ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್ ಗೆ ಬಲಿ

Update: 2020-07-10 17:59 GMT

ಲಕ್ನೊ, ಜು.10: ಕುಖ್ಯಾತ ಪಾತಕಿ ವಿಕಾಸ್ ದುಬೆ ಶುಕ್ರವಾರ ಬೆಳಗ್ಗೆ ಪೊಲೀಸರು ನಡೆಸಿದ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಬಂಧಿಸಲ್ಪಟ್ಟಿದ್ದ ದುಬೆಯನ್ನು ಶುಕ್ರವಾರ ಬೆಳಗ್ಗೆ ಉತ್ತರಪ್ರದೇಶಕ್ಕೆ ಪೊಲೀಸರು ಕರೆತರುತ್ತಿದ್ದಾಗ ಪೊಲೀಸರ ವಾಹನ ಪಲ್ಟಿಯಾಗಿದೆ. ಈ ಸಂದರ್ಭ ಪೊಲೀಸರ ಗನ್ ಕಸಿದುಕೊಂಡು ದುಬೆ ಪರಾರಿಯಾಗಲು ಮುಂದಾದ. ಶರಣಾಗುವಂತೆ ಸೂಚಿಸಿದರೂ ಆತ ನಿರ್ಲಕ್ಷಿಸಿದಾಗ ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಈ ಮಧ್ಯೆ, ದುಬೆಗೆ ರಕ್ಷಣೆ ಒದಗಿಸಬೇಕು ಹಾಗೂ ರಾಜ್ಯದಲ್ಲಿ ನಡೆದಿರುವ ಸರಣಿ ಎನ್ ಕೌಂಟರ್ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಗುರುವಾರ ರಾತ್ರಿ ಸುಪ್ರೀಂಕೋರ್ಟ್ ಗೆ ಅರ್ಜಿ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಬಂಧಿಸಲ್ಪಟ್ಟಿದ್ದ ದುಬೆಯನ್ನು ಉತ್ತರಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಮೂರು ಪೊಲೀಸ್ ವಾಹನಗಳ ಬೆಂಗಾವಲಿನಲ್ಲಿ ಆತನನ್ನು ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಕಾನ್ಪುರ ತಲುಪಲು ಒಂದು ತಾಸು ಇರುವಾಗ ದುಬೆ ಇದ್ದ ಕಾರು ಮಳೆಯಿಂದ ಒದ್ದೆಯಾದ ರಸ್ತೆಯಲ್ಲಿ ಸ್ಕಿಡ್ ಆಗಿ ಪಲ್ಟಿಯಾಗಿದ್ದು, ಈ ಅಪಘಾತದಲ್ಲಿ ಪೊಲೀಸರು ಹಾಗೂ ದುಬೆ ಗಾಯಗೊಂಡಿದ್ದಾರೆ. ಆಗ ಗಾಯಗೊಂಡಿದ್ದ ಪೊಲೀಸರ ಕೈಯಲ್ಲಿದ್ದ ಗನ್ ಕಸಿದುಕೊಂಡ ದುಬೆ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ. ಪೊಲೀಸರು ಆತನನ್ನು ಸುತ್ತುವರಿದು ಶರಣಾಗಲು ಸೂಚಿಸಿದಾಗ ಪೊಲೀಸರ ಮೇಲೆಯೇ ಗುಂಡಿನ ದಾಳಿ ಆರಂಭಿಸಿದ್ದಾನೆ. ಆಗ ಆತ್ಮರಕ್ಷಣೆಗೆ ಪೊಲೀಸರು ಆತನ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಕಾನ್ಪುರ ಪೊಲೀಸರು ಹೇಳಿಕೆ ನೀಡಿದ್ದಾರೆ.

ಗುಂಡೇಟಿನಿಂದ ಗಾಯಗೊಂಡ ದುಬೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆತನ ಎದೆಗೆ ಮೂರು ಮತ್ತು ತೋಳಿಗೆ ಒಂದು ಗುಂಡು ತಗುಲಿದೆ ಎಂದು ಪೊಲೀಸರು ಹೇಳಿದ್ದಾರೆ. 50 ವರ್ಷದ ದುಬೆಯ ವಿರುದ್ಧ ಕೊಲೆ, ಅಪಹರಣ, ಸುಲಿಗೆ ಸೇರಿದಂತೆ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಪೊಲೀಸರು ಹಾಗೂ ರಾಜಕಾರಣಿಗಳೊಂದಿಗೆ ಈತನಿಗೆ ಸಂಪರ್ಕವಿತ್ತು ಎನ್ನಲಾಗಿದ್ದು, ಇದರಿಂದಲೇ ಇದುವರೆಗೂ ಬಂಧನದಿಂದ ತಪ್ಪಿಸಿಕೊಂಡಿದ್ದ ಎಂಬ ಆರೋಪವಿದೆ.

ಕಳೆದ ಕೆಲ ದಿನಗಳಿಂದ ದುಬೆಯ ಐವರು ಸಹಚರರನ್ನು ಪೊಲೀಸರು ಎನ್ ಕೌಂಟರ್  ನಲ್ಲಿ ಹತ್ಯೆ ಮಾಡಿದ್ದಾರೆ. ಗುರುವಾರ ದುಬೆಯ ಬಂಧನವಾಗುವ ಕೆಲ ಗಂಟೆಗಳ ಮೊದಲು ಉತ್ತರಪ್ರದೇಶದ ಪೊಲೀಸರು ಆತನ ಇಬ್ಬರು ಸಹಚರರನ್ನು ಎನ್ ಕೌಂಟರ್ ಮಾಡಿದ್ದರು. ಬುಧವಾರ ದುಬೆಯ ನಿಕಟ ಸಹಚರ ಅಮನ್ ದುಬೆ ಹಾಗೂ ಪ್ರಭಾತ್ ಎಂಬವರನ್ನು ಎನ್ ಕೌಂಟರ್  ಮಾಡಲಾಗಿದೆ. ಗುರುವಾರ ಉಜ್ಜಯಿನಿ ದೇವಸ್ಥಾನದಲ್ಲಿ ದುಬೆಯನ್ನು ಬಂಧಿಸಿರುವ ರೀತಿಯನ್ನು ಗಮನಿಸಿದರೆ ದುಬೆ ಸ್ವಯಂ ಶರಣಾಗಿರುವ ಸಾಧ್ಯತೆಯಿದೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಉತ್ತರಪ್ರದೇಶದಿಂದ ಪರಾರಿಯಾಗಿ ಮಧ್ಯಪ್ರದೇಶದಲ್ಲಿ ಪೊಲೀಸರಿಗೆ ಶರಣಾದರೆ ಸುರಕ್ಷಿತ ಎಂದು ಆತ ಭಾವಿಸಿರಬಹುದು. ಆತನ ಹಲವು ಸಹಚರರನ್ನು ಪೊಲೀಸರು ಬಂಧಿಸಿದ್ದು ಕೆಲವರನ್ನು ಎನ್ ಕೌಂಟರ್ ಮಾಡಲಾಗಿದೆ. ಆದ್ದರಿಂದ ಖಂಡಿತಾ ಸಿಕ್ಕಿಬಿದ್ದರೆ ಉಳಿಗಾಲವಿಲ್ಲ ಎಂದು ಆತ ಜೀವಭಯದಿಂದ ಪಲಾಯನ ಮಾಡಿರಬಹುದು ಎಂದು ಉತ್ತರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಮೋಹಿತ್ ಅಗರ್ವಾಲ್ ಹೇಳಿದ್ದಾರೆ. 

 ಕೊಲೆ ಪ್ರಯತ್ನದ ಆರೋಪದಲ್ಲಿ ದುಬೆಯನ್ನು ಬಂಧಿಸಲು ಕಳೆದ ಶುಕ್ರವಾರ ಬಿಕ್ರು ಗ್ರಾಮಕ್ಕೆ ಪೊಲೀಸರ ತಂಡ ತೆರಳಿತ್ತು. ಆಗ ದುಬೆಯ ಮನೆಯ ಟೆರೇಸ್ ನಿಂದ ಆತನ ಸಹಚರರು ಪೊಲೀಸರ ಮೇಲೆ ಗುಂಡಿನ ಮಳೆಗೆರೆದಾಗ ಎಂಟು ಪೊಲೀಸರು ಮೃತಪಟ್ಟಿದ್ದರು. ಬಳಿಕ ದುಬೆ ತನ್ನ ಸಹಚರರೊಂದಿಗೆ ಅಲ್ಲಿಂದ ಪರಾರಿಯಾಗಿದ್ದ. ಪೊಲೀಸರ ದಾಳಿಯ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಅಧಿಕಾರಿಯೇ ದುಬೆಗೆ ರವಾನಿಸಿದ್ದ ಎಂಬ ಆರೋಪವಿದೆ. ಬಳಿಕ ದುಬೆಯ ನಿವಾಸವನ್ನು ನೆಲಸಮ ಮಾಡಿದ್ದ ಉತ್ತರಪ್ರದೇಶ ಪೊಲೀಸರು ಆತನ ಬಂಧನಕ್ಕಾಗಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರ ಕಣ್ತಪ್ಪಿಸಿ ಉತ್ತರಪ್ರದೇಶ, ಹರ್ಯಾಣ, ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಐದು ದಿನ ತನ್ನ ಕಾರಿನಲ್ಲೇ ಓಡಾಡಿದ್ದ ದುಬೆಯನ್ನು ಅಂತಿಮವಾಗಿ ಮಧ್ಯಪ್ರದೇಶದ ಉಜ್ಜಯಿನಿ ದೇವಸ್ಥಾನದಲ್ಲಿ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News