ಭಿನ್ನಮತ ದಮನಕ್ಕೆ ಮಸಲತ್ತು

Update: 2020-06-23 05:52 GMT

ಜನತಂತ್ರದಲ್ಲಿ ಭಿನ್ನಾಭಿಪ್ರಾಯ ಎಂಬುದು ಸಹಜ. ಅದರಿಂದಲೇ ಈ ವ್ಯವಸ್ಥೆ ಉಸಿರಾಡುತ್ತದೆ. ಆದರೆ ಇತ್ತೀಚೆಗೆ ಅಂದರೆ ಕಳೆದ ಆರು ವರ್ಷಗಳಿಂದ ಅದರಲ್ಲೂ ವಿಶೇಷವಾಗಿ ಒಂದು ವರ್ಷದಿಂದ ಪ್ರತಿರೋಧದ ಧ್ವನಿಗಳ ಬಗ್ಗೆ ಅಸಹನೆ ಹೆಚ್ಚಾಗುತ್ತಿದೆ. ಇದರಿಂದ ದೇಶದಲ್ಲಿ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಪ್ರತಿ ನಿತ್ಯವೂ ಪೆಟ್ಟು ಬೀಳುತ್ತಲೇ ಇದೆ. ಈ ಸರಕಾರಕ್ಕೆ ಜನ ಹೋರಾಟಗಳ ಬಗ್ಗೆ ಮಾತ್ರವಲ್ಲ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ಬಗ್ಗೆ ಸೇಡಿನ ಮನೋಭಾವ ಎದ್ದು ಕಾಣುತ್ತಿದೆ. ಅದರಲ್ಲೂ ಮಾನವ ಹಕ್ಕುಗಳ ಹೋರಾಟಗಾರರು, ಕವಿಗಳು, ಚಿಂತಕರು, ಬುದ್ಧಿಜೀವಿಗಳನ್ನು ಕಂಡರೆ ಆಗುವುದೇ ಇಲ್ಲ್ಲ. ಮೋದಿ ಸರಕಾರವನ್ನು ತಾತ್ವಿಕ ಕಾರಣಗಳಿಗಾಗಿ ವಿರೋಧಿಸುತ್ತಾ ಬಂದ ಚಿಂತಕ ಯೋಗೇಂದ್ರ ಯಾದವ್ ಮತ್ತಿತರರ ಹೆಸರು ಉಲ್ಲೇಖಿಸಿ ದಿಲ್ಲಿಯ ಪೊಲೀಸರು ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಹೆಸರಾಂತ ಮಾನವ ಹಕ್ಕು ಹೋರಾಟಗಾರ ಹರ್ಷ ಮಂದರ್ ಅವರ ಮೇಲೂ ಇಂತಹದೇ ಆರೋಪ ಹೊರಿಸಲಾಗಿದೆ.

 ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರೂ ಆದ ಯೋಗೇಂದ್ರ ಯಾದವ್ ಮೋದಿ ಸರಕಾರದ ಕರಾಳ ಕಾಯ್ದೆ ಎನ್‌ಆರ್‌ಸಿ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದಿಲ್ಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕೇಂದ್ರ ಸರಕಾರ ಬೆಂಬಲಿತ ದಮನ ಕಾಂಡ ನಡೆದಾಗ ಅದನ್ನು ಪ್ರಬಲವಾಗಿ ವಿರೋಧಿಸಿದ್ದರು. ಈ ಕಾರಣಕ್ಕಾಗಿ ಅವರ ಮೇಲೆ ಕಣ್ಣಿಟ್ಟಿದ್ದ ಸರಕಾರ ಕಳೆದ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಪೊಲೀಸ್ ಪೇದೆ ರತನ್ ಲಾಲ್ ಹತ್ಯೆ ಪ್ರಕರಣದ ಆರೋಪವನ್ನು ಯಾದವ್ ತಲೆಗೆ ಕಟ್ಟಲು ಹೊರಟಿರುವುದು ಸರ್ವಾಧಿಕಾರಿ ನೀತಿಯ ಸಂಕೇತವಾಗಿದೆ. ಈ ಪ್ರಕರಣದಲ್ಲಿ ಕೆಲ ಜೆಎನ್‌ಯು ವಿದ್ಯಾರ್ಥಿಗಳನ್ನು ಸಿಲುಕಿಸಲು ಸರಕಾರ ಹುನ್ನಾರ ನಡೆಸಿರುವುದು ಖಂಡನೀಯವಾಗಿದೆ.

