‘ನಾನು ಇಂದಿರಾ ಗಾಂಧಿಯ ಮೊಮ್ಮಗಳು, ಯಾವುದಕ್ಕೂ ಅಂಜುವುದಿಲ್ಲ'

Update: 2020-06-26 08:36 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಕಾನ್ಪುರ್ ಸರಕಾರಿ ಅನಾಥಾಲಯದ 57 ಬಾಲಕಿಯರಿಗೆ ಕೋವಿಡ್ 19 ದೃಢಪಟ್ಟು, ಅವರಲ್ಲಿಬ್ಬರು ಗರ್ಭವತಿಯರಾಗಿರುವ ಹಾಗೂ ಒಬ್ಬಾಕೆಗೆ ಎಚ್‍ಐವಿ ಪಾಸಿಟಿವ್ ಆಗಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯವರಿಗೆ ರಾಜ್ಯ ಮಕ್ಕಳ ಹಕ್ಕು ಆಯೋಗದ ನೋಟಿಸ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, ತಾನು ಯಾವುದಕ್ಕೂ ಅಂಜುವುದಿಲ್ಲ, ಸರಕಾರ ಯಾವ ಕ್ರಮ ಬೇಕಾದರೂ ಕೈಗೊಳ್ಳಲಿ, ಸತ್ಯವನ್ನು ಬಿಂಬಿಸುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

“ಓರ್ವ ಸಮಾಜ ಸೇವಕಿಯಾಗಿ ನನ್ನ ಕರ್ತವ್ಯ ಉತ್ತರ ಪ್ರದೇಶದ ಜನರ ಪರ ಕಾರ್ಯನಿರ್ವಹಿಸುವುದಾಗಿದೆ. ಸತ್ಯವನ್ನು ಅವರ ಮುಂದಿಡುವುದು ನನ್ನ ಕರ್ತವ್ಯವೇ ಹೊರತು ಸರಕಾರ ಹೇಳಿದ್ದನ್ನು ಪ್ರಚುರಪಡಿಸುವುದಲ್ಲ. ನನ್ನನ್ನು ಬೆದರಿಸಿ ಉತ್ತರ ಪ್ರದೇಶ ಸರಕಾರ ತನ್ನ ಸಮಯ ವ್ಯರ್ಥಗೊಳಿಸುತ್ತಿದೆ. ಯಾವ ಕ್ರಮ ಬೇಕಾದರೂ ಕೈಗೊಳ್ಳಿ. ನಾನು ಸತ್ಯವನ್ನು ಹೇಳುತ್ತೇನೆ. ನಾನು  ಇಂದಿರಾ ಗಾಂಧಿಯ ಮೊಮ್ಮಗಳು, ಕೆಲವು ನಾಯಕರಂತೆ ಬಿಜೆಪಿಯ ಅಘೋಷಿತ ವಕ್ತಾರಳಲ್ಲ'' ಎಂದು ಪ್ರಿಯಾಂಕ ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ರಾಜ್ಯ ಸರಕಾರವನ್ನು ಹಲವು ವಿಚಾರಗಳಲ್ಲಿ ಟೀಕಿಸುತ್ತಲೇ ಬಂದಿರುವ ಪ್ರಿಯಾಂಕ ಕಾನ್ಪುರ್ ಮಕ್ಕಳ ಆಶ್ರಯ ತಾಣ ಪ್ರಕರಣ ಉಲ್ಲೇಖಿಸಿ ಅದನ್ನು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದ ಬಿಹಾರದ ಮುಝಫ್ಫರಪುರ್ ಆಶ್ರಯತಾಣ ಪ್ರಕರಣಕ್ಕೆ ಹೋಲಿಸಿದ್ದರು. ತಮ್ಮ `ದಾರಿತಪ್ಪಿಸುವ' ಹೇಳಿಕೆಗೆ ಮೂರು ದಿನಗಳೊಳಗೆ ವಿವರಣೆ ನೀಡುವಂತೆ ಉತ್ತರ ಪ್ರದೇಶ ಮಕ್ಕಳ ಹಕ್ಕುಗಳ ಆಯೋಗ ಆಕೆಗೆ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಇದಕ್ಕೂ ಮೊದಲು ಜೂನ್ 22ರಂದು ಟ್ವೀಟ್ ಮಾಡಿದ್ದ ಪ್ರಿಯಾಂಕ, ಆಗ್ರಾದ ಆಸ್ಪತ್ರೆಗೆ ದಾಖಲಾದ 48 ಗಂಟೆಗಳೊಳಗಾಗಿ 28 ಕೊರೋನ ರೋಗಿಗಳು ಮೃತಪಟ್ಟಿದ್ದಾರೆ ಹಾಗೂ ಉತ್ತರ ಪ್ರದೇಶ ಸರಕಾರದ ಆಗ್ರಾ ಮಾದರಿ ಬಹಿರಂಗಗೊಂಡಿದೆ ಎಂದು ಹೇಳಿ ದೈನಿಕವೊಂದರ ವರದಿಯನ್ನು ಲಗತ್ತಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ನಾರಾಯಣ್ ಸಿಂಗ್, ಈ ಟ್ವೀಟ್ ತೆಗೆದುಹಾಕುವಂತೆ ಪ್ರಿಯಾಂಕಾಗೆ ಸೂಚಿಸಿದ್ದರು.

ಆದರೆ ಪ್ರಿಯಾಂಕ ಮಾತ್ರ ತಮ್ಮ ಟೀಕೆಯನ್ನು ಮುಂದುವರಿಸಿ ಆಗ್ರಾದಲ್ಲಿ ಕೋವಿಡ್ ರೋಗಿಗಳ ಮರಣ ಪ್ರಮಾಣ ಏರಿಕೆಗೆ  ಉತ್ತರ ಪ್ರದೇಶ ಸರಕಾರವನ್ನು ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News