ನೇಪಾಳ: ಇಂದಿನ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ ಪ್ರಧಾನಿ ಭವಿಷ್ಯ ನಿರ್ಧಾರ

Update: 2020-07-03 16:29 GMT

ಕಠ್ಮಂಡು (ನೇಪಾಳ), ಜು. 3: ಶನಿವಾರ ನಡೆಯುವ ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮಹತ್ವದ ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಧಾನಿ ಕೆ.ಪಿ. ಒಲಿಯವರ ಭವಿಷ್ಯ ನಿರ್ಧಾರವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರಧಾನಿಯ ರಾಜೀನಾಮೆಗಾಗಿ ಬೇಡಿಕೆಗಳು ಹೆಚ್ಚುತ್ತಿರುವ ನಡುವೆಯೇ ಈ ಸಭೆ ನಡೆಯುತ್ತಿದೆ.

ನೇಪಾಳ ಕಮ್ಯುನಿಸ್ಟ್ ಪಕ್ಷದ ಅತ್ಯಂತ ಪ್ರಭಾವಿ ಘಟಕವಾಗಿರುವ 45 ಸದಸ್ಯರ ಸ್ಥಾಯಿ ಸಮಿತಿಯ ಸಭೆಯು ಗುರುವಾರ ನಡೆಯಬೇಕಾಗಿತ್ತು. ಆದರೆ, ಪ್ರಧಾನಿ ಒಲಿ ರಾಜೀನಾಮೆ ಬಗ್ಗೆ ಒಮ್ಮತ ರೂಪಿಸಲು ಪಕ್ಷದ ಉನ್ನತ ನಾಯಕತ್ವ ವಿಫಲವಾದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ.

ಪ್ರಧಾನಿಯ ಇತ್ತೀಚಿನ ಭಾರತ-ವಿರೋಧಿ ಹೇಳಿಕೆಗಳು ರಾಜಕೀಯವಾಗಿಯೂ ಸರಿಯಲ್ಲ ಹಾಗೂ ರಾಜತಾಂತ್ರಿಕವಾಗಿಯೂ ಸೂಕ್ತವಲ್ಲ ಎಂದು ಹೇಳಿರುವ ಪಕ್ಷದ ಕೆಲವು ಉನ್ನತ ನಾಯಕರು, ಅವರು ರಾಜೀನಾಮೆ ನೀಡಬೇಕೆಂದು ಮಂಗಳವಾರ ಒತ್ತಾಯಿಸಿದ್ದರು.

‘‘ತನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಭಾರತ ಪಿತೂರಿ ನಡೆಸುತ್ತಿದೆ ಎಂಬ ಪ್ರಧಾನಿಯ ಹೇಳಿಕೆಯು ರಾಜಕೀಯವಾಗಿಯೂ ಸರಿಯಲ್ಲ, ರಾಜತಾಂತ್ರಿಕವಾಗಿಯೂ ಸೂಕ್ತವಲ್ಲ’’ ಎಂದು ನೇಪಾಳ ಕಮ್ಯುನಿಸ್ಟ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’ ಹೇಳಿದ್ದರು.

ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ರಾಯಭಾರ ಕಚೇರಿಗಳು ಮತ್ತು ಹೊಟೇಲ್‌ಗಳಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನಡೆಯುತ್ತಿವೆ ಎಂಬುದಾಗಿ 68 ವರ್ಷದ ಪ್ರಧಾನಿ ರವಿವಾರ ಆರೋಪಿಸಿದ್ದರು.

‘‘ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯದುರ ಎಂಬ ಮೂರು ಆಯಕಟ್ಟಿನ ಭಾರತೀಯ ಪ್ರದೇಶಗಳನ್ನು ಸೇರ್ಪಡೆಗೊಳಿಸುವ ಮೂಲಕ ನೇಪಾಳದ ರಾಜಕೀಯ ನಕಾಶೆಯನ್ನು ಸರಕಾರ ಬದಲಾಯಿಸಿದ ಬಳಿಕ, ಭಾರತ ಆಡುತ್ತಿರುವ ಆಟದಲ್ಲಿ ಕೆಲವು ನೇಪಾಳಿ ನಾಯಕರೂ ಶಾಮೀಲಾಗಿದ್ದಾರೆ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News