ಐಪಿಎಲ್‌ನ್ನು ಬೆಂಬಲಿಸುವ ಸ್ಥಿತಿಯಲ್ಲಿ ಮಾರುಕಟ್ಟೆ ಇಲ್ಲ

Update: 2020-07-04 18:23 GMT

     ಮುಂಬೈ, ಜು.4:ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಭವಿಷ್ಯದ ಬಗ್ಗೆ ಇನ್ನೂ ಸ್ಪಷ್ಟತೆ ಕಾಣುತ್ತಿಲ್ಲ. ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಕ್ರಿಕೆಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದು ಪ್ರಸಾರಕರು ಮತ್ತು ನಿರ್ವಾಹಕರಿಗೆ ಸಮಸ್ಯೆಗಳನ್ನು ಸೃಷ್ಟಿಸಿದೆ.

  ಐಪಿಎಲ್ ರದ್ದತಿ ಅಥವಾ ದೀರ್ಘಕಾಲದ ಮುಂದೂಡಿಕೆ ಖಂಡಿತವಾಗಿಯೂ ಬಿಸಿಸಿಐನ ಹಣಕಾಸಿನ ಮೇಲೆ ಪರಿಣಾಮ ಬೀರಲಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಟ್ವೆಂಟಿ-20 ಲೀಗ್‌ಗೆ ಧಕ್ಕೆಯನ್ನುಂಟು ಮಾಡಿದೆ. ಜಾಹೀರಾತುದಾರರು ಅದೃಷ್ಟ ಪರೀಕ್ಷೆಗೆ ಹಣ ಹೂಡಿಕೆಯಲ್ಲಿ ಹಿಂದೇಟು ಹಾಕುತ್ತಿದ್ದಾರೆ.

    ‘‘ಐಪಿಎಲ್ ಪಂದ್ಯಾವಳಿಗೆ ಜಾಹೀರಾತುದಾರರು ಹಣ ಹೂಡುತ್ತಾರೆ.ಆದರೆ ಇದೀಗ ಮಾರುಕಟ್ಟೆ ಭಾರೀ ಆಘಾತಕ್ಕೆ ಒಳಗಾಗಿದೆ. ಮುಂದಿನ 6-8 ವಾರಗಳಲ್ಲಿ ಸಾವಿರ ಕೋಟಿ ಮೌಲ್ಯದ ಜಾಹೀರಾತನ್ನು ಹಾಕಬೇಕಾದರೆ ಮಾರುಕಟ್ಟೆ ಸಾಕಷ್ಟು ಚೇತರಿಸಿಕೊಂಡಿದೆಯೇ ಎಂಬುದು ನಿಜವಾದ ಪ್ರಶ್ನೆಯಾಗಿದೆ. ಆದರೆ ನಮಗೆ ಅನುಮಾನವಿದೆ ಐಪಿಎಲ್‌ನ್ನು ಬೆಂಬಲಿಸುವ ಸ್ಥಿತಿಯಲ್ಲಿ ಮಾರುಕಟ್ಟೆ ಇಲ್ಲ ’’ಎಂದು ಸ್ಟಾರ್ ಮತ್ತು ಡಿಸ್ನಿ ಇಂಡಿಯಾ ಅಧ್ಯಕ್ಷ ಉದಯ್ ಶಂಕರ್ ಹೇಳಿದ್ದಾರೆ.

‘‘ಐಪಿಎಲ್‌ನ್ನು ಹಿಂದಿನಂತೆ ಉತ್ಸಾಹದಿಂದ ಬೆಂಬಲಿಸಲು ಮಾರುಕಟ್ಟೆ ಸಿದ್ಧವಾಗಿದೆ ಎಂಬ ವಿಶ್ವಾಸ ನನಗಿಲ್ಲ ’’ಎಂದು ಅಭಿಪ್ರಾಯಪಟ್ಟರು.

 2018ರಿಂದ, ಸ್ಟಾರ್ ಇಂಡಿಯಾ ಮಾಧ್ಯಮ ಹಕ್ಕುಗಳಿಗಾಗಿ ವಾರ್ಷಿಕವಾಗಿ ರೂ. 3,270 ಕೋಟಿ ಪಾವತಿಸುತ್ತದೆ. ಅಲ್ಲದೆ, ಬಿಸಿಸಿಐ ಪ್ರಾಯೋಜಕತ್ವದಲ್ಲಿ ಸುಮಾರು ರೂ. 700 ಕೋಟಿ ಗಳಿಸುತ್ತದೆ (ಶೀರ್ಷಿಕೆ ಪ್ರಾಯೋಜಕ ವಿವೊದಿಂದ ರೂ. 440 ಕೋಟಿ ಮತ್ತು ಸಹಾಯಕ ಪ್ರಾಯೋಜಕರಿಂದ ರೂ. 250ರಿಂದ 300 ಕೋಟಿ). ಈ ಆದಾಯದ ಅರ್ಧವನ್ನು ಎಂಟು ಐಪಿಎಲ್ ಫ್ರಾಂಚೈಸಿಗಳಿಗೆ ಸಮನಾಗಿ ಹಂಚಿದ ನಂತರವೂ, ಬಿಸಿಸಿಐಗೆ ಐಪಿಎಲ್‌ನಿಂದ ವಾರ್ಷಿಕ ರೂ. 2,000 ಕೋಟಿ ಆದಾಯವಿದೆ. ಪ್ರತಿ ಅಂತರ್‌ರಾಷ್ಟ್ರೀಯ ತವರಿನ ಪಂದ್ಯಕ್ಕೆ ಮಂಡಳಿಯು ಸ್ಟಾರ್ ಇಂಡಿಯಾದಿಂದ ಸುಮಾರು ರೂ.60 ಕೋಟಿ ಆದಾಯ ಪಡೆಯುತ್ತದೆ.

ಈ ವರ್ಷ ಐಪಿಎಲ್ ಇಲ್ಲದಿದ್ದರೆ ಮಂಡಳಿ ಮತ್ತು ರಾಜ್ಯ ಸಂಘಗಳಿಗೆ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಈ ಹಿಂದೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News