ದೇಶದಲ್ಲಿ ಒಂದೇ ದಿನ ದಾಖಲೆ 25 ಸಾವಿರ ಮಂದಿಗೆ ಕೊರೋನ ಸೋಂಕು

Update: 2020-07-09 03:43 GMT

ಹೊಸದಿಲ್ಲಿ, ಜು.9: ಭಾರತದಲ್ಲಿ ಬುಧವಾರ ಗರಿಷ್ಠ ಸಂಖ್ಯೆಯ ಕೊರೋನ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದೇ ಮೊದಲ ಬಾರಿಗೆ ದಿನದ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದ್ದು, ದೇಶಾದ್ಯಂತ ಒಟ್ಟು 25,530 ಪ್ರಕರಣಗಳು ವದಿಯಾಗಿವೆ. ಸತತ ಆರನೇ ದಿನ 400ಕ್ಕೂ ಅಧಿಕ ಸಾವು ಸಂಭವಿಸಿದ್ದು, ಮೃತರ ಸಂಖ್ಯೆ 21 ಸಾವಿರದ ಗಡಿ ದಾಟಿದೆ.

ಕಳೆದ ಏಳು ದಿನಗಳಲ್ಲಿ ಐದನೇ ಬಾರಿ ಗರಿಷ್ಠ ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲ ದಿನಗಳಲ್ಲಿ ದೇಶದಲ್ಲಿ ಕೊರೋನ ಪರೀಕ್ಷೆ ಹೆಚ್ಚಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ. ರವಿವಾರ ದೇಶದಲ್ಲಿ 1.8 ಲಕ್ಷ ಮಂದಿಯ ಪರೀಕ್ಷೆ ಮಾಡಿದ್ದರೆ, ಸೋಮವಾರ ಹಾಗೂ ಮಂಗಳವಾರ ಕ್ರಮವಾಗಿ ಇದು 2.41 ಲಕ್ಷ ಮತ್ತು 2.62 ಲಕ್ಷಕ್ಕೆ ಹೆಚ್ಚಿದೆ.

ಬುಧವಾರ ಸೋಂಕಿಗೆ 493 ಮಂದಿ ಬಲಿಯಾಗುವ ಮೂಲಕ ಒಟ್ಟು ಮೃತರ ಸಂಖ್ಯೆ 21,122ಕ್ಕೇರಿದೆ. ಜುಲೈ 4ರಂದು 608 ಸಾವು ಸಂಭವಿಸಿದ್ದು ಇದುವರೆಗಿನ ದಾಖಲೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,68,322ಕ್ಕೇರಿದ್ದು, ಏಳು ಲಕ್ಷದ ಗಡಿ ದಾಟಿ ಕೇವಲ ಎರಡು ದಿನಗಳಲ್ಲಿ ಇಷ್ಟೊಂದು ಪ್ರಕರಣಗಳು ವರದಿಯಾಗಿವೆ. 4,75,849 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರಾದವರ ಪ್ರಮಾಣ ಶೇಕಡ 62ರಷ್ಟಿದೆ.

ಮಂಗಳವಾರ ಹೊಸ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದ ಮಹಾರಾಷ್ಟ್ರದಲ್ಲಿ ಬುಧವಾರ 6,603 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,23,724ಕ್ಕೇರಿದೆ. 198 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 9,448ಕ್ಕೇರಿದೆ.

ತಮಿಳುನಾಡಿನಲ್ಲಿ 3,756 ಪ್ರಕರಣಗಳು ವರದಿಯಾಗಿ 64 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 1,700ಕ್ಕೇರಿದೆ. ದಿಲ್ಲಿಯಲ್ಲಿ 2,033 ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,04,864ಕ್ಕೇರಿದೆ. 48 ಸಾವು ಸಂಭವಿಸಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 3,213 ಆಗಿದೆ.

ಕರ್ನಾಟಕದಲ್ಲಿ 2,062, ಗುಜರಾತ್ 783, ಬಿಹಾರ 749, ಕೇರಳ 301, ಗೋವಾದಲ್ಲಿ 136 ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ 54 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಂಖ್ಯೆ 470ಕ್ಕೇರಿದೆ. ಗುಜರಾತ್‌ನಲ್ಲಿ ಸತತ ಎಂಟನೇ ದಿನ ಗರಿಷ್ಠ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 1,995ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News