"ಭಾರತದ ಅರ್ಧದಷ್ಟು ಜನಸಂಖ್ಯೆ ಕೋವಿಡ್-19 ಸೋಂಕಿಗೆ ತುತ್ತಾಗುವ ಸಾಧ್ಯತೆ"

Update: 2020-06-24 12:46 GMT
ಡಾ.ಜಯಪ್ರಕಾಶ್ ಮುಳಿಯಿಲ್

ಅಂತಿಮವಾಗಿ ದೇಶದಷ್ಟು ಶೇ.50 ರಷ್ಟು (67 ಕೋಟಿ) ಜನರು ಕೋವಿಡ್-19 ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಹೇಳಿರುವ ಭಾರತದ ಸಾಂಕ್ರಾಮಿಕ ರೋಗಗಳ ಹಿರಿಯ ತಜ್ಞ ಡಾ.ಜಯಪ್ರಕಾಶ್ ಮುಳಿಯಿಲ್ ಅವರು, ಈ ಬಗ್ಗೆ ಚಿಂತಿಸಬೇಕಿಲ್ಲ, ಏಕೆಂದರೆ ಇದು ನಿರೀಕ್ಷಿತವೇ ಆಗಿದೆ. ವೈರಸ್ ಎಷ್ಟು ಬೇಗ ಹರಡಿ ತನ್ನ ಗರಿಷ್ಠ ಮಿತಿಯನ್ನು ತಲುಪುತ್ತದೆಯೋ ಅಷ್ಟು ಒಳ್ಳೆಯದು,ಏಕೆಂದರೆ ಆಗ ಮಾತ್ರ ದೇಶವು ಕೋವಿಡ್-19ಕ್ಕೆ ಬೆನ್ನು ತಿರುಗಿಸಲು ಸಾಧ್ಯ ಎಂದಿದ್ದಾರೆ. ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು ಹಾಗೂ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಮುಳಿಯಿಲ್ ಸುದ್ದಿ ಜಾಲತಾಣ ‘thewire.in’ಗಾಗಿ ಕರಣ್ ಥಾಪರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಗಸ್ಟ್ ವೇಳೆಗೆ ಭಾರತದಲ್ಲಿ ಪ್ರತಿದಿನ ಎರಡು ಲಕ್ಷ ಹೊಸ ಕೊರೋನ ವೈರಸ್ ಪ್ರಕರಣಗಳು ದಾಖಲಾಗಲಿವೆ ಎಂಬ ಹಾರ್ವರ್ಡ್ ವಿವಿಯ ಪ್ರೊ.ಆಶಿಷ್ ಝಾ ಅವರ ಭವಿಷ್ಯಕ್ಕೆ ತನ್ನ ಸಹಮತವಿದೆ ಎಂದು ಹೇಳಿದ ಮುಳಿಯಲ್,ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 20 ಕೋಟಿಗೇರಲಿದೆ ಎಂದು ವಾಷಿಂಗ್ಟನ್‌ನ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್‌ನ ನಿರ್ದೇಶಕ ರಮಣನ್ ಲಕ್ಷ್ಮೀನಾರಾಯಣ ಅವರು ಹೇಳಿರುವುದನ್ನೂ ಒಪ್ಪಿಕೊಂಡರು. ಝಾ ಮತ್ತು ಲಕ್ಷ್ಮೀನಾರಾಯಣ ‘thewire.in’ಗೆ ನೀಡಿದ್ದ ಸಂದರ್ಶನಗಳಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

ಇವು ಬೃಹತ್ ಸಂಖ್ಯೆಗಳಾಗಿ ಕಂಡು ಬರಬಹುದು,ಆದರೆ ಭಾರತದ ಅಗಾಧ ಜನಸಂಖ್ಯೆ (138 ಕೋಟಿ)ಯನ್ನು ಪರಿಗಣಿಸಿದರೆ ಇವು ಪ್ರಮಾಣಾತ್ಮಕವಾಗಿ ಅಷ್ಟೊಂದು ಭಾರೀ ಸಂಖ್ಯೆಗಳಲ್ಲ ಎಂದು ಮುಳಿಯಿಲ್ ವಿವರಿಸಿದರು.

