ಹೆಡ್‌ ಕಾನ್ಸ್‌ಟೇಬಲ್ ಹತ್ಯೆ: ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಯೋಗೇಂದ್ರ ಯಾದವ್ ಹೆಸರು

Update: 2020-06-21 17:58 GMT

  ಹೊಸದಿಲ್ಲಿ,ಜೂ.21: ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದ ಗಲಭೆಯ ಸಂದರ್ಭ ನಡೆದ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ರತನ್‌ಲಾಲ್ ಅವರ ಕೊಲೆ ಪ್ರಕರಣದ ದೋಷಾರೋಪಪಟ್ಟಿಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಅವರನ್ನು ಹೆಸರಿಸಲಾಗಿದೆ. ಯಾದವ್ ಜೊತೆ ವಿದ್ಯಾರ್ಥಿ ನಾಯಕಿ ಕವಲ್‌ಪ್ರೀತ್ ಕೌರ್ ಹಾಗೂ ನ್ಯಾಯವಾದಿ ಡಿ.ಎಸ್.ಬಿಂದ್ರಾ ಅವರನ್ನು ಕೂಡಾ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

  ಆದರೆ ಈ ಮೂವರನ್ನು, ಪ್ರಕರಣದ 17 ಮಂದಿ ಆರೋಪಿಗಳ ಪಟ್ಟಿಯಲ್ಲಿ ಹೆಸರಿಸಲಾಗಿಲ್ಲ. ‘‘ ಚಾಂದ್ ಭಾಗ್ ಪ್ರತಿಭಟನೆಯ ಸಂಘಟಕರಿಗೆ ಡಿ.ಎಸ್. ಬಿಂದ್ರಾ (ಎಐಎಂಐಎಂ), ಕವಲ್‌ ಪ್ರೀತ್‌ ಕೌರ್ (ಏಐಎಸ್‌ಎ), ದೇವಾಂಗನಾ ಕಲಿಟಾ (ಪಿಂಜಿರಾ ತೋಡ್), ಯೋಗೇಂದ್ರ ಯಾದವ್ ಮತ್ತಿತರರ ಜೊತೆ ನಂಟು ಇರುವುದು, ಹಿಂಸಾಚಾರದ ಹಿಂದೆ ಗುಪ್ತ ಕಾರ್ಯಸೂಚಿ ಇರುವುದನ್ನು ಸೂಚಿಸಿದೆ ’’ ಎಂದು ದೋಷಾರೋಪಪಟ್ಟಿಯಲ್ಲಿ ಹೇಳಲಾಗಿದೆಯೆಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.

  ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ 24ರಂದು ಗಲಭೆ ಭುಗಿಲೆದ್ದಿತ್ತು. ಹಿಂಸಾಚಾರದಲ್ಲಿ ದಿಲ್ಲಿ ಪೊಲೀಸ್ ಪಡೆಯ ಹೆಡ್‌ಕಾನ್ಸ್‌ಟೇಬಲ್ ರತನ್ ಲಾಲ್ ಸೇರಿದಂತೆ 53 ಮಂದಿ ಪ್ರಾಣ ಕಳೆದುಕೊಂಡಿದ್ದರು.

   ಚಾಂದ್‌ ಬಾಗ್‌ ನಲ್ಲಿ ಸಿಎಎ ವಿರುದ್ಧ ಕಳೆದ ಜನವರಿಯಿಂದ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದ ಆಸುಪಾಸಿನಲ್ಲಿ ಎಸಿಪಿ ಗೋಕಲ್‌ಪುರಿ ಹಾಗೂ ಡಿಸಿಪಿ ಶಾರದಾ ಮತ್ತಿತರ ಪೊಲೀಸ್ ಅಧಿಕಾರಿಗಳ ಜೊತೆ ರತನ್‌ಲಾಲ್ ಹಾಜರಿದ್ದರು. ಈ ಸಂದರ್ಭದಲ್ಲಿ ಗುಂಪೊಂದು ದಾಳಿ ನಡೆಸಿದಾಗ, ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರತನ್‌ಲಾಲ್‌ಗೆ ವಝೀರ್‌ಬಾದ್ ರಸ್ತೆಯಲ್ಲಿನ 5 ಅಡಿ ಎತ್ತರದ ಡಿವೈಡರ್‌ನಿಂದ ಜಿಗಿಯಲು ಸಾಧ್ಯವಾಗದೆ, ಕುಸಿದಾಗ ದುಷ್ಕರ್ಮಿಗಳ ಆತನಿಗೆ ಗುಂಡೆಸೆದಿದ್ದಾರೆ ಹಾಗೂ ಕಲ್ಲುಗಳಿಗೆ ಹೊಡೆದು ಕೊಲೆಗೈದಿದ್ದಾರೆ ಎಂದು ಚಾರ್ಜ್‌ಶೀಟ್ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News