11 ಮಂದಿ ಎಐಎಡಿಎಂಕೆ ಶಾಸಕರ ಅನರ್ಹತೆ ಕೋರಿ ಡಿಎಂಕೆ ಅರ್ಜಿ: ಸ್ಪೀಕರ್ ಗೆ ಸುಪ್ರೀಂಕೋರ್ಟ್ ನೋಟಿಸ್

Update: 2020-07-08 17:58 GMT

ಹೊಸದಿಲ್ಲಿ: ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು 2017ರಲ್ಲಿ ವಿಶ್ವಾಸಮತ ಯಾಚನೆ ಮಾಡುವ ಸಂದರ್ಭದಲ್ಲಿ ಅವರ ವಿರುದ್ಧ ಮತ ಚಲಾಯಿಸಿದ 11 ಮಂದಿ ಎಐಎಡಿಎಂಕೆ ಶಾಸಕರ ಅನರ್ಹತೆ ಕೋರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ವಿಧಾನಸಭೆ ಸ್ಪೀಕರ್ ಗೆ ನಿರ್ದೇಶನ ನೀಡಬೇಕು ಎಂದು ಕೋರಿ ವಿರೋಧ ಪಕ್ಷವಾದ ಡಿಎಂಕೆ ಸಲ್ಲಿಸಿದ್ದ ಅರ್ಜಿಯ ಸಂಬಂಧ ಸುಪ್ರೀಂಕೋರ್ಟ್ ತಮಿಳುನಾಡು ಸ್ಪೀಕರ್ ಗೆ ನೋಟಿಸ್ ನೀಡಿದೆ.

ಈ ಬಗ್ಗೆ ಅಭಿಪ್ರಾಯ ಸಲ್ಲಿಸುವಂತೆ ಸ್ಪೀಕರ್ ಡಿ.ಧನಪಾಲ್, ವಿಧಾನಸಭೆ ಕಾರ್ಯದರ್ಶಿ ಮತ್ತು ಇತರರಿಗೆ ಸೂಚನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಆರ್.ಸುಭಾಷ್ ರೆಡ್ಡಿ ಹಾಗೂ ಎ.ಎಸ್. ಅವರನ್ನೊಳಗೊಂಡ ಪೀಠ, ಸ್ಪೀಕರ್, ವಿಧಾನಸಭೆ ಕಾರ್ಯದರ್ಶಿ ಮತ್ತು ಓ.ಪನ್ನೀರ್ ಸೆಲ್ವಂ ಸೇರಿದಂತೆ 11 ಮಂದಿಗೆ ನೋಟಿಸ್ ನೀಡಿದೆ.

ಮೂರು ವರ್ಷಗಳಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳದ ಸ್ಪೀಕರ್ ಅವರ ಕ್ರಮವನ್ನು ಡಿಎಂಕೆ ಪ್ರಶ್ನಿಸಿತ್ತು. ಡಿಎಂಕೆ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಅಮಿತ್ ಆನಂದ್ ತಿವಾರಿ ವಾದ ಮಂಡಿಸಿ, ವಿಧಾನಸಭೆಯ ಅವಧಿ ಶೀಘ್ರವೇ ಮುಕ್ತಾಯವಾಗಲಿದ್ದು, ಈ ಕಾರಣದಿಂದ ವಿಚಾರಣೆ ದಿನಾಂಕವನ್ನು ಶೀಘ್ರ ನಿಗದಿ ಮಾಡಬೇಕು ಎಂದು ಕೋರಿದರು.

ಎಐಎಡಿಎಂಕೆ ಶಾಸಕರೊಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ ನೋಟಿಸ್ ನೀಡಿಕೆಯನ್ನು ವಿರೋಧಿಸಿದರು. ನಾಲ್ಕು ವಾರಗಳ ಬಳಿಕ ಅರ್ಜಿಯ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಯಿತು. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿರಲಿಲ್ಲ. ಕೋವಿಡ್-19 ಪರಿಸ್ಥಿತಿ ನೋಡಿಕೊಂಡು 15 ದಿನಗಳ ಬಳಿಕ ದಿನಾಂಕ ನಿಗದಿಪಡಿಸುವುದಾಗಿ ಕೋರ್ಟ್ ಹೇಳಿತು.

11 ಮಂದಿ ಶಾಸಕರು ಆಡಳಿತ ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ್ದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಇವರನ್ನು ಅನರ್ಹಗೊಳಿಸಬೇಕು ಎನ್ನುವುದು ಡಿಎಂಕೆ ವಾದವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News