ಈಗಾಗಲೇ ಭಾರತದಲ್ಲಿ 4.40 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಮತ್ತು ಪ್ರತಿದಿನ ಸುಮಾರು 15,000 ಹೊಸ ಪ್ರಕರಣಗಳು ವರದಿಯಾಗುತ್ತಿವೆ,ಈ ಹಿನ್ನೆಲೆಯಲ್ಲಿ ದೇಶವು ಕೋವಿಡ್-19 ವಿರುದ್ಧದ ಹೋರಾಟವನ್ನು ಕೈ ಚೆಲ್ಲುತ್ತಿದೆ ಎಂದು ನಿಮಗೆ ಅನ್ನಿಸುತ್ತಿದೆಯೇ ಎಂಬ ಪ್ರಶ್ನೆಗೆ ಮುಳಿಯಿಲ್,ವೈರಸ್ ಒಮ್ಮೆ ದಾಳಿಯಿಟ್ಟರೆ ಅದು ತನ್ನದೇ ಆದ ಗುರಿಯನ್ನು ಹೊಂದಿರುತ್ತದೆ ಮತ್ತು ಅದು ಆ ದಾರಿಯಲ್ಲಿ ಸಾಗುತ್ತಿದೆ. ಗೆದ್ದವರು ಮತ್ತು ಸೋತವರ ಲೆಕ್ಕದಲ್ಲಿ ಅದರ ಪ್ರಗತಿಯನ್ನು ನಿರ್ಧರಿಸುವುದಕ್ಕೆ ಯಾವುದೇ ಅರ್ಥವಿಲ್ಲ. ಭಾರತವು ಮೊದಲು ವೈರಸ್ ಅನ್ನು ತಡೆಯಲು ಮತ್ತು ನಂತರ ಅದನ್ನು ನಿರ್ಮೂಲಿಸಲು ಪ್ರಯತ್ನಿಸಿತ್ತು. ಆದರೆ ಇವೆರಡೂ ಕನಸುಗಳು ನುಚ್ಚುನೂರಾಗಿವೆ. ಕೆಲವೇ ಸಣ್ಣ ದೇಶಗಳಲ್ಲಿ ಇವನ್ನು ಸಾಧಿಸಲಾಗಿದೆ. ದೊಡ್ಡ ದೇಶಗಳು ಕೊರೋನ ವೈರಸ್ ಜೊತೆಗೇ ಬದುಕುವುದನ್ನು ಕಲಿಯಬೇಕಿದೆ ಮತ್ತು ಇದೇ ವೇಳೆ ಸಾಧ್ಯವಾದಷ್ಟು ಶೀಘ್ರ ಈ ವೈರಸ್‌ಗೆ ಗುಂಪು ನಿರೋಧಕತೆಯನ್ನು ಬೆಳೆಸಬೇಕಿದೆ ಎಂದು ಉತ್ತರಿಸಿದರು.

ದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ಗುಂಪು ನಿರೋಧಕತೆ ಕಂಡು ಬರುತ್ತಿದೆ ಎಂದು ಹೇಳಿದ ಮುಳಿಯಲ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಕಂಟೈನ್ಮೆಂಟ್ ಝೋನ್‌ಗಳು ಅಥವಾ ಹಾಟ್‌ಸ್ಪಾಟ್‌ಗಳಲ್ಲಿ ನಡೆಸಿರುವ ಸೆರಾಲಾಜಿಕಲ್ ಸರ್ವೆ (ರಕ್ತದಲ್ಲಿಯ ಸೀರಮ್‌ನ ಸಮೀಕ್ಷೆ)ಯ ವಿವರಗಳು ತನಗೆ ಗೊತ್ತಿವೆ ಮತ್ತು ಸೋರಿಕೆಯಾಗಿರುವ ಸರ್ವೆ ವರದಿಯಲ್ಲಿನ ಅಂಶಗಳು ಶೇ.30ರಷ್ಟು ಜನಸಂಖ್ಯೆ ವೈರಸ್‌ಗೆ ತೆರೆದುಕೊಂಡಿರಬಹುದು ಎನ್ನುವುದನ್ನು ಸೂಚಿಸುತ್ತಿವೆ ಎಂದರು. ಈ ಅಧ್ಯಯನದ ಬಗ್ಗೆ ತನಗೆ ಗೊತ್ತು,ಅದನ್ನು ನಿಖರವಾಗಿ ನಡೆಸಲಾಗಿದೆ ಎಂದರು.

ದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ಗುಂಪು ನಿರೋಧಕತೆ ಕಂಡು ಬರುತ್ತಿದೆ ಎಂಬ ನಿಮ್ಮ ಅಭಿಪ್ರಾಯಕ್ಕೆ ಇದು ಆಧಾರವಾಗಿದಯೇ ಎಂಬ ಪ್ರಶ್ನೆಗೆ ಮುಳಿಯಿಲ್,ಹೌದು ಎಂದು ಉತ್ತರಿಸಿದರು.

ಕಂಟೈನ್ಮೆಂಟ್ ಝೋನ್‌ಗಳಲ್ಲಿ ನಡೆಸಲಾದ ಈ ಸೆರಾಲಾಜಿಕಲ್ ಅಧ್ಯಯನದ ವಿವರಗಳನ್ನು ಸರಕಾರವೇಕೆ ತಡೆಹಿಡಿದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮುಳಿಯಿಲ್,ವರದಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಅದು ಅಂಕಿಅಂಶಗಳನ್ನು ಪರಿಶೀಲಿಸುತ್ತಿದೆ ಎಂದು ತಾನು ಭಾವಿಸಿದ್ದೇನೆ,ಆದರೆ ಇದೇ ವೇಳೆ ಶೇ.30ರಷ್ಟು ಸೋಂಕನ್ನು ಜನರು ಮತ್ತು ಮಾಧ್ಯಮಗಳು ಕೆಟ್ಟ ಸುದ್ದಿ ಎಂದು ವ್ಯಾಖ್ಯಾನಿಸಬಹುದು ಎಂಬ ಆತಂಕದಿಂದ ಸರಕಾರವು ಈ ವರದಿಯನ್ನು ತಡೆಹಿಡಿದಿರಬಹುದು ಎಂಬ ಕಳವಳವೂ ತನ್ನನ್ನು ಕಾಡುತ್ತಿದೆ ಎಂದರು. ಗುಂಪು ನಿರೋಧಕತೆ ಮಾತ್ರ ರೋಗವನ್ನು ನಿಯಂತ್ರಿಸಲು ಸಾಧ್ಯ ಮತ್ತು ಇದನ್ನು ಸಾಧಿಸುವಲ್ಲಿ ಇದೊಂದು ನಿರ್ಣಾಯಕ ಹೆಜ್ಜೆಯಾಗಿದೆ ಎಂದೂ ಅವರು ಹೇಳಿದರು.

