ಪ್ರಭಾವಬೀರಿ ಅವರಿಗೆ ಪಶ್ಚಿಮದ ತತ್ವಶಾಸ್ತ್ರವನ್ನು ಪರಿಚಯಿಸಿದರು.

ಆಗ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಬೇಕೆಂಬುದು ಗಿರೀಶರ ಹೆಬ್ಬಯಕೆಯಾಗಿತ್ತು. ಅದಕ್ಕೆ ಅವರು ವಿದ್ಯಾರ್ಥಿವೇತನ ಪಡೆಯಬೇಕಾದರೆ ಕನಿಷ್ಠ ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಬೇಕಾಗಿತ್ತು. ಹಾಗಾಗಿ ಅವರು ಹೆಚ್ಚು ಅಂಕಗಳನ್ನು ಗಳಿಸಲು ಸಂಖ್ಯಾಶಾಸ್ತ್ರ, ಗಣಿತದಂತಹ ವಿಷಯಗಳನ್ನು ಆಯ್ದುಕೊಂಡರು. ಕೊನೆಗೂ ರೋಡ್ಸ್ ಸ್ಕಾಲರ್‌ಶಿಪ್ ದೊರಕಿಸಿಕೊಂಡು ಆಕ್ಸ್‌ಫರ್ಡ್‌ಗೆ ತೆರಳಿದರು. ಮುಂದೆ ಅವರು ಗಣಿತಶಾಸ್ತ್ರಜ್ಞರಾಗಲಿಲ್ಲ ನಿಜ. ಆದರೆ ಕರ್ನಾಟಕ ಕಾಲೇಜಿನಲ್ಲಿ ಕಲಿತ ಗಣಿತ ಅವರಿಗೆ ನಂತರ ನಾಟಕಗಳ ಹಂದರವನ್ನು ಬಿಗಿಯಾಗಿ, ಕ್ರಮಬದ್ಧವಾಗಿ ಕಟ್ಟಲು ಸಹಾಯ ಮಾಡಿತೆಂದು ಕಾರ್ನಾಡ್‌ರು ನೆನಪಿಸಿಕೊಳ್ಳುತ್ತಿದ್ದರು. ಈ ಸಣ್ಣ ಸಂಗತಿಯಿಂದ ಒಂದು ಮುಖ್ಯವಾದ ವಿಚಾರ ಗಿರೀಶ್ ಕಾರ್ನಾಡ್‌ರ ವೃತ್ತಿ ಜೀವನದ ಗುಟ್ಟನ್ನು ಬಿಟ್ಟುಕೊಡುವಂತಿದೆ. ಅದೇನೆಂದರೆ ಅವರ ಪ್ರತಿಭೆಯ ಜೊತೆ, ಅವರಿಗಿದ್ದ ಮಹತ್ವಾಕಾಂಕ್ಷೆ ಹಾಗೂ (ಪ್ರ್ಯಾಗ್ಮಾಟಿಕ್) ಲೆಕ್ಕಾಚಾರದ ಮನಸ್ಸು ಅವರನ್ನು ಈ ಎತ್ತರಕ್ಕೆ ತಲುಪಿಸಿದ್ದು. ಧಾರವಾಡದ ಶೈಕ್ಷಣಿಕ ಸಂಸ್ಥೆಗಳು ಕಾರ್ನಾಡ್‌ರ ಬೌದ್ಧಿಕ ನಿರ್ಮಿತಿಗೆ ಒಂದು ರೀತಿಯ ಸಹಾಯ ಮಾಡಿದರೆ, ಅಲ್ಲಿಯ ಹೊರಗಿನ ಸಾಹಿತ್ಯ-ಸಂಸ್ಕೃತಿ ಬೇರೆ ರೀತಿಯ ಕಾಣಿಕೆಯನ್ನು ಕೊಟ್ಟಿತ್ತು. ಕಾರ್ನಾಡ್‌ರ ನೆಚ್ಚಿನ ಕವಿ ದ.ರಾ.ಬೇಂದ್ರೆ. ಅವರ ಕವಿತೆಗಳನ್ನು ನಿರ್ಗಳವಾಗಿ ತಮ್ಮ ನಾಲಿಗೆಯ ತುದಿಯಮೇಲೆ ಕಾರ್ನಾಡ್‌ರು ಆಡಿಸುತ್ತಿದ್ದನ್ನು ನಾವು ಕಂಡಿದ್ದೇವೆ. ಬೇಂದ್ರೆ ಅವರ ಮನೆಗೆ ಆಗಾಗ ಹೋಗುತ್ತಿದ್ದ ಕಾರ್ನಾಡ್‌ರು, ಅವರ ಪ್ರಭಾವದಲ್ಲೇ ತಾವೊಬ್ಬ ಮಹಾಕವಿಯಾಗಬೇಕೆಂದು ಬಯಸಿದ್ದರು. ತಮ್ಮ ಆತ್ಮಕಥೆಯ ಶೀರ್ಷಿಕೆ ‘ಆಡಾಡತ ಆಯುಷ್ಯ’ (2011) ಬೇಂದ್ರೆಯವರ ಒಂದು ಕವನದಿಂದ ಆಯ್ದುಕೊಂಡಿದ್ದು. ಬೇಂದ್ರೆಯವರ ಮೇಲೆ ಸಾಕ್ಷ ಚಿತ್ರವನ್ನು ಸಹ ಕಾರ್ನಾಡ್‌ರು ನಿರ್ಮಿಸಿದ್ದಾರೆ.

