ಗಾಳಿಯಲ್ಲಿರುವ ಕಣಗಳಿಂದ ಕೊರೋನ ವೈರಸ್ ಹರಡಬಹುದು: ವಿಜ್ಞಾನಿಗಳು

Update: 2020-07-06 16:29 GMT

ನ್ಯೂಯಾರ್ಕ್, ಜು. 6: ಗಾಳಿಯಲ್ಲಿರುವ ಸಣ್ಣ ಕಣಗಳಲ್ಲಿರುವ ನೋವೆಲ್-ಕೊರೋನ ವೈರಸ್ ಮನುಷ್ಯರಿಗೆ ಸೋಂಕು ಉಂಟು ಮಾಡಬಲ್ಲದು ಎನ್ನುವುದಕ್ಕೆ ಪುರಾವೆಯಿದೆ ಎಂದು ನೂರಾರು ವಿಜ್ಞಾನಿಗಳು ಹೇಳುತ್ತಾರೆ ಹಾಗೂ ಇದಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಪರಿಷ್ಕರಿಸುವಂತೆ ಅವರು ವಿಶ್ವ ಆರೋಗ್ಯ ಸಂಸ್ಥೆಗೆ ಕರೆ ನೀಡಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಕೊರೋನ ವೈರಸ್ ಕಾಯಿಲೆಯು ಮುಖ್ಯವಾಗಿ, ಕಾಯಿಲೆಯಿರುವ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಅಥವಾ ಮಾತನಾಡುವಾಗ ಅವರ ಮೂಗು ಅಥವಾ ಬಾಯಿಯಿಂದ ಹೊರಹೊಮ್ಮುವ ಸಣ್ಣ ಹನಿಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸಣ್ಣ ಕಣಗಳು ಜನರಿಗೆ ಕೊರೋನ ವೈರಸನ್ನು ಹರಡಬಹುದು ಎನ್ನುವುದನ್ನು ತೋರಿಸುವ ಪುರಾವೆಯನ್ನು 32 ದೇಶಗಳ 239 ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಕಳುಹಿಸಿಕೊಟ್ಟಿದ್ದಾರೆ. ಈ ಪತ್ರವನ್ನು ಮುಂದಿನ ವಾರ ವಿಜ್ಞಾನ ಪತ್ರಿಕೆಯೊಂದರಲ್ಲಿ ಪ್ರಕಟಿಸುವ ಯೋಜನೆಯನ್ನು ವಿಜ್ಞಾನಿಗಳು ಹೊಂದಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.

ಈ ವಿಷಯದಲ್ಲಿ ವಿವರಣೆ ನೀಡುವಂತೆ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ಕಳುಹಿಸಿರುವ ಕೋರಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ಸೀನಿನ ಬಳಿಕ ಗಾಳಿಯಲ್ಲಿ ಹಾರಾಡುವ ದೊಡ್ಡ ಹನಿಗಳಾಗಲಿ ಅಥವಾ ಮೂಗಿನಿಂದ ಹೊರಬಂದ ಹಾಗೂ ಕೋಣೆಯಾದ್ಯಂತ ಚಲಿಸಬಲ್ಲ ಅತ್ಯಂತ ಸಣ್ಣ ಹನಿಗಳಾಗಲಿ, ಅವುಗಳಲ್ಲಿರುವ ಕೊರೋನ ವೈರಸ್ ಗಾಳಿಯಲ್ಲಿ ತೇಲುತ್ತದೆ ಹಾಗೂ ಉಸಿರಾಟದ ಮೂಲಕ ದೇಹದ ಒಳಕ್ಕೆ ಹೋದಾಗ ಸೋಂಕು ಉಂಟು ಮಾಡಬಲ್ಲದು ಎಂದು ವಿಜ್ಞಾನಿಗಳು ಹೇಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಹೇಳುತ್ತದೆ.

ಪುರಾವೆ ತೃಪ್ತಿದಾಯಕವಾಗಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಆದರೆ, ವೈರಸ್ ಗಾಳಿಯಲ್ಲಿ ತೇಲುವುದಕ್ಕೆ ಸಂಬಂಧಿಸಿದ ಪುರಾವೆ ತೃಪ್ತಿದಾಯಕವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

‘‘ವಿಶೇಷವಾಗಿ ಕಳೆದ ಎರಡು ತಿಂಗಳಲ್ಲಿ, ಗಾಳಿಯ ಮೂಲಕ ಸೋಂಕು ಹರಡುವಿಕೆ ಸಾಧ್ಯ ಎಂಬುದಾಗಿ ನಾವು ಪರಿಗಣಿಸಿದ್ದೇವೆ ಎನ್ನುವುದನ್ನು ನಾವು ಹೇಳುತ್ತಾ ಬಂದಿದ್ದೇವೆ. ಆದರೆ, ನಿಶ್ಚಿತವಾಗಿಯೂ ಇದಕ್ಕೆ ಪ್ರಬಲ ಅಥವಾ ಸ್ಪಷ್ಟ ಪುರಾವೆ ಲಭಿಸಿಲ್ಲ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೋಂಕು ತಡೆ ಮತ್ತು ನಿಯಂತ್ರಣ ವಿಭಾಗದ ತಾಂತ್ರಿಕ ಮುಖ್ಯಸ್ಥೆ ಡಾ. ಬೆನೆಡೆಟ್ಟಾ ಅಲಗ್ರಾಂಝಿ ಹೇಳಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News