ಭಾರತವು ಗುಂಪು ನಿರೋಧಕತೆಯನ್ನು ನಿರ್ಮಿಸುವ ಮತ್ತು ತನ್ನ ಜನಸಂಖ್ಯೆಯ ಶೇ.90ರಷ್ಟು ಜನರು 60 ವರ್ಷಕ್ಕಿಂತ ಕಡಿಮೆ ವಯೋಮಾನದವರು ಎಂಬ ಪ್ರಮುಖ ಅಂಶವನ್ನು ನೆಚ್ಚಿಕೊಳ್ಳುವ ಮೂಲಕ ವೈರಸ್‌ಗೆ ಪ್ರತಿಕ್ರಿಯಿಸಬೇಕು ಎಂಬ ಮುಳಿಯಿಲ್ ಅವರ ಸಲಹೆಯ ಕುರಿತು ‘thewire.in’ ಎರಡು ಕಳವಳಗಳನ್ನು ವ್ಯಕ್ತಪಡಿಸಿತ್ತು. ಮೊದಲನೆಯದಾಗಿ ಆರೋಗ್ಯ ಚಿವಾಲಯವು ಮೇ 20ರಂದು ಬಿಡುಗಡೆಗೊಳಿಸಿದ್ದ,ಕೋವಿಡ್-19ರಿಂದ ಮೃತಪಟ್ಟವರಲ್ಲಿ ಶೇ.48.8ರಷ್ಟು ಜನರು 60 ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದಾರೆ ಎನ್ನುವುನ್ನು ತೋರಿಸಿರುವ ಅಂಕಿಅಂಶಗಳಿಗೆ ನಿಮ್ಮ ಪ್ರತಿಕ್ರಿಯೆಯೇನು ? ಯುರೋಪ್‌ನಲ್ಲಿ ಶೇ.5ರಷ್ಟು ಮೃತರು ಮಾತ್ರ ಈ ವಯೋಗುಂಪಿಗೆ ಸೇರಿದ್ದಾರೆ. ಭಾರತದ ಯುವ ಸಮುದಾಯವು ದೇಶಕ್ಕಾಗಿ ಗುಂಪು ನಿರೋಧಕತೆಯನ್ನು ಸೃಷ್ಟಿಸುತ್ತದೆ ಎಂಬ ನಿಮ್ಮ ನಂಬಿಕೆ ತಪ್ಪು ಗ್ರಹಿಕೆಯಲ್ಲವೇ ಎಂದು ‘thewire.in’ ಪ್ರಶ್ನಿಸಿತ್ತು.

ತಮ್ಮನ್ನು ಕ್ವಾರಂಟೈನ್‌ಗೆ ಒಳಪಡಿಸಬಹುದು ಅಥವಾ ರೋಗದ ಕಳಂಕ ಮೆತ್ತಿಕೊಳ್ಳಬಹುದು ಅಥವಾ ತಮ್ಮನ್ನು ಆಸ್ಪತ್ರೆಯಲ್ಲಿ ಹೇಗೆ ನಡೆಸಿಕೊಳ್ಳುತ್ತಾರೋ ಎಂಬ ಭೀತಿಯಿಂದ 60ಕ್ಕಿಂತ ಹೆಚ್ಚಿನ ವಯೋಮಾನದ ಜನರು ಅನಾರೋಗ್ಯಕ್ಕೆ ಗುರಿಯಾದಾಗ ಆಸ್ಪತ್ರೆಗಳಿಗೆ ಹೋಗಿಯೇ ಇಲ್ಲ,ಹೀಗಾಗಿ ಈ ವಯೋಮಾನದ ಬಹಳಷ್ಟು ಜನರ ಸಾವುಗಳು ಕೋವಿಡ್-19 ಸಾವುಗಳು ಎಂದು ದಾಖಲಾಗಿಲ್ಲ. ಆದ್ದರಿಂದ ಈ ಅಂಕಿಸಂಖ್ಯೆಗಳು ನಂಬಲರ್ಹವಲ್ಲ. 60ಕ್ಕೂ ಹೆಚ್ಚಿನ ವಯೋಮಾನದವರಲ್ಲಿ ಕೋವಿಡ್-19 ನಿಂದ ಸಂಭವಿಸಿದ ಸಾವುಗಳ ನಿಜವಾದ ಸಂಖ್ಯೆ ಗೊತ್ತಾದರೆ 60ಕ್ಕಿಂತ ಕಡಿಮೆ ವಯೋಮಾನದ ಗುಂಪಿನವರ ಸಾವುಗಳ ಶೇಕಡಾವಾರು ಪ್ರಮಾಣ ನಾಟಕೀಯವಾಗಿ ಕುಸಿಯುತ್ತದೆ ಎಂದು ಮುಳಿಯಿಲ್ ಉತ್ತರಿಸಿದರು.