ಈ ರೀತಿ ಭಿನ್ನಾಭಿಪ್ರಾಯವನ್ನು ದಮನ ನೀತಿಯಿಂದ ಹತ್ತಿಕ್ಕಲು ಯತ್ನಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಮಹಾರಾಷ್ಟ್ರದ ಪುಣೆಯ ಪೊಲೀಸರು ಕವಿ ವರವರರಾವ್, ಅಂತರ್‌ರಾಷ್ಟ್ರೀಯ ಖ್ಯಾತಿಯ ಲೇಖಕ ಅಂಬೇಡ್ಕರ್‌ವಾದಿ ಆನಂದ್ ತೇಲ್ತುಂಬ್ಡೆ, ಹಿರಿಯ ಪತ್ರಕರ್ತ, ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಖಾ, ನಾಗಪುರದ ವಕೀಲ ಸುರೇಂದ್ರ ಗಾಡ್ಲಿಂಗ್, ಮಹೇಶ್ ರಾವುತ್, ಅರುಣ್ ಫೆರಿರಾ, ಕಲಾವಿದ ಸುಧೀರ್ ಡವಳೆ, ರೋನಾ ವಿಲ್ಸನ್, ಹೆಸರಾಂತ ನ್ಯಾಯವಾದಿ ಸುಧಾ ಭಾರದ್ವಾಜ್, ನಾಗಪುರ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಶೋಮಾ ಸೇನ್, ಗೊನ್ಸಾಲ್ವಿಸ್ ಸೇರಿದಂತೆ ಹನ್ನೊಂದು ಮಂದಿಯನ್ನು ಮುಂಬೈನ ಸೆರೆಮನೆಗೆ ತಳ್ಳಿದೆ. ಇವರಲ್ಲಿ ವರವರರಾವ್ ವಯಸ್ಸು 81, ಸುಧಾ ಭಾರದ್ವಾಜ್ ವಯಸ್ಸು 64, ಆನಂದ್ ತೇಲ್ತುಂಬ್ಡೆ ವಯಸ್ಸು 65 ಇವರಷ್ಟೇ ಅಲ್ಲದೆ ಇವರ ಜೊತೆಗಿರುವವರೆಲ್ಲ ಅರವತ್ತರ ಆಸುಪಾಸಿನಲ್ಲಿ ಇರುವವರು. ಅಷ್ಟೇ ಅಲ್ಲ, ಇವರ ಆರೋಗ್ಯ ಪರಿಸ್ಥಿತಿಯೂ ಸೂಕ್ಷ್ಮವಾಗಿದೆ. ಬಹುತೇಕ ಬಂಧಿತರು ಮಧುಮೇಹ, ಅಧಿಕ ರಕ್ತದೊತ್ತಡ, ಕ್ಷಯರೋಗ ಮುಂತಾದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವರು ಜಾಮೀನಿಗೆ ಅರ್ಜಿ ಹಾಕುತ್ತಿದ್ದರೂ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಇದಕ್ಕೆ ಅಡ್ಡಗಾಲು ಹಾಕುತ್ತಿರುವುದರಿಂದ ಇವರು ಜೈಲಿನಲ್ಲಿ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಇದು ಅತ್ಯಂತ ಅಮಾನವೀಯ ಕೃತ್ಯವಲ್ಲದೆ ಬೇರೇನೂ ಅಲ್ಲ.

