ಪರ್ಮಿಟ್ ಹೊಂದಿರುವ ಭಾರತೀಯರಿಗಾಗಿ ಯುಎಇಗೆ ತೆರಳಲು ಶೀಘ್ರವೇ ವಿಮಾನ

Update: 2020-07-09 17:54 GMT

ಹೊಸದಿಲ್ಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ನ ಸೂಕ್ತ ರೆಸಿಡೆನ್ಸಿ ಮತ್ತು ಕೆಲಸದ ಪರ್ಮಿಟ್ ಹೊಂದಿರುವ ಭಾರತೀಯರಿಗಾಗಿ ಭಾರತದಿಂದ ಯುಎಇಗೆ ಕೆಲ ವಿಮಾನಗಳು ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಯುಎಇ ರಾಯಭಾರಿ ಅಹ್ಮದ್ ಅಲ್ ಬನ್ನಾ ಬುಧವಾರ ಪ್ರಕಟಿಸಿದ್ದಾರೆ.

ಕೊರೋನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತ ಮಾರ್ಚ್ 23ರಂದು ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರವನ್ನು ರದ್ದುಪಡಿಸಿತ್ತು. ಯುಎಇ ಹಾಗೂ ಇತರ ದೇಶಗಳಿಗೆ ಭಾರತದಿಂದ ವಿಮಾನ ಸೌಲಭ್ಯ ಕಲ್ಪಿಸುವಂತೆ ಹಲವು ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳ ಮೂಲಕ ಆಗ್ರಹಿಸಿದ್ದರು.

ಸದ್ಯಕ್ಕೆ ಭಾರತದಲ್ಲಿರುವ ಭಾರತೀಯರು ಯುಎಇಯ ವಾಸ ಮತ್ತು ಕೆಲಸದ ಪರ್ಮಿಟ್ ಹೊಂದಿದ್ದರೆ ಅವರ ಸ್ಥಿತಿ ಏನು?, ಅವರು ಯಾವಾಗ ಭಾರತದಿಂದ ಯುಎಇಗೆ ಮರಳಬಹುದು? ಎಂಬ ಪ್ರಶ್ನೆಗಳು ಕೇಳಿಬಂದಿವೆ ಎಂದು ಪಿಎಚ್ ಡಿ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ವೆಬಿನಾರ್ ನಲ್ಲಿ ಅಲ್ ಬನ್ನಾ ಸ್ಪಷ್ಟಪಡಿಸಿದರು.

ಸಮಸ್ಯೆ ಇರುವುದು ಯುಎಇ ಕಡೆಯಲ್ಲಲ್ಲ. ಸಮಸ್ಯೆ ವಾಸ್ತವವಾಗಿ ಇರುವುದು ಭಾರತದಲ್ಲಿ. ಭಾರತ ತನ್ನ ವಿಮಾನ ನಿಲ್ದಾಣಗಳನ್ನು ತೆರೆದಿಲ್ಲ. ವಿದೇಶಿ ಕಂಪನಿಗಳು ಭಾರತಕ್ಕೆ ವಿಮಾನ ಆರಂಭಿಸಲು ಕೂಡಾ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದ ಜತೆ ಈ ಸಂಬಂಧ ಮಾತುಕತೆ ನಡೆದಿದೆ ಎಂದು ವಿವರಿಸಿದರು.

ಶೀಘ್ರವೇ ಈ ಸಮಸ್ಯೆಯನ್ನು ಬಗೆಹರಿಸಿ, ಸೂಕ್ತ ವಾಸ ಮತ್ತು ಕೆಲಸದ ಪರ್ಮಿಟ್ ಹೊಂದಿರುವ, ಐಸಿಎ ಮಾನ್ಯತೆ ಪಡೆದ ಹಾಗೂ ಕೋವಿಡ್-19 ಪಿಸಿಆರ್ ಪರೀಕ್ಷೆ ನಡೆಸಲಾದ ಭಾರತೀಯರಿಗಾಗಿ ಅವರು ಭಾರತದಿಂದ ಯುಎಇಗೆ ಪ್ರಯಾಣ ಬೆಳೆಸಲು ಅನುವಾಗುವಂತೆ ಕೆಲ ವಿಶೇಷ ವಿಮಾನಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News