ಭಾರತದಲ್ಲಿ ಸಾಮಾನ್ಯವಾಗಿ ಕುಟುಂಬದ ಮೂರು ತಲೆಮಾರುಗಳು ಒಂದೇ ಮನೆಯಲ್ಲಿ ವಾಸವಾಗಿರುತ್ತವೆ ಮತ್ತು ವಯಸ್ಸಾದವರನ್ನು ಯುವಜನರಿಂದ ಪ್ರತ್ಯೇಕಿಸುವುದು ಅಸಾಧ್ಯವಾಗುತ್ತದೆ. ಈ ಅಂಶವು ಹಿರಿಯರನ್ನು ರಕ್ಷಿಸುವ ಜೊತೆಗೆ ಯುವ ಸಮುದಾಯವನ್ನು ಗುಂಪು ನಿರೋಧಕತೆಯನ್ನು ಬೆಳೆಸಲು ಬಳಸುವ ನಿಮ್ಮ ಕಾರ್ಯತಂತ್ರಕ್ಕೆ ಹಿನ್ನಡೆಯನ್ನುಂಟು ಮಾಡುವುದಿಲ್ಲವೇ? ಅಲ್ಲದೆ ಇಂತಹ ಹಲವಾರು ಕುಟುಂಬಗಳು ಸಣ್ಣ ಮನೆಗಳಲ್ಲಿ ವಾಸವಾಗಿರುತ್ತವೆಎಂಬ ‘thewire.in’‌ನ ಶಂಕೆಗೆ ಪ್ರತಿಕ್ರಿಯಿಸಿದ ಮುಳಿಯಿಲ್,ಎಲ್ಲ ವಯಸ್ಸಾದ ವ್ಯಕ್ತಿಗಳನ್ನು ರಕ್ಷಿಸಲು ಸಾಧ್ಯವಿಲ್ಲ ಮತ್ತು ಇದು ಕಟುಸತ್ಯವಾಗಿದೆ ಎಂದು ಒಪ್ಪಿಕೊಂಡರು. ಆದರೆ ಪ್ರಯತ್ನಿಸಿದರೆ ಅವರ ಪೈಕಿ ಅರ್ಧದಷ್ಟು ಜನರನ್ನು ರಕ್ಷಿಸಬಹುದು. ಎಲ್ಲಕ್ಕಿಂತ ಹೆಚ್ಚು ಮುಖ್ಯವೆಂದರೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ನಾವು ಹಿರಿಯರಿಗೆ ಕಲಿಸಬೇಕು,ಎಲ್ಲ ಸಮಯದಲ್ಲಿಯೂ ಮಾಸ್ಕ್ ಧರಿಸುವುದು ಇದಕ್ಕೆ ಒಂದು ಮಾರ್ಗವಾಗಿದೆ ಎಂದರು.