ಇವರಲ್ಲಿ ಆನಂದ್ ತೇಲ್ತುಂಬ್ಡೆ ಹಾಗೂ ಗೌತಮ್ ನವ್ಲಾಖಾ ಅವರನ್ನು ಹೊರತು ಪಡಿಸಿ ಉಳಿದ ಒಂಭತ್ತು ಮಂದಿ ಕಳೆದ ಎರಡು ವರ್ಷಗಳಿಂದ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಇದ್ದಾರೆ. ಇವರನ್ನು ಭೀಮಾ ಕೋರೇಗಾಂವ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿ ಸಿಲುಕಿಸಲಾಗಿದೆ. ಮೊದಲು ಈ ಪ್ರಕರಣದ ತನಿಖೆಯನ್ನು ಪುಣೆಯ ಪೊಲೀಸರು ನಡೆಸುತ್ತಿದ್ದರು, ಆದರೆ 2019ರಲ್ಲಿ ಎರಡನೇ ಬಾರಿ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ಕೇಂದ್ರ ಸರಕಾರ ಪ್ರಕರಣವನ್ನು ಎನ್‌ಐಎಗೆ ವಹಿಸಿತು. ಆಗಿನಿಂದ ಜಾಮೀನು ಮೇಲೆ ಬಿಡುಗಡೆಯನ್ನು ನಿರಾಕರಿಸುತ್ತಾ ಬರಲಾಗಿದೆ.

ಕೊರೋನ ಬಂದ ನಂತರ ಜೈಲುಗಳಲ್ಲಿ ಜನ ದಟ್ಟಣೆಯಾಗದಂತೆ ನೋಡಿಕೊಳ್ಳಬೇಕು, ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ನೇರವಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ನಿಯಂತ್ರಣದಲ್ಲಿ ಇರುವ ರಾಷ್ಟ್ರೀಯ ತನಿಖಾ ದಳ ಕಠಿಣ ನಿಲುವು ತಾಳಿರುವುದರ ಹಿಂದೆ ರಾಜಕೀಯ ಹಸ್ತಕ್ಷೇಪವಿರುವುದು ಎದ್ದು ಕಾಣುತ್ತಿದೆ. ಅದರಲ್ಲೂ ಗೌತಮ್ ನವ್ಲಾಖಾ ಅವರ ಜಾಮೀನು ಅರ್ಜಿ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಯಲ್ಲಿ ಇದ್ದಾಗಲೂ ನವ್ಲಾಖಾ ಅವರನ್ನು ಮುಂಬೈಗೆ ಕರೆತಂದು ಜೈಲಿನ ಬಳಿಯ ಶಾಲೆಯೊಂದರಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಮೂರು ಸ್ನಾನದ ಮನೆಗಳಿರುವ ಶಾಲೆಯಲ್ಲಿ 350 ಜನರೊಂದಿಗೆ ಇರಿಸಲಾಗಿದೆ ಎಂದು ಹೇಳಲಾಗಿದೆ. ಇದು ಅತ್ಯಂತ ಕ್ರೂರ ವರ್ತನೆಯಾಗಿದೆ.

ತುರ್ತು ಪರಿಸ್ಥಿತಿಯಲ್ಲೂ ರಾಜಕೀಯ ವಿರೋಧಿಗಳನ್ನು ಈ ರೀತಿ ನಡೆಸಿಕೊಂಡಿರಲಿಲ್ಲ. ಅವರನ್ನು ರಾಜಕೀಯ ಕೈದಿಗಳನ್ನಾಗಿ ಪರಿಗಣಿಸಿ ಎಲ್ಲ ಸೌಕರ್ಯಗಳನ್ನು ನೀಡಲಾಗಿತ್ತು. ಆದರೆ ಸೇಡಿನ ರಾಜಕೀಯ ಮಾಡಲು ಹೊರಟಿರುವ ಬಿಜೆಪಿ ಸರಕಾರ ಸೈದ್ಧಾಂತಿಕ ವಿರೋಧಿಗಳು ಹಾಗೂ ಲೇಖಕ, ಚಿಂತಕರನ್ನು ಸುಳ್ಳು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸಿ ಚಿತ್ರಹಿಂಸೆ ನೀಡುತ್ತಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ಫ್ಯಾಶಿಸ್ಟ್ ವರ್ತನೆ ಸರಿಯಲ್ಲ. ಜನತೆ ರೊಚ್ಚಿಗೇಳುವ ಮುನ್ನ ಸರಕಾರ ತನ್ನ ಲೋಪವನ್ನು ಸರಿಪಡಿಸಿಕೊಂಡು ಇವರನ್ನೆಲ್ಲಾ ಬಿಡುಗಡೆ ಮಾಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News