ಉಯಿಘರ್ ಮುಸ್ಲಿಮರ ಮೊಬೈಲ್ ಗಳಿಗೆ ಕನ್ನ ಹಾಕುತ್ತಿರುವ ಚೀನಿ ಸಾಫ್ಟ್‌ವೇರ್‌ಗಳು

Update: 2020-07-02 16:57 GMT

ತೈಪೆ (ತೈವಾನ್), ಜು. 2: ಪಶ್ಚಿಮ ಚೀನಾದ ಕ್ಸಿನ್‌ಜಿಯಾಂಗ್ ವಲಯದಲ್ಲಿ ಪೊಲೀಸರು ಪ್ರಬಲ ಕಣ್ಗಾವಲು ಕ್ಯಾಮರಗಳನ್ನು ಅಳವಡಿಸುವ ಮೊದಲೇ ಹಾಗೂ ಲಕ್ಷಾಂತರ ಜನಾಂಗೀಯ ಅಲ್ಪಸಂಖ್ಯಾತರನ್ನು ಬಂಧನ ಕೇಂದ್ರಗಳಲ್ಲಿ ಕೂಡಿ ಹಾಕುವುದಕ್ಕೂ ಮೊದಲೇ, ಅಲ್ಲಿನ ನಿವಾಸಿಗಳ ಮೇಲೆ ನಿಗಾ ಇಡಲು ಚೀನಾದ ಹ್ಯಾಕರ್‌ಗಳು ದುರುದ್ದೇಶದ ಸಾಫ್ಟ್‌ ವೇರ್‌ ಗಳನ್ನು ಅಭಿವೃದ್ಧಿಪಡಿಸಿದ್ದರು ಎನ್ನುವುದನ್ನು ಪರಿಣತರು ಪತ್ತೆಹಚ್ಚಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಮೊಬೈಲ್ ಫೋನ್‌ಗಳಿಗೆ ಕನ್ನ ಹಾಕುವ ಚೀನಾದ ಅಭಿಯಾನವು 2013ರಷ್ಟು ಹಿಂದೆಯೇ ಆರಂಭಗೊಂಡಿತ್ತು ಹಾಗೂ ಇಂದಿಗೂ ಮುಂದುವರಿಯುತ್ತಿದೆ ಎಂದು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಮೊಬೈಲ್ ಸುರಕ್ಷತಾ ಕಂಪೆನಿ ‘ಲುಕೌಟ್’ನ ಸಂಶೋಧಕರು ಬುಧವಾರ ಹೇಳಿದ್ದಾರೆ. ಜನರ ಸ್ಮಾರ್ಟ್‌ಫೋನ್‌ಗಳಿಂದ ಮಾಹಿತಿಗಳನ್ನು ಅಗೋಚರವಾಗಿ ಕದಿಯುವುದು ಈ ಬೇಹುಗಾರಿಕಾ ಅಭಿಯಾನದ ಒಂದು ಭಾಗವಾಗಿತ್ತು.

ಫೋನ್‌ಗಳ ಹ್ಯಾಕಿಂಗ್‌ನಲ್ಲಿ ಬಳಸಲಾಗುತ್ತಿರುವ ಎಂಟು ಮಾದರಿಯ ಕಳ್ಳ ಸಾಫ್ಟ್‌ವೇರ್‌ಗಳ ನಡುವೆ ಕೊಂಡಿ ಇರುವುದನ್ನು ಲುಕೌಟ್ ಪತ್ತೆಹಚ್ಚಿದೆ. ಇದು, ಕ್ಸಿನ್‌ಜಿಯಾಂಗ್‌ನ ಬಹುತೇಕ ಮುಸ್ಲಿಮ್ ಉಯಿಘರ್ ನಿವಾಸಿಗಳು ಬಳಸುವ ಆ್ಯಂಡ್ರಾಯ್ಡ್ ಫೋನ್‌ಗಳಿಗೆ ಚೀನಾ ಸರಕಾರದೊಂದಿಗೆ ಸಂಪರ್ಕ ಹೊಂದಿರುವ ಗುಂಪುಗಳು ಹೇಗೆ ಕನ್ನಹಾಕುತ್ತಿವೆ ಎನ್ನುವುದನ್ನು ಸೂಚಿಸುತ್ತವೆ ಎಂದು ಅದು ಹೇಳಿದೆ. ಉಯಿಘರ್ ಮುಸ್ಲಿಮರ ಫೋನ್‌ಗಳಿಗೆ ಕನ್ನ ಹಾಕುವ ದಂಧೆಯು ಈಗ ಭಾವಿಸಿರುವುದಕ್ಕಿಂತಲೂ ಅಗಾಧ ಹೆಚ್ಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ ಎನ್ನುವುದನ್ನು ಲುಕೌಟ್ ಬಹಿರಂಗಪಡಿಸಿದೆ.

