ಬಡತನ, ಅಂಧತ್ವವನ್ನು ಮೆಟ್ಟಿ ನಿಂತು 12ನೆ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ನಾಲ್ವರು ವಿದ್ಯಾರ್ಥಿಗಳು

Update: 2020-06-27 11:14 GMT
Photo: twocircles.net

ಅಹ್ಮದಾಬಾದ್: ಆತ್ಮಬಲವೊಂದಿದ್ದರೆ ಎಂತಹ ಕಷ್ಟಕರ ಪರಿಸ್ಥಿತಿಯಿದ್ದರೂ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಬಹುದೆಂಬುದಕ್ಕೆ ಬಡ ಕುಟುಂಬದ ನಾಲ್ಕು ವಿದ್ಯಾರ್ಥಿಗಳು  ಸಾಕ್ಷಿಯಾಗಿದ್ದಾರೆ.

ಅಹ್ಮದಾಬಾದ್‍ನ ಎಫ್‍ ಡಿ ಹೈಸ್ಕೂಲ್ ವಿದ್ಯಾರ್ಥಿಗಳಾಗಿರುವ ಇವರಲ್ಲಿ ಇಬ್ಬರು ದೃಷ್ಟಿಹೀನರಾಗಿದ್ದಾರೆ. ಎಲ್ಲಾ ನಾಲ್ಕು ಮಂದಿಯೂ ಕಿತ್ತು ತಿನ್ನುವ ಬಡತನದ ಬೇಗುದಿಯನ್ನು ಅನುಭವಿಸಿದವರು ಹಾಗೂ ಅವರ ಹೆತ್ತವರೂ ಅನಕ್ಷರಸ್ಥರಾಗಿದ್ದಾರೆ. ಆದರೂ ಎಲ್ಲಾ ಅಡೆತಡೆಗಳನ್ನು ದಾಟಿ ಈ ನಾಲ್ವರು ಮಾಡಿರುವ ಶೈಕ್ಷಣಿಕ ಸಾಧನೆ ಎಲ್ಲರಿಂದ ಪ್ರಶಂಸೆಗೊಳಗಾಗಿದೆ. ಗುಜರಾತ್ ಶಿಕ್ಷಣ ಮಂಡಳಿ ನಡೆಸಿದ 12ನೇ ತರಗತಿ (ಸಾಮಾನ್ಯ ವಿಭಾಗ) ಪರೀಕ್ಷೆಯಲ್ಲಿ ಈ ನಾಲ್ಕು ಮಂದಿಯೂ ಉತ್ತಮ ಸಾಧನೆ ಮಾಡಿದ್ದಾರೆ.

ವಾಸಿಂ ರಂಗ್ರೇಝ್: ಜುಹಾಪುರದ ಬಡ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದ ವಾಸಿಂ ಶೇ 99.24ರಷ್ಟು ಅಂಕ ಗಳಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾನೆ. ಬೆಳಿಗ್ಗೆ ದಿನಪತ್ರಿಕೆ ಮನೆ ಮನೆಗೆ ಹಾಕಿ ಶಿಕ್ಷಣಕ್ಕಾಗಿ ಹಣ ಹೊಂದಿಸುವ  ಈತ ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸು ಹೊಂದಿದ್ದಾನೆ.

