ನಿಧಾನವಾಗಿ ಹೆಚ್ಚುತ್ತಿರುವ ದೇಶಿಯ ವಿಮಾನ ಪ್ರಯಾಣಿಕರ ಸಂಖ್ಯೆ

Update: 2020-07-05 17:43 GMT

ಹೊಸದಿಲ್ಲಿ,ಜು.5: ದೇಶಿಯ ವಿಮಾನ ಯಾನಗಳು ಮೇ 25ರಿಂದ ಪುನರಾರಂಭಗೊಂಡ ಬಳಿಕ ಪ್ರಯಾಣಿಕರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದ್ದು, ಶನಿವಾರ 76,104 ಜನರು ಪ್ರಯಾಣಿಸಿದ್ದಾರೆ. ಇದು ವಿಮಾನಯಾನಗಳು ಪುನರಾರಂಭಗೊಂಡ ಬಳಿಕ 41ದಿನಗಳಲ್ಲಿ ಗರಿಷ್ಠ ದೈನಂದಿನ ಪ್ರಯಾಣಿಕರ ಸಂಖ್ಯೆಯಾಗಿದೆ ಎಂದು ನಾಗರಿಕ ವಾಯುಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರವಿವಾರ ಪ್ರಕಟಿಸಿದ್ದಾರೆ.

ಮೇ 25ರಂದು 30,000 ಜನರು ದೇಶಿಯ ವಿಮಾನಯಾನಗಳಲ್ಲಿ ಪ್ರಯಾಣಿಸಿದ್ದರು,ಅಲ್ಲಿಂದೀಚಿಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಶನಿವಾರ ಒಟ್ಟು 1,560 ವಿಮಾನಯಾನಗಳನ್ನು ನಿರ್ವಹಿಸಲಾಗಿತ್ತು ಎಂದೂ ಪುರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ದೇಶೀಯ ವಿಮಾನಯಾನಕ್ಕೆ ವಿಧಿಸಲಾಗಿದ್ದ ಷರತ್ತುಗಳನ್ನು ಸಡಿಲಗೊಳಿಸಿದ್ದ ವಾಯುಯಾನ ಸಚಿವಾಲಯವು ತನ್ನ ಜೂ.29ರ ಆದೇಶದಲ್ಲಿ ಹಿಂದಿನ ಮೂರು ವಾರಗಳಲ್ಲಿ ಕೋವಿಡ್-19ಗೆ ಪಾಸಿಟಿವ್ ಆಗಿರದ ವ್ಯಕ್ತಿಗಳು ವಿಮಾನ ಪ್ರಯಾಣವನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿತ್ತು. ಇಂತಹ ಪ್ರಯಾಣಿಕರು ಸ್ವಯಂ ಘೋಷಣೆಯನ್ನು ಸಲ್ಲಿಸಿದರೆ ಸಾಕು ಮತ್ತು ಕೋವಿಡ್-19 ಸೋಂಕಿನಿಂದ ಗುಣಮುಖರಾದವರು ವಿಮಾನವನ್ನು ಹತ್ತುವ ಮುನ್ನ ಆ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಈ ಮೊದಲಿನ ಷರತ್ತಿನಡಿ ಹಿಂದಿನ ಎರಡು ತಿಂಗಳಲ್ಲಿ ಕೊರೋನ ವೈರಸ್‌ಗೆ ಪಾಸಿಟಿವ್ ಆದವರಿಗೆ ವಿಮಾನ ಪ್ರಯಾಣವನ್ನು ನಿಷೇಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News