ಕೋವಿಡ್-19 ಪ್ರಾಥಮಿಕವಾಗಿ ನಗರ ಪ್ರದೇಶದ ಕಾಯಿಲೆಯಾಗಿದೆ ಮತ್ತು ದೇಶದ ದೊಡ್ಡ ನಗರಗಳಲ್ಲಿ ಅದು ಭೀತಿಯನ್ನು ಹುಟ್ಟಿಸುವಂತೆ ಕಂಡು ಬರುತ್ತದೆ. ತಮ್ಮ ಊರುಗಳಿಗೆ ಮರಳಿರುವ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮಾಂದಿಗೆ ಕೊರೋನ ವೈರಸ್ ಸೋಂಕನ್ನೂ ಗ್ರಾಮೀಣ ಭಾರತಕ್ಕೆ ಒಯ್ದಿರುವುರಾದರೂ ಹೆಚ್ಚಿನ ಸೋಂಕಿತರು ಲಕ್ಷಣರಹಿತರಾಗಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಸೋಂಕಿನ ಹರಡುವಿಕೆ ಗಮನಕ್ಕೆ ಬರುವುದಿಲ್ಲ ಎಂದ ಅವರು,ಹೆಚ್ಚಿನ ಕೋವಿಡ್-19 ಸಾವುಗಳು ವರದಿಯಾಗುವುದಿಲ್ಲ ಮತ್ತು ಅವುಗಳನ್ನು ಪತ್ತೆ ಹಚ್ಚಲೂ ನಮಗೆ ಸಾಧ್ಯವಾಗದಿರಬಹುದು ಎನ್ನುವುದನ್ನು ಒಪ್ಪಿಕೊಂಡರು.

ಕೊರೋನ ವೈರಸ್ ಸೋಂಕು ರಾಷ್ಟ್ರವ್ಯಾಪಿಯಾಗಿ ಒಂದೇ ಉತ್ತುಂಗ ಸ್ಥಿತಿ ಹೊಂದಿರುವುದಿಲ್ಲ. ಪ್ರತಿ ಬಡಾವಣೆ ಅಥವಾ ಪ್ರದೇಶ ತನ್ನದೇ ಆದ ಉತ್ತುಂಗತೆಯನ್ನು ಹೊಂದಿರಲಿದೆ ಎಂದ ಅವರು,ಚೆನ್ನೈ ಆಗಸ್ಟ್ ವೇಳೆಗೆ ಪರಾಕಾಷ್ಠತೆಗೆ ತಲುಪಲಿದೆ ಮತ್ತು ಅದಕ್ಕಿಂತ ಮುನ್ನ ದಿಲ್ಲಿ ಪರಾಕಾಷ್ಠತೆಯನ್ನು ದಾಖಲಿಸಲಿದೆ. ಆದರೆ ದಿಲ್ಲಿಯಲ್ಲಿ ಈ ರೋಗವನ್ನು ಸಾಕಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ ಎಂದರು.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತವು ಕೈಗೊಂಡ ಕ್ರಮಗಳು ಸಾವಿನ ದರವನ್ನು ತಗ್ಗಿಸಿವೆ. ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸುವುದು ಮತ್ತು ಸಾವಿನ ದರವನ್ನು ಇನ್ನಷ್ಟು ತಗ್ಗಿಸುವುದು ಈಗಿನ ಅಗತ್ಯ ಮತ್ತು ಸವಾಲು ಆಗಿದೆ ಎಂದು ಹೇಳಿದ ಮುಳಿಯಿಲ್,ಕೊರೋನ ವೈರಸ್ ಪರೀಕ್ಷೆಗಳ ಹಿಂದಿನ ಕಾರ್ಯತಂತ್ರದ ಬಗ್ಗೆ ಮರುಚಿಂತನೆ ನಡೆಸಬೇಕಿದೆ. ದೇಶಾದ್ಯಂತ ವೈರಸ್‌ನ್ನು ನಿಯಂತ್ರಿಸುವ ಪ್ರಯತ್ನದ ಬಗ್ಗೆ ತನಗೆ ಸಂಶಯವಿದೆ.ವೈರಸ್ ದೇಶಾದ್ಯಂತ ಹರಡಿರುವುದರಿಂದ ನಿಯಂತ್ರಣದ ಹಂತ ಈಗ ಮುಗಿದುಹೋಗಿದೆ. ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸದಂತೆ,ಆದರೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿರುವವರನ್ನು ಗುರುತಿಸಲು ಪರೀಕ್ಷಾ ವಿಧಾನವನ್ನು ರೂಪಿಸಬೇಕು ಎಂದರು.

