ಪ್ರತಿಯೊಬ್ಬರಲ್ಲಿಯೂ ಕ್ಯಾನ್ಸರ್ ಕೋಶಗಳಿರುತ್ತವೆಯೇ?

Update: 2020-06-27 13:58 GMT

 ನಮ್ಮ ಶರೀರದಲ್ಲಿಯ ಸಾಮಾನ್ಯ,ಆರೋಗ್ಯಯುತವಾದ ಜೀವಕೋಶಗಳು ಬೆಳವಣಿಗೆ,ವಿಭಜನೆ ಮತ್ತು ಸಾವಿನ ಜೀವನ ಚಕ್ರವನ್ನು ಹೊಂದಿರುತ್ತವೆ. ಕ್ಯಾನ್ಸರ್ ಕೋಶಗಳು ಇವುಗಳಿಗಿಂತ ಭಿನ್ನವಾಗಿದ್ದು ಈ ಜೀವನಚಕ್ರವನ್ನು ಅನುಸರಿಸುವುದಿಲ್ಲ. ಮೃತಪಡುವ ಬದಲು ಈ ಜೀವಕೋಶಗಳು ರಕ್ತ ಮತ್ತು ದುಗ್ಧರಸ ವ್ಯವಸ್ಥೆಯ ಮೂಲಕ ಸಂಚರಿಸಿ ಶರೀರದ ಇತರ ಭಾಗಗಳನ್ನು ತಲುಪುತ್ತವೆ.

ಸಾಮಾನ್ಯ ಜೀವಕೋಶವೊಂದು ಕ್ಯಾನ್ಸರ್‌ಕಾರಕವಾಗಿ ಹೇಗೆ ಬದಲಾಗುತ್ತದೆ ಎನ್ನುವುದನ್ನು ನೋಡೋಣ.

ಪ್ರತಿಯೊಬ್ಬರೂ ತಮ್ಮ ಶರೀರದಲ್ಲಿ ಕ್ಯಾನ್ಸರ್ ಕೋಶಗಳನ್ನು ಹೊಂದಿರುತ್ತಾರೆಯೇ? ಇಲ್ಲ,ಎಲ್ಲರ ಶರೀರಗಳಲ್ಲಿಯೂ ಕ್ಯಾನ್ಸರ್ ಕೋಶಗಳಿರುವುದಿಲ್ಲ.

ನಮ್ಮ ಶರೀರವು ನಿರಂತರವಾಗಿ ಜೀವಕೋಶಗಳನ್ನು ಉತ್ಪಾದಿಸುತ್ತಿರುತ್ತದೆ ಮತ್ತು ಈ ಪೈಕಿ ಕೆಲವು ಕ್ಯಾನ್ಸರ್‌ಕಾರಕ ಗಳಾಗುವ ಸಾಧ್ಯತೆಯನ್ನು ಹೊಂದಿರುತ್ತವೆ. ಯಾವುದೇ ಸಮಯದಲ್ಲಿಯೂ ನಮ್ಮ ಶರೀರವು ಡಿಎನ್‌ಎಗೆ ಹಾನಿಯಾಗಿರುವ ಜೀವಕೋಶಗಳನ್ನು ಉತ್ಪಾದಿಸುತ್ತಿರಬಹುದು, ಆದರೆ ಅವು ಕ್ಯಾನ್ಸರ್‌ಕಾರಕಗಳಾಗುತ್ತವೆ ಎಂದರ್ಥವಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಡಿಎನ್‌ಎಗೆ ಹಾನಿಯುಂಟಾದ ಜೀವಕೋಶಗಳು ಸ್ವಯಂ ರಿಪೇರಿ ಮಾಡಿಕೊಳ್ಳುತ್ತವೆ ಅಥವಾ ಮೃತಪಡುತ್ತವೆ. ಇವೆರಡೂ ಸಂಭವಿಸದಿದ್ದಾಗ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿರುತ್ತದೆ.

ಸಾಮಾನ್ಯ ಜೀವಕೋಶಗಳು ಮತ್ತು ಕ್ಯಾನ್ಸರ್ ಕೋಶಗಳ ನಡುವೆ ವ್ಯತ್ಯಾಸವೇನು?

