ಒಂದು ಕೋಟಿಯ ಗಡಿ ದಾಡಿದ ಜಾಗತಿಕ ಕೊರೋನ ವೈರಸ್ ಸೋಂಕು ಪ್ರಕರಣಗಳು

Update: 2020-06-28 17:14 GMT

ಪ್ಯಾರಿಸ್ (ಫ್ರಾನ್ಸ್), ಜೂ. 28: ಕೊರೋನ ವೈರಸ್ ಸೋಂಕು ಪ್ರಕರಣಗಳ ಜಾಗತಿಕ ಸಂಖ್ಯೆಯು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯ ಅಂಕಿಸಂಖ್ಯೆಗಳ ಪ್ರಕಾರ ರವಿವಾರ ಒಂದು ಕೋಟಿಯ ಗಡಿಯನ್ನು ದಾಟಿದೆ. ಅದೇ ವೇಳೆ, ಈ ಮಾರಕ ಸಾಂಕ್ರಾಮಿಕ ರೋಗದಿಂದಾಗಿ ಏಳು ತಿಂಗಳುಗಳಲ್ಲಿ ಜಗತ್ತಿನಾದ್ಯಂತ ಪ್ರಾಣ ಕಳೆದುಕೊಂಡವರ ಸಂಖ್ಯೆ 5 ಲಕ್ಷವನ್ನು ಸಮೀಪಿಸುತ್ತಿದೆ.

ಇದು ತೀವ್ರ ಇನ್‌ಫ್ಲುಯೆಂಝ (ಜ್ವರ) ಪ್ರಕರಣಗಳ ವಾರ್ಷಿಕ ಸಂಖ್ಯೆಗಿಂತ ಬಹುತೇಕ ದುಪ್ಪಟ್ಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ಸಾಂಕ್ರಾಮಿಕದ ಅತಿ ಹೆಚ್ಚಿನ ಬಾಧೆಗೊಳಗಾದ ದೇಶಗಳು, ಸೋಂಕು ಹರರಡುವುದನ್ನು ತಡೆಯಲು ವಿಧಿಸಲಾಗಿರುವ ಬೀಗಮುದ್ರೆಗಳನ್ನು ತೆರೆಯಲು ಸಿದ್ಧತೆಗಳನ್ನು ನಡೆಸುತ್ತಿರುವಂತೆಯೇ ಪ್ರಕರಣಗಳ ಸಂಖ್ಯೆಯಲ್ಲಿ ಅಗಾಧ ಹೆಚ್ಚಳ ದಾಖಲಾಗಿದೆ.

ಕೆಲವು ದೇಶಗಳಲ್ಲಿ ಒಂದನೇ ಹಂತದ ಸೋಂಕು ಹರಡುವಿಕೆಯು ನಿಂತಂತೆ ಕಂಡರೂ, ಎರಡನೇ ಹಂತದ ಸೋಂಕು ಪ್ರಕರಣಗಳು ತಲೆದೋರಿವೆ. ಹಾಗಾಗಿ, ಅಲ್ಲಿ ಕೆಲವು ಆಯ್ದ ಸ್ಥಳಗಳಲ್ಲಿ ಮತ್ತೆ ಲಾಕ್‌ಡೌನ್‌ಗಳನ್ನು ಹೇರಲಾಗುತ್ತಿದೆ. ಮುಂಬರುವ ತಿಂಗಳುಗಳು ಮತ್ತು 2021ರಲ್ಲಿ ಸಾಂಕ್ರಾಮಿಕವು ಮತ್ತೆ ಮತ್ತೆ ಮರಳುವ ಸಾಧ್ಯತೆಗಳಿವೆ ಎಂದು ಪರಿಣತರು ಎಚ್ಚರಿಸಿದ್ದಾರೆ.

