ಸಂಕಷ್ಟದಲ್ಲಿರುವವರನ್ನು ಸ್ವದೇಶಕ್ಕೆ ಕರೆದೊಯ್ಯಲು ಭಾರತ-ಯುಎಇ ಮಧ್ಯೆ ಜುಲೈ 12ರಿಂದ ವಿಮಾನಯಾನ ಪ್ರಾರಂಭ

Update: 2020-07-09 17:02 GMT

ಹೊಸದಿಲ್ಲಿ, ಜು.9: ಉಭಯ ದೇಶಗಳ ನಿವಾಸಿಗಳನ್ನು ಸ್ವದೇಶಕ್ಕೆ ಕರೆತರುವ ಉದ್ದೇಶದಿಂದ ಭಾರತ-ಯುಎಇ ನಡುವೆ ಸೀಮಿತ ವಿಮಾನ ಸಂಚಾರವನ್ನು ಜುಲೈ 12ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

ಎರಡೂ ದೇಶಗಳಲ್ಲಿ ಸಿಕ್ಕಿಬಿದ್ದಿರುವ ಉಭಯ ದೇಶಗಳ ನಾಗರಿಕರನ್ನು ಸ್ವದೇಶಕ್ಕೆ ತಲುಪಿಸುವ ನಿಟ್ಟಿನಲ್ಲಿ ಈ ವಿಮಾನ ಸಂಚಾರ ಪ್ರಾರಂಭವಾಗಲಿದ್ದು, ಜುಲೈ 26ರವರೆಗೆ ಮುಂದುವರಿಯಲಿದೆ. ಆ ಬಳಿಕ ಪುನರ್ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು. ಯುಎಇ ವಿಮಾನಸಂಸ್ಥೆಗಳ ವಿಮಾನ ಅಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಿದೆ. ಇದೇ ವಿಮಾನದಲ್ಲಿ ಐಸಿಎ ಅನುಮೋದಿತ ಯುಎಇ ನಿವಾಸಿಗಳನ್ನು ಅವರ ದೇಶಕ್ಕೆ ಕರೆದೊಯ್ಯಲಾಗುವುದು. ಐಸಿಎ ಎಂಬುದು ಯುಎಇಯ ಪೌರರಿಗೆ ಮತ್ತು ನಿವಾಸಿಗಳಿಗೆ ಗುರುತು ಪತ್ರ ನೀಡುವ ‘ಗುರುತು ಮತ್ತು ಪೌರತ್ವಕ್ಕಾಗಿ ಸಂಯುಕ್ತ ಪ್ರಾಧಿಕಾರ’ವಾಗಿದೆ.

ಯುಎಇಯಿಂದ ಭಾರತಕ್ಕೆ ಪ್ರಯಾಣಿಕರನ್ನು ಕರೆತರುವ ಭಾರತದ ವಿಮಾನಗಳು, ಯುಎಇಗೆ ಪ್ರಯಾಣಿಸುವ ಸಂದರ್ಭ ಐಸಿಎ ಅನುಮೋದಿತ ಯುಎಇ ನಿವಾಸಿಗಳನ್ನು ಮಾತ್ರ ಕರೆದೊಯ್ಯಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ಬುಧವಾರ ಹೊಸದಿಲ್ಲಿಯಲ್ಲಿ ಪಿಎಚ್ ಡಿ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ವೆಬ್ ನಾರ್ ನಲ್ಲಿ ಪಾಲ್ಗೊಂಡಿದ್ದ ಭಾರತದಲ್ಲಿ ಯುಎಇ ರಾಯಭಾರಿ ಅಹ್ಮದ್ ಅಲ್ ಬನ್ನಾ, ಯುಎಇಯಲ್ಲಿ ಸಕ್ರಮ ವರ್ಕ್ ಪರ್ಮಿಟ್ ಅಥವಾ ಸಕ್ರಮ ನಿವಾಸಿ ಪತ್ರ ಹೊಂದಿರುವ ಭಾರತೀಯರು ಈಗ ಭಾರತದಲ್ಲಿ ಸಿಕ್ಕಿಬಿದ್ದಿದ್ದು ಅವರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದರು. ಅವರು ಯುಎಇಗೆ ಯಾವಾಗ ತೆರಳುವುದು. ಇಲ್ಲಿರುವ ಸಮಸ್ಯೆ ಯುಎಇಯದ್ದಲ್ಲ, ಇದು ಭಾರತದ ಕಡೆಯಿಂದ ಆಗಿರುವ ಸಮಸ್ಯೆ. ಭಾರತ ತನ್ನ ವಿಮಾನನಿಲ್ದಾಣವನ್ನು ತೆರೆದಿಲ್ಲ . ಈ ಸಮಸ್ಯೆಯ ಬಗ್ಗೆ ಯುಎಇ ಸರಕಾರ ಭಾರತದ ವಿದೇಶ ವ್ಯವಹಾರ ಇಲಾಖೆ ಹಾಗೂ ನಾಗರಿಕ ವಿಮಾನಯಾನ ಇಲಾಖೆಯ ಜತೆ ಮಾತುಕತೆ ನಡೆಸುತ್ತಿದೆ ಎಂದವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News