ಭಾಷಣದಲ್ಲಿ ‘ಚೀನಾ’ ಹೆಸರನ್ನು ಉಲ್ಲೇಖಿಸದ ಪ್ರಧಾನಿ: ಕಾಂಗ್ರೆಸ್ ಟೀಕೆ

Update: 2020-06-30 17:46 GMT

ಹೊಸದಿಲ್ಲಿ: ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಜೊತೆಗಿನ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾದ ನಂತರ ಪ್ರಥಮ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಭಾಷಣದಲ್ಲಿ ಚೀನಾದ ಬಗ್ಗೆ ಯಾವ ಹೇಳಿಕೆಯನ್ನೂ ನೀಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿದೆ.

ಕೊರೋನ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದು ಪ್ರಧಾನಿಯವರು 6ನೆ ಬಾರಿ ದೇಶವನ್ನುದ್ದೇಶಿಸಿ ಮಾತನಾಡುತ್ತಿರುವುದಾಗಿದೆ. ಚೀನಾದ ಜೊತೆಗಿನ ವಿವಾದದ ಬಗ್ಗೆ ಸರ್ವಪಕ್ಷ ಸಭೆ ಮತ್ತು ಮನ್ ಕಿ ಬಾತ್ ನಲ್ಲಿ ಅವರು ಪರೋಕ್ಷವಾಗಿ ಮಾತನಾಡಿದ್ದರು.

ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 80 ಕೋಟಿ ಬಡವರಿಗೆ ಆಹಾರ ಧಾನ್ಯ ವಿತರಿಸುವುದಕ್ಕಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ 30ರವರೆಗೆ ಮುಂದೂಡಲಾಗಿದೆ ಎಂದರು.

ಪ್ರಧಾನಿ ಸುಮಾರು 17 ನಿಮಿಷಗಳ ಕಾಲ ಮಾತನಾಡಿದ್ದು, ಚೀನಾ ವಿವಾದವನ್ನು ಉಲ್ಲೇಖಿಸಿರಲಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ನಮ್ಮ ಭೂಮಿಯನ್ನು ಕಸಿದವರು ಯಾರು ಎಂದು ಹೇಳಿ, ನಮ್ಮದ್ದನ್ನು ಕದ್ದವರ ವಿರುದ್ಧ ನಮಗೆ ದ್ವೇಷವಿಲ್ಲ, ಆದರೆ ನಮಗೆ ನಿಮ್ಮ ನಾಯಕತ್ವದ ಬಗ್ಗೆ ಪ್ರಶ್ನೆಗಳಿವೆ” ಎನ್ನುವ ಉರ್ದು ಕವಿತೆಯೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಇದೇ ಕವನವನ್ನು ಬಳಸಿದ್ದರು.

“59 ಚೀನಿ ಆ್ಯಪ್ ಗಳನ್ನು ಬ್ಯಾನ್ ಮಾಡುವ ಸಾಂಕೇತಿಕ ಕ್ರಮವನ್ನು ನಾವು ಮೀರಿ ಕ್ರಮ ಕೈಗೊಳ್ಳಬೇಕು. ನಾವು ಚೀನಾದಿಂದ ಹೆಚ್ಚಿನದ್ದನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಪ್ರಾಣ ಕಳೆದುಕೊಂಡ 20 ಯೋಧರಿಗೆ ಇದು ನಾವು ನೀಡುವ ಗೌರವವೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News