×
Ad

ರಖೈನ್ ರಾಜ್ಯದ ಇಂಟರ್‌ನೆಟ್ ಕಡಿತ 2ನೇ ವರ್ಷಕ್ಕೆ

Update: 2020-06-22 21:51 IST

ನೇಪಿಟಾವ್ (ಮ್ಯಾನ್ಮಾರ್), ಜೂ. 22: ಮ್ಯಾನ್ಮಾರ್‌ನ ಸಂಘರ್ಷಪೀಡಿತ ವಾಯುವ್ಯ ಭಾಗದಲ್ಲಿ ಹೇರಲಾಗಿರುವ ಇಂಟರ್‌ನೆಟ್ ಕಡಿತ ಈಗ ಎರಡನೇ ವರ್ಷಕ್ಕೆ ಕಾಲಿರಿಸಿದ್ದು, ಇದು ಜಗತ್ತಿನ ಅತಿ ದೀರ್ಘ ಇಂಟರ್‌ನೆಟ್ ಕಡಿತವಾಗಿದೆ ಎಂದು ಮಾನವಹಕ್ಕುಗಳ ಗುಂಪುಗಳು ಹೇಳಿವೆ ಎಂದು ‘ಅಲ್ ಜಝೀರ’ ವರದಿ ಮಾಡಿದೆ.

ರಖೈನ್ ರಾಜ್ಯದಲ್ಲಿರುವ ಮೂಲನಿವಾಸಿ ಬೌದ್ಧರಿಗೆ ಹೆಚ್ಚಿನ ಸ್ವಾಯತ್ತೆ ನೀಡಬೇಕೆಂದು ಆಗ್ರಹಿಸಿ ಸಶಸ್ತ್ರ ಹೋರಾಟ ನಡೆಸುತ್ತಿರುವ ಬಂಡುಕೋರ ಗುಂಪು ಅರಕಾನ್ ಆರ್ಮಿಯ ವಿರುದ್ಧ ಮ್ಯಾನ್ಮಾರ್ ಸೇನೆಯು 2019 ಜನವರಿಯಿಂದ ಕಾರ್ಯಾಚರಣೆಯಲ್ಲಿ ತೊಡಗಿದೆ.

ರಖೈನ್ ರಾಜ್ಯ ಮತ್ತು ಅದರ ನೆರೆಯ ಚಿನ್ ರಾಜ್ಯದ ಹಲವಾರು ಟೌನ್‌ಶಿಪ್‌ಗಳಲ್ಲಿ ಮ್ಯಾನ್ಮಾರ್ ಸರಕಾರವು ಕಳೆದ ವರ್ಷದ ಜೂನ್ 21ರಂದು ಇಂಟರ್‌ನೆಟ್ ಕಡಿತ ಮಾಡಿತ್ತು. ಇದು ಅಲ್ಲಿನ ಜನರಲ್ಲಿ ಆತಂಕ ಉಂಟು ಮಾಡಿತ್ತು.

‘ಜಗತ್ತಿನ ಅತಿ ದೀರ್ಘ ಸರಕಾರಿ-ಆದೇಶಿತ ಇಂಟರ್‌ನೆಟ್ ಕಡಿತ’ವನ್ನು ತಕ್ಷಣ ಕೊನೆಗೊಳಿಸುವಂತೆ ಮಾನವಹಕ್ಕುಗಳ ಸಂಸ್ಥೆ ಹ್ಯೂಮನ್‌ರೈಟ್ಸ್ ವಾಚ್ (ಎಚ್‌ಆರ್‌ಡಬ್ಲ್ಯು) ಶುಕ್ರವಾರ ಕರೆ ನೀಡಿತ್ತು.

ಸಂಘರ್ಷದಲ್ಲಿ ಹತ್ತಾರು ಮಂದಿ ಹತರಾಗಿದ್ದಾರೆ, ನೂರಾರು ಮಂದಿ ಗಾಯಗೊಂಡಿದ್ದಾರೆ ಹಾಗೂ ಸಾವಿರಾರು ನಾಗರಿಕರು ನಿರ್ವಸಿತರಾಗಿದ್ದಾರೆ.

ರಖೈನ್ ರಾಜ್ಯವು ರೊಹಿಂಗ್ಯಾ ಜನಾಂಗೀಯರ ತವರೂ ಆಗಿದೆ. ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಸೇನೆಯು 2017ರಲ್ಲಿ ನಡೆಸಿದ ಅಮಾನುಷ ದಮನ ಕಾರ್ಯಾಚರಣೆಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ ಹಾಗೂ ಲಕ್ಷಾಂತರ ಮಂದಿ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News