ಸಂಕ್ಷಿಪ್ತವಾಗಿ ಹೇಳುವುದಾದರೆ ಸಾಮಾನ್ಯ ಕೋಶಗಳು ಸೂಚನೆಗಳಿಗೆ ವಿಧೇಯವಾಗಿರುತ್ತವೆ ಮತ್ತು ಕ್ಯಾನ್ಸರ್ ಕೋಶಗಳು ವಿಧೇಯವಾಗಿರುವುದಿಲ್ಲ.

ಹಾನಿಗೀಡಾದ ಅಥವಾ ವಯಸ್ಸಾದ ಜೀವಕೋಶಗಳನ್ನು ಮರುಭರ್ತಿ ಮಾಡುವ ಅಗತ್ಯವಿದ್ದಾಗ ಮಾತ್ರ ಸಾಮಾನ್ಯ ಕೋಶಗಳು ಉತ್ಪತ್ತಿಯಾಗುತ್ತವೆ. ಪ್ರಬುದ್ಧ ಜೀವಕೋಶಗಳು ವಿಶೇಷ ಕಾರ್ಯನಿರ್ವಹಣೆಯನ್ನು ಹೊಂದಿರುತ್ತವೆ. ತಮ್ಮ ಕರ್ತವ್ಯವನ್ನು ಪೂರೈಸಿದ ಬಳಿಕ ಅವು ಸಾಯುವ ಮೂಲಕ ತಮ್ಮ ಜೀವನಚಕ್ರವನ್ನು ಪೂರ್ಣಗೊಳಿಸುತ್ತವೆ.

  ಕ್ಯಾನ್ಸರ್ ಕೋಶಗಳು ವಿಭಜನೆಗೊಂಡ ವಂಶವಾಹಿಗಳನ್ನು ಹೊಂದಿರುತ್ತವೆ. ಈ ಕೋಶಗಳು ಮಾಮೂಲು ಪ್ರಕ್ರಿಯೆಯನ್ನು ಅನುಸರಿಸುವುದಿಲ್ಲ. ಅಗತ್ಯವಿರಲಿ ಅಥವಾ ಅಗತ್ಯವಿಲ್ಲದಿರಲಿ, ಅವು ಬೆಳೆಯುತ್ತಿರುತ್ತವೆ ಮತ್ತು ಅವುಗಳ ಜೀವಾವಧಿ ಮುಗಿದರೂ ಸಾಯುವುದಿಲ್ಲ. ಈ ಅನಿಯಂತ್ರಿತ ಬೆಳವಣಿಗೆಯು ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಕ್ಯಾನ್ಸರ್ ಕೋಶಗಳು ಒಟ್ಟಾಗಿ ಟ್ಯೂಮರ್ ಅಥವಾ ದುರ್ಮಾಂಸ ರಚನೆಯಾಗುತ್ತದೆ ಮತ್ತು ಹತ್ತಿರದ ಅಂಗಾಂಶಗಳಿಗೆ ಹರಡುತ್ತದೆ. ಈ ಕೋಶಗಳು ಪ್ರತ್ಯೇಕಗೊಂಡು ಶರೀರದ ಇತರ ಭಾಗಗಳಿಗೆ ಸಾಗಬಲ್ಲವು. ಕ್ಯಾನ್ಸರ್ ಕೋಶಗಳು ಸಾಮಾನ್ಯ ಕೋಶಗಳ ವರ್ತನೆಯ ಮೇಲೂ ದುಷ್ಪರಿಣಾಮವನ್ನು ಬೀರುವ ಮೂಲಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ. ಕ್ಯಾನ್ಸರ್ ಗಡ್ಡೆಗಳಿಗೆ ಪೋಷಕಾಂಶಗಳು ಪೂರೈಕೆಯಾಗಲು ಅವು ತಮ್ಮ ಸುತ್ತಲಿನ ಸಾಮಾನ್ಯ ಜೀವಕೋಶಗಳು ಹೊಸ ರಕ್ತನಾಳಗಳನ್ನು ಬೆಳೆಸುವಂತೆ ಅವುಗಳನ್ನು ಪ್ರಚೋದಿಸುತ್ತವೆ.

