ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ಚಿಕಿತ್ಸೆಗೆ ದಿನಕ್ಕೆ 1.5 ಲಕ್ಷ ರೂ. ಶುಲ್ಕ ಎಂದು ಆರೋಪಿಸಿದ ಸರಕಾರಿ ವೈದ್ಯೆ

Update: 2020-07-06 12:00 GMT

ಹೈದರಾಬಾದ್: ಹೈದರಾಬಾದ್‍ಬನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19ಗೆ ಚಿಕಿತ್ಸೆ ಪಡೆಯುತ್ತಿದ್ದ ಸರಕಾರಿ ವೈದ್ಯೆಯೊಬ್ಬರನ್ನು ಆ ಆಸ್ಪತ್ರೆಯು `ದುಬಾರಿ ಶುಲ್ಕ' ಪಾವತಿಸಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯಲ್ಲಿಯೇ ಬಲವಂತವಾಗಿ ಉಳಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಡಾ. ಅಸ್ರಾ ಸುಲ್ತಾನ ಎಂಬ ವೈದ್ಯೆ ಸೆಲ್ಫೀ ವೀಡಿಯೋವೊಂದನ್ನು ಮಾಡಿದ್ದು ಆಸ್ಪತ್ರೆಯ ಶೋಷಣೆಯಿಂದ ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರಲ್ಲದೆ, ಖಾಸಗಿ ಆಸ್ಪತ್ರೆಗಳು ಕೋವಿಡ್ 19 ಚಿಕಿತ್ಸೆಗೆ ಸರಕಾರ ಸೂಚಿಸಿದ ಶುಲ್ಕಕ್ಕಿಂತ ಅಧಿಕ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಡಾ. ಸುಲ್ತಾನ ಹೈದರಾಬಾದ್‍ ನ ಸರಕಾರಿ ಫೀವರ್ ಹಾಸ್ಪಿಟಲ್‍ನಲ್ಲಿ ಸಹಾಯಕ ಸಿವಿಲ್ ಸರ್ಜನ್ ಆಗಿದ್ದಾರೆ.  “ಉಸಿರಾಟ ಸಮಸ್ಯೆಯಿದ್ದುದರಿಂದ ನನ್ನನ್ನು ಚದೇರ್‍ ಘಾಟ್ ಎಂಬಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ದಿನದ ಶುಲ್ಕ ರೂ 1.15 ಲಕ್ಷ ಆಗಿತ್ತು. ನನ್ನ ಸೋದರ  ಒಟ್ಟು ರೂ 1.9 ಲಕ್ಷ  ಪಾವತಿಸಿದ್ದರೂ  ಅವರು ನನ್ನನ್ನು ಡಿಸ್ಚಾರ್ಜ್ ಮಾಡುತ್ತಿಲ್ಲ, ನಮ್ಮ ಜತೆ ಕೆಟ್ಟದ್ದಾಗಿ ವರ್ತಿಸುತ್ತಿದ್ದಾರೆ'' ಎಂದು ಡಾ ಸುಲ್ತಾನ ವೀಡಿಯೊದಲ್ಲಿ ಅಳುತ್ತಾ ಹೇಳಿದ್ದಾರೆ.

"ನಾನು ಕಷ್ಟದಲ್ಲಿದ್ದೇನೆ, ಸಹಾಯ ಮಾಡಿ, ಅವರಿಗೆ ಪ್ರತಿ ದಿನ ರೂ 1 ಲಕ್ಷ ಪಾವತಿಸಲು ನನಗೆ ಸಾಧ್ಯವಿಲ್ಲ. ನನಗೀಗಲೇ ಡಿಸ್ಚಾರ್ಜ್ ಆಗಬೇಕು. ನಾನೊಬ್ಬ ಕೋವಿಡ್ ವಾರಿಯರ್'' ಎಂದು ಅವರು  ಹೇಳಿದ್ದಾರೆ.

ಆದರೆ ಡಾ. ಸುಲ್ತಾನ ಅವರು ಕರ್ತವ್ಯ ಸಲ್ಲಿಸುವ ಫೀವರ್ ಹಾಸ್ಪಿಟಲ್‍ನ ಅಧೀಕ್ಷಕ ಡಾ ಕೆ ಶಂಕರ್ ಪ್ರಕಾರ ಸುಲ್ತಾನ ಅವರು ಯಾವತ್ತೂ ಕೋವಿಡ್ ಕರ್ತವ್ಯ ನಿಭಾಯಿಸಿಲ್ಲ. ಕಳೆದ ವಾರ ಆಕೆಯ ವರದಿ ನೆಗೆಟಿವ್ ಬಂದಿತ್ತು. ನಂತರ ಆಕೆ ಸಂದೇಶ ಕಳುಹಿಸಿ ಆಕೆಯ ವರದಿ ಪಾಸಿಟಿವ್ ಆಗಿದೆ ಎಂದು ಹೇಳಿ ಕ್ವಾರಂಟೈನಿನಲ್ಲಿರಲು 14 ದಿನ ರಜೆ ಕೇಳಿದ್ದರು. “ಆಕೆ ಖಾಸಗಿ ಆಸ್ಪತ್ರೆಗೆ ದಾಖಲಾದ ವಿಚಾರ ನನಗೆ ಗೊತ್ತಿಲ್ಲ. ಅದು ಆಕೆಯ ಆಯ್ಕೆ. ಆಕೆಗೆ ಅಗತ್ಯವಿದ್ದರೆ ಬೇರೆ ಆಸ್ಪತ್ರೆಗೆ ಸೇರಿಸಲು ಸಿದ್ಧ. ಆಕೆಯ ಬಿಲ್ ವಿಚಾರ ಕೂಡ ಪರಿಹರಿಸಲು ಯತ್ನಿಸಿದ್ದೇವೆ'' ಎಂದು ಡಾ ಶಂಕರ್ ಹೇಳಿದ್ದಾರೆ.

ಡಾ ಸುಲ್ತಾನ ಅವರು ಜುಲೈ 1ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ರವಿವಾರ ಬೆಳಿಗ್ಗೆ ಡಿಸ್ಚಾರ್ಜ್ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆಕೆಯ ಆರೋಪವನ್ನು ಆಕೆ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆ ನಿರಾಕರಿಸಿದ್ದು ಆಕೆಯ ಐದು ದಿನಗಳ ಚಿಕಿತ್ಸೆಯ ಬಿಲ್ ರೂ 1.5 ಲಕ್ಷ ಆಗಿತ್ತು, ಆಕೆ ಚಿಕಿತ್ಸೆ ವೇಳೆ ಅಸಹಕಾರ ತೋರಿದ್ದರು, ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News