ಬಿಳಿಯ ತೊನ್ನು ಕುರಿತು ಮಿಥ್ಯೆಗಳು ಮತ್ತು ಸತ್ಯಗಳು ಇಲ್ಲಿವೆ

Update: 2020-06-23 18:42 GMT

ವಿಟಿಲಿಗೋ ಅಥವಾ ತೊನ್ನು ಒಂದು ಚರ್ಮರೋಗವಾಗಿದ್ದು,ಈ ಸ್ಥಿತಿಯಲ್ಲಿ ಚರ್ಮದ ಮೇಲೆ ಬಿಳಿಯ ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗವು ಶರೀರದ ಒಂದು ಭಾಗದಿಂದ ಆರಂಭಗೊಂಡು ಇಡೀ ಶರೀರಕ್ಕೆ ಹರಡಬಹುದು.

ಲ್ಯುಕೋಡರ್ಮಾ ಅಥವಾ ಬಿಳಿಯ ಕುಷ್ಠರೋಗ ಎಂದೂ ಕರೆಯಲ್ಪಡುವ ತೊನ್ನು ಒಂದು ಸ್ವರಕ್ಷಿತ ರೋಗವಾಗಿದ್ದು,ಇಲ್ಲಿ ಶರೀರದ ನೀರೋಧಕ ವ್ಯವಸ್ಥೆಯು ಮೆಲಾನೊಸೈಟ್‌ಗಳೆಂದು ಕರೆಯಲಾಗುವ ಆರೋಗ್ಯಯುತ ವರ್ಣದ್ರವ್ಯ ಕೋಶಗಳ ಮೇಲೆ ದಾಳಿ ನಡೆಸುತ್ತದೆ. ಚರ್ಮದ ಮೇಲೆ ಬಿಳಿಯ ಕಲೆಗಳು ಈ ರೋಗದ ಲಕ್ಷಣವಾಗಿದ್ದು,ಚರ್ಮದಲ್ಲಿ ಮೆಲಾನೊಸೈಟ್‌ಗಳು ನಾಶಗೊಳ್ಳುವುದರಿಂದ ಈ ಕಲೆಗಳು ಉಂಟಾಗುತ್ತವೆ. ವರ್ಣದ್ರವ್ಯ ಕೋಶಗಳು ನಮ್ಮ ಚರ್ಮಕ್ಕೆ ಬಣ್ಣ ನೀಡುವ ಮೆಲಾನಿನ್ ಅನ್ನು ಉತ್ಪಾದಿಸುತ್ತವೆ. ಮೆಲಾನೊಸೈಟ್‌ಗಳು ಮೃತಪಟ್ಟಾಗ ಬಿಳಿಯ ಕಲೆಗಳು ಕಾಣಿಸಿಕೊಳ್ಳುತ್ತವೆ. ವಿಟಿಲಿಗೋ ಸಾಮಾನ್ಯ ಚರ್ಮ ಸಮಸ್ಯೆಯೆಂದು ಪರಿಗಣಿಸಲಾಗಿದ್ದರೂ ಅದರ ಸುತ್ತ ಕೆಲವು ಮಿಥ್ಯೆಗಳು ಸೃಷ್ಟಿಯಾಗಿವೆ. ಇಂತಹ ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳ ಕುರಿತು ಮಾಹಿತಿಗಳಿಲ್ಲಿವೆ....

*ಬಿಳಿಯ ತೊನ್ನು ಹೊಂದಿರುವ ಜನರಲ್ಲಿ ಮಾನಸಿಕ ಅಥವಾ ದೈಹಿಕ ಕ್ಷಮತೆಯ ಕೊರತೆಯಿರುತ್ತದೆ

-ವಿಟಿಲಿಗೋ ಅಥವಾ ಬಿಳಿಯ ತೊನ್ನು ಸಂಪೂರ್ಣವಾಗಿ ಚರ್ಮಕ್ಕೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಮಾನಸಿಕ ಅಥವಾ ದೈಹಿಕವಿರಲಿ,ಶರೀರದ ಇತರ ಯಾವುದೇ ಭಾಗದ ಮೇಲೆ ಅದು ಪ್ರಭಾವ ಹೊಂದಿರುವುದಿಲ್ಲ ಅಥವಾ ಪರಿಣಾಮವನ್ನುಂಟು ಮಾಡುವುದಿಲ್ಲ.

