ನಿಮ್ಮ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು?

Update: 2020-07-02 16:00 GMT

ನಮ್ಮ ಅಭಿಧಮನಿಗಳಲ್ಲಿಯ ರಕ್ತ ನೀಲಿ ಬಣ್ಣದ್ದಾಗಿದೆ ಎಂದು ಮಕ್ಕಳು ಕೆಲವೊಮ್ಮೆ ಭಾವಿಸಿರುತ್ತಾರೆ. ತಮ್ಮ ಮಣಿಕಟ್ಟನ್ನು ನೋಡಿಕೊಂಡರೆ ಯಾರೇ ಆದರೂ ಕ್ಷಣ ಕಾಲ ಹಾಗೆಯೇ ಭಾವಿಸಬಹುದು,ಏಕೆಂದರೆ ಅಲ್ಲಿ ಕಾಣುವ ರಕ್ತನಾಳಗಳು ನೀಲಿ ಛಾಯೆಯನ್ನು ಹೊಂದಿರುತ್ತವೆ. ರಕ್ತ ಕೆಂಪು ಬಣ್ಣವನ್ನು ಹೊಂದಿದೆಯೇ? ಖಂಡಿತವಾಗಿಯೂ ಇಲ್ಲ. ರಕ್ತದ ಕುರಿತು ಪ್ರತಿಯೊಬ್ಬರಿಗೂ ಗೊತ್ತಿರಬೇಕಾದ ಇಂತಹ ಹಲವಾರು ಅಂಶಗಳಿವೆ. ನಮ್ಮ ಶರೀರದಲ್ಲಿ ಎಷ್ಟು ರಕ್ತವಿರುತ್ತದೆ ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ರಕ್ತವು ಮಾನವ ಶರೀರದ ಅಗತ್ಯ ಘಟಕವಾಗಿದೆ. ಅದು ಶರೀರದ ಎಲ್ಲ ಅಂಗಗಳಿಗೆ ಆಮ್ಲಜನಕದ ಸಾಗಾಣಿಕೆದಾರನಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಪ್ರಮುಖ ಪೋಷಕಾಂಶಗಳನ್ನೂ ತನ್ನೊಂದಿಗೆ ಸಾಗಿಸುತ್ತದೆ.

   ರಕ್ತದ ಬಣ್ಣ ಕೆಂಪಾಗಿದ್ದರೂ ಅದರಲ್ಲಿಯ ಆಮ್ಲಜನಕದ ಮಟ್ಟವನ್ನ್ನು ಅವಲಂಬಿಸಿ ಛಾಯೆ ಬದಲಾಗಬಹುದು. ಕೆಂಪು ರಕ್ತಕಣಗಳಲ್ಲಿರುವ ಸಂಕೀರ್ಣ ಪ್ರೋಟಿನ್ ಆಗಿರುವ ಹಿಮೊಗ್ಲೋಬಿನ್ ಕಬ್ಬಿಣವನ್ನು ಒಳಗೊಂಡಿರುತ್ತದೆ. ಈ ಕಬ್ಬಿಣವು ಆಮ್ಲಜನಕದೊಂದಿಗೆ ಪ್ರತಿವರ್ತಿಸುತ್ತದೆ ಮತ್ತು ರಕ್ತಕ್ಕೆ ಕೆಂಪು ಬಣ್ಣವನ್ನು ನೀಡುತ್ತದೆ. ಅಪಧಮನಿಗಳು ಹೃದಯದಿಂದ ಶರೀರದ ಇತರ ಅಂಗಾಂಗಗಳಿಗೆ ರಕ್ತವನ್ನು ಸಾಗಿಸುತ್ತವೆ. ಅಪಧಮನಿಗಳಲ್ಲಿಯ ರಕ್ತವು ಆಮ್ಲಜನಕದಿಂದ ಸಮೃದ್ಧವಾಗಿರುತ್ತದೆ ಮತ್ತು ಇದೇ ಕಾರಣಕ್ಕೆ ಅದು ಪ್ರಖರ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಅಭಿಧಮನಿಗಳು ಅಂಗಾಂಗಗಳಿಂದ ರಕ್ತವನ್ನು ಹೃದಯಕ್ಕೆ ವಾಪಸ್ ಸಾಗಿಸುತ್ತವೆ. ಇವುಗಳಲ್ಲಿಯ ರಕ್ತವು ಆಮ್ಲಜನಕರಹಿತವಾಗಿರುತ್ತದೆ. ಇಲ್ಲಿಯೂ ರಕ್ತ ಕೆಂಪು ಬಣ್ಣದ್ದಾಗಿದ್ದರೂ ಆಮ್ಲಜನಕದ ಕೊರತೆಯಿಂದಾಗಿ ಗಾಢ ಛಾಯೆಯನ್ನು ಹೊಂದಿರುತ್ತದೆ. ಕೆಂಪು ಬಣ್ಣದ ಗಾಢ ಛಾಯೆ ಮತ್ತು ಬೆಳಕು ಚರ್ಮವನ್ನು ಹಾದುಹೋಗುವ ರೀತಿಯಿಂದಾಗಿ ಅಭಿಧಮನಿಗಳಲ್ಲಿನ ರಕ್ತ ನೀಲಿ ಬಣ್ಣವಾಗಿರುವಂತೆ ಕಂಡು ಬರುತ್ತದೆ.

