ಜೋ ಬೈಡನ್‌ರ ಡಿಜಿಟಲ್ ಪ್ರಚಾರದ ಮುಖ್ಯಸ್ಥೆಯಾಗಿ ಭಾರತೀಯ ಮಹಿಳೆ ನೇಮಕ

Update: 2020-06-30 16:28 GMT
Photo: Medha Raj/linkedin.com

ವಾಶಿಂಗ್ಟನ್, ಜೂ. 30: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್ ತನ್ನ ಪ್ರಚಾರ ತಂಡದ ಡಿಜಿಟಲ್ ವಿಭಾಗದ ಮುಖ್ಯಸ್ಥೆಯಾಗಿ ಭಾರತೀಯ ಅಮೆರಿಕನ್ ಮೇಧಾ ರಾಜ್‌ರನ್ನು ನೇಮಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಚುನಾವಣಾ ಪ್ರಚಾರವು ಬಹುತೇಕ ಅಶರೀರ (ವರ್ಚುವಲ್)ವಾಗಿ ನಡೆಯುತ್ತಿದ್ದು, ಈ ಹುದ್ದೆಯು ಮಹತ್ವದ್ದಾಗಿದೆ.

ಡಿಜಿಟಲ್ ವಿಭಾಗದ ಎಲ್ಲ ವೇದಿಕೆಗಳ ನಡುವೆ ಸಮನ್ವಯ ತರುವುದು ಹಾಗೂ ಡಿಜಿಟಲ್ ಕೃತಿಗಳ ಪರಿಣಾಮವನ್ನು ಗರಿಷ್ಠಗೊಳಿಸುವುದಕ್ಕಾಗಿ ಅವುಗಳನ್ನು ಸರಳೀಕರಿಸುವುದು ಮೇಧಾರ ಜವಾಬ್ದಾರಿಯಾಗಿರುತ್ತದೆ ಎಂದು ಜೋ ಬೈಡನ್ ಪ್ರಚಾರ ತಂಡ ಹೇಳಿದೆ.

‘‘ಡಿಜಿಟಲ್ ವಿಭಾಗದ ಮುಖ್ಯಸ್ಥೆಯಾಗಿ ಜೋ ಬೈಡನ್‌ರ ಪ್ರಚಾರ ತಂಡಕ್ಕೆ ಸೇರ್ಪಡೆಗೊಂಡಿರುವುದಕ್ಕಾಗಿ ರೋಮಾಂಚಿತಳಾಗಿದ್ದೇನೆ. ಇನ್ನು ಚುನಾವಣೆಗೆ 130 ದಿನಗಳಷ್ಟೇ ಇವೆ. ಒಂದು ನಿಮಿಷವನ್ನೂ ನಾವು ವ್ಯರ್ಥಗೊಳಿಸುವುದಿಲ್ಲ’’ ಎಂದು ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಅವರು ಹೇಳಿದ್ದಾರೆ.

ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ 77 ವರ್ಷದ ಜೋ ಬೈಡನ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎದುರಾಳಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News