ಲಸಿಕೆ ಸಿದ್ಧವಾದರೆ ಮೊದಲು ಕೊರೋನ ಯೋಧರಿಗೆ ಪೂರೈಕೆ: ಸರಕಾರದ ಹೇಳಿಕೆ

Update: 2020-06-30 18:18 GMT

ಹೊಸದಿಲ್ಲಿ, ಜೂ.30: ಕೊರೋನ ಸೋಂಕಿಗೆ ಲಸಿಕೆ ಕಂಡುಹಿಡಿದರೆ ಅದನ್ನು ಮೊದಲು ಕೊರೋನ ಯೋಧರಿಗೆ ಹಾಗೂ ದೇಶದ ದುರ್ಬಲ ವರ್ಗದವರಿಗೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವದಾದ್ಯಂತ 10 ಮಿಲಿಯನ್‌ಗೂ ಅಧಿಕ ಜನರ ಮೇಲೆ ಪರಿಣಾಮ ಬೀರಿದ ಹಾಗೂ 5 ಮಿಲಿಯನ್‌ಗೂ ಅಧಿಕ ಜನರ ಸಾವಿಗೆ ಕಾರಣವಾಗಿರುವ ಕೊರೋನ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಎಲ್ಲಾ ರಾಷ್ಟ್ರಗಳಲ್ಲಿ ನಿರಂತರ ಸಂಶೋಧನೆ ಮುಂದುವರಿದಿದೆ. ಲಸಿಕೆ ಲಭ್ಯವಾದರೆ ಅದನ್ನು ದೇಶದಲ್ಲಿ ವಿತರಿಸುವ ಕ್ರಮ ಮಂಗಳವಾರ ಅಂತಿಮಗೊಳಿಸಿದ ನಾಲ್ಕು ಅಂಶಗಳ ಕ್ರಿಯಾಯೋಜನೆಯಲ್ಲಿ ಸೇರಿದೆ. ವೈದ್ಯಕೀಯ ಸಾಧನಗಳ ಸರಬರಾಜು ಸರಪಳಿಯ ನಿರ್ವಹಣೆ, ಅಪಾಯದಲ್ಲಿರುವ ಜನರಿಗೆ ಮೊದಲ ಆದ್ಯತೆ ನೀಡುವುದು, ವಿವಿಧ ಏಜೆನ್ಸಿಗಳ ಮಧ್ಯೆ ಸಮನ್ವಯತೆ ಸಾಧಿಸುವುದು, ಖಾಸಗಿ ಕ್ಷೇತ್ರ ಮತ್ತು ನಾಗರಿಕ ಸಮಾಜದ ಪಾತ್ರವು ಕ್ರಿಯಾಯೋಜನೆಯಲ್ಲಿ ಒಳಗೊಂಡಿದೆ.

ಲಸಿಕೆಯ ಪೂರೈಕೆಗೆ ‘ಯಾರಾದರೂ ಎಲ್ಲಿಯಾದರೂ’ ಮಾದರಿಯನ್ನು ಅನುಸರಿಸಲು ಸರಕಾರ ನಿರ್ಧರಿಸಿದೆ. ಲಸಿಕೆ ಸಾರ್ವತ್ರಿಕವಾಗಿ , ಕೈಗೆಟುಕುವ ದರದಲ್ಲಿ ಲಭ್ಯವಿರಬೇಕು. ವಾಸಸ್ಥಳ ಸಂಬಂಧಿಸಿದ ಯಾವುದೇ ನಿರ್ಬಂಧ ಲಸಿಕೆಗೆ ಅನ್ವಯಿಸುವುದಿಲ್ಲ ಎಂದು ಸರಕಾರ ತಿಳಿಸಿದೆ. ಲಸಿಕೆಗಳ ಉತ್ಪಾದನೆ ಮತ್ತು ಉತ್ಪಾದನೆ ಸಾಮರ್ಥ್ಯಗಳ ವಾಸ್ತವಿಕ ಸಮಯದ ಮೇಲ್ವಿಚಾರಣೆ ನಡೆಸಲೂ ಪ್ರಧಾನಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News