ಕೋಟ್ಯಂತರ ರೂ. ಸ್ವೀಕರಿಸುತ್ತಿರುವ ‘ಪಿಎಂ ಕೇರ್ಸ್’; ಇನ್ನೂ ಬ್ಯಾಂಕ್ ಖಾತೆಗೆ ಕಾಯುತ್ತಿರುವ ಎನ್‌ಡಿಆರ್‌ಎಫ್ !

Update: 2020-06-22 15:03 GMT

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (ಎನ್‌ಡಿಆರ್‌ಎಫ್) ಸ್ಥಾಪನೆಯಾದ 15 ವರ್ಷಗಳ ಬಳಿಕ ಕೊನೆಗೂ ಸರಕಾರವು ನಿಧಿಯ ಹೆಸರಿನಲ್ಲಿ ಬ್ಯಾಂಕ್ ಖಾತೆಯೊಂದನ್ನು ತೆರೆಯಲು ಪ್ರಕ್ರಿಯೆಯನ್ನು ಆರಂಭಿಸಿದೆ. ಸಾರ್ವಜನಿಕರು ವಿಪತ್ತು ಪರಿಹಾರಕ್ಕಾಗಿ ತಮ್ಮ ದೇಣಿಗೆಗಳನ್ನು ಈ ಖಾತೆಗೆ ಜಮಾ ಮಾಡಬಹುದು.

ಸುದ್ದಿ ಜಾಲತಾಣ Thewire.in ಮತ್ತು ಆರ್‌ಟಿಐ ಕಾರ್ಯಕರ್ತ ಲೋಕೇಶ್ ಬಾತ್ರಾ ಅವರು ಎನ್‌ ಡಿಆರ್‌ಎಫ್‌ ನ ಬ್ಯಾಂಕ್ ಖಾತೆಯ ಕುರಿತು ಮಾಹಿತಿಯನ್ನು ಕೋರಿ ಆರ್‌ಟಿಐ ಕಾಯ್ದೆಯಡಿ ಗೃಹ ಮತ್ತು ವಿತ್ತ ಸಚಿವಾಲಯಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದ ನಂತರ ಸರಕಾರ ಈ ಕ್ರಮವನ್ನು ಕೈಗೊಂಡಿದೆ.

ರಾಷ್ಟ್ರೀಯ ವಿಪತ್ತು ಎಂದು ಅಧಿಕೃತವಾಗಿ ಬಣ್ಣಿಸಲ್ಪಟ್ಟಿರುವ ಕೋವಿಡ್-19ರ ವಿರುದ್ಧ ಹೋರಾಟಕ್ಕಾಗಿ ಪಿಎಂ ಕೇರ್ಸ್ ಸ್ವೀಕರಿಸಿರುವ ಎಲ್ಲ ದೇಣಿಗೆಗಳನ್ನು ಸರಕಾರಿ ನಿಧಿಯಾಗಿರುವ ಎನ್‌ಡಿಆರ್‌ಎಫ್‌ಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಕಳೆದ ವಾರ ಕೇಂದ್ರಕ್ಕೆ ನೋಟಿಸ್ ಹೊರಡಿಸಿದೆ. ಎನ್‌ಡಿಆರ್‌ಎಫ್ ಸಿಎಜಿ ಲೆಕ್ಕಪರಿಶೋಧನೆಗೆ ಒಳಪಡುವುದು ಮಾತ್ರವಲ್ಲ, ಆರ್‌ಟಿಐ ಕಾಯ್ದೆಯಡಿ ಹೆಚ್ಚು ಪಾರದರ್ಶಕ ವ್ಯವಸ್ಥೆಯೂ ಆಗಿದೆ ಎಂದು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ತನ್ನ ಅರ್ಜಿಯಲ್ಲಿ ಹೇಳಿದೆ.

ಆಪತ್ತಿನ ಸ್ಥಿತಿಗಳಲ್ಲಿ ನೆರವಿಗಾಗಿ 1948ರಿಂದಲೇ ಪ್ರಧಾನ ಮಂತ್ರಿಗಳ ರಾಷ್ಟ್ರಿಯ ಪರಿಹಾರ ನಿಧಿ (ಪಿಎಂಆನ್‌ಆರ್‌ಎಫ್) ಅಸ್ತಿತ್ವದಲ್ಲಿದ್ದು, ಇದು ಆರ್‌ ಟಿಐ ಕಾಯ್ದೆಯ ವ್ಯಾಪ್ತಿಗೊಳಪಟ್ಟಿಲ್ಲ ಮತ್ತು ಸ್ವತಂತ್ರ ಆಡಿಟರ್ ಇದರ ಲೆಕ್ಕ ಪರಿಶೋಧನೆಯನ್ನು ನಡೆಸುತ್ತಾರೆ. ಇದೇ ರೀತಿ ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಲಾಗಿದ್ದು, ಇದರ ಕಾರ್ಯವಿಧಾನವು ಅಪಾರದರ್ಶಕವಾಗಿದೆ. ಇದೇ ವೇಳೆ ವಿಪತ್ತು ನಿರ್ವಹಣೆ ಕಾಯ್ದೆ, 2005ರಡಿ ಸ್ಥಾಪಿಸಲಾಗಿರುವ ಎನ್‌ಡಿಆರ್‌ಎಫ್‌ಗೆ ಸಾರ್ವಜನಿಕರಿಂದ ಹಣವನ್ನು ಸ್ವೀಕರಿಸಲು ಯಾವುದೇ ವ್ಯವಸ್ಥೆಯು ಅಸ್ತಿತ್ವದಲ್ಲಿಲ್ಲ.