ಕಾವ್ಯವನ್ನು ಬರೆಯುವುದರಲ್ಲಿ ಯಶಸ್ಸು ಕಾಣದೆ, ತದನಂತರ ಅವರು ತಮ್ಮ ನಾಟಕ ಪ್ರತಿಭೆಯನ್ನು ಕಂಡುಕೊಂಡಿದ್ದು ಧಾರವಾಡದಲ್ಲಿಯೇ. ಕೇವಲ ಪುಸ್ತಕಗಳನ್ನು ಪ್ರಕಟಿಸದೇ, ಓದುಗರ ವರ್ಗವನ್ನು ಸೃಷ್ಟಿಸುತ್ತಿದ್ದ ಜಿ. ಬಿ. ಜೋಶಿಯವರ ಮನೋಹರ ಗ್ರಂಥ ಮಾಲಾ, ಕಾರ್ನಾಡ್‌ರು ಬಹುದೊಡ್ಡ ನಾಟಕಕಾರರಾಗಿ ಬೆಳೆಯಲು ಅನುವು ಮಾಡಿಕೊಟ್ಟ ಪ್ರಕಾಶನ ಸಂಸ್ಥೆ. ಜಿ.ಬಿ ಸ್ವತಃ ನಾಟಕಕಾರರಾಗಿದ್ದು, ನಾಟಕ ಮತ್ತು ಪುಸ್ತಕ ಸಂಸ್ಕೃತಿಯನ್ನು ಆ ಕಾಲದಲ್ಲಿ ಬೆಳೆಸಿದ್ದು ಒಂದು ಅದ್ಭುತ ಕಥೆ. ಮನೋಹರ ಗ್ರಂಥ ಮಾಲಾ ಕಾರ್ನಾಡ್‌ರ ಮೊದಲ ನಾಟಕ ‘ಯಯಾತಿ’ (1960)ಯನ್ನು ಪ್ರಕಟಿಸದಿದ್ದರೆ ಅವರು ನಾಟಕಕಾರರಾಗಲು ಸಾಧ್ಯವಾಗುತ್ತಿತ್ತೊ ಇಲ್ಲವೊ ಎಂದು ಕಾರ್ನಾಡ್‌ರು ಹೇಳುತ್ತಿದ್ದರು.

