ಕೋವಿಡ್ ಕಾಲದಲ್ಲಿ ರೆಸ್ಟಾರೆಂಟ್‌ಗಳಲ್ಲಿ ಊಟ ಮಾಡುವುದರ ಅಪಾಯಗಳು ನಿಮಗೆ ಗೊತ್ತಿರಲಿ

Update: 2020-06-28 16:43 GMT

ಕೊರೋನ ವೈರಸ್ ಲಾಕ್‌ಡೌನ್ ಇದ್ದಾಗ ಅದೆಷ್ಟೋ ಜನರಿಗೆ ಹೋಟೆಲ್‌ಗಳಲ್ಲಿ ಊಟ ಮಾಡದೆ ಯುಗಗಳೇ ಕಳೆದು ಹೋದಂತಾಗಿತ್ತೇನೋ? ಹೆಚ್ಚಾಗಿ ಹೊರಗಡೆಯೇ ಆಹಾರ ಸೇವಿಸಿ ರೂಢಿಯಾಗಿದ್ದವರಿಗೆ ಲಾಕ್‌ಡೌನ್ ಸಂಕಷ್ಟವನ್ನೇ ತಂದೊಡ್ಡಿತ್ತು ಎನ್ನಬಹುದು. ಈಗ ಲಾಕ್‌ಡೌನ್ ಹಿಂದೆ ಸರಿದು ರೆಸ್ಟಾರೆಂಟ್‌ಗಳು ಆರಂಭಗೊಂಡಿವೆಯಾದರೂ ಕೋವಿಡ್-19 ಅಪಾಯ ಅಲ್ಲಿ ಅಧಿಕವಾಗಿಯೇ ಇದೆ. ಅಪಾಯಗಳನ್ನು ಲೆಕ್ಕಿಸದೆ ಹಲವರು ಈಗಾಗಲೇ ತಮ್ಮ ನೆಚ್ಚಿನ ರೆಸ್ಟಾರಂಟ್‌ಗಳಿಗೆ ಭೇಟಿ ನೀಡಿ ಹೊಟ್ಟೆಯನ್ನು ತಣಿಸಿಕೊಂಡಿರಬಹುದು. ಪಾರ್ಸಲ್ ಮತ್ತು ಡೆಲಿವರಿ ಸೇವೆಗಳು ಇದ್ದುದರಲ್ಲಿಯೇ ಸುರಕ್ಷಿತವಾಗಿದ್ದರೆ ರೆಸ್ಟಾರಂಟ್‌ಗಳಲ್ಲಿ ಊಟ ಮಾಡುವುದು ನೀವು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ಹೀಗೆ ಹೇಳಲು ಕೆಲವು ಕಾರಣಗಳಿಲ್ಲಿವೆ.

* ಕಟ್ಲರಿ ಮತ್ತು ಇತರ ವಸ್ತುಗಳನ್ನು ಹಲವರು ಸ್ಪರ್ಶಿಸಿರುತ್ತಾರೆ

ರೆಸ್ಟಾರಂಟ್‌ಗಳಲ್ಲಿ ಪ್ರತಿಯೊಬ್ಬ ಗ್ರಾಹಕನು ಬಂದು ಹೋದ ಮೇಲೆ ಪೀಠೋಪಕರಣಗಳನ್ನು ಸೋಂಕುಮುಕ್ತಗೊಳಿಸುತ್ತಾರೆ ಎಂದು ನೀವು ಭಾವಿಸಿದ್ದೀರಾ? ನೀವು ಕುಳಿತುಕೊಳ್ಳುವ ಆಸನದಲ್ಲಿ ಕುಳಿತಿದ್ದ ವ್ಯಕ್ತಿಯಲ್ಲಿ ಕೊರೋನ ವೈರಸ್ ಇದ್ದಿರಬಹುದು ಮತ್ತು ಆತ ಮೆನು ಕಾರ್ಡ್,ಟೇಬಲ್‌ಕ್ಲಾಥ್,ನ್ಯಾಪ್ಕಿನ್ ಇತ್ಯಾದಿಗಳನ್ನು ಮುಟ್ಟಿರಬಹುದು. ಅಲ್ಲದೆ ನಿಮಗೆ ಆಹಾರವನ್ನು ಪೂರೈಸುವ ಕಟ್ಲರಿಗಳನ್ನು ಅಲ್ಲಿಯ ಹಲವು ಕೆಲಸಗಾರರು ಸ್ಪರ್ಶಿಸಿರುತ್ತಾರೆ ಮತ್ತು ಅವರಲ್ಲಿ ಯಾರಲ್ಲಾದರೂ ವೈರಸ್ ಇದ್ದಿದ್ದರೆ ಏನು ಗತಿ? ಈ ವಿಷಯದಲ್ಲಿ ನೀವು ಗಮನ ಹರಿಸಬೇಕಾದ ಹಲವಾರು ಅಂಶಗಳಿವೆ. ಇದು ದೊಡ್ಡ ಸಮಸ್ಯೆಯಾಗಿದೆ.

