ಸಿಆರ್ ಪಿಎಫ್ ಪಡೆಗಳ ಮೇಲೆ ಉಗ್ರರ ಗುಂಡಿನ ದಾಳಿ: ಯೋಧ, ಅಪ್ರಾಪ್ತ ಬಾಲಕ ಮೃತ್ಯು

Update: 2020-06-26 12:35 GMT

ಶ್ರೀನಗರ್ : ದಕ್ಷಿಣ ಕಾಶ್ಮೀರದ ಅನಂತ್‍ ನಾಗ್ ಜಿಲ್ಲೆಯ ಬಿಜ್ಬೆಹಾರ ಎಂಬಲ್ಲಿ ಸಿಆರ್ ಪಿಎಫ್ ಪಡೆಗಳ ಮೇಲೆ ಶುಕ್ರವಾರ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಒಬ್ಬ ಅರೆಸೇನಾ ಪಡೆ ಸಿಬ್ಬಂದಿ ಹಾಗೂ ಒಬ್ಬ ಅಪ್ರಾಪ್ತ ಬಾಲಕ ಮೃತಪಟ್ಟಿದ್ದಾರೆ.

ಶ್ರೀನಗರದಿಂದ ಸುಮಾರು 45 ಕಿ.ಮೀ. ದೂರವಿರುವ ಬಿಜ್ಬೆಹಾರ ಎಂಬಲ್ಲಿನ ಪಡಶಾಹಿ ಬಾಘ್ ಪ್ರದೇಶದಲ್ಲಿ 90 ಬೆಟಾಲಿಯನ್ ಸಿಆರ್‍ಪಿಎಫ್ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

ಗಾಯಾಳುಗಳಿಬ್ಬರನ್ನೂ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಮೃತಪಟ್ಟ ಸಿಆರ್‍ಪಿಎಫ್ ಯೋಧನನ್ನು ಶ್ಯಾಮಲ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಪಶ್ಚಿಮ ಬಂಗಾಳದವರಾಗಿದ್ದಾರೆ. ಮೃತಪಟ್ಟ ಅಪ್ರಾಪ್ತ ಬಾಲಕ ನಹೀನ್ ನೆರೆಯ ಕುಲ್ಗಾಮ್ ಜಿಲ್ಲೆಯವನಾಗಿದ್ದಾನೆ.

ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ  ಸಿಆರ್‍ಪಿಎಫ್ ಪಡೆಗಳನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News