×
Ad

ನಾಳೆ ಸಿಖ್ಖರಿಗಾಗಿ ಕರ್ತಾರ್‌ಪುರ ಕಾರಿಡಾರ್ ತೆರೆಯಲು ಪಾಕಿಸ್ತಾನ ನಿರ್ಧಾರ

Update: 2020-06-27 23:04 IST

ಇಸ್ಲಾಮಾಬಾದ್, ಜೂ. 27: 19ನೇ ಶತಮಾನದ ಸಿಖ್ ಸಾಮ್ರಾಜ್ಯದ ಒಡೆಯ ಮಹಾರಾಜ ರಣಜೀತ್ ಸಿಂಗ್‌ರ ಪುಣ್ಯತಿಥಿಯ ಸಂದರ್ಭದಲ್ಲಿ ಸೋಮವಾರ ಸಿಖ್ ಯಾತ್ರಿಕರಿಗಾಗಿ ಕರ್ತಾರ್‌ಪುರ ಕಾರಿಡಾರನ್ನು ತೆರೆಯಲು ಪಾಕಿಸ್ತಾನ ಶನಿವಾರ ನಿರ್ಧರಿಸಿದೆ.

ಈ ವಿಷಯವನ್ನು ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಖುರೇಶಿ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ ಎಂದು ‘ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

‘‘ಜಗತ್ತಿನಾದ್ಯಂತ ಪ್ರಾರ್ಥನಾ ಸ್ಥಳಗಳು ತೆರೆಯುತ್ತಿರುವ ಹಿನ್ನೆಲೆಯಲ್ಲಿ, ಕರ್ತಾರ್‌ಪುರ ಸಾಹಿಬ್ ಕಾರಿಡಾರನ್ನು ಸಿಖ್ ಯಾತ್ರಿಕರಿಗಾಗಿ ಮರುತೆರೆಯಲು ಪಾಕಿಸ್ತಾನ ಸಿದ್ಧತೆಗಳನ್ನು ನಡೆಸುತ್ತಿದೆ. ಮಹಾರಾಜ ರಣಜೀತ್ ಸಿಂಗ್‌ರ ಪುಣ್ಯತಿಥಿಯ ಸಂದರ್ಭದಲ್ಲಿ 2020 ಜೂನ್ 29ರಂದು ಕಾರಿಡಾರನ್ನು ಮರುತೆರೆಯಲು ಪಾಕಿಸ್ತಾನ ಸಿದ್ಧವಾಗಿದೆ ಎಂಬ ಸಂದೇಶವನ್ನು ಭಾರತಕ್ಕೆ ರವಾನಿಸಲಾಗಿದೆ’’ ಎಂದು ತನ್ನ ಟ್ವೀಟ್‌ನಲ್ಲಿ ಖುರೇಶಿ ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಭೀತಿಯ ಹಿನ್ನೆಲೆಯಲ್ಲಿ ಕಾರಿಡಾರನ್ನು ಮಾರ್ಚ್ 16ರಂದು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.

4.2 ಕಿ.ಮೀ. ಉದ್ದದ ಕಾರಿಡಾರ್ ಭಾರತೀಯ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ಪಟ್ಟಣ ಮತ್ತು ಪಾಕಿಸ್ತಾನದ ಪಂಜಾಬ್‌ನ ನರೋವಲ್ ಜಿಲ್ಲೆಯ ಶಾಕರ್‌ಗಢ ತಾಲೂಕಿನ ಕರ್ತಾರ್‌ಪುರ ಸಾಹಿಬ್ ಗುರುದ್ವಾರದ ನಡುವೆ ಸಂಪರ್ಕ ಕಲ್ಪಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News