* ಲಕ್ಷಣರಹಿತ ಜನರು-ಸುಪ್ತ ಅಪಾಯ

ಕೊರೋನ ವೈರಸ್‌ನ ಲಕ್ಷಣಗಳನ್ನು ಪ್ರಕಟಿಸುವ ಜನರಿಗಿಂತ ಯಾವುದೇ ಲಕ್ಷಣಗಳನ್ನು ಪ್ರಕಟಿಸದಿರುವ ಜನರು ಹೆಚ್ಚು ಅಪಾಯಕಾರಿಯಾಗಿದ್ದಾರೆ ಮತ್ತು ಈಗ ಲಕ್ಷಣರಹಿತ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ತಮ್ಮ ಶರೀರದಲ್ಲಿ ಕೊರೋನ ವೈರಸ್ ಸೋಂಕು ಇದೆ ಎನ್ನುವುದು ಸ್ವತಃ ಅವರಿಗೂ ಗೊತ್ತಿರುವುದಿಲ್ಲ. ಅಂತಹವರು ರೆಸ್ಟಾರಂಟ್‌ನಲ್ಲಿದ್ದರೆ ಮತ್ತು ಯಾವುದೇ ಸಂಭಾವ್ಯ ರೀತಿಯಲ್ಲಿ ನೀವು ಅವರ ಸಂಪರ್ಕಕ್ಕೆ ಬಂದರೆ ಸೋಂಕು ನಿಮಗೂ ಹರಡುತ್ತದೆ.

* ಅಪರಿಚಿತರೊಂದಿಗೆ ನಿಕಟ ಸಂಪರ್ಕ

 ನಿಮ್ಮ ಗ್ರಹಚಾರ ಸರಿ ಇಲ್ಲದಿದ್ದರೆ ಆರು ಅಡಿ ಅಂತರವೂ ಸಹ ನಿಮ್ಮನ್ನು ಕೊರೋನ ವೈರಸ್‌ನಿಂದ ರಕ್ಷಿಸುವುದಿಲ್ಲ ಎನ್ನುವುದು ನಿಮಗೆ ಗೊತ್ತಿರಲಿ. ರೆಸ್ಟಾರಂಟ್‌ನಲ್ಲಿ ವೇಟರ್‌ಗಳು ಹಲವಾರು ಬಾರಿ ನಿಮ್ಮ ಅತಿ ಸಮೀಪಕ್ಕೆ ಬರುತ್ತಿರುತ್ತಾರೆ. ಇದು ನಿಮ್ಮನ್ನು ಅಪಾಯದಲ್ಲಿ ಸಿಲುಕಿಸಬಹುದು. ಹೀಗಾಗಿ ಪಾರ್ಸೆಲ್ ಅಥವಾ ಡೆಲಿವರಿ ಸರ್ವಿಸ್ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

* ಸಾರ್ವಜನಿಕ ಸ್ಥಳಗಳಲ್ಲಿ ಏರ್ ಕಂಡಿಷನರ್‌ಗಳು ಅಪಾಯಕಾರಿ

ಕೋವಿಡ್‌ಪಿಡುಗು ಆರಂಭವಾದಾಗಿನಿಂದಲೂ ಮುಚ್ಚಿದ ವಾತಾನುಕೂಲಿತ ಆವರಣದಲ್ಲಿ ಇರುವುದು ಕೆಟ್ಟದ್ದು ಎಂದು ಸಂಶೋಧಕರು ಹೇಳುತ್ತಲೇ ಬಂದಿದ್ದಾರೆ. ಎರೋಸೋಲ್‌ಗಳು ಅಥವಾ ಸೋಂಕಿರುವ ವ್ಯಕ್ತಿಯಿಂದ ಹೊರಹೊಮ್ಮಿದ ವೈರಸ್‌ನ್ನು ಒಳಗೊಂಡಿರುವ ತುಂತುರುಗಳು ಗಾಳಿಯಲ್ಲಿ ಸೇರಿಕೊಂಡಿರಬಹುದು ಮತ್ತು ನೀವು ಅದರ ಮುಂದಿನ ಗುರಿಯಾಗಬಹುದು. ಆರೋಗ್ಯಯುತ ವ್ಯಕ್ತಿ ಏರ್ ಕಂಡಿಷನ್ಡ್ ರೆಸ್ಟಾರಂಟ್‌ನಲ್ಲಿ ಕೊರೋನ ವೈರಸ್ ಸೋಂಕಿಗೆ ತುತ್ತಾಗಿರುವ ಹಲವಾರು ನಿದರ್ಶನಗಳಿವೆ.

