ಚೀನಾ ಕಮ್ಯುನಿಸ್ಟ್ ಪಕ್ಷದ ನಿಜವಾದ ಬಣ್ಣ ತೋರಿಸುತ್ತಿದೆ: ಟ್ರಂಪ್

Update: 2020-07-02 17:01 GMT

ವಾಶಿಂಗ್ಟನ್, ಜು. 2: ಭಾರತ ಮತ್ತು ಈ ವಲಯದ ಇತರ ದೇಶಗಳ ವಿರುದ್ಧ ಚೀನಾದ ಆಕ್ರಮಣಕಾರಿ ನಿಲುವು ಚೈನೀಸ್ ಕಮ್ಯುನಿಸ್ಟ್ ಪಕ್ಷದ ‘ನಿಜವಾದ ಸ್ವಭಾವ’ವನ್ನು ತೋರಿಸುತ್ತದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಲೀ ಮೆಕೆನಾನಿ ಹೇಳಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ನೆಲೆಸಿರುವ ಸಂಘರ್ಷದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಅಲ್ಲಿನ ಪ್ರಸಕ್ತ ಸ್ಥಿತಿಯನ್ನು ಅಮೆರಿಕ ನಿಕಟವಾಗಿ ಗಮನಿಸುತ್ತಿದೆ ಹಾಗೂ ವಿವಾದದ ಶಾಂತಿಯುತ ಇತ್ಯರ್ಥಕ್ಕೆ ಬೆಂಬಲ ನೀಡುತ್ತದೆ ಎಂದರು.

ಗಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ಉಭಯ ದೇಶಗಳ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾದ ಕಡೆಯಲ್ಲೂ ಸಾವು-ನೋವುಗಳು ಸಂಭವಿಸಿದೆಯಾದರೂ, ಅದು ಈ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ.

‘‘ಚೀನಾ ಸೈನಿಕರ ಕೃತ್ಯಗಳು ಚೀನಾ ಕಮ್ಯುನಿಸ್ಟ್ ಪಕ್ಷದ ನೈಜ ಸ್ವಭಾವವನ್ನು ತೋರಿಸುತ್ತದೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೆಕೆನಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News