ರಕ್ತವು ಮಾನವ ಶರೀರದ ಅಗತ್ಯ ಘಟಕವಾಗಿದೆ. ಶರೀರದ ಎಲ್ಲ ಅಂಗಗಳಿಗೆ ಆಮ್ಲಜನಕದ ಜೊತೆಗೆ ಪೋಷಕಾಂಶಗಳನ್ನೂ ಪೂರೈಸುವ ಅದು ತನ್ನ ಕೋಶರಹಿತ ಭಾಗವಾದ ಪ್ಲಾಸ್ಮಾದ ಮೂಲಕ ‘ಬಾಡಿ ವಾಲ್ಯೂಮ್’ ಅನ್ನು ಕಾಯ್ದುಕೊಳ್ಳಲು ಅಗತ್ಯವಾಗಿದೆ. ವ್ಯಕ್ತಿಯ ಶರೀರವು ರಕ್ತಸ್ರಾವವು ಅಪಘಾತಗಳ ಸಂದರ್ಭದಲ್ಲಿಯಂತೆ ಏಕಾಏಕಿ ಉಂಟಾಗುವಂತೆ ತೀವ್ರವೋ ಅಥವಾ ಹೊಟ್ಟೆಯ ಹುಣ್ಣುಗಳಲ್ಲಿಯಂತೆ ನಿಧಾನವೋ ಎನ್ನುವುದನ್ನು ಅವಲಂಬಿಸಿ ರಕ್ತದ ನಷ್ಟವನ್ನು ನಿಭಾಯಿಸಿಕೊಳ್ಳುತ್ತದೆ. ಏಕಾಏಕಿ ಶೇ.20ಕ್ಕಿಂತ ಹೆಚ್ಚಿನ ರಕ್ತ ನಷ್ಟವು ಮಾರಣಾಂತಿಕವಾಗಬಲ್ಲದು ಮತ್ತು ತಕ್ಷಣವೇ ರಕ್ತದ ಮರುಪೂರಣ ಆಗಬೇಕಾಗುತ್ತದೆ. ಕ್ರಮೇಣ ರಕ್ತ ನಷ್ಟವನ್ನು ಅದನ್ನುಂಟು ಮಾಡಿರುವ ಕಾರಣಕ್ಕೆ ಚಿಕಿತ್ಸೆ ನೀಡುವ ಮೂಲಕ ನಿಭಾಯಿಸಬೇಕಾಗುತ್ತದೆ.