* ರೆಸ್ಟಾರಂಟ್ ಎಲ್ಲ ಸ್ವಚ್ಛತಾ ಮತ್ತು ಸುರಕ್ಷತಾ ಮಾನದಂಡಗಳಿಗೆ ಬದ್ಧವಾಗಿದೆಯೇ?

ನೀವು ಭೇಟಿ ನೀಡುವ ರೆಸ್ಟಾರಂಟ್ ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಸರಕಾರಿ ಏಜೆನ್ಸಿಗಳು ನಿಗದಿಗೊಳಿಸಿರುವ ಎಲ್ಲ ಸ್ವಚ್ಛತಾ ಮತ್ತು ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿದೆ ಎಂದು ನೀವು ಖಚಿತವಾಗಿ ಹೇಳಬಲ್ಲಿರಾ? ಇಲ್ಲದಿದ್ದರೆ ಅದರ ಅಪಾಯ ನಿಮಗೇ ಗೊತ್ತು. ಕೋವಿಡ್-19ಕ್ಕೆ ಪಾಸಿಟಿವ್ ಆಗಿರುವ ಸಿಬ್ಬಂದಿಯ ಶರೀರದ ಉಷ್ಣತೆಯನ್ನು ಪರೀಕ್ಷಿಸಲು ಹೋಟೆಲ್‌ನವರು ತಪ್ಪಿದ್ದರೆ, ಗ್ರಾಹಕರು ಕುಳಿತುಕೊಳ್ಳುವ ಸ್ಥಳವನ್ನು ಆಗಾಗ್ಗೆ ಸ್ಯಾನಿಟೈಸ್ ಮಾಡುತ್ತಿಲ್ಲ ಎಂದಿದ್ದರೆ, ಅಡಿಗೆಗೆ ಮುನ್ನ ದಿನಸಿ,ತರಕಾರಿ ಇತ್ಯಾದಿಗಳನ್ನು ಹಲವಾರು ಬಾರಿ ಚೆನ್ನಾಗಿ ತೊಳೆದಿರದಿದ್ದರೆ ಏನಾಗಬಹುದು? ನೀವು ಉತ್ತರಿಸಲಾಗದ ಇಂತಹ ಹಲವಾರು ಪ್ರಶ್ನೆಗಳಿವೆ.

ಹೀಗಾಗಿ ಈಗ ಅನ್‌ಲಾಕ್ ಆಗಿ ಹೋಟೆಲ್‌ಗಳು ತೆರೆದಿದ್ದರೂ ಅಪಾಯಗಳನ್ನು ತಗ್ಗಿಸಲು ಅಲ್ಲಿಗೆ ಭೇಟಿ ನೀಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ನಿವಾರಿಸಿ. ತಿಂಗಳುಗಟ್ಟಲೆ ಬಾಗಿಲೆಳೆದುಕೊಂಡಿದ್ದ ರೆಸ್ಟಾರಂಟ್‌ಗಳು ಮತ್ತು ಫುಡ್ ಜಾಯಿಂಟ್‌ಗಳು ಈಗ ತೆರೆದುಕೊಂಡಿವೆ. ಇಷ್ಟು ದಿನಗಳ ಕಾಲ ತಪ್ಪಿಸಿಕೊಂಡಿದ್ದ ನಿಮ್ಮ ಇಷ್ಟದ ಖಾದ್ಯದ ರುಚಿಯನ್ನು ಮತ್ತೆ ಸವಿಯಲು ನಿಮ್ಮ ಮನಸ್ಸು ಬಯಸುತ್ತಿರಬಹುದು. ಆದರೆ ಅದಕ್ಕಾಗಿ ಕಾಯಿರಿ,ಇದು ಹೋಟೆಲ್‌ಗಳಲ್ಲಿ ಊಟ ಮಾಡಲು ಸೂಕ್ತ ಸಮಯವಲ್ಲದಿರಬಹುದು. ಸ್ವಚ್ಛತೆ ಮತ್ತು ಸುರಕ್ಷಿತ ಅಂತರ ಇವೆರಡೇ ನೀವು ನೋಡಬೇಕಿರುವ ಮಾನದಂಡಗಳಲ್ಲ,ನೀವು ಪರಿಗಣಿಸಬೇಕಾದ ಹಲವಾರು ಅಪಾಯಗಳೂ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News