ಮನೋಹರ ಗ್ರಂಥ ಮಾಲಾದ ಅಟ್ಟ, ಧಾರವಾಡದ ಪರಿಭಾಷೆಯಲ್ಲಿ ಕೇವಲ ‘ಅಟ್ಟ’ವೆಂದೇ ಚಿರಪರಿಚಿತ. ಅದು ಆಗಿನ ಆಧುನಿಕ ಕನ್ನಡ ಸಾಹಿತ್ಯವನ್ನು ನಿರ್ಮಿಸಿದ ಬಹು ಮುಖ್ಯವಾದ ಸಾಂಸ್ಕೃತಿಕ ತಾಣವಾಗಿತ್ತು. ಅಲ್ಲಿ ಕಾರ್ನಾಡ್ ಅವರಿಗೆ ವರವಾಗಿ ಕೂಡಿಬಂದಿದ್ದು ಎರಡು ಆಧುನಿಕ ಭಾರತದ ಅತ್ಯದ್ಭುತ ಪ್ರತಿಭೆಗಳು-ಕೀರ್ತಿನಾಥ ಕುರ್ತಕೋಟಿ ಹಾಗೂ ಎ.ಕೆ. ರಾಮಾನುಜನ್. ಧಾರವಾಡದಲ್ಲಿ ಜರುಗಿದ ತಮ್ಮ ಆತ್ಮಕಥೆ ಬಿಡುಗಡೆಯ ಸಮಾರಂಭವೊಂದರಲ್ಲಿ ಕಾರ್ನಾಡ್‌ರು ಇವರಿಬ್ಬರನ್ನು ತನ್ನ ಗುರುಗಳೆಂದು ನೆನೆದಿದ್ದುಂಟು. ಕುರ್ತಕೋಟಿಯವರನ್ನು ‘ಕೀರ್ತಿ’ ಎಂದು ಸಂಬೋಧಿಸುತ್ತಿದ್ದ ಕಾರ್ನಾಡ್‌ರು, ‘ಕೀರ್ತಿ ‘ಯಯಾತಿ’ಯನ್ನು ಮೆಚ್ಚಿ, ಹಲವುಬಾರಿ ತಿದ್ದಿ ತೀಡಿ, ಮನೋಹರ ಗ್ರಂಥ ಮಾಲಾದಿಂದ ಪ್ರಕಟಿಸಿದರೆಂದು ಆಗಾಗ ಹೇಳುತ್ತಿದ್ದರು. ಆಗ ಗ್ರಂಥ ಮಾಲೆಯ ಸಲಹೆಗಾರರಾಗಿ ಕುರ್ತಕೋಟಿಯವರು ಕೆಲಸ ಮಾಡುತ್ತಿದ್ದರು. ಕುರ್ತಕೋಟಿಯವರು ಇವರ ಕನ್ನಡವನ್ನಷ್ಟೇ ಅಲ್ಲ, ನಾಟಕಶಾಸ್ತ್ರವನ್ನೂ ಬೆಳೆಸಿದ್ದಾರೆ. ‘ಹೊಟ್ಟೆ ತುಂಬ ಮಾತನಾಡು’ವುದನ್ನು ಇಷ್ಟಪಡುತ್ತಿದ್ದ ಕುರ್ತಕೋಟಿಯವರು ಗ್ರಂಥ ಮಾಲೆಯ ಅಟ್ಟದ ಮೇಲೆ ನಡೆಯುತ್ತಿದ್ದ ಹರಟೆಯಲ್ಲಿ ಬೌದ್ಧಿಕ ವಾಂಗ್ಮಯವನ್ನು ಹಂಚುತ್ತಿದ್ದರು. ಒಬ್ಬ ವಿಮರ್ಶಕ (ಇದಕ್ಕಿಂತಲೂ ಉತ್ತಮ ಶಬ್ದ ಇಲ್ಲದಿರುವುದರಿಂದ ಈ ಶಬ್ದವನ್ನು ಬಳಸುತ್ತಿದ್ದೇನೆ) ಇನ್ನೊಬ್ಬ ಸೃಜನಶೀಲ ಬರಹಗಾರರ ಬೆಳವಣಿಗೆಗೆ ಏನೆಲ್ಲಾ ಕೊಡುಗೆ ಕೊಡಬಹುದೆಂದು ಕುರ್ತಕೋಟಿ-ಕಾರ್ನಾಡ್‌ರ ಒಡನಾಟ ಸೂಕ್ಷ್ಮ ಸುಳಿವನ್ನು ನೀಡುತ್ತದೆ.