ಹೆಚ್ಚಿನ ಸಂದರ್ಭಗಳಲ್ಲಿ ಕ್ಯಾನ್ಸರ್ ಕೋಶಗಳು ಪ್ರತಿರಕ್ಷಣಾ ಕೋಶಗಳನ್ನು ಇತರ ಕೋಶಗಳಿಂದ ಬೇರ್ಪಡಿಸಿ ಪ್ರತಿಬಂಧಿಸುವ ಮೂಲಕ ಶರೀರದ ರೋಗ ನಿರೋಧಕ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುತ್ತವೆ.

ಸೌಮ್ಯ ಮತ್ತು ಉಗ್ರ ಜೀವಕೋಶಗಳ ನಡುವಿನ ವ್ಯತ್ಯಾಸವೇನು?

ಇವೆರಡು ಕೋಶಗಳ ನಡುವೆ ಭಾರೀ ವ್ಯತ್ಯಾಸವಿದೆ. ಸೌಮ್ಯ ಕೋಶಗಳು ಕ್ಯಾನ್ಸರ್‌ಕಾರಕಗಳಲ್ಲ. ಅವು ಕೆಲವೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗೊಳ್ಳುತ್ತವೆ ಮತ್ತು ಗಡ್ಡೆಗಳನ್ನು ಸೃಷ್ಟಿಸುತ್ತವೆ,ಆದರೆ ಇತರ ಅಂಗಾಂಶಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಅವುಗಳಿಗೆ ಇರುವುದಿಲ್ಲ. ಈ ಗಡ್ಡೆಗಳು ಸಾಮಾನ್ಯವಾಗಿ ಜೀವಕ್ಕೆ ಬೆದರಿಕೆಯನ್ನು ಒಡ್ಡುವುದಿಲ್ಲ,ಆದರೆ ಅವು ತುಂಬ ದೊಡ್ಡದಾಗಿ ಬೆಳೆಯಬಲ್ಲವು ಅಥವಾ ಅಂಗವೊಂದರಲ್ಲಿ ಸೇರಿಕೊಳ್ಳಬಲ್ಲವು. ಉದಾಹರಣೆಗೆ ಸೌಮ್ಯ ಮಿದುಳು ಗಡ್ಡೆಯು ಅಪಾಯಕಾರಿಯಾಗಬಲ್ಲದು.

 ಸೌಮ್ಯ ಅಥವಾ ನಿರಪಾಯಕಾರಿ ಗಡ್ಡೆಯನ್ನು ತೆಗೆಯಬಹುದು ಮತ್ತು ಹಾಗೆ ಮಾಡಿದ ಬಳಿಕ ಅದು ಮರುಕಳಿಸುವ ಸಾಧ್ಯತೆಯಿರುವುದಿಲ್ಲ. ಸೌಮ್ಯ ಕೋಶಗಳು ಹರಡುವುದಿಲ್ಲವಾದ್ದರಿಂದ ಅವು ಮರುಕಳಿಸುವುದನ್ನು ತಡೆಯಲು ಚಿಕಿತ್ಸೆಯ ಅಗತ್ಯವಿರುವುದಿಲ್ಲ.

ಉಗ್ರ ಅಥವಾ ಅಪಾಯಕಾರಿ ಕೋಶಗಳು ಕ್ಯಾನ್ಸರ್‌ಕಾರಕಗಳಾಗಿದ್ದು, ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅವು ಸಮೀಪದ ಅಂಗಾಂಶಗಳ ಮೇಲೆ ದಾಳಿ ಮಾಡುತ್ತವೆ ಮತ್ತು ಶರೀರದಾದ್ಯಂತ ಹರಡಬಲ್ಲವು.

 ಅಪಾಯಕಾರಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದಾಗ ಉಳಿದಿರಬಹುದಾದ ಕೋಶಗಳು ಮತ್ತೆ ಹೊಸ ಬೆಳವಣಿಗೆಯನ್ನುಂಟು ಮಾಡುತ್ತವೆ. ಇದೇ ಕಾರಣದಿಂದ ಶರೀರದಾದ್ಯಂತ ಕ್ಯಾನ್ಸರ್ ಕೋಶಗಳನ್ನು ಪತ್ತೆ ಹಚ್ಚಲು ಮತ್ತು ಅವುಗಳನ್ನು ನಾಶಗೊಳಿಸಲು ಕ್ಯಾನ್ಸರ್‌ಗೆ ಕೆಮೊಥೆರಪಿ, ಇಮ್ಯುನೊಥೆರಪಿ ಅಥವಾ ರೇಡಿಯೇಶನ್‌ನಂತಹ ಹೆಚ್ಚುವರಿ ಚಿಕಿತ್ಸೆಗಳು ಅಗತ್ಯವಾಗುತ್ತವೆ.

ಕ್ಯಾನ್ಸರ್‌ಗೆ ಕಾರಣ ಏನು?

ಕ್ಯಾನ್ಸರ್‌ಗೂ ಹಾನಿಗೊಂಡಿರುವ ಡಿಎನ್‌ಎಗೂ ಸಂಬಂಧವಿದೆ. ಆನುವಂಶಿಕ ವಂಶವಾಹಿನಿ ವಿಭಜನೆಗಳು ಎಲ್ಲ ಕ್ಯಾನ್ಸರ್‌ಗಳ ಪೈಕಿ ಶೇ.5ರಿಂದ ಶೇ.10 ರಷ್ಟು ಕ್ಯಾನ್ಸರ್‌ಗಳೊಂದಿಗೆ ಗುರುತಿಸಿಕೊಂಡಿವೆ. ಇಂತಹ ಒಂದು ವಂಶವಾಹಿನಿ ವಿಭಜನೆಯೂ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಹೆಚ್ಚಿಬಲ್ಲದು,ಆದರೆ ಅದು ಅನಿವಾರ್ಯವೇನಲ್ಲ. ತಂಬಾಕಿನ ಹೊಗೆಯಲ್ಲಿನ ರಾಸಾಯನಿಕಗಳು,ಸೂರ್ಯನ ಅಲ್ಟ್ರಾವಯಲೆಟ್ ಕಿರಣಗಳು, ವಿಕಿರಣ ಚಿಕಿತ್ಸೆ ಸೇರಿದಂತೆ ವಿಕಿರಣಕ್ಕೆ ತೆರೆದುಕೊಳ್ಳುವುದು,ಸಂಸ್ಕರಿತ ಮಾಂಸದ ಹೆಚ್ಚಿನ ಸೇವನೆ ಸೇರಿದಂತೆ ಕಳಪೆ ಆಹಾರಕ್ರಮ,ದೈಹಿಕ ಜಡತೆ,ಮದ್ಯಪಾನ,ರ್ಯಾಡಾನ್,ಸೀಸ ಮತ್ತು ಕಲ್ನಾರು ಇತ್ಯಾದಿಗಳಿಗೆ ಒಡ್ಡಿಕೊಳ್ಳುವುದು,ಹ್ಯೂಮನ್ ಪಾಪಿಲೋವೈರಸ್ ಮತ್ತು ಹೆಪಟೈಟಿಸ್‌ನಂತಹ ಸೋಂಕುಗಳು ಇವೂ ವಂಶವಾಹಿನಿ ವಿಭಜನೆಗೆ ಕಾರಣವಾಗುತ್ತವೆ,.

ಯಾವುದೇ ವ್ಯಕ್ತಿಯಲ್ಲಿ ಕ್ಯಾನ್ಸರ್ ಹೇಗೆ ಉಂಟಾಗುತ್ತದೆ ಎನ್ನುವುದಕ್ಕೆ ನಿಖರ ಕಾರಣವನ್ನು ಸದಾ ನಿರ್ಣಯಿಸಲು ಸಾಧ್ಯವಿಲ್ಲ. ಅನೇಕ ಅಂಶಗಳು ಒಂದುಗೂಡಿ ಕ್ಯಾನ್ಸರ್‌ಗೆ ನಾಂದಿ ಹಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News