ಕೊರೋನ ವೈರಸ್ ಗಾಳಿಯ ಮೂಲಕ ಹರಡಬಹುದು: ವಿಜ್ಞಾನಿಗಳು ನೀಡಿದ ಪುರಾವೆಯನ್ನು ಅಂಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ

Update: 2020-07-08 16:46 GMT

ಜಿನೀವ (ಸ್ವಿಟ್ಸರ್ಲ್ಯಾಂಡ್), ಜು. 8: ಕೊರೋನ ವೈರಸ್ ಗಾಳಿಯ ಮೂಲಕ ಹಿಂದೆ ಭಾವಿಸಿರುವುದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಹರಡಬಹುದು ಎನ್ನುವುದಕ್ಕೆ ಪುರಾವೆಗಳು ಲಭಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಹೇಳಿದೆ ಹಾಗೂ ಸಾಂಕ್ರಾಮಿಕ ಹರಡುವ ಪ್ರಮಾಣವು ಈಗಲೂ ಏರುಗತಿಯಲ್ಲಿದೆ ಎಂದು ಎಚ್ಚರಿಸಿದೆ.

ಕೊರೋನ ವೈರಸ್ ಗಾಳಿಯಲ್ಲಿ ಎರಡು ಮೀಟರ್ ಗಿಂತಲೂ ಅಧಿಕ ದೂರ ಪ್ರಯಾಣಿಸಬಹುದು ಎಂಬುದಾಗಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ಗುಂಪೊಂದು ನಿರ್ಧರಿಸಿದ ಬಳಿಕ, ಈ ಸಂಬಂಧ ಹೊಸ ಸೂಚನೆಗಳನ್ನು ಕೆಲವೇ ದಿನಗಳಲ್ಲಿ ಹೊರಡಿಸಲಾಗುವುದು ಎಂದು ಅದು ತಿಳಿಸಿದೆ.

ವ್ಯಕ್ತಿಯಿಂದ ವ್ಯಕ್ತಿಗೆ ಎರಡು ಮೀಟರ್ ಅಂತರ ಕಾಯ್ದುಕೊಳ್ಳುವುದು ಕೋವಿಡ್-19 ಹರಡುವಿಕೆಯನ್ನು ತಡೆಯುವ ಮಹತ್ವದ ಕ್ರಮಗಳಲ್ಲಿ ಒಂದಾಗಿದೆ. ಕೋವಿಡ್-19 ಕಾಯಿಲೆಯಿಂದಾಗಿ ಜಗತ್ತಿನಾದ್ಯಂತ 5.38 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 1.16 ಕೋಟಿಗೂ ಅಧಿಕ ಮಂದಿಗೆ ಸೋಂಕು ತಗಲಿದೆ.

ಈ ನಡುವೆ, ಮಾರಕ ಸಾಂಕ್ರಾಮಿಕವು ತೀವ್ರತೆಯನ್ನು ಕಳೆದುಕೊಳ್ಳುವ ಯಾವುದೇ ಲಕ್ಷಣವನ್ನು ತೋರಿಸುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದ್ದಾರೆ. ಕಳೆದ ವಾರಾಂತ್ಯದಲ್ಲಿ 4 ಲಕ್ಷಕ್ಕೂ ಅಧಿಕ ನೂತನ ಸೋಂಕು ಪ್ರಕರಣಗಳು ವರದಿಯಾಗಿದ್ದವು. ಮೊದಲ ನಾಲ್ಕು ಲಕ್ಷ ಸೋಂಕು ಪ್ರಕರಣಗಳು ವರದಿಯಾಗಲು 12 ವಾರಗಳು ಬೇಕಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News