ನಾನು ಅಧಿಕಾರಕ್ಕೆ ಬಂದರೆ ಎಚ್-1ಬಿ ವೀಸಾ ನಿಷೇಧ ತೆರವು: ಬೈಡನ್

Update: 2020-07-02 17:11 GMT

ವಾಶಿಂಗ್ಟನ್, ಜು. 2: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಗೆದ್ದರೆ ಎಚ್-1ಬಿ ವೀಸಾ ವಿತರಣೆಯ ಮೇಲೆ ವಿಧಿಸಲಾಗಿರುವ ತಾತ್ಕಾಲಿಕ ನಿಷೇಧವನ್ನು ತೆರವುಗೊಳಿಸುವುದಾಗಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಹೇಳಿದ್ದಾರೆ. ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಈ ವೀಸಾ ಅತ್ಯಂತ ಮಹತ್ವದ್ದಾಗಿದೆ.

‘ಅಮೆರಿಕದ ಉದ್ಯೋಗಿಗಳ ಹಿತಾಸಕ್ತಿಯನ್ನು ರಕ್ಷಿಸುವುದಕ್ಕಾಗಿ’ ಎಚ್-1ಬಿ ಸೇರಿದಂತೆ ಹಲವು ಉದ್ಯೋಗ ವೀಸಾಗಳನ್ನು ಈ ವರ್ಷದ ಕೊನೆಯವರೆಗೆ ಸ್ಥಗಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೂನ್ 23ರಂದು ಘೋಷಿಸಿದ್ದರು. ಆಡಳಿತಾರೂಢ ರಿಪಬ್ಲಿಕನ್ ಪಕ್ಷದಿಂದ ಎರಡನೇ ಅವಧಿಗೆ ಸ್ಪರ್ಧಿಸುತ್ತಿರುವ ಟ್ರಂಪ್, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಘೋಷಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.

‘‘ಅವರು (ಟ್ರಂಪ್) ಈ ವರ್ಷದ ಕೊನೆಯವರೆಗೆ ಎಚ್-1ಬಿ ವೀಸಾಗಳನ್ನು ಸ್ಥಗಿತಗೊಳಿಸಿದ್ದಾರೆ. ಆದರೆ, ಆ ನಿಷೇಧ ನನ್ನ ಸರಕಾರದಲ್ಲಿ ಇರುವುದಿಲ್ಲ’’ ಎಂದು 77 ವರ್ಷದ ಬೈಡನ್ ಬುಧವಾರ ನಡೆದ ಏಶ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ ಕುರಿತ ಅಶರೀರ ಟೌನ್‌ಹಾಲ್ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು. ಎನ್‌ಬಿಸಿ ನ್ಯೂಸ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News