ಸರಕಾರದ ಬೆಂಬಲ ಮತ್ತು ಮೂಲಸೌಕರ್ಯದೊಂದಿಗೆ ಸ್ಥಾಪಿಸಲಾಗಿರುವ ಪಿಎಂ ಕೇರ್ಸ್ ನಿಧಿಯು ಮುಖ್ಯವಾಗಿ ಪಾರದರ್ಶಕತೆಯ ಕೊರತೆಯಿಂದಾಗಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಪಿಎಂಎನ್‌ಆರ್‌ಎಫ್‌ನಂತೆ ಪಿಎಂ ಕೇರ್ಸ್ ನಿಧಿಯೂ ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೊಳಪಡುವುದಿಲ್ಲ ಎಂದು ಪ್ರಧಾನಿ ಕಚೇರಿ(ಪಿಎಂಒ)ಯು ಘೋಷಿಸಿದೆ.

ಎನ್‌ ಡಿಆರ್‌ಎಫ್ ಸಾರ್ವಜನಿಕರಿಂದ ದೇಣಿಗೆಗಳನ್ನು ಸ್ವೀಕರಿಸಲು ಯಾವುದೇ ವ್ಯವಸ್ಥೆ ಇಲ್ಲದ್ದರಿಂದ Thewire.in ಮತ್ತು ಬಾತ್ರಾ ಎನ್‌ ಡಿಆರ್‌ಎಫ್ ನಲ್ಲಿ ಸಾರ್ವಜನಿಕ ದೇಣಿಗೆಗಳನ್ನು ಸ್ವೀಕರಿಸುವ ಪ್ರಕ್ರಿಯೆಯ ಕುರಿತು ಮಾಹಿತಿಯನ್ನು ಕೋರಿ ವಿವಿಧ ಇಲಾಖೆಗಳಿಗೆ ಆರ್ ಟಿಐ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಸಂಬಂಧ ಅನುಸರಿಸಲಾಗುತ್ತಿರುವ ಯಾವುದೇ ನಿಯಮ/ಅಧ್ಯಾದೇಶ ಅಥವಾ ಪದ್ಧತಿಯ ದೃಢೀಕೃತ ಪ್ರತಿಯನ್ನೂ ಅವರು ಕೋರಿದ್ದರು.

ಈ ವಿಷಯವು ವಿತ್ತ ಸಚಿವಾಲಯದ ವೆಚ್ಚ ಇಲಾಖೆಗೆ ಸಂಬಂಧಿಸಿದೆ ಎಂದು ಗೃಹ ಸಚಿವಾಲಯದ ವಿಪತ್ತು ನಿರ್ವಹಣೆ ಇಲಾಖೆಯು ಬಾತ್ರಾ ಅವರಿಗೆ 2020, ಜೂ.9ರಂದು ನೀಡಿದ್ದ ಉತ್ತರದಲ್ಲಿ ತಿಳಿಸಿತ್ತು. ಇದಾದ ಬಳಿಕ ಮಾಹಿತಿಯನ್ನು ಕೋರಿ ವಿತ್ತ ಇಲಾಖೆಗೆ ಆರ್‌ ಟಿಐ ಅಜಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಇಲಾಖೆಯು ಈವರೆಗೆ ಉತ್ತರಿಸಿಲ್ಲ.

ಬಳಿಕ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಎನ್‌ ಡಿಆರ್‌ಎಫ್‌ ಗೆ ದೇಣಿಗೆಯನ್ನು ಸಲ್ಲಿಸಲು ವ್ಯವಸ್ಥೆ ಅಸ್ತಿತ್ವದಲ್ಲಿದೆಯೇ ಎಂಬ ಬಗ್ಗೆ ಮಾಹಿತಿ ಕೋರಿ Thewire.in ಕೇಂದ್ರ ಗೃಹ ಕಾರ್ಯದರ್ಶಿ, ವೆಚ್ಚ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ(ಎನ್‌ಡಿಎಂಎ)ದ ಸದಸ್ಯ ಕಾರ್ಯದರ್ಶಿಗಳಿಗೆ ಪತ್ರಗಳನ್ನು ಬರೆದಿತ್ತು.