* ವಿಟಿಲಿಗೋ ಕ್ಯಾನ್ಸರ್, ಅಲ್ಬಿನಿಸಂ(ಇಡೀ ಶರೀರದಲ್ಲಿ ವರ್ಣದ್ರವ್ಯ ಇಲ್ಲದೆ ಬಿಳುಚಾಗಿರುವುದು) ಮತ್ತು ಕುಷ್ಠರೋಗದಂತಹ ದೀರ್ಘಕಾಲಿಕ ಚರ್ಮರೋಗಗಳಿಗೆ ಸಂಬಂಧಿಸಿದೆ

-ಇದು ಚರ್ಮರೋಗವಾಗಿದ್ದರೂ ಇದಕ್ಕೂ ಯಾವುದೇ ಚರ್ಮ ಕ್ಯಾನ್ಸರ್,ಅಲ್ಬಿನಿಸಂ ಅಥವಾ ಕುಷ್ಠರೋಗಕ್ಕೂ ಯಾವುದೇ ಸಂಬಂಧವಿಲ್ಲ. ಬದಲಿಗೆ ಇದು ಸ್ವರಕ್ಷಿತ ರೋಗವಾಗಿದ್ದು ಶರೀರದ ರೋಗ ನಿರೋಧಕ ವ್ಯವಸ್ಥೆಯು ಮೆಲಾನಿನ್ ಅನ್ನು ಉತ್ಪಾದಿಸುವ ಕೋಶಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಕೊಲ್ಲುವುದರಿಂದ ಉಂಟಾಗುತ್ತದೆ. ಕೆಲವೊಮ್ಮೆ ವಿಟಿಲಿಗೋ ಹೈಪೊಥೈರಾಯ್ಡಿಸಂ,ಅಲೊಪೇಸಿಯಾ ಎರಿಯೇಟಾ (ಕೂದಲುದುರುವ ಕಾಯಿಲೆ)ದಂತಹ ನಿರೋಧಕತೆ ಸಂಬಂಧಿ ಆರೋಗ್ಯ ಸ್ಥಿತಿಗಳೊಂದಿಗೆ ಗುರುತಿಸಿಕೊಂಡಿರಬಹುದು.

* ಕೆಲವು ಆಹಾರಗಳ ಸಂಯೋಜಿತ ಸೇವನೆಯು ವಿಟಿಲಿಗೋವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ

-ಇದೊಂದು ಅಪ್ಪಟ ಸುಳ್ಳು ಹೇಳಿಕೆಯಾಗಿದೆ. ಆಹಾರಕ್ಕೂ ವಿಟಿಲಿಗೋಕ್ಕೂ ಯಾವುದೇ ಸಂಬಂಧವಿಲ್ಲ. ಯಾವುದೇ ಆಹಾರವನ್ನು ಸೇವಿಸಿದರೂ ಅದು ವಿಟಿಲಿಗೋದ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ.

* ಬಿಳಿಯ ತೊನ್ನು ಮುಖ ಮತ್ತು ಕೈಗಳಲ್ಲಿ ಮಾತ್ರ ಉಂಟಾಗುತ್ತದೆ

-ವಿಟಿಲಿಗೋದ ಬಿಳಿಯ ಕಲೆಗಳು ಹೆಚ್ಚು ಸಾಮಾನ್ಯವಾಗಿ ಬಿಸಿಲಿಗೆ ಒಡ್ಡಲ್ಪಡುವ ಕೈಗಳು,ಪಾದಗಳು,ತೋಳುಗಳು,ತುಟಿಗಳು ಮತ್ತು ಮುಖದಂತಹ ಜಾಗಗಳಲ್ಲಿ ಉಂಟಾಗುತ್ತವೆ. ಕೆಲವು ಪ್ರಕರಣಗಳಲ್ಲಿ ಕಲೆಗಳು ಕಂಕುಳು,ಕಣ್ಣು,ಜನನಾಂಗ,ಹೊಕ್ಕುಳು ಮತ್ತು ಗುದದ ಭಾಗಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಇದೇ ರೀತಿ ಲೋಳೆಯ ಪೊರೆ ಮತ್ತು ಅಕ್ಷಿಪಟಲ ಜಾಗದಲ್ಲಿಯೂ ಕಾಣಿಸಿಕೊಳ್ಳಬಹುದು.