ಕಾರ್ನಾಡ್‌ರ ಇನ್ನೊಬ್ಬ ಗುರುವಾದ ಎ.ಕೆ.ರಾಮಾನುಜನ್ ಅವರನ್ನು ಬೌದ್ಧಿಕ ವಿದ್ಯಮಾನ ಎನ್ನುವುದೇ ಸರಿ. ಇವರ ಜೊತೆಗಿನ ಒಡನಾಟದಿಂದ ಕಾರ್ನಾಡ್‌ರು ಸಾಕಷ್ಟು ಕಲಿತಿದ್ದಾರೆ. ನಮಗೆಲ್ಲರಿಗೆ ಗೊತ್ತಿರುವಂತೆ ರಾಮಾನುಜನ್ ಹೇಳಿದ ಒಂದು ಕಥೆೆಯಿಂದ ಕಾರ್ನಾಡ್‌ರ ‘ನಾಗಮಂಡಲ’ ನಾಟಕ ಹುಟ್ಟಿಕೊಂಡಿತು ಹಾಗೂ ಕನ್ನಡದ ಇನ್ನೋರ್ವ ಬರಹಗಾರ ಚಂದ್ರಶೇಖರ ಕಂಬಾರರು ‘ಸಿರಿ ಸಂಪಿಗೆ’ಯನ್ನು ಬರೆದರು. ಕಾರ್ನಾಡ್‌ರೇ ಹೇಳುವಂತೆ ಸಾಹಿತ್ಯದ ಸಂವೇದನೆ ಹಾಗೂ ಇತರ ಬೌದ್ಧಿಕ ಸೂಕ್ಷ್ಮತೆಗಳ ಜೊತೆ, ರಾಮಾನುಜನ್‌ರಿಂದ ಅವರು ಬರವಣಿಗೆಯ ಕುಶಲಗಾರಿಕೆಯನ್ನು ಕಲಿತರಂತೆ. ರಾಮಾನುಜನ್ ಪ್ರಕಾರ ಬರವಣಿಗೆ ಎಂದರೆ ಸದಾ ತಿದ್ದುತ್ತ ಮರು ಬರವಣಿಗೆ ಮಾಡುತ್ತಲೇ ಇರುವುದು. ಅಂತೆಯೇ ಕಾರ್ನಾಡ್‌ರು ತಮ್ಮ ನಾಟಕಗಳನ್ನು ಸದಾ ತಿದ್ದುತ್ತಿದ್ದರು. ‘ಯಯಾತಿ’ಯನ್ನಂತೂ, ಅದು ಪ್ರಕಟಗೊಂಡ ಮೂವತ್ತು ವರ್ಷಗಳ ನಂತರವೂ ಅವರು ತಿದ್ದಿದ್ದಾರೆ. ರಾಮಾನುಜನ್ ಮೂಲಕ ಅವರು ಕಂಡುಕೊಂಡ ಸತ್ಯವೇನೆಂದರೆ ನಾಟಕದ ಮೊದಲ ಪ್ರತಿಯು ಮುಂದೆ ಮಾರ್ಪಾಡು ಮಾಡಬೇಕಾದ, ಸಾಕಷ್ಟು ಕೆಲಸ ಇರುವ ಒಂದು ಪ್ರಾರಂಭವಷ್ಟೇ ಎಂದು. ನಾಟಕ ಯಾವಾಗಲು ರಂಗ ತಾಲೀಮ್‌ನಲ್ಲಿ ರೂಪುಗೊಳ್ಳುವ ಪಠ್ಯವೆಂದು ಅವರು ಕಂಡುಕೊಂಡಿದ್ದರು. ಕಾರ್ನಾಡ್‌ರ ಒಟ್ಟು 15 ನಾಟಕಗಳಲ್ಲಿ ಎಲ್ಲವೂ ಯಶಸ್ಸನ್ನು ಕಾಣಲಿಲ್ಲ. ವಿದ್ವಾಂಸರು ಗುರುತಿಸುವಂತೆ ಕಾರ್ನಾಡ್‌ರು ಸ್ವತಃ ತಾವೇ ಸೃಷ್ಟಿಸಿದ ಸಾಮಾಜಿಕ ಕಥಾಹಂದರಗಳು ಒಳ್ಳೆಯ ನಾಟಕಗಳಾಗಿ ಮೂಡಿಬರಲಿಲ್ಲ.

