ಫ್ರಾನ್ಸ್‌ಗೆ ನೂತನ ಪ್ರಧಾನಿಯನ್ನು ನೇಮಿಸಿದ ಅಧ್ಯಕ್ಷ

Update: 2020-07-03 17:03 GMT

ಪ್ಯಾರಿಸ್ (ಫ್ರಾನ್ಸ್), ಜು. 3: ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಶುಕ್ರವಾರ ಹಿರಿಯ ನಾಗರಿಕ ಸೇವೆಯ ಅಧಿಕಾರಿ ಜೀನ್ ಕ್ಯಾಸ್ಟೆಕ್ಸ್‌ರನ್ನು ದೇಶದ ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ. ಸರಕಾರದ ಪುನರ್ರಚನೆಯ ಭಾಗವಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

‘‘ಜೀನ್ ಕ್ಯಾಸ್ಟೆಕ್ಸ್‌ರನ್ನು ಪ್ರಧಾನಿಯಾಗಿ ಅಧ್ಯಕ್ಷರು ನೇಮಿಸಿದ್ದಾರೆ ಹಾಗೂ ಸರಕಾರ ರಚಿಸುವಂತೆ ಅವರಿಗೆ ನಿರ್ದೇಶನ ನೀಡಿದ್ದಾರೆ’’ ಎಂದು ಅಧ್ಯಕ್ಷರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಇದಕ್ಕೂ ಮೊದಲು, ಹಾಲಿ ಪ್ರಧಾನಿ ಎಡ್ವರ್ಡ್ ಫಿಲಿಪ್ ತನ್ನ ಸಂಪುಟದ ಎಲ್ಲ ಸಚಿವರೊಂದಿಗೆ ರಾಜೀನಾಮೆ ನೀಡಿದರು.

ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ತನ್ನ ಅಧ್ಯಕ್ಷೀಯ ಅವಧಿಯ ಉಳಿದ ಎರಡು ವರ್ಷಗಳಲ್ಲಿ ಹೊಸ ಅಧ್ಯಾಯವೊಂದನ್ನು ತೆರೆಯಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಹಾನಿಗೊಳಗಾಗಿರುವ ದೇಶದ ಆರ್ಥಿಕತೆಗೆ ಮರುಜೀವ ನೀಡಲು ಅವರು ಈ ಅವಧಿಯಲ್ಲಿ ಶ್ರಮಿಸಲಿದ್ದಾರೆ.

ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧ್ಯಕ್ಷ ಮ್ಯಾಕ್ರೋನ್‌ರ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News