* ಕಪ್ಪು ಮೈಬಣ್ಣ ಹೊಂದಿದವರು ಮಾತ್ರ ವಿಟಿಲಿಗೋಕ್ಕೆ ಗುರಿಯಾಗುತ್ತಾರೆ

-ವಿಟಿಲಿಗೋ ತನ್ನ ದಾಳಿಯಲ್ಲಿ ವರ್ಣಭೇದವನ್ನು ಮಾಡುವುದಿಲ್ಲ. ಅದು ಎಲ್ಲ ಬಣ್ಣಗಳ ಚರ್ಮಗಳನ್ನೂ ಕಾಡುತ್ತದೆ. ಆದರೆ ವಿಟಿಲಿಗೋದ ಕಲೆಗಳು ಕಪ್ಪು ಬಣ್ಣದವರಲ್ಲಿ ಹೆಚ್ಚು ಎದ್ದು ಕಾಣುತ್ತವೆ.

* ಪೀಡಿತ ಚರ್ಮದ ಭಾಗದಲ್ಲಿ ವಿವಿಧ ತೈಲಗಳನ್ನು ತಿಕ್ಕುವುದರಿಂದ,ಕೆಲವು ಪೂರಕಗಳನ್ನು ಸೇವಿಸುವುದರಿಂದ ವಿಟಿಲಿಗೋವನ್ನು ಗುಣಪಡಿಸಲು ಸಾಧ್ಯವಿದೆ

-ದುರದೃಷ್ಟವಶಾತ್ ಈವರೆಗೂ ವಿಟಿಲಿಗೋಕ್ಕೆ ಚಿಕಿತ್ಸೆಯನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ,ಅದಕ್ಕೆ ಯಾವುದೇ ನೈಸರ್ಗಿಕ ಚಿಕಿತ್ಸೆಯೂ ಇಲ್ಲ. ಆದರೂ ಯುವಿ ಲೈಟ್ ಥೆರಪಿ,ಚರ್ಮ ಮತ್ತು ಕೋಶ ಕಸಿ ಶಸ್ತ್ರಚಿಕಿತ್ಸೆ,ಟ್ಯಾಟೂ,ಸ್ಟಿರಾಯ್ಡಿಗಳು ಮತ್ತು ಔಷಧಿಗಳಂತಹ ವಿಟಿಲಿಗೋ ರೋಗಿಗಳು ಪ್ರಯತ್ನ್ನಿಸಬಹುದಾದ ಕೆಲವು ಚಿಕಿತ್ಸೆಗಳಿವೆ. ಕೆಲವರು ವಿಶೇಷ ಪ್ರಸಾದನಗಳನ್ನು ಬಳಸಿ ಕಲೆಗಳನ್ನು ಮರೆಮಾಚುತ್ತಾರೆ.

* ವಿಟಿಲಿಗೋ ಸಾಂಕ್ರಾಮಿಕವಾಗಿದೆ ಮತ್ತು ಸೋಂಕುಕಾರಕವಾಗಿದೆ

- ವಿಟಿಲಿಗೋ ಸಾಂಕ್ರಾಮಿಕವೂ ಅಲ್ಲ,ಸೋಂಕುಕಾರಕವೂ ಅಲ್ಲ. ಹೀಗಾಗಿ ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ದೂರವಿಡುವ ಅಥವಾ ಅವರ ಸಂಪರ್ಕದಿಂದ ನುಣುಚಿಕೊಳ್ಳುವ ಅಗತ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News