ಉದಾಹರಣೆಗೆ ‘ಅಂಜುಮಲ್ಲಿಗೆ’ (1977) ಅಷ್ಟೊಂದು ಯಶಸ್ವಿ ಪ್ರಯೋಗಗಳನ್ನು ಕಾಣಲಿಲ್ಲ. ಆದರೆ ಪುರಾಣ, ಐತಿಹ್ಯ, ಇತಿಹಾಸಗಳಿಂದ ಆಯ್ದುಕೊಂಡ ಕಥೆಗಳು ಒಳ್ಳೆಯ ನಾಟಕಗಳಾಗಿ ಹೊರಹೊಮ್ಮಿವೆ. ಅಂತೆಯೆ 1964ರಲ್ಲಿ ಪ್ರಕಟಗೊಂಡ ಅವರ ‘ತುಘಲಕ್’ ನಾಟಕ ಆಧುನಿಕ ರಂಗಭೂಮಿ ಕಂಡ ಅತಿಶ್ರೇಷ್ಠ ಕೃತಿ. ಅವರಿಗೆ ಈ ನಾಟಕ ದೇಶದಾದ್ಯಂತ ಪ್ರಸಿದ್ಧಿಯನ್ನು ತಂದುಕೊಟ್ಟಿತು. ‘ಕನ್ನಡ ನಾಟಕ ಪರಂಪರೆಯಲ್ಲಿ ಐತಿಹಾಸಿಕ ಕಥಾವಸ್ತುಗಳನ್ನು ಸಮರ್ಪಕವಾಗಿ ಬಳಸಿ ಒಳ್ಳೆಯ ನಾಟಕಗಳು ಬಂದೇ ಇಲ್ಲ’ ಎಂದ ಕುರ್ತಕೋಟಿಯವರ ಮಾತನ್ನು ಗಮನಿಸಿ, ಕಾರ್ನಾಡ್‌ರು ತುಘಲಕ್ ರಾಜನ ಕಥೆಯನ್ನು ನಾಟ್ಯಗೊಳಿಸಿದರು. ಈ ನಾಟಕ ಕಲಾಕೃತಿಯಾಗಿ ರಂಗದ ಮೇಲೆ ಯಶಸ್ಸನ್ನು ಸಾಧಿಸಿದ್ದಲ್ಲದೇ ಕಾರ್ನಾಡ್‌ರಿಗೆ ಹಾಗೂ ಇತರ ನಾಟಕಕಾರರಿಗೆ ಸಮಕಾಲೀನ ಬಿಕ್ಕಟ್ಟುಗಳನ್ನು ಗ್ರಹಿಸಲು, ಕಲೆಯ ಮೂಲಕ ಇತಿಹಾಸವನ್ನು ಹೇಗೆ ಶೋಧಿಸಬಹುದೆಂಬ ತಂತ್ರಗಾರಿಕೆಯನ್ನು ಮನದಟ್ಟು ಮಾಡಿಕೊಟ್ಟಿತು. ನೆಹರೂ ಯುಗದ ಪತನ ಹಾಗೂ ತದನಂತರದ ಭಾರತದಲ್ಲುಂಟಾದ ರಾಜಕೀಯ ಬಿಕ್ಕಟ್ಟುಗಳನ್ನು ಸೂಕ್ಷ್ಮವಾಗಿ ಈ ನಾಟಕ ತುಘಲಕ್‌ನ ದರ್ಬಾರದ ಕಥೆಯ ಮೂಲಕ ನೆನಪಿಸುತ್ತದೆ. ಹಾಗೆಯೇ 90ರ ದಶಕದ ಕೋಮುವಾದ ಅವರನ್ನು 12ನೆಯ ಶತಮಾನದ ವಚನ ಚಳವಳಿಗೆ ಮೊರೆ ಹೋಗುವಂತೆ ಮಾಡಿತು.

