ಕೇರಳ ಆರೋಗ್ಯ ಸಚಿವೆಯನ್ನು ‘ಕೋವಿಡ್ ರಾಣಿ' ಎಂದ ಕಾಂಗ್ರೆಸ್ ನಾಯಕ!

Update: 2020-06-21 08:04 GMT

ತಿರುವನಂತಪುರಂ: “ಈ ಹಿಂದೆ ‘ನಿಫಾ ರಾಜಕುಮಾರಿ’ ಆಗಲು ಯತ್ನಿಸಿದ್ದ ಕೇರಳ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಇದೀಗ ಕೋವಿಡ್  ರಾಣಿಯಾಗಿ ಖ್ಯಾತಿ ಪಡೆಯಲು ಯತ್ನಿಸುತ್ತಿದ್ದಾರೆ'' ಎಂದು ಹೇಳುವ ಮೂಲಕ ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮುಳ್ಳಪ್ಪಳ್ಳಿ ರಾಮಚಂದ್ರನ್ ವಿವಾದ ಸೃಷ್ಟಿಸಿದ್ದಾರೆ.

ನಿಫಾ ಸೋಂಕು ಕೋಯಿಕ್ಕೋಡ್ ನಲ್ಲಿ ಕಾಣಿಸಿಕೊಂಡಾಗ ಸಚಿವೆ ಅಲ್ಲಿ ಅತಿಥಿ ಕಲಾವಿದೆಯಂತೆ ಠಿಕಾಣಿ ಹೂಡುತ್ತಿದ್ದರು ಎಂದು ರಾಮಚಂದ್ರನ್ ಆರೋಪಿಸಿದ್ದಾರೆ. “ಈಗ ಅದರ ಶ್ರೇಯ ಸರಕಾರಕ್ಕೆ ಹೋಗಿದೆ. ಈಗ ಕೋವಿಡ್ ರಾಣಿಯಾಗಲು ಯತ್ನಿಸುತ್ತಿರುವ ಆಕೆ ಈ ಹಿಂದೆ ನಿಫಾ ರಾಜಕುಮಾರಿಯಾಗಲು ಯತ್ನಿಸಿದ್ದರು. ನಿಫಾ ತಡೆಗಟ್ಟಿದ ಹಿಂದಿನ ನಿಜವಾದ ಶ್ರೇಯ ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೆ ಸಲ್ಲಬೇಕು'' ಎಂದು ಅವರು ಹೇಳಿದರು.

ರಾಜ್ಯಕ್ಕೆ ಆಗಮಿಸುವ ವಿದೇಶಗಳಲ್ಲಿ ನೆಲೆಸಿರುವ  ಕೇರಳಿಗರು ಕಡ್ಡಾಯ ಕೋವಿಡ್-19 ಮುಕ್ತ ಪ್ರಮಾಣಪತ್ರಗಳನ್ನು ಹೊಂದಿರಬೇಕೆಂಬ ಸರಕಾರದ ನಿಯಮವನ್ನು ಖಂಡಿಸಿ ವಿಪಕ್ಷ ನಾಯಕ  ರಮೇಶ್ ಚೆನ್ನಿತ್ತಲ ಅವರು ರಾಜ್ಯ ಸೆಕ್ರಟೇರಿಯಟ್‍ ನೆದುರು ಆರಂಭಿಸಿರುವ ಉಪವಾಸ ಸತ್ಯಾಗ್ರಹವನ್ನು ಉದ್ಘಾಟಿಸಿ ರಾಮಚದ್ರನ್ ಮಾನಾಡುತ್ತಿದ್ದರು.

ರಾಮಚಂದ್ರನ್ ಅವರ ಹೇಳಿಕೆಯನ್ನು ಖಂಡಿಸಿ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಹಾಗೂ ಸಿಪಿಐ ನಾಯಕ ಅನ್ನೀ ರಾಜ ಟ್ವೀಟ್ ಮಾಡಿದ್ದಾರಲ್ಲದೆ ರಾಮಚಂದ್ರನ್ ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ. ರಾಮಚಂದ್ರನ್ ಅವರ ಟ್ವೀಟ್ ಅವರ ಪಕ್ಷದ ಸಂಸ್ಕೃತಿಯನ್ನು ಸೂಚಿಸುತ್ತದೆ  ಎಂದು  ಡಿವೈಎಫ್‍ಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News