ಉತ್ತರ ಅಮೆರಿಕ, ಲ್ಯಾಟಿನ್ ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಒಟ್ಟು ಪ್ರಕರಣಗಳ ತಲಾ 25 ಶೇಕಡ ಈವರೆಗೆ ವರದಿಯಾಗಿವೆ. ಏಶ್ಯ ಮತ್ತು ಮಧ್ಯಪ್ರಾಚ್ಯಗಳಲ್ಲಿ ಕ್ರಮವಾಗಿ ಸುಮಾರು 11 ಶೇಕಡ ಮತ್ತು 9 ಶೇಕಡ ಪ್ರಕರಣಗಳು ಕಾಣಿಸಿಕೊಂಡಿವೆ ಎಂದು ‘ರಾಯ್ಟರ್ಸ್’ ಅಂಕಿಸಂಖ್ಯೆಗಳು ಹೇಳುತ್ತವೆ. ಅದು ಸರಕಾರಗಳ ಅಂಕಿಸಂಖ್ಯೆಗಳ ಆಧಾರದಲ್ಲಿ ತನ್ನ ಅಂಕಿಸಂಖ್ಯೆಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ.

ನೂತನ-ಕೊರೋನ ವೈರಸ್ ಸಾಂಕ್ರಾಮಿಕದ ಮೊದಲ ಪ್ರಕರಣಗಳು ಚೀನಾದ ವುಹಾನ್‌ನಲ್ಲಿ ಜನವರಿ 10ರಂದು ಖಚಿತಪಟ್ಟವು. ಬಳಿಕ ಯುರೋಪ್, ಅಮೆರಿಕ ಮತ್ತು ರಶ್ಯಗಳಿಗೆ ಸಾಂಕ್ರಾಮಿಕ ವೇಗವಾಗಿ ಹರಡಿತು.

ಈಗ ಸಾಂಕ್ರಾಮಿಕವು ಹೊಸ ಮಜಲನ್ನು ಪ್ರವೇಶಿಸಿದ್ದು. ಬ್ರೆಝಿಲ್ ಮತ್ತು ಭಾರತಗಳು ಸಾಂಕ್ರಾಮಿಕದ ಹೊಸ ಕೇಂದ್ರ ಬಿಂದುಗಳಾಗಿವೆ.

ಅಮೆರಿಕ: 25 ಲಕ್ಷ ದಾಟಿದ ಸೋಂಕು ಪ್ರಕರಣಗಳು

ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಸಂಖ್ಯೆಗಳ ಪ್ರಕಾರ, ಅಮೆರಿಕದ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಶನಿವಾರ 25 ಲಕ್ಷವನ್ನು ದಾಟಿದೆ. ಜಗತ್ತಿನಲ್ಲೇ ಸಾಂಕ್ರಾಮಿಕದ ಅತಿ ಹೆಚ್ಚಿನ ಬಾಧೆಗೊಳಗಾದ ದೇಶದ ಹಲವಾರು ರಾಜ್ಯಗಳಲ್ಲಿ ಈಗಲೂ ಸೋಂಕು ಪ್ರಕರಣಗಳು ಗರಿಷ್ಠ ಸಂಖ್ಯೆಯಲ್ಲಿವೆ.

ಅಮೆರಿಕದಲ್ಲಿ ಸ್ಥಳೀಯ ಸಮಯ ಶನಿವಾರ ಸಂಜೆ 5:30ರ ವೇಳೆಗೆ, ಬಾಲ್ಟಿಮೋರ್‌ನಲ್ಲಿರುವ ವಿಶ್ವವಿದ್ಯಾನಿಲಯ ಅಂಕಿಸಂಖ್ಯೆಗಳ ಪ್ರಕಾರ, 25,00,419 ಕೊರೋನ ವೈರಸ್ ಸೋಂಕು ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ.

ಅದೇ ವೇಳೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಅಮೆರಿಕದಲ್ಲಿ 43,121 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 502 ಹೊಸ ಸಾವುಗಳು ಸಂಭವಿಸಿದ್ದು, ಈವರೆಗೆ ಸಾಂಕ್ರಾಮಿಕದಿಂದಾಗಿ ಸಾವಿಗೀಡಾದವರ ಒಟ್ಟು ಸಂಖ್ಯೆ 1,25,480ಕ್ಕೆ ಏರಿದೆ.

ಫ್ರೋಜಾರ್ಜಿಯ, ಸೌತ್ ಕ್ಯಾರಲೈನ್ ಮತ್ತು ನೆವಾಡ ರಾಜ್ಯಗಳಲ್ಲಿ ಶನಿವಾರ ದಾಖಲೆಯ ಪ್ರಮಾಣದ ದೈನಂದಿನ ಸೋಂಕು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News