ಪಲಾಯನಗೈದವರನ್ನೂ ಬೆಂಬತ್ತಿದ ಬೇಹು ಸಾಫ್ಟ್‌ವೇರ್‌ಗಳು!

ಚೀನಾದ ಕಿರುಕುಳಕ್ಕೆ ಬೇಸತ್ತು 15 ರಷ್ಟು ದೇಶಗಳಿಗೆ ಪಲಾಯನಗೈದ ಉಯಿಘರ್ ಮುಸ್ಲಿಮರನ್ನು ಬೆಂಬತ್ತಲು ಚೀನಾದ ದೊರೆಗಳು ದೃಢನಿರ್ಧಾರ ಮಾಡಿರುವುದೂ ಈಗ ಬೆಳಕಿಗೆ ಬಂದಿದೆ. ಇದಕ್ಕಾಗಿ ರೂಪಿಸಲಾಗಿರುವ ವಿಶೇಷ ಸಾಫ್ಟ್‌ವೇರ್‌ಗಳನ್ನು ಕನ್ನಗಾರರು ಉಯಿಘರ್‌ ಗಳು ಬಳಸುವ ವಿಶೇಷ ಕೀಬೋರ್ಡ್‌ಗಳಲ್ಲಿ ಅಡಗಿಸಿಸಿಟ್ಟಿದ್ದರು ಹಾಗೂ ಥರ್ಡ್‌ಪಾರ್ಟಿ (ಹೊರಗಿನ) ವೆಬ್‌ಸೈಟ್‌ಗಳಲ್ಲಿ ಸಾಮಾನ್ಯ ಬಳಕೆಯ ಆ್ಯಪ್‌ಗಳ ರೂಪದಲ್ಲಿ ಹರಿಯಬಿಟ್ಟಿದ್ದರು.

 ಈ ಸಾಫ್ಟ್‌ವೇರ್‌ಗಳು ತಾವೇ ಫೋನ್‌ಗಳ ಮೈಕ್ರೋಫೋನ್‌ಗಳನ್ನು ತೆರೆಯಬಲ್ಲವು, ಫೋನ್ ಕರೆಗಳನ್ನು ಧ್ವನಿಮುದ್ರಿಸಿಕೊಳ್ಳಬಲ್ಲವು ಹಾಗೂ ಚಿತ್ರಗಳು, ಫೋನ್ ಇರುವ ಸ್ಥಳ ಮತ್ತು ಚಾಟಿಂಗ್ ಆ್ಯಪ್‌ಗಳಲ್ಲಿ ಮಾಡುವ ಸಂಭಾಷಣೆಗಳನ್ನು ನಿರ್ದಿಷ್ಟ ವಿಳಾಸಗಳಿಗೆ ಕಳುಹಿಸಬಲ್ಲವು. ಕೆಲವು ಕಳ್ಳ ಸಾಫ್ಟ್‌ವೇರ್‌ಗಳನ್ನು ಉಯಿಘರ್ ಭಾಷೆಯ ಸುದ್ದಿ, ಉಯಿಘರ್ ‌ಗಳನ್ನು ಉದ್ದೇಶಿಸಿದ ಸೌಂದರ್ಯ ಸಲಹೆಗಳು, ಕುರ್‌ಆನ್ ಮುಂತಾದ ಧಾರ್ಮಿಕ ಬರಹಗಳನ್ನು ಒದಗಿಸುವ ಆ್ಯಪ್‌ಗಳಲ್ಲಿ ಹುದುಗಿಸಿಡಲಾಗಿತ್ತು ಎಂದು ಲುಕೌಟ್ ಸಂಸ್ಥೆಯ ಸಂಶೋಧಕರು ಹೇಳುತ್ತಾರೆ.

