ಹಾಂಕಾಂಗ್ ನಿವಾಸಿಗಳಿಗೆ ಪೌರತ್ವ ನೀಡಲು ಮುಂದಾದ ಬ್ರಿಟನ್

Update: 2020-07-02 17:23 GMT

ಲಂಡನ್, ಜು. 2: ಹಾಂಕಾಂಗ್ ಜನರ ಮೇಲೆ ಚೀನಾವು ನೂತನ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರಿದ ಬಳಿಕ, ಅಲ್ಲಿನ ಜನರಿಗೆ ಬ್ರಿಟಿಶ್ ಪೌರತ್ವವನ್ನು ಪಡೆಯುವ ಹಾದಿಯನ್ನು ಬ್ರಿಟನ್ ಬುಧವಾರ ಸುಗಮಗೊಳಿಸಿದೆ. ಹಾಂಕಾಂಗ್ ಹಿಂದೆ ಬ್ರಿಟನ್‌ನ ಆಡಳಿತಕ್ಕೆ ಒಳಪಟ್ಟಿತ್ತು. 1997ರಲ್ಲಿ ಬ್ರಿಟನ್ ಅದನ್ನು ಚೀನಾಕ್ಕೆ ಮರಳಿಸಿತ್ತು.

ಈ ಸಂಬಂಧ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಬುಧವಾರ ಘೋಷಣೆಯೊಂದನ್ನು ಮಾಡಿದ್ದಾರೆ. ಚೀನಾದ ಕ್ರಮಕ್ಕೆ ಪ್ರತಿಯಾಗಿ ಚೀನಾದೊಂದಿಗಿನ ಸರ್ವ ಸಂಬಂಧಗಳನ್ನು ಬ್ರಿಟನ್ ಪುನರ್‌ಪರಿಶೀಲಿಸುತ್ತಿರುವ ಸಮಯದಲ್ಲೇ ಈ ಘೋಷಣೆ ಹೊರಬಿದ್ದಿದೆ. ಬ್ರಿಟನ್‌ನಲ್ಲಿ 5ಜಿ ಟೆಲಿಫೋನ್ ಜಾಲವನ್ನು ಸ್ಥಾಪಿಸಲು ಚೀನಾದ ವಾವೇ ಕಂಪೆನಿಗೆ ನೀಡಲಾಗಿರುವ ಗುತ್ತಿಗೆಯನ್ನು ಮರುಪರಿಶೀಲಿಸುವುದೂ ಇದರಲ್ಲಿ ಸೇರಿದೆ.

‘‘ನಾವು ನಿಯಮಗಳು ಮತ್ತು ಬದ್ಧತೆಗಳ ಪರವಾಗಿದ್ದೇವೆ’’ ಎಂದು ನೂತನ ಕಾನೂನಿನ ಅಡಿಯಲ್ಲಿ ಚೀನಾವು ಹಾಂಕಾಗ್‌ನಲ್ಲಿ ಮೊದಲ ಬಂಧನ ಮಾಡಿದ ಗಂಟೆಗಳ ಬಳಿಕ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಹೇಳಿದರು.

ಪ್ರತೀಕಾರ: ಚೀನಾ ಎಚ್ಚರಿಕೆ

ಹಾಂಕಾಂಗ್ ನಿವಾಸಿಗಳಿಗೆ ಪೌರತ್ವ ನೀಡುವ ತನ್ನ ಯೋಜನೆಯನ್ನು ಬ್ರಿಟನ್ ಜಾರಿಗೊಳಿಸಿದರೆ ಅದರ ವಿರುದ್ಧ ಪ್ರತೀಕಾರತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಚೀನಾ ಗುರುವಾರ ಎಚ್ಚರಿಸಿದೆ.

‘‘ಚಾಲ್ತಿಯಲ್ಲಿರುವ ಪ್ರಕ್ರಿಯೆಗಳಿಗೆ ಬ್ರಿಟನ್ ಏಕಪಕ್ಷೀಯ ಬದಲಾವಣೆಗಳನ್ನು ಮಾಡಿದರೆ, ಅದು ಅದರದೇ ನಿಲುವನ್ನು ಹಾಗೂ ಅಂತರ್‌ರಾಷ್ಟ್ರೀಯ ಕಾನೂನು ಮತ್ತು ಅಂತರ್‌ರಾಷ್ಟ್ರೀಯ ಸಂಬಂಧಗಳನ್ನು ನಿಭಾಯಿಸುವ ಮೂಲಭೂತ ನಿಯಮಗಳನ್ನು ಉಲ್ಲಂಸಿದಂತಾಗುತ್ತದೆ’’ ಎಂದು ಲಂಡನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿ ಗುರುವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News