ಆನ್‌ಲೈನ್ ತರಗತಿಗಳಿಗೆ ಹ್ಯಾಕರ್‌ ಗಳ ಕಾಟ

Update: 2020-06-25 16:27 GMT

ಹೊಸದಿಲ್ಲಿ, ಜೂ.25: ಕೊರೋನ ಸೋಂಕು ಹಾಗೂ ಬಳಿಕ ಲಾಕ್‌ ಡೌನ್ ಜಾರಿಯಾದ ಕಾರಣದಿಂದ ಶಾಲೆ ಮತ್ತು ಕಾಲೇಜುಗಳು ಆನ್‌ ಲೈನ್ ಮೂಲಕ ತರಗತಿ ನಡೆಸುತ್ತಿರುವಂತೆಯೇ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹ್ಯಾಕರ್‌ ಗಳಿಂದ ಅಡ್ಡಿಯಾಗುತ್ತಿರುವ ಬಗ್ಗೆ ವರದಿಯಾಗಿದೆ.

ಆನ್‌ಲೈನ್ ತರಗತಿಯೊಳಗೆ ನುಸುಳುವ ಹ್ಯಾಕರ್‌ಗಳು ಸ್ಕ್ರೀನ್ ಮೇಲೆ ಅಶ್ಲೀಲ ಪದ ಬಳಸಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರ ತರುತ್ತಿದ್ದಾರೆ . ಕೋಲ್ಕತಾದ ಪ್ರತಿಷ್ಟಿತ ಶಾಲೆಯೊಂದು ನಡೆಸುತ್ತಿದ್ದ ಆನ್‌ಲೈನ್ ತರಗತಿಯಲ್ಲಿ ಹಲವು ಬಾರಿ ಇಂತಹ ಘಟನೆ ನಡೆದಿದೆ. ಶಿಕ್ಷಕರು ಪಾಠ ನಡೆಸುತ್ತಿದ್ದಂತೆಯೇ ಸ್ಕ್ರೀನ್ ಮೇಲೆ ಅಶ್ಲೀಲ ವೀಡಿಯೊ ಪ್ರದರ್ಶಿಸಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಲಾಗಿದೆ . ಇದರಿಂದ ಆನ್‌ಲೈನ್ ತರಗತಿಯನ್ನು ರದ್ದುಗೊಳಿಸಿದ್ದಾರೆ ಎಂದು ವಿದ್ಯಾರ್ಥಿಯ ಹೆತ್ತವರೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಕೋಲ್ಕತಾದ ಹಲವು ಶಾಲೆಗಳಲ್ಲಿ ಇಂತಹ ಘಟನೆ ಮರುಕಳಿಸಿರುವ ಹಿನ್ನೆಲೆಯಲ್ಲಿ ತರಗತಿ ಸಂದರ್ಭ ಅಥವಾ ಮೀಟಿಂಗ್ ನಡೆಯುತ್ತಿದ್ದಾಗ ಝೂಮ್ ಆ್ಯಪ್ ಬಳಸದಂತೆ ಖಾಸಗಿ ಶಾಲೆಗಳು ಶಿಕ್ಷಕರಿಗೆ ಸಲಹೆ ನೀಡಿವೆ. ಗುಜರಾತ್‌ನಲ್ಲಿ ಎಪ್ರಿಲ್‌ನಲ್ಲಿ ನಡೆದ ಘಟನೆಯೊಂದರಲ್ಲಿ ಆನ್‌ಲೈನ್ ತರಗತಿಯೊಳಗೆ ನುಗ್ಗಿದ ಹ್ಯಾಕರ್ ಒಬ್ಬ, ಅಶ್ಲೀಲವಾಗಿ ವರ್ತಿಸುವ ವೀಡಿಯೊವನ್ನು ಸ್ಕ್ರೀನ್ ಮೇಲೆ ಪ್ರದರ್ಶಿಸಿದ್ದಾನೆ. ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವು ಗುಜರಾತ್ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದೆ. ಬೆಂಗಳೂರಿನಲ್ಲಿ ಖಾಸಗಿ ಶಾಲೆಯೊಂದು ನಡೆಸುತ್ತಿದ್ದ ಆನ್‌ಲೈನ್ ತರಗತಿಯ ಸಂದರ್ಭ ಹ್ಯಾಕರ್ ಒಬ್ಬ ಅಶ್ಲೀಲ ಪದ ಬಳಸಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿರುವುದಾಗಿ ಶಾಲೆಯ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News