‘‘ಚೀನಾದ ಉಯಿಘರ್‌ಗಳು ಎಲ್ಲೇ ಹೋದರೂ, ಟರ್ಕಿ, ಇಂಡೋನೇಶ್ಯ ಅಥವಾ ಸಿರಿಯ- ಹೀಗೆ ಎಷ್ಟೇ ದೂರ ಹೋದರೂ, ಬೇಹುಗಾರಿಕಾ ಸಾಪ್ಟ್‌ವೇರ್ ಅವರನ್ನು ಬೆಂಬತ್ತುತ್ತಿತ್ತು’’ ಎಂದು ‘ಲುಕೌಟ್’ ಸಂಸ್ಥೆಯಲ್ಲಿ ತ್ರೆಟ್ ಇಂಟಲಿಜನ್ಸ್ ಇಂಜಿನಿಯರ್ ಆಗಿರುವ ಅಪೂರ್ವ ಕುಮಾರ್ ಹೇಳುತ್ತಾರೆ. ‘‘ಇದು ಆಕ್ರಮಣಕಾರಿ ಪ್ರಾಣಿಯೊಂದು ತನ್ನ ಬಲಿಯನ್ನು ಜಗತ್ತಿನಾದ್ಯಂತ ಬೆನ್ನತ್ತಿದ ಹಾಗೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಫೋನ್ ವಶಪಡಿಸಿ ಬೇಹು ಸಾಫ್ಟ್‌ವೇರ್ ಹಾಕಿದ ಪೊಲೀಸರು

2015ರಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿ ಜನಾಂಗೀಯ ಹಿಂಸಾಚಾರ ಸಂಭವಿಸಿದ ಬಳಿಕ, ಜನರು ಆನ್‌ಲೈನ್‌ನಲ್ಲಿ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕಾಗಿ ಅಧಿಕಾರಿಗಳು ಹೊಸ ಕಾರ್ಯಾಚರಣೆಯೊಂದನ್ನು ನಡೆಸಿದರು. ಕ್ಸಿನ್‌ಜಿಯಾಂಗ್‌ನ ಬೀದಿಗಳಲ್ಲಿ ಉಯಿಘರ್‌ಗಳ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡರು. ಹಲವು ಪ್ರಕರಣಗಳಲ್ಲಿ, ಫೋನ್‌ಗಳಿಗೆ ಹೊಸ ಬೇಹು ಸಾಫ್ಟ್‌ವೇರ್ ಅಳವಡಿಸಿ ತಿಂಗಳುಗಳ ಬಳಿಕ ಮರಳಿಸಿದರು. ಕೆಲವು ಪ್ರಕರಣಗಳಲ್ಲಿ ಬೇರೆಯದೇ ಆದ ಫೋನ್‌ ಗಳನ್ನು ನೀಡಲಾಯಿತು. ಹಳ್ಳಿಗಳಿಗೆ ನಿರಂತರವಾಗಿ ಭೇಟಿ ನೀಡಿದ ಅಧಿಕಾರಿಗಳು ಫೋನ್‌ಗಳ ಸೀರಿಯಲ್ ನಂಬರ್‌ಗಳನ್ನು ದಾಖಲಿಸಿಕೊಂಡರು ಹಾಗೂ ಜನರು ನಡೆಯುವಾಗ ಅವರ ಫೋನ್‌ಗಳ ಮೇಲೆ ನಿಗಾ ಇಡಲು ಬೀದಿಗಳಲ್ಲಿ ಸಲಕರಣೆಗಳನ್ನು ಅಳವಡಿಸಿದರು.

ಈ ಸಂದರ್ಭದಲ್ಲಿ ಎರಡು ಫೋನ್‌ಗಳನ್ನು ಹೊಂದಿದ, ಹಳೆಯ ಫೋನ್‌ಗಳನ್ನು ಹೊಂದಿದ ಅಥವಾ ಫೋನ್‌ಗಳನ್ನೇ ಹೊಂದಿರದ ಉಯಿಘರ್‌ಗಳನ್ನು ಬಂಧನ ಕೇಂದ್ರಗಳಿಗೆ ತಳ್ಳಲಾಯಿತು ಎನ್ನುವುದನ್ನು ಸರಕಾರದ ದಾಖಲೆಗಳೇ ಹೇಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News