ಗೃಹ ಕಾರ್ಯದರ್ಶಿ ಮತ್ತು ಎನ್‌ ಡಿಎಂಎ ಸದಸ್ಯ ಕಾರ್ಯದರ್ಶಿ ಈ ಪತ್ರಗಳಿಗೆ ಈವರೆಗೆ ಉತ್ತರಿಸಿಲ್ಲ. ಆದರೆ ವೆಚ್ಚ ಕಾರ್ಯದರ್ಶಿಗಳು ಪ್ರತಿಕ್ರಿಯಿಸಿ, ಈ ವಿಷಯವು ಗೃಹ ಸಚಿವಾಲಯಕ್ಕೆ ಸಂಬಂಧಿಸಿದೆ ಎಂದು ತಿಳಿಸಿದ್ದರು.

ಎನ್‌ ಡಿಆರ್‌ಎಫ್ ವಿಷಯವು ವೆಚ್ಚ ಇಲಾಖೆಗೆ ಸಂಬಂಧಿಸಿದ್ದು ಎಂದು ಗೃಹ ಸಚಿವಾಲಯವು ಈಗಾಗಲೇ ಅಧಿಕೃತವಾಗಿ ತಿಳಿಸಿದ್ದರಿಂದ Thewire.in ಅದರ ಉತ್ತರವನ್ನು ಲಗತ್ತಿಸಿ ವೆಚ್ಚ ಕಾರ್ಯದರ್ಶಿಗಳಿಗೆ ಇನ್ನೊಂದು ಪತ್ರವನ್ನು ಬರೆದಿತ್ತು. ಈ ಪತ್ರಕ್ಕೆ ವೆಚ್ಚ ಕಾರ್ಯದರ್ಶಿ ಇನ್ನೂ ಉತ್ತರಿಸಿಲ್ಲ. ಆದರೆ Thewire.inನಿಂದ ಆರ್‌ ಟಿಐ ಅರ್ಜಿ ಮತ್ತು ಪತ್ರದ ಬಳಿಕ ಎನ್‌ ಡಿಆರ್‌ಎಫ್‌ ಗೆ ಸಾರ್ವಜನಿಕರಿಂದ ಮತ್ತು ಸಂಸ್ಥೆಗಳಿಂದ ದೇಣಿಗೆಗಳನ್ನು ಸ್ವೀಕರಿಸಲು ವಿಧಿವಿಧಾನಕ್ಕೆ ಒಪ್ಪಿಗೆ ನೀಡಿದೆ ಮತ್ತು ಬ್ಯಾಂಕ್ ಖಾತೆ ತೆರೆಯಲು ಗೃಹ ಸಚಿವಾಲಯದಲ್ಲಿ ಅಧಿಕೃತ ಸೂಚನೆಯನ್ನು ಹೊರಡಿಸಲಾಗಿದೆ ಎಂದು ಇಲಾಖೆಯಲ್ಲಿನ ಮೂಲಗಳು ದೃಢಪಡಿಸಿವೆ. ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿಗಳೂ ಇದೇ ವಿಧಿವಿಧಾನವನ್ನು ಅನುಸರಿಸುವಂತೆ ವೆಚ್ಚ ಇಲಾಖೆಯು ಸೂಚಿಸಿದೆ.

“ಸಾರ್ವಜನಿಕರಿಂದ ನಮಗೆ ದೇಣಿಗೆಗಳು ಬಂದರೆ ಒಳ್ಳೆಯದು. ನಮಗೆ ಹಣಕಾಸಿನ ಕೊರತೆಯಿದೆ. ಈ ಹಿಂದೆ ಸೆಸ್ ಮೂಲಕ ನಮಗೆ ಬಹಳಷ್ಟು ಹಣ ಲಭಿಸುತ್ತಿತ್ತು ಮತ್ತು ಅದನ್ನು ಎನ್‌ ಡಿಆರ್‌ಎಫ್‌ ಗಾಗಿ ವ್ಯಯಿಸುತ್ತಿದ್ದೆವು. ಆದರೆ ಜಿಎಸ್‌ ಟಿ ಜಾರಿಯೊಂದಿಗೆ ಸೆಸ್‌ನ ವ್ಯಾಪ್ತಿ ತೀರ ಕಡಿಮೆಯಾಗಿದೆ ಮತ್ತು ಬಜೆಟ್‌ನಿಂದ ಹೆಚ್ಚು ಹಣವನ್ನು ವ್ಯಯಿಸುವಂತಾಗಿದೆ” ಎಂದು ಇಲಾಖೆಯ ಮೂಲಗಳು ಹೇಳಿವೆ ಎಂದು Thewire.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News