ಆಗ ‘ತಲೆದಂಡ’ (1991) ಇನ್ನೊಂದು ಒಳ್ಳೆಯ ಐತಿಹಾಸಿಕ ನಾಟಕವಾಗಿ ಮೂಡಿಬಂದಿತು. ನಂತರ ಬಂದ ಅವರ ಎರಡು ಐತಿಹಾಸಿಕ ನಾಟಕಗಳಲ್ಲೊಂದಾದ ‘ಟಿಪ್ಪು ಸುಲ್ತಾನ ಕಂಡ ಕನಸು’ (2000) ಅಷ್ಟು ಯಶಸ್ಸನ್ನು ಕಾಣದಿದ್ದರೂ ಟಿಪ್ಪು ಇತಿಹಾಸವನ್ನು ನಾವು ಮತ್ತೊಮ್ಮೊ ಅವಲೋಕನ ಮಾಡಲು ಪ್ರೇರೇಪಿಸಿತು. ವಿಜಯನಗರ ಸಾಮ್ರಾಜ್ಯದ ಪತನ ಹಾಗೂ ದಕ್ಷಿಣ ಭಾರತದ ಭೂಪಟವನ್ನು ಬದಲಾಯಿಸಿದ ತಾಳಿಕೋಟಿ ಯುದ್ಧದ ಕಥಾವಸ್ತುವಾಗಿರುವ ಅವರ ‘ರಾಕ್ಷಸ ತಂಗಡಿ’ ಕಳೆದ ವರ್ಷ ಪ್ರಕಟಗೊಂಡಿದೆ. ಇಂಗ್ಲೀಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಈ ನಾಟಕ ಯಶಸ್ವಿ ಪ್ರಯೋಗಗಳನ್ನು ಕಂಡಿದೆ. ಐತಿಹಾಸಿಕ ಸತ್ಯಗಳನ್ನು ಶೋಧಿಸುವ ಮೂಲಕ ವರ್ತಮಾನವನ್ನು ಅರಿಯಲು ಕಾರ್ನಾಡ್‌ರ ಐತಿಹಾಸಿಕ ನಾಟಕಗಳು ಹೊರಟರೆ, ಪುರಾಣ, ಮಹಾಭಾರತ, ಮಿತ್, ಜಾನಪದಗಳಿಂದ ಕಥಾಹಂದರ ಆಯ್ದುಕೊಂಡ ನಾಟಕಗಳು ಮನುಷ್ಯನ ಮೂಲಭೂತ ಸ್ವಭಾವವನ್ನು ಬಿಚ್ಚಿಡುವ ಸಾಹಸ ಮಾಡುತ್ತವೆ. ಅಂತೆಯೇ ಅವರ ‘ಯಯಾತಿ’, ‘ಹಯವದನ’ (1971) ಹಾಗೂ ‘ನಾಗಮಂಡಲ’ ಕಾಮ, ಕಾಮನೆಗಳ ಸ್ವರೂಪ ಎಂತಹದ್ದೆಂದು, ನೀತಿ ಪಾಠ ಮಾಡದೇ ನಾಟ್ಯೀಕರಿಸುತ್ತವೆ.

ಯೌವನವನ್ನು ಬಯಸುವ ಯಯಾತಿ, ಮನಸ್ಸು ದೇಹ ಎರಡನ್ನೂ ಬಯಸುವ ಪದ್ಮಿನಿ, ಮನುಷ್ಯರ ಶಾಶ್ವತ ಹುಡುಕಾಟಗಳನ್ನು ನಮ್ಮ ಮುಂದಿಡುತ್ತವೆ. ಮಿತ್ಯೆ-ಸತ್ಯಗಳ ಗೊಂದಲದಲ್ಲಿರುವ ‘ನಾಗಮಂಡಲ’ದ ರಾಣಿಯ ತಾಕಲಾಟ ಮನುಷ್ಯ ಜೀವನದ ದ್ವಂದ್ವವನ್ನು ಅನಾವರಣಗೊಳಿಸುತ್ತದೆ. ಈ ಪ್ರಕಾರದ ನಾಟಕಗಳಲ್ಲಿ ಅವರ ‘ಅಗ್ನಿ ಮತ್ತು ಮಳೆ’ (1994) ಬಹಳ ಸಂಕೀರ್ಣವಾದ ನಾಟಕ. ಈ ನಾಟಕವನ್ನು ಓದಲು ಒಂದು ಬೌದ್ಧಿಕ ತಯಾರಿಯೇ ಬೇಕಾಗುತ್ತದೆ. ಆದರೆ ‘ತುಘಲಕ್’ ನಂತರ ಬಂದ ಕಾರ್ನಾಡ್‌ರ ಅತ್ಯುತ್ತಮ ನಾಟಕವಿದು. ಅವರು ಇತ್ತೀಚೆಗೆ ಬರೆದ ಸಾಮಾಜಿಕ ನಾಟಕಗಳಾದ ‘ಒಡಕಲು ಬಿಂಬ’ (2004), ‘ಮದುವೆ ಅಲ್ಬಮ್’ (2006) ‘ಹೂ’ (2007) ಸಮಕಾಲೀನ ಆಧುನಿಕೋತ್ತರ ಜೀವನದ ಸಮಸ್ಯೆಗಳನ್ನು ಬಿಂಬಿಸುವ ಪ್ರಯತ್ನಗಳಾಗಿವೆ. ಮನುಷ್ಯರ ಆಯಷ್ಯವನ್ನು ಅಂದಾಜು ಮಾಡಬಹುದು, ಕಲಾಕೃತಿಗಳ ಆಯುಷ್ಯವನ್ನಲ್ಲ. ಅವು ಯಾವಾಗ ಮರುಹುಟ್ಟು ಪಡೆದು ಬೆಳಕಿಗೆ ಬರುತ್ತವೆಂದು ಹೇಳುವುದು ಕಷ್ಟ. 18ನೆಯ ಶತಮಾನದಲ್ಲಿ ಶೇಕ್ಸ್ ಪಿಯರ್ ನಾಟಕಗಳಿಗೆ ಇಂಗ್ಲೆಂಡಿನಲ್ಲಿ ಅಷ್ಟೊಂದು ಬೇಡಿಕೆ ಇರಲಿಲ್ಲವಂತೆ. ಅವನ ನಾಟಕಗಳು 19ನೆಯ ಶತಮಾನದ ನಂತರ ಮರುಹುಟ್ಟು ಪಡೆದಿದ್ದು ಅಚ್ಚರಿಯ ಸಂಗತಿ. ಹಾಗಾಗಿ ಕಾರ್ನಾಡ್‌ರ ಸಾಮಾಜಿಕ ನಾಟಕಗಳನ್ನು ಭವಿಷ್ಯದಲ್ಲಿ ಕಾದು ನೋಡಬೇಕಾಗಿದೆ.