ರಕ್ತದಲ್ಲಿ ವಿವಿಧ ಮಾದರಿಗಳಿದ್ದು,ಇದು ಕೆಂಪು ರಕ್ತಕಣ (ಆರ್‌ಬಿಸಿ)ಗಳ ಮೇಲ್ಮೈಯಲ್ಲಿನ ನಿರ್ದಿಷ್ಟ ಆ್ಯಂಟಿಜನ್‌ಗಳು ಅಥವಾ ಪ್ರತಿಜನಕಗಳು ಮತ್ತು ಅದಕ್ಕೆ ಅನುಗುಣವಾಗಿ ಆ್ಯಂಟಿಬಾಡಿಗಳು ಅಥವಾ ಪ್ರತಿಕಾಯಗಳ ಅಸ್ತಿತ್ವವನ್ನು ಅವಲಂಬಿಸಿರುತ್ತದೆ. ಆ್ಯಂಟಿಜನ್‌ಗಳ ಆಧಾರದಲ್ಲಿ ರಕ್ತವನ್ನು ಎ,ಬಿ,ಎಬಿ ಮತ್ತು ಒ ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. ಎ ಮತ್ತು ಬಿ ಮಾನವರಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಆ್ಯಂಟಿಜನ್‌ಗಳಾಗಿವೆ. ‘ಒ’ ಗುಂಪಿನ ಜನರ ರಕ್ತದಲ್ಲಿ ಎ ಅಥವಾ ಬಿ ಆ್ಯಂಟಿಜನ್ ಇರುವುದಿಲ್ಲ ಮತ್ತು ಎಬಿ ಗುಂಪು ಎರಡೂ ಆ್ಯಂಟಿಜನ್‌ಗಳನ್ನು ಹೊಂದಿರುತ್ತದೆ.‘ ಒ’ ಭಾರತದಲ್ಲಿ ಕಂಡು ಬರುವ ಹೆಚ್ಚು ಸಾಮಾನ್ಯ ರಕ್ತದ ಗುಂಪಾಗಿದೆ. ರೆಸಸ್ ಫ್ಯಾಕ್ಟರ್ ಮಾನವ ಶರೀರದಲ್ಲಿ ಕಂಡು ಬರುವ ಇನ್ನೊಂದು ಆ್ಯಂಟಿಜನ್ ಆಗಿದ್ದು,ಇದು ಪ್ರೋಟಿನ್ ಆಗಿದೆ. ಈ ಪ್ರೋಟಿನ್ ಹೊಂದಿದವರನ್ನು ಆರ್‌ಎಚ್ ಪಾಸಿಟಿವ್ ಮತ್ತು ಹೊಂದಿಲ್ಲದವರನ್ನು ಆರ್‌ಎಚ್-ನೆಗೆಟಿವ್ ಎಂದು ವರ್ಗೀಕರಿಸಲಾಗಿದೆ.

ಅಂದ ಹಾಗೆ ಬಿಳಿಯ ರಕ್ತಕಣ (ಡಬ್ಲುಬಿಸಿ)ಗಳು ಮುಖ್ಯವೇ? ಬಿಳಿಯ ರಕ್ತಕಣಗಳು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯಕರ ರೋಗ ನಿರೋಧಕ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅಗತ್ಯವಾಗಿವೆ. ಬಿಳಿಯ ರಕ್ತಕಣಗಳಲ್ಲಿ ಹಲವಾರು ವಿಧಗಳಿದ್ದು, ಪ್ರತಿಯೊಂದೂ ತನ್ನದೇ ಆದ ಪ್ರಮುಖ ಪಾತ್ರವನ್ನು ಹೊಂದಿದೆ. ವೈರಸ್ ಅಥವಾ ಬ್ಯಾಕ್ಟೀರಿಯಾ ಅಥವಾ ಶರೀರವನ್ನು ಪ್ರವೇಶಿಸುವ ಯಾವುದೇ ಬಾಹ್ಯ ಕಾಯದ ವಿರುದ್ಧ ಹೋರಾಡಲು ಸಾಕಷ್ಟು ಸಂಖ್ಯೆಯಲ್ಲಿ ಬಿಳಿಯ ರಕ್ತಕಣಗಳನ್ನು ಹೊಂದಿರುವುದು ಅಗತ್ಯವಾಗಿದೆ.

ಮಾನವನ ಶರೀರದಲ್ಲಿ ಎಷ್ಟು ರಕ್ತವಿರುತ್ತದೆ? ಶರೀರದ ಮೇಲ್ಮೈಯನ್ನು ಅವಲಂಬಿಸಿ ರಕ್ತದ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಣ್ಣ ಶರೀರವನ್ನು ಹೊಂದಿರುವ ವ್ಯಕ್ತಿಗೆ ಹೋಲಿಸಿದರೆ ದೊಡ್ಡ ಶರೀರದ ವ್ಯಕ್ತಿ ಹೆಚ್ಚು ರಕ್ತವನ್ನು ಹೊಂದಿರುತ್ತಾನೆ. ವಯಸ್ಕ ವ್ಯಕ್ತಿಯ ಶರೀರದಲ್ಲಿ ಮೂರೂವರೆ ಲೀ.ನಿಂದ ಐದೂವರೆ ಲೀಟರ್‌ವರೆಗೂ ರಕ್ತವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News