ನಮ್ಮ 40 ಸೈನಿಕರು ಸತ್ತಿದ್ದಾರೆ ಎನ್ನುವುದು ಸುಳ್ಳು ಸುದ್ದಿ: ಚೀನಾ

Update: 2020-06-23 17:33 GMT

ಬೀಜಿಂಗ್ (ಚೀನಾ), ಜೂ. 23: ಜೂನ್ 15ರಂದು ಲಡಾಖ್‌ನಲ್ಲಿನ ಗಲ್ವಾನ್ ಕಣಿವೆಯಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ತನ್ನ 40ಕ್ಕಿಂತಲೂ ಅಧಿಕ ಸೈನಿಕರು ಸತ್ತಿದ್ದಾರೆ ಎಂದು ಹೇಳಿರುವ ವರದಿಗಳು ‘ಸುಳ್ಳು ಸುದ್ದಿ’ ಎಂದು ಚೀನಾ ಮಂಗಳವಾರ ಹೇಳಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಈ ಸಂಘರ್ಷಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ ಹಾಗೂ 76 ಮಂದಿ ಗಾಯಗೊಂಡಿದ್ದಾರೆ. ಆದರೆ, ಚೀನಾ ತನ್ನ ಸೈನಿಕರ ಸಾವು-ನೋವುಗಳ ಅಧಿಕೃತ ಅಂಕಿಸಂಖ್ಯೆಗಳನ್ನು ಪ್ರಕಟಿಸಿಲ್ಲ.

ಗಡಿಯಲ್ಲಿ ನೆಲೆಸಿರುವ ಉದ್ವಿಗ್ನತೆಯನ್ನು ಮಾತುಕತೆಗಳ ಮೂಲಕ ನಿವಾರಿಸಲು ಜೂನ್ 22ರಂದು ಭಾರತ ಮತ್ತು ಚೀನಾ ಸೇನೆಗಳ ಉನ್ನತ ನಾಯಕರು ಸಭೆ ಸೇರಿದ್ದಾರೆ ಎಂಬುದಾಗಿ ಚೀನಾದ ವಿದೇಶ ಸಚಿವಾಲಯ ತಿಳಿಸಿದೆ. ‘‘ಉದ್ವಿಗ್ನತೆಯನ್ನು ರಾಜತಾಂತ್ರಿಕ ಮತ್ತು ಸೇನಾ ಮಾರ್ಗಗಳ ಮೂಲಕ ಪರಿಹರಿಸಲು ಚೀನಾ ಮತ್ತು ಭಾರತ ಮಾತುಕತೆಯಲ್ಲಿ ತೊಡಗಿವೆ’’ ಎಂದು ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘‘ಚೀನಾದ ಕಡೆಯಲ್ಲಿ 40 ಮಂದಿ ಮೃತಪಟ್ಟಿದ್ದಾರೆ ಎಂಬುದಾಗಿ ಕೆಲವರು ಹೇಳುವ ಪತ್ರಿಕಾ ವರದಿಗಳನ್ನು ನೀವು ನೋಡಿದ್ದೀರಿ. ಆದರೆ, ಅದು ಖಂಡಿತವಾಗಿಯೂ ಸುಳ್ಳು ಸುದ್ದಿ ಎಂದು ನಾನು ಹೇಳಬಲ್ಲೆ’’ ಎಂದು ಅವರು ಹೇಳಿದರು.

40 ಅಥವಾ ಅದಕ್ಕಿಂತ ಹೆಚ್ಚು ಚೀನೀ ಸೈನಿಕರು ಸತ್ತಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಅವರು ಹೇಳಿದರಾದರೂ, ನಿಜವಾದ ಸಂಖ್ಯೆಯನ್ನು ಅವರು ಹೇಳಲಿಲ್ಲ. ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಎಷ್ಟು ಮಂದಿ ಚೀನೀ ಸೈನಿಕರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ನನ್ನಲ್ಲಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News