ಭಾರತದಲ್ಲಿಯ ವೈರಸ್ ಅಷ್ಟೊಂದು ಮಾರಕವಲ್ಲ ಎಂಬ ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯನ್ನು ತಳ್ಳಿಹಾಕಿದ ಮುಳಿಯಿಲ್,ಇರುವುದು ಒಂದೇ ವೈರಸ್ ಮತ್ತು ಮಾನವ ಜೀವಿ ಒಂದೇ ವರ್ಗದ್ದಾಗಿದೆ. ವಿಶ್ವದ ವಿವಿಧ ಭಾಗಗಳಲ್ಲಿ ಸಾವುಗಳು ವಿಭಿನ್ನವಾಗಿ ವರದಿಯಾಗುತ್ತವೆ ಎನ್ನುವುದು ಒಂದೇ ವ್ಯತ್ಯಾಸವಾಗಿದೆ ಎಂದರು.

ಸೆಪ್ಟೆಂಬರ್ ವೇಳೆಗೆ ಸಂಭಾವ್ಯ 20 ಕೋ.ಸೋಂಕು ಪ್ರಕರಣಗಳನ್ನು ನಿರ್ವಹಿಸುವಲ್ಲಿ ಭಾರತೀಯ ಆರೊಗ್ಯ ರಕ್ಷಣೆ ವ್ಯವಸ್ಥೆಯ ಸಾಮರ್ಥ್ಯ ಕುರಿತಂತೆ ಮುಳಿಯಿಲ್,ವೆಂಟಿಲೇಟರ್ ಅಗತ್ಯವಿರುವ ರೋಗಿಗಳನ್ನು ನಿಭಾಯಿಸಲು ನಮ್ಮ ಆರೋಗ್ಯ ರಕ್ಷಣೆ ವ್ಯವಸ್ಥೆಗೆ ಸಾಧ್ಯವಿಲ್ಲ. ಅದಕ್ಕೆ ವಿಶೇಷಜ್ಞರ ಅಗತ್ಯವಿದೆ. ಆದರೆ ನರ್ಸಿಂಗ್ ಕೇರ್ ಮತ್ತು ಆಕ್ಸಿಜನ್ ಪೂರೈಕೆಯಿಂದ ಚೇತರಿಸಿಕೊಳ್ಳಬಲ್ಲ ರೋಗಿಗಳನ್ನು ನಿಭಾಯಿಸುವುದು ನಮ್ಮ ಆರೋಗ್ಯ ರಕ್ಷಣೆ ವ್ಯವಸ್ಥೆಗೆ ಸಾಧ್ಯವಾಗಬೇಕು ಎಂದರು.

2 ಮತ್ತು 3ನೇ ಸ್ತರಗಳ ಪಟ್ಟಣಗಳಲ್ಲಿ ಅಥವಾ ಜಿಲ್ಲಾಸ್ಪತ್ರೆಗಳಲ್ಲಿ ಟೆಲಿಮೆಡಿಸಿನ್ ಸೌಲಭ್ಯಗಳನ್ನು ಒದಗಿಸುವ ಸರಕಾರದ ಪ್ರಸ್ತಾವವನ್ನು ಸಾರಾಸಗಟಾಗಿ ತಳ್ಳಿಹಾಕಿದ ಮುಳಿಯಲ್,‘ನಾನೇನಾದರೂ ಕೋವಿಡ್-19ಗೆ ತುತ್ತಾದರೆ ನನ್ನನ್ನು ಇಂತಹ ಐಸಿಯುಗೆ ಸೇರಿಸುವುದು ನನಗೆ ಇಷ್ಟವಿಲ್ಲ,ಅವು ಭೀತಿಯನ್ನುಂಟು ಮಾಡುವಂತಿರುತ್ತವೆ ’ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News