ನೇಪಾಳದ ರೇಡಿಯೋ ಸ್ಟೇಷನ್ ಗಳಲ್ಲಿ ಭಾರತ ವಿರೋಧಿ ಹಾಡುಗಳು

Update: 2020-06-21 10:42 GMT

ಡೆಹ್ರಾಡೂನ್: ನೇಪಾಳದ ಗಡಿಗೆ ಹೊಂದಿಕೊಂಡಿರುವ ಉತ್ತರಾಖಂಡದ ಹಲವು ಮಂದಿ ಗ್ರಾಮಸ್ಥರು ನೇಪಾಳ ರೇಡಿಯೊ ಸ್ಟೇಷನ್ ‍ನ ಸಿಗ್ನಲ್ ಪಡೆಯುತ್ತಿದ್ದು, ಉಭಯ ದೇಶಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ನೇಪಾಳದ ರೇಡಿಯೊದಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಉತ್ತರಾಖಂಡದ ಭಾಗವಾದ ಕಾಲಾಪಾನಿ, ಲಿಪುಲೇಕ್ ಮತ್ತು ಲಿಂಪಿಯಾದುರಾ ಪ್ರದೇಶಗಳನ್ನು ನೇಪಾಳ ತನ್ನ ನಕ್ಷೆಯಲ್ಲಿ ಸೇರಿಸಿಕೊಂಡಿದ್ದು, ಇವುಗಳನ್ನು ಮರಳಿಸುವಂತೆ ಆಗ್ರಹಿಸುವ ಗೀತೆಗಳು ನೇಪಾಳ ರೇಡಿಯೊದಲ್ಲಿ ಪ್ರಸಾರವಾಗುತ್ತಿವೆ.

ಈ ಹಾಡುಗಳನ್ನು ಎಫ್‍ಎಂ ಚಾನಲ್‍ ಗಳು ಸುದ್ದಿ ಮತ್ತು ಇತರ ಕಾರ್ಯಕ್ರಮಗಳ ನಡುವೆ ಪ್ರಸಾರ ಮಾಡುತ್ತವೆ. ನೇಪಾಳಕ್ಕೆ ಸೇರಿದ ಭೂಪ್ರದೇಶಗಳನ್ನು ವಾಪಸ್ ಪಡೆಯಲು ಪ್ರಯತ್ನ ಮಾಡದ ನೇಪಾಳ ರಾಜಕಾರಣಿಗಳನ್ನು ಕೂಡಾ ಈ ಗೀತೆಗಳಲ್ಲಿ ದೂಷಿಸಲಾಗುತ್ತಿದೆ.

ಪಿತೋರ್‍ ಗಢ ಜಿಲ್ಲೆಯ ದಾರ್ಚುಲಾದ ಶಾಲಾ ಶಿಕ್ಷಕಿ ಬಬಿತಾ ಸನ್ವಾಲ್ ಸಾಮಾನ್ಯವಾಗಿ ಶಾಲೆಯಿಂದ ಮನೆಗೆ ಬರುವ ವೇಳೆಗೆ ವಾರ್ತೆ ಕೇಳುತ್ತಾರೆ. “ನಾನು ಇದೀಗ ಕೇಳುವುದು ಬಿಟ್ಟಿದ್ದೇನೆ. ಎಫ್‍ಎಂಗಳಲ್ಲಿ ಭಾರತ ವಿರೋಧಿ ಗೀತೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಪ್ರತಿ ಗಂಟೆಯೂ ಹಲವು ಬಾರಿ ಪ್ರಸಾರ ಮಾಡಲಾಗುತ್ತಿದೆ” ಎಂದು ಅವರು ಹೇಳುತ್ತಾರೆ.

“ಕಾಲಾಪಾನಿ, ಲಿಪುಲೇಕ್ ಮತ್ತು ಲಿಂಪಿಯಾಮುದ್ರ ನಮ್ಮದು. ಸಾಹಸಿ ಜನರೇ ಎಚ್ಚೆತ್ತುಕೊಳ್ಳಿ” ಎಂಬ ಗೀತೆ ಪ್ರಸಾರವಾಗುತ್ತಿರುವುದನ್ನು ಅವರು ನೆನಪಿಸಿಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News