ಪಾರ್ಸಿ ನಾಟಕ ಪರಂಪರೆಯನ್ನೊಳಗೊಂಡಂತೆ, ಮರಾಠಿ ಹಾಗೂ ಇತರ ದೇಶಿ ನಾಟ್ಯ ಪ್ರಕಾರಗಳ ಸಂವೇದನೆಗಳನ್ನು ಅಂತರ್ಗತ ಮಾಡಿಕೊಂಡಿದ್ದ ಕಾರ್ನಾಡ್‌ರ ನಾಟಕ ಹೆಣೆಯುವ ಕಸಬು, ಪಾಶ್ಚಾತ್ಯ ನಾಟಕ ಪರಂಪರೆಯಿಂದ ಹೇರಳವಾಗಿ ಪಡೆದಿದೆ. ಶೇಕ್ಸ್‌ಪಿಯರ್‌ನ ಪ್ರಭಾವವಂತೂ ಬಹಳ ಸುಲಭವಾಗಿ ಕಾಣಸಿಗುವಂತಹದು. ಕಥೆಗಳನ್ನು ಇತರ ಆಕರಗಳ ಮೂಲಕ ತೆಗೆದುಕೊಂಡು ನಾಟಕವನ್ನಾಗಿಸುವ ಕಲೆಯಿಂದ ಹಿಡಿದು, ಸಂಭಾಷಣೆಗಳನ್ನು ಹೊಸೆಯುವ ಕಲಾಗಾರಿಕೆಯನ್ನು ಅವರು ಶೇಕ್ಸ್‌ಪಿಯರ್‌ನಿಂದ ಕಲಿತಿದ್ದರು. ಈ ಕುರಿತು ‘ನಾಟಕ ರಚಿಸುವ ಪೆಡಗಾಜಿ’ಯ ಮೇಲೆ ಒಂದು ಮಹಾಪ್ರಬಂಧವನ್ನು ಬರೆಯಬಹುದು. ಕೇವಲ ನಾಟಕಕಾರರಿಂದ ಅಲ್ಲ, ನಾಟಕ ಪ್ರಕಾರದ ಮೇಲೆ ಬಂದ ಶಾಸ್ತ್ರೀಯ ಅಧ್ಯಯನಗಳಿಂದಲೂ ಅವರು ತಮ್ಮ ಕಲೆಯನ್ನು ಮೊನಚುಗೊಳಿಸಿದ್ದರು. ನಾಟಕ ಬರೆಯುವವರು ನಾಟ್ಯಶಾಸ್ತ್ರ ಸಿದ್ಧಾಂತಗಳನ್ನು ತಿಳಿಯುವುದರ ಮೂಲಕ ಹೆಚ್ಚಿನದನ್ನು ಪಡೆಯಬಹುದೆಂದು ಕಾರ್ನಾಡ್‌ರನ್ನು ನೋಡಿದರೆ ಅನಿಸುತ್ತದೆ. ಅವರ ಪ್ರಕಾರ ನಾಟಕದ ಆತ್ಮ ಇರುವುದು ಸಂಭಾಷಣೆಯಲ್ಲಿ. ಸಂಭಾಷಣೆ ನಾಟಕಗಳಲ್ಲಿನ ಕೇವಲ ಮಾತುಕಥೆ ಅಲ್ಲ. ಒಂದು ಪಾತ್ರ ತನಗನಿಸಿದ್ದನ್ನು ಇನ್ನೊಂದು ಪಾತ್ರವೂ ಒಪ್ಪಿಕೊಳ್ಳುವಂತೆ ಮಾಡುವುದು ಸಂಭಾಷಣೆಗಳ ಕೆಲಸವೆಂದು ಕಾರ್ನಾಡ್‌ರು ಕಂಡುಕೊಂಡಿದ್ದರು. ಹಾಗಾಗಿ ಅವರ ನಾಟಕಗಳು ಸಂಭಾಷಣೆ-ಪ್ರಧಾನ ಕಲಾಕೃತಿಗಳಾಗಿವೆ. ಅವರು ಸಮಕಾಲೀನ ಜಗತ್ತಿನಲ್ಲಿ ರಂಗಭೂಮಿಯ ಪಾತ್ರ, ಕಲಾ ಪ್ರಕಾರಗಳ ಅಳಿವು ಉಳಿವಿನ ಬಗ್ಗೆಯೂ ಆಳವಾಗಿ ಆಲೋಚನೆ ಮಾಡಿದ್ದಾರೆ.

ರಂಗಭೂಮಿ ಅವರ ಮೊದಲ ಆದ್ಯತೆ ಮತ್ತು ಪ್ರೀತಿಯ ಕ್ಷೇತ್ರವಾದದ್ದೇನೋ ನಿಜ. ಅವರು ಟಿವಿ ಧಾರಾವಾಹಿ, ಚಲನಚಿತ್ರ ಇತರ ಮಾಧ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳಿಗೆ ಸಂಭಾಷಣೆ, ಪಾತ್ರ, ನಿರ್ದೇಶನ ಇತ್ಯಾದಿಗಳನ್ನು ಮಾಡುವುದರ ಜೊತೆಗೆ, ನೂರಕ್ಕ್ಕೂ ಹೆಚ್ಚು ಜನಪ್ರಿಯ ಕನ್ನಡ, ಹಿಂದಿ, ತಮಿಳು, ತೆಲುಗು, ಮತ್ತು ಇಂಗ್ಲಿಷ್ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅವರು ಯಾವಾಗಲು ಹೇಳುತ್ತಿದ್ದದ್ದೇನೆಂದರೆ ‘‘ನಾನು ಜೀವನೋಪಾಯಕ್ಕೋಸ್ಕರ ಚಲನಚಿತ್ರಗಳಲ್ಲಿ ಕೆಲಸಮಾಡುತ್ತೇನೆಯೇ ಹೊರತು, ನನ್ನ ನಿಜವಾದ ‘ಜೀವ’ ಇರುವುದು ರಂಗಭೂಮಿಯಲ್ಲಿ’’ ಎಂದು.

ವೈಯಕ್ತಿಕ ಸಾಧನೆ ಮಾಡಿದವರಲ್ಲಿ ಗಿರೀಶ್ ಕಾರ್ನಾಡ್‌ರಂತಹ ಇನ್ನೊಬ್ಬ ಕನ್ನಡಿಗನಿಲ್ಲವೇನೋ ಅನಿಸುತ್ತದೆ. ಆದರೆ ಸಾರ್ವಜನಿಕ ಅಭಿಪ್ರಾಯ ಮೂಡಿಸುವಲ್ಲಿ ಕಾರ್ನಾಡ್‌ರು ವಿಶೇಷ ಪಾತ್ರವಹಿಸಲಿಲ್ಲ. ಕೆಲವು ರಾಜಕೀಯ ಹೇಳಿಕೆಗಳನ್ನು ಸಾರ್�

Writer - ಡಾ. ಎನ್.ಎಸ್.ಗುಂಡೂರ

contributor

Editor - ಡಾ. ಎನ್.ಎಸ್.ಗುಂಡೂರ

contributor

Similar News