ತಲ್ಹಾ ಗಾಂಚಿ: ಅಂಧನಾಗಿರುವ ಈ ಬಾಲಕ ತನ್ನ ವಿಭಾಗದಲ್ಲಿ ಟಾಪರ್ ಆಗಿದ್ದಾನೆ. ಏಳನೇ ತರಗತಿ ತನಕ ಎಲ್ಲಾ ವಿದ್ಯಾರ್ಥಿಗಳಂತೆಯೇ ಇದ್ದ ಈತ ಸದಾ ತರಗತಿಯಲ್ಲಿ ಎಲ್ಲರಿಗಿಂತ ಮುಂದು. ಆದರೆ ಮುಂದೆ ಆತ ಒಂಬತ್ತನೇ ತರಗತಿ ತಲುಪುವುದರೊಳಗಾಗಿ ದೃಷ್ಟಿ ಸಂಪೂರ್ಣ ಕಳೆದು ಹೋಗಿತ್ತು. ಆದರೂ ಧೃತಿಗೆಡದೆ ಕಾಲೇಜ್ ಶಿಕ್ಷಣವನ್ನು ಅರ್ಧದಲ್ಲಿಯೇ ಕೈಬಿಟ್ಟ ಅಣ್ಣನ ಸಹಾಯದಿಂದ ಆತ ಕಲಿಯಲು ಆರಂಭಿಸಿದ್ದ. ಮನೆಯಲ್ಲಿನ ಕಿತ್ತು ತಿನ್ನುವ ಬಡತನ, ತಂದೆಯ ಕಿಡ್ನಿ ಸಮಸ್ಯೆ ಎಲ್ಲವೂ  ಕುಟುಂಬವನ್ನು ಕಂಗೆಡಿಸಿತ್ತು. ಮನೆಯಲ್ಲಿ ಒಂದು ಸಾಮಾನ್ಯ ಟಿವಿ ಕೂಡ ಇರಲಿಲ್ಲ. ಅಂಧರಿಗೆ ಶಿಕ್ಷಣ ನೀಡುವ ತಜ್ಞ ಹರ್ಷಿದಾ ಮೆಹ್ತಾ ಅವರ ಸಹಾಯವನ್ನು ಪಡೆದು ಪರೀಕ್ಷೆಯಲ್ಲಿ ತನ್ನ ವಿಭಾಗದಲ್ಲಿ ದಾಖಲೆ ಶೇ 53 ಅಂಕಗಳನ್ನು ಈತ ಗಳಿಸಿದ್ದ. ಅಂದ ಹಾಗೆ ಆತ ವಿಶೇಷ ಮಕ್ಕಳ ಶಾಲೆಗೆ ಹೋಗದೆ ಇತರ ಸಾಮಾನ್ಯ ಮಕ್ಕಳು ಹೋಗುವ ಎಫ್ ಡಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾನೆ.

ಫಹದ್ : ಪಾಲನ್ಪುರ್ ಮೂಲದ ಈ ಬಾಲಕ ಹುಟ್ಟಿನಿಂದಲೇ ಅಂಧನಾಗಿದ್ದಾನೆ. ಹತ್ತನೇ ತರಗತಿ ನಂತರ ಮುಂದಿನ ಶಿಕ್ಷಣಕ್ಕಾಗಿ ಅಹ್ಮದಾಬಾದ್ ಗೆ  ಬಂದು ಕುರ್ ಆನ್  ಕಲಿತಿದ್ದ. ಆದರೆ ಯಾವುದೇ ಶಾಲೆ ಈ ಅಂಧ ಬಾಲಕನನ್ನು ದಾಖಲಿಸಿಕೊಳ್ಳದೇ ಇದ್ದಾಗ  ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಒತ್ತು ನೀಡುವ ಎಫ್ ಡಿ ಹೈಸ್ಕೂಲ್ ಆತನಿಗೆ ಪ್ರವೇಶ ನೀಡಿತ್ತು. ಈತ ಕೂಡ ದೃಢ ಮನಸ್ಸಿನಿಂದ ಕಲಿತು ಪರೀಕ್ಷೆಯಲ್ಲಿ ಶೇ 46ರಷ್ಟು ಅಂಕ ಪಡೆದಿದ್ದಾನೆ.

ಅಲ್ಸಾನಿಯಾ ಶೇಖ್: ಗ್ಯಾರೇಜ್ ಮೆಕ್ಯಾನಿಕ್ ಒಬ್ಬರ ಪುತ್ರಿಯಾಗಿರುವ  ಈಕೆ ಜಮಾಲ್ಪುರ್ ಎಫ್‍ಡಿ ಬಾಲಕಿಯರ ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದು, ಪ್ರತಿ ದಿನ ಶ್ರಮವಹಿಸಿ ಎಂಟರಿಂದ ಹತ್ತು ಗಂಟೆಗಳ ಕಾಲ ಓದಿ ಶೇ 99.75 ಅಂಕಗಳನ್ನು ಪಡೆದಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News