ಗಲ್ವಾನ್: ವಾಸ್ತವವನ್ನು ಎದುರಿಸಲು ಸರಕಾರ ಹಿಂದೇಟು ಹಾಕುತ್ತಿದೆಯೇ?

Update: 2020-06-26 05:17 GMT

ವಾಸ್ತವಗಳಿಗೆ ಬೆನ್ನು ಹಾಕುವುದರಿಂದ ಅಥವಾ ಕಣ್ಣು ಮುಚ್ಚಿ ಕೂರುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಬದಲಿಗೆ ಸಮಸ್ಯೆಗಳು ಉಲ್ಬಣಿಸುತ್ತವೆ. ಗಲ್ವಾನ್ ಗಡಿಭಾಗದಲ್ಲಿ ನಡೆಯುವ ಬೆಳವಣಿಗೆಗಳ ಕುರಿತಂತೆ ಸರಕಾರ ಕಣ್ಣು ಮುಚ್ಚಿ ಕೂರುವುದೇ ಪರಿಹಾರ ಎಂದು ಭಾವಿಸಿದಂತಿದೆ. ‘‘ಗಡಿಯಲ್ಲಿ ಚೀನಾದಿಂದ ಯಾವುದೇ ಅತಿಕ್ರಮಣ ನಡೆದಿಲ್ಲ’’ ಎಂಬ ಹೇಳಿಕೆ ನೀಡುವುದರೊಂದಿಗೆ ವಿವಾದವನ್ನು ಭಾರತದ ಜನರ ಪಾಲಿಗೆ ಮುಗಿಸಿ ಬಿಡುವ ತಂತ್ರವನ್ನು ಮೋದಿಯವರು ಹೂಡಿದರು. ಜೊತೆಗೆ ಮಾಧ್ಯಮಗಳಲ್ಲಿ ಮೋದಿಯವರ ಪರವಾಗಿ ವಿಶೇಷ ಸಮೀಕ್ಷೆಯೊಂದು ಅನಿರೀಕ್ಷಿತವಾಗಿ ಹೊರ ಬಿತ್ತು. ಈ ಸಮೀಕ್ಷೆಯ ಮೂಲಕ, ಚೀನಾ ಗಡಿಭಾಗದ ಬೆಳವಣಿಗೆಯಿಂದ ಕೇಂದ್ರ ಸರಕಾರದ ವರ್ಚಸ್ಸಿಗಾದ ಧಕ್ಕೆಯನ್ನು ತುಂಬುವ ಪ್ರಯತ್ನ ನಡೆಯಿತು. ‘ಚೀನಾವನ್ನು ಎದುರಿಸಲು ಮೋದಿಯವರೇ ಸಮರ್ಥರು’ ಎನ್ನುವುದನ್ನು ಈ ದೇಶದ ಬಹುತೇಕ ಭಾರತೀಯರು ಅಭಿಪ್ರಾಯ ಪಡುತ್ತಾರೆ ಎನ್ನುವ ಈ ಸರಕಾರೇತರ ಸಮೀಕ್ಷೆಯ ಉದ್ದೇಶವನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಹುದು. ಇಷ್ಟಕ್ಕೂ ಮೋದಿಯವರೇ ಚೀನಾವನ್ನು ಎದುರಿಸಲು ಯಾವ ಕಾರಣಕ್ಕೆ ಸಮರ್ಥರು? ಎನ್ನುವುದನ್ನು ಈ ಸಮೀಕ್ಷೆ ವಿವರಿಸಿಲ್ಲ.

ಇಂದು ಚೀನಾವನ್ನು ಎದುರಿಸುವಲ್ಲಿ ಸರಕಾರ ಯಾವ ಯಾವ ರೀತಿಯಲ್ಲಿ ಯಶಸ್ವಿಯಾಗಿದೆ ಎನ್ನುವುದರ ಮಾಹಿತಿ ನೀಡುವುದಕ್ಕೂ ಈ ಸಮೀಕ್ಷೆ ವಿಫಲವಾಗಿದೆ. ಚೀನಾ ಅತಿಕ್ರಮಣದ ಕುರಿತಂತೆ ಪ್ರಧಾನಿ ಮೋದಿಯವರ ಹೇಳಿಕೆ ದೇಶಾದ್ಯಂತ ಸರಕಾರದ ವಿರುದ್ಧ ಋಣಾತ್ಮಕ ಭಾವನೆಯನ್ನು ಬೀರುತ್ತಿರುವಾಗಲೇ, ಅದನ್ನು ತಣಿಸುವುದಕ್ಕಾಗಿ ಈ ಸಮೀಕ್ಷೆಯನ್ನು ಅವಸರವಸರವಾಗಿ ನಡೆಸಲಾಯಿತು. ಆದರೆ ಸಮೀಕ್ಷೆ ಗಡಿಯಲ್ಲಿ ನಡೆದಿರುವ ಯಾವುದೇ ಬೆಳವಣಿಗೆಗಳನ್ನು ಬದಲಾಯಿಸುವುದಿಲ್ಲ. ಈ ಸಮೀಕ್ಷೆಗೆ ಬೆದರಿ ಚೀನಾ ಹಿಂದೆ ಸರಿಯುವುದೂ ಇಲ್ಲ. ಭಾರತಕ್ಕೆ ಸಂಭವಿಸಿದ ಸಾವು,ನೋವು, ನಷ್ಟಗಳಲ್ಲೂ ಯಾವುದೇ ಬದಲಾವಣೆಗಳಾಗುವುದಿಲ್ಲ. ಸಮೀಕ್ಷೆ ಈ ದೇಶವನ್ನೋ, ಈ ದೇಶದ ಸೈನಿಕರನ್ನೋ ರಕ್ಷಿಸುವ ಉದ್ದೇಶವನ್ನು ಹೊಂದಿರದೆ, ಪ್ರಧಾನಿಯ ರಕ್ಷಣೆಗಷ್ಟೇ ನಿಂತಿದೆ. ಈ ಹಿಂದೆ ಜೂನ್ 6ರಂದು ಉಭಯ ದೇಶಗಳ ಮಿಲಿಟರಿ ಜನರಲ್‌ಗಳ ನಡುವೆ ನಡೆದ ಮಾತುಕತೆ ಸಂಪೂರ್ಣ ವಿಫಲವಾಗಿರುವುದನ್ನು ಸರಕಾರ ಮುಚ್ಚಿಟ್ಟು ಗಡಿಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳುತ್ತಾ ಬಂತು. ‘ಲಡಾಖ್‌ನಲ್ಲಿ ಏನು ನಡೆಯುತ್ತಿದೆ? ವಿವರಿಸಿ’ ಎಂದು ಸರಕಾರವನ್ನು ಒತ್ತಾಯಿಸಿದ ವಿರೋಧ ಪಕ್ಷದ ನಾಯಕರನ್ನೇ ‘ದೇಶ ವಿರೋಧಿಗಳು’ ಎಂದು ಕರೆದು ಅವರ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡಿತು.

ಉಭಯ ದೇಶಗಳೂ ಹಂತ ಹಂತವಾಗಿ ಸೇನೆಯನ್ನು ಹಿಂದೆಗೆಯುವ ನಿರ್ಧಾರಕ್ಕೆ ಬಂದಿವೆ ಎಂದು ಕೇಂದ್ರ ಸರಕಾರ ಹೇಳಿಕೆಯನ್ನೂ ನೀಡಿತ್ತು. ಆದರೆ ಇದಾದ ಬೆನ್ನಿಗೇ ಜೂನ್ 16ರಂದು ಈ ದೇಶದ 20ಕ್ಕೂ ಅಧಿಕ ಸೈನಿಕರನ್ನು ಚೀನಾ ಸೇನೆ ಬರ್ಬರವಾಗಿ ಕೊಂದು ಹಾಕಿತು. 70ಕ್ಕೂ ಅಧಿಕ ಸೈನಿಕರು ಗಾಯಗೊಂಡರು. ಸುಮಾರು 10ಕ್ಕೂ ಅಧಿಕ ಸೈನಿಕರನ್ನು ಸೆರೆ ಹಿಡಿಯಿತು. ಬಂಧಿತರಾದವರಲ್ಲಿ ಜವಾನರಷ್ಟೇ ಅಲ್ಲ, ಉನ್ನತ ಅಧಿಕಾರಿಗಳೂ ಸೇರಿದ್ದರು. ತನ್ನೆಲ್ಲ ವೈಫಲ್ಯಗಳನ್ನು ಸುಳ್ಳುಗಳ ಗೊಬ್ಬರಗಳಿಂದ ಮುಚ್ಚಿ ಹಾಕಿದಂತೆ, ಗಡಿಯ ವಿಷಯದಲ್ಲಿ ಮುಚ್ಚಿ ಹಾಕುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಈ ನಾಶ, ನಷ್ಟ ಪ್ರಧಾನಿ ಮೋದಿಯವರಿಗೆ ಹೇಳಿಕೊಟ್ಟಿತು. ಚೀನಾ ಕಡೆಯಲ್ಲೂ ಸಾವು ನೋವುಗಳು ಸಂಭವಿಸಿದೆಯೆಂದು ಮಾಧ್ಯಮಗಳು ಹೇಳುತ್ತವೆಯಾದರೂ, ಅದರ ಪ್ರಮಾಣ ಎಷ್ಟು ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ. ಚೀನಾದ ಕೈಗೆ ನಮ್ಮ ಯೋಧರಷ್ಟೇ ಸೆರೆ ಸಿಕ್ಕಿರುವುದರಿಂದ, ಈ ಜಟಾಪಟಿಯಲ್ಲಿ ಚೀನಾದ ಕೈ ಮೇಲಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಅಂತಿಮವಾಗಿ ಚೀನಾ ಬಂಧನಕ್ಕೊಳಗಾಗಿದ್ದ ಎಲ್ಲ ಯೋಧರನ್ನು ಬಿಡುಗಡೆ ಮಾಡಿತು.

ಗಡಿಯಲ್ಲಿ ಚೀನಾ ನಮ್ಮ ನೆಲದ ಮೇಲೆ ಕಾಲಿಡದಂತೆ ತಡೆಯುವ ಪ್ರಯತ್ನದಲ್ಲಿ ನಡೆದ ನಾಶ, ನಷ್ಟ ಇದಾಗಿದ್ದರೆ, ಸೆರೆ ಸಿಕ್ಕಿ ಬಿಡುಗಡೆಗೊಂಡ ಅಷ್ಟೂ ಸೈನಿಕರನ್ನು ನಾವು ಅದ್ದೂರಿಯಾಗಿ ಸ್ವಾಗತಿಸಬೇಕಾಗುತ್ತದೆ. ಯಾಕೆಂದರೆ, ಈ ಹಿಂದೆ, ಪುಲ್ವಾಮ ಉಗ್ರರ ದಾಳಿಯ ಬಳಿಕ ಸರಕಾರ ಹಮ್ಮಿಕೊಂಡ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ನಮ್ಮ ವಾಯುಪಡೆಯ ಯೋಧ ಅಭಿನಂದನ್ ಕೂಡ ಇದೇ ರೀತಿಯಲ್ಲಿ ಪಾಕಿಸ್ತಾನದ ಕೈಗೆ ಸೆರೆ ಸಿಕ್ಕಿದ್ದರು. ಬಳಿಕ ಪಾಕಿಸ್ತಾನ ಅವರನ್ನು ಗೌರವಯುತವಾಗಿ ಭಾರತಕ್ಕೆ ಒಪ್ಪಿಸಿತು. ಅಭಿನಂದನ್ ಅವರು ಭಾರತಕ್ಕೆ ಕಾಲಿಟ್ಟ ಬಳಿಕ ಅವರಿಗೆ ವ್ಯಾಪಕ ಸನ್ಮಾನಗಳು, ಅಭಿನಂದನೆಗಳು ಪ್ರಕಟವಾದವು. ಆದರೆ, ಚೀನಾದ ಕೈಯಲ್ಲಿ ಬಂಧಿತರಾಗಿದ್ದ ಸೇನಾಧಿಕಾರಿಗಳು ಮತ್ತು ಜವಾನರು ಯಾರು, ಅವರ ಹಿನ್ನೆಲೆಯೇನು ಇತ್ಯಾದಿಗಳ ಕುರಿತಂತೆ ಸರಕಾರ ಮತ್ತು ಮಾಧ್ಯಮಗಳು ವೌನ ತಳೆದಿವೆೆ. ಅವರ ತ್ಯಾಗಕ್ಕೆ ತಕ್ಕ ಗೌರವವನ್ನು ಸರಕಾರ ಈವರೆಗೆ ಸಲ್ಲಿಸಿಲ್ಲ. ಇದೇ ಸಂದರ್ಭದಲ್ಲಿ, ಭಾರತವೇನಾದರೂ ಚೀನಾ ಸೈನಿಕರನ್ನು ಬಂಧಿಸಿದೆಯೇ? ನಮ್ಮ ಸೈನಿಕರನ್ನು ಚೀನಾ ಬಿಡುಗಡೆ ಮಾಡುವ ಸಂದರ್ಭದಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆಯೇ ಎನ್ನುವ ವಿವರಗಳನ್ನೂ ಸರಕಾರ ನೀಡಿಲ್ಲ.

ನಮ್ಮ ಸೈನಿಕರ ಮೇಲೆ ಬರ್ಬರ ದಾಳಿ ನಡೆದ ಬೆನ್ನಿಗೇ ಉಭಯ ದೇಶಗಳ ನಡುವೆ ಮತ್ತೆ ಮಾತುಕತೆ ನಡೆದಿದೆ. ಗಡಿಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಸರಕಾರ ಸ್ಪಷ್ಟ ಹೇಳಿಕೆಯನ್ನು ಮತ್ತೊಮ್ಮೆ ನೀಡಿದೆ. ಭಾರತ ಮತ್ತು ಚೀನಾ ನಡುವೆ ನಡೆದ ಕಾರ್ಪ್ಸ್ ಕಮಾಂಡರ್ ಮಟ್ಟದ ಎರಡನೇ ಸುತ್ತಿನ ಮಾತುಕತೆಯಲ್ಲಿ ಸಂಘರ್ಷಾತ್ಮಕ ಸ್ಥಿತಿಯಿಂದ ಹಿಂದೆ ಸರಿಯುವ ಕುರಿತಂತೆ ಎರಡೂ ರಾಷ್ಟ್ರಗಳು ಸಹಮತ ಹೊಂದಿವೆ ಎಂದು ಸೇನಾ ಮೂಲಗಳು ತಿಳಿಸಿವೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ ಈ ಹೇಳಿಕೆ ಹೊರ ಬಿದ್ದ ಎರಡೇ ದಿನಗಳಲ್ಲಿ, ಹೊಸ ಉಪಗ್ರಹ ಚಿತ್ರಗಳು ಗಲ್ವಾನ್‌ನ ಕುರಿತಂತೆ ಬೇರೆಯದೇ ವಿವರಗಳನ್ನು ನೀಡುತ್ತಿವೆ. ಉಪಗ್ರಹ ಚಿತ್ರಗಳು ಎಲ್‌ಎಸಿಯ ಉಭಯ ಪಾರ್ಶ್ವಗಳಲ್ಲಿ ಚೀನಾ ನಿರ್ಮಾಣಗಳಿರುವುದನ್ನು ತೋರಿಸುತ್ತಿರುವುದು ಬೆಳಕಿಗೆ ಬಂದಿದೆ. ಇದೇ ಸ್ಥಳದಲ್ಲಿ ಜೂ. 16ರಂದು ರಾತ್ರಿ ನಡೆದಿದ್ದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯರು ಹುತಾತ್ಮರಾಗಿದ್ದರು.

ಉಪಗ್ರಹ ಚಿತ್ರಗಳ ಆಧಾರವನ್ನಿಟ್ಟುಕೊಂಡು ಮಾತನಾಡಿರುವ ಭಾರತದ ಹೆಚ್ಚುವರಿ ಸರ್ವೇಯರ್ ಜನರಲ್ ಆಗಿ ನಿವೃತ್ತರಾಗಿರುವ ದೇಶದ ಅಗ್ರ ಭೂಪಟ ರಚನೆಕಾರರಲ್ಲೊಬ್ಬರಾಗಿರುವ ರಮೇಶ್ ಪಾಧಿ, ‘ಗಸ್ತು ಕೇಂದ್ರ 14ರ ಸುತ್ತಮುತ್ತ ಅತಿಕ್ರಮಣದ ಸ್ಪಷ್ಟವಾದ ಸಂಕೇತಗಳು ಕಂಡು ಬರುತ್ತಿವೆ. ಈ ಚಿತ್ರಗಳು ಗಲ್ವಾನ್ ನದಿಗೆ ಮೋರಿಗಳನ್ನು ನಿರ್ಮಿಸಿರುವುದನ್ನೂ ತೋರಿಸಿವೆ. ಹಾಗೆಯೇ ಚೀನಾ ಕಡೆಯಿಂದ ರಸ್ತೆಯನ್ನು ನಿರ್ಮಿಸಲಾಗಿದೆ. ಸೇನಾ ಜವಾನರ ಇರವನ್ನೂ ಚಿತ್ರಗಳು ಬಹಿರಂಗ ಪಡಿಸಿವೆ’ ಎಂದಿದ್ದಾರೆ. ಅಂದರೆ ಈ ಚಿತ್ರಗಳು, ಚೀನಾದ ಅತಿರೇಕಗಳನ್ನು ಸ್ಪಷ್ಟವಾಗಿ ಹೇಳುತ್ತಿವೆಯಾದರೂ, ಸರಕಾರ ಮಾತ್ರ ಗಲ್ವಾನ್‌ನಲ್ಲಿ ನಡೆದಿರುವುದನ್ನು ರಾಜಕೀಯ ಕಾರಣಕ್ಕಾಗಿ ಮುಚ್ಚಿಡುತ್ತಿದೆೆ. ಚೀನಾವನ್ನು ಎದುರಿಸಲು ನರೇಂದ್ರ ಮೋದಿಯವರು ಸಮರ್ಥ ವ್ಯಕ್ತಿಯಾದರೆ, ಈ ಉಪಗ್ರಹ ಚಿತ್ರಗಳು ಹೇಳುತ್ತಿರುವುದಕ್ಕೆ ಅವರು ತಮ್ಮ ಸ್ಪಷ್ಟೀಕರಣವನ್ನು ನೀಡಲೇಬೇಕಾಗುತ್ತದೆ.

ನರೇಂದ್ರ ಮೋದಿಯವರು ಕಳೆದ ಆರು ವರ್ಷಗಳಲ್ಲಿ ನೆರೆ ರಾಷ್ಟ್ರಗಳೊಂದಿಗೆ ಯಾವ ರೀತಿಯಲ್ಲಿ ಸಂಬಂಧವನ್ನು ಬೆಸೆದುಕೊಂಡು ಬಂದಿದ್ದಾರೆ ಎನ್ನುವುದನ್ನು ಆಧರಿಸಿ ನಾವು, ಅವರ ಸಾಮರ್ಥ್ಯವನ್ನು ಅಳೆಯಬೇಕಾಗಿದೆ. ನಾವು ಈವರೆಗೆ ‘ವಿಶ್ವದ ಏಕೈಕ ಹಿಂದೂ ರಾಷ್ಟ್ರ’ ಎಂದು ಕೊಚ್ಚಿಕೊಂಡು ಬಂದ ಪುಟ್ಟ ನೇಪಾಳವೇ ಭಾರತದ ವಿರುದ್ಧ ತಿರುಗಿ ನಿಂತಿದೆಯೆಂದ ಮೇಲೆ, ನರೇಂದ್ರ ಮೋದಿಯವರ ವಿದೇಶಾಂಗ ನೀತಿಯೇ ವಿಫಲವಾಗಿದೆ ಎಂದರ್ಥವಲ್ಲವೇ? ಚೀನಾ, ಪಾಕಿಸ್ತಾನ, ಬಾಂಗ್ಲಾ , ಶ್ರೀಲಂಕಾ ಮೊದಲಾದ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಸಂಪೂರ್ಣ ಎಡವಿರುವ ನರೇಂದ್ರ ಮೋದಿ ಚೀನಾವನ್ನು ಸಮರ್ಥವಾಗಿ ಎದುರಿಸ ಬಲ್ಲರು ಎಂದು ಸಮೀಕ್ಷೆಯ ಮೂಲಕ ಸಾಬೀತು ಪಡಿಸಲು ಹೊರಡುವುದು ಇನ್ನೊಂದು ಅನಾಹುತಕ್ಕೆ ಹೆದ್ದಾರಿಯನ್ನು ತೆರೆದುಕೊಟ್ಟಂತೆ. ಆದುದರಿಂದ, ವಾಸ್ತವವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಇನ್ನಾದರೂ ನಿಲ್ಲಿಸಿ, ಅದಕ್ಕೆ ಮುಖಾಮುಖಿಯಾಗುವ ಕಡೆಗೆ ಸರಕಾರ ಮುಂದಾಗಬೇಕು. ಜನರನ್ನು ಆ ಮೂಲಕ ಚೀನಾವನ್ನು ಎದುರಿಸುವುದಕ್ಕೆ ಮಾನಸಿಕವಾಗಿ ಸಿದ್ಧರಾಗುವಂತೆ ಮಾಡಬೇಕು. ಗಡಿಯಲ್ಲಿರುವ ಭಾರತದ ಸೈನಿಕರು ಯಾವುದೇ ಕಾರಣಕ್ಕೂ ಪಕ್ಷ ರಾಜಕಾರಣಗಳಿಗೆ ಬಲಿಪಶುಗಳಾಗಬಾರದು. ಚೀನಾದ ಜೊತೆಗೆ ಯಾವ ಕಾರಣಕ್ಕೂ ಸದ್ಯಕ್ಕೆ ಯುದ್ಧ ಬೇಡ. ಆದರೆ ಅದಕ್ಕಾಗಿ ಜನರಿಂದ ಸತ್ಯವನ್ನು ಮುಚ್ಚಿಡುವುದು